ಬಹುನಿರೀಕ್ಷಿತ ಕೆಸಿಇಟಿ ಸೀಟು ಹಂಚಿಕೆ ಪ್ರಕ್ರಿಯೆಗೆ ಕೆಇಎ ವೆರಿಫಿಕೇಶನ್ ಸ್ಲಿಪ್ ಬಿಡುಗಡೆ (KCET Verification Slip Details) ಮಾಡುವ ಮೂಲಕ ಚಾಲನೆ ನೀಡಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ವೈದ್ಯಕೀಯ, ಇಂಜಿನಿಯರಿಂಗ್, ಕೃಷಿ, ಫಾರ್ಮಸಿ ಹಾಗೂ ಇತರ ವೃತ್ತಿಪರ ಪದವಿ ಕೋರ್ಸ್’ಗಳಲ್ಲಿ ಪ್ರವೇಶ ಪಡೆಯಲು ಕಾತುರದಿಂದ ಕಾಯುತ್ತಿರುವ ವಿದ್ಯಾರ್ಥಿಗಳಿಗಾಗಿ ಕೆಸಿಇಟಿ 2025ರ ಸೀಟು ಹಂಚಿಕೆ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಎಲ್ಲಾ ಸಿದ್ಧತೆಗಳನ್ನು ನಡೆಸಿ, ಮೊದಲ ಹಂತವಾಗಿ ಕಳೆದ ಜೂನ್ 23ರಂದು ವೆರಿಫಿಕೇಶನ್ ಸ್ಲಿಪ್ (Verification Slip) ಅನ್ನು ಬಿಡುಗಡೆ ಮಾಡಿದೆ.
ವೆರಿಫಿಕೇಶನ್ ಸ್ಲಿಪ್ ಎಂದರೇನು?
ವೆರಿಫಿಕೇಶನ್ ಸ್ಲಿಪ್ ಎಂಬುದು ವಿದ್ಯಾರ್ಥಿಯ ಶೈಕ್ಷಣಿಕ ವಿವರಗಳು, ಮೀಸಲಾತಿಗೆ ಸಂಬಂಧಿಸಿದ ಕ್ಲೇಮ್‌ಗಳು, ಜಾತಿ ಹಾಗೂ ಆದಾಯ ಪ್ರಮಾಣಪತ್ರಗಳ ಸಮರ್ಥನೆ ಹಾಗೂ ಇತರ ಎಲ್ಲಾ ಮಾಹಿತಿಗಳನ್ನು ಸಮಗ್ರವಾಗಿ ಒಳಗೊಂಡಿರುವ ಅಧಿಕೃತ ದಾಖಲೆ.
ಈ ಸ್ಲಿಪ್‌ನ ಆಧಾರದಲ್ಲಿಯೇ ಮುಂದಿನ ಸೀಟು ಹಂಚಿಕೆ ನಡೆಯಲಿದೆ. ವಿದ್ಯಾರ್ಥಿಗಳು ಈ ಸ್ಲಿಪ್‌ನಲ್ಲಿ ಈ ಕೆಳಕಂಡ ವಿವರಗಳನ್ನು ಗಮನಿಸಿ ಪರಿಶೀಲಿಸಬೇಕು:
- ತಮ್ಮ ಶೈಕ್ಷಣಿಕ ದಾಖಲೆಗಳ ಶುದ್ಧತೆ
- ಕ್ಲೇಮ್ ಮಾಡಿದ ಮೀಸಲಾತಿಗಳ ಸರಿ-ತಪ್ಪು
- ಹೆಸರಿನ ಸರಿಯಾದ ಉಚ್ಛಾರಣೆ
- ಮಾಹಿತಿಗಳ ಸರಿಯಾದ ದಾಖಲೆ
ತಪ್ಪಿದ್ದರೆ ಏನು ಮಾಡಬೇಕು?
ವೆರಿಫಿಕೇಶನ್ ಸ್ಲಿಪ್‌ನಲ್ಲಿ ಯಾವುದೇ ಮಾಹಿತಿ ತಪ್ಪಾಗಿ ಬಂದಿದ್ದರೆ KEA ಶೀಘ್ರದಲ್ಲೇ ‘ದಾಖಲೆ ತಿದ್ದುಪಡಿ ದಿನಾಂಕ’ ಘೋಷಿಸಲಿದೆ. ಆ ದಿನಾಂಕದೊಳಗೆ ತಮ್ಮ ನೋಡಲ್ ಕೇಂದ್ರಕ್ಕೆ ಭೇಟಿ ನೀಡಿ ತಪ್ಪುಗಳನ್ನು ತಿದ್ದುಪಡಿ ಮಾಡಿಸಿಕೊಳ್ಳಬೇಕು. ತಪ್ಪು ಸರಿಪಡಿಸದೇ ಯಾವುದೇ ಕಾರಣಕ್ಕೂ ಸೀಟು ಹಂಚಿಕೆಗೆ ಮುಂದಾಗಬೇಡಿ.
ಕೌನ್ಸೆಲಿಂಗ್‌ಗಾಗಿ ಅಗತ್ಯವಿರುವ ದಾಖಲೆಗಳ ಪಟ್ಟಿ
ಪ್ರತಿ ಅಭ್ಯರ್ಥಿಯು ಕೆಳಗಿನ ದಾಖಲಾತಿಗಳನ್ನು ತಯಾರಿಸಿಕೊಂಡು ನೋಡಲ್ ಕೇಂದ್ರಕ್ಕೆ ಹಾಜರಾಗಬೇಕು:
- KCET 2025 ಪ್ರವೇಶ ಪತ್ರ
- SSLC ಮತ್ತು PUC ಅಂಕಪಟ್ಟಿಗಳು
- PUC ಅಧ್ಯಯನ ಪ್ರಮಾಣಪತ್ರ
- ಜಾತಿ ಪ್ರಮಾಣಪತ್ರ (ಅರ್ಹರಿಗೆ ಮಾತ್ರ)
- ಆದಾಯ ಪ್ರಮಾಣಪತ್ರ (ಅರ್ಹರಿಗೆ ಮಾತ್ರ)
- ಕನ್ನಡ ಮೀಡಿಯಂ ಅಥವಾ ಗ್ರಾಮೀಣ ಹಿನ್ನಲೆ ಪ್ರಮಾಣಪತ್ರ
- ಆಧಾರ್ ಕಾರ್ಡ್ (ಫೋಟೋ ಮತ್ತು ಸಹಿ ಸಹಿತ)
- ವಿಕಲಚೇತನರು, ಮಾಜಿ ಸೈನಿಕರ ಮಕ್ಕಳಂತಹ ವಿಶೇಷ ವರ್ಗದ ಪ್ರಮಾಣಪತ್ರಗಳು

ಸೀಟು ಹಂಚಿಕೆಯ ಹಂತಗಳು (KCET Counselling Steps)
ಹಂತ 1: ದಾಖಲೆ ಪರಿಶೀಲನೆ (Document Verification): ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ನೋಡಲ್ ಕೇಂದ್ರದಲ್ಲಿ ದಾಖಲೆಗಳನ್ನು ತಪಾಸಣೆಗೆ ಸಲ್ಲಿಸಬೇಕು. ದಾಖಲೆ ಪರಿಶೀಲನೆಯ ನಂತರ ವಿದ್ಯಾರ್ಥಿಗೆ ತನ್ನ ಆನ್‌ಲೈನ್ ಪ್ರೊಫೈಲ್‌ಗೆ ಲಾಗಿನ್ ಮಾಡಲು Secret Key ಅಥವಾ Verification Code ನೀಡಲಾಗುತ್ತದೆ. ಈ ವರ್ಷದಿಂದ ಈ ಪ್ರಕ್ರಿಯೆ ಒಟಿಪಿ ಹಾಗೂ ಮುಖಚಹರೆ (Face Authentication) ಆಧಾರಿತವಾಗಿ ನಡೆಯಲಿದೆ.
ಹಂತ 2: ಆಯ್ಕೆ ಭರ್ತಿ (Option Entry): KEA ಅಧಿಕೃತ ವೆಬ್‌ಸೈಟ್‌ಗೆ ಲಾಗಿನ್ ಆಗಿ, ಇಚ್ಛಿತ ಕೋರ್ಸ್’ಗಳು ಮತ್ತು ಕಾಲೇಜುಗಳನ್ನು ಕ್ರಮಾನುಸಾರವಾಗಿ ಆಯ್ಕೆ ಮಾಡಬೇಕು. ಹೆಚ್ಚಿನ ಆಯ್ಕೆಗಳನ್ನು ನೀಡುವುದು ಉತ್ತಮ, ಇದರಿಂದ ಅವಕಾಶಗಳ ವ್ಯಾಪ್ತಿ ವಿಸ್ತಾರಗೊಳ್ಳುತ್ತದೆ.
ಹಂತ 3: ಅಣಕು ಸೀಟು ಹಂಚಿಕೆ (Mock Allotment): ಈ ಹಂತವು ವಿದ್ಯಾರ್ಥಿಗೆ ತಾನು ನೀಡಿದ ಆಯ್ಕೆಗಳ ಆಧಾರದ ಮೇಲೆ ತಾತ್ಕಾಲಿಕವಾಗಿ ಯಾವ ಸೀಟು ಸಿಗಬಹುದು ಎಂಬುದರ ಬಗೆಗೆ ಮಾಹಿತಿಯನ್ನೂ ನೀಡುತ್ತದೆ. ಈ ಹಂತದ ನಂತರ ವಿದ್ಯಾರ್ಥಿಗಳು ತಮ್ಮ ಆಯ್ಕೆಗಳನ್ನು ಬದಲಾಯಿಸಬಹುದಾಗಿದೆ.
ಹಂತ 4: ಅಂತಿಮ ಸೀಟು ಹಂಚಿಕೆ (Final Allotment): ವಿದ್ಯಾರ್ಥಿಯ ರ‍್ಯಾಂಕ್, ಮೀಸಲಾತಿ, ಆಯ್ಕೆ ಪಟ್ಟಿಗಳ ಆಧಾರದ ಮೇಲೆ ಅಂತಿಮ ಸೀಟು ಹಂಚಿಕೆ ನಡೆಯುತ್ತದೆ. ಈ ಹಂತದಲ್ಲಿ ವಿದ್ಯಾರ್ಥಿಗೆ ನಾಲ್ಕು ಆಯ್ಕೆಗಳ ನಿರ್ಧಾರ ತೆಗೆದುಕೊಳ್ಳಲು ಅವಕಾಶವಿರುತ್ತದೆ:
- ಆಯ್ಕೆ 1: ಸೀಟು ಒಪ್ಪಿ, ಶುಲ್ಕ ಪಾವತಿಸಿ ಪ್ರವೇಶ ದೃಢೀಕರಿಸಿ
- ಆಯ್ಕೆ 2: ಸೀಟು ಕಾಯ್ದಿರಿಸಿ, ಮುಂದಿನ ಸುತ್ತಿನಲ್ಲಿ ಭಾಗವಹಿಸಿ
- ಆಯ್ಕೆ 3: ಸೀಟು ತಿರಸ್ಕರಿಸಿ, ಮುಂದಿನ ಸುತ್ತಿನಲ್ಲಿ ಮಾತ್ರ ಪಾಲ್ಗೊಳ್ಳಿ
- ಆಯ್ಕೆ 4: ಸಂಪೂರ್ಣವಾಗಿ ಕೌನ್ಸೆಲಿಂಗ್ ನಿರಾಕರಿಸಿ ಹೊರಬನ್ನಿ
ಹಂತ 5: ಪ್ರವೇಶ ದೃಢೀಕರಣ (Admission Confirmation): ಸೀಟು ಒಪ್ಪಿಕೊಂಡ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಆಯ್ಕೆಗೊಂಡ ಕಾಲೇಜಿಗೆ ಹಾಜರಾಗಿ ಎಲ್ಲಾ ದಾಖಲೆಗಳನ್ನು ಸಲ್ಲಿಸಿ, ಶುಲ್ಕ ಪಾವತಿಸಬೇಕು. ಇಲ್ಲವಾದರೆ, ಹಂಚಿಕೆಯಾದ ಸೀಟು ಸ್ವಯಂ ರದ್ದಾಗುತ್ತದೆ.
ಉಪಯುಕ್ತ ಸೂಚನೆಗಳು
- ಎಲ್ಲಾ ಪ್ರಕ್ರಿಯೆಗಳು ಅಂತರ್ಜಾಲದ ಮೂಲಕ ನಡೆಯುತ್ತದೆ. ಆದ್ದರಿಂದ ನಿಮ್ಮ ಲಾಗಿನ್ ವಿವರಗಳನ್ನು ಜೋಪಾನವಾಗಿ ಇಟ್ಟುಕೊಳ್ಳಿ.
- ಸರಿಯಾದ ಇಮೇಲ್ ಮತ್ತು ಮೊಬೈಲ್ ನಂಬರ್ ದಾಖಲಿಸಬೇಕು.
- ಯಾವುದೇ ಹಂತವನ್ನೂ ವಿಳಂಬ ಮಾಡದೇ ಮುಗಿಸಬೇಕು.
- ನಕಲಿ ದಾಖಲೆ ಅಥವಾ ತಪ್ಪು ಮಾಹಿತಿಯನ್ನು ನೀಡಿದರೆ ಪ್ರವೇಶವನ್ನೇ ರದ್ದುಪಡಿಸಬಹುದು.
ಕೆಸಿಇಟಿ ಸೀಟು ಹಂಚಿಕೆ ಪ್ರಕ್ರಿಯೆ ಸರಳವಾದರೂ ಕೂಡ, ನಿಖರ ಮಾಹಿತಿ ಮತ್ತು ಸಮಯಪಾಲನೆಯ ಅಗತ್ಯವಿದೆ. ತಪ್ಪುಗಳಿದ್ದರೆ ತಕ್ಷಣ ತಿದ್ದುಪಡಿ ಮಾಡಿಕೊಳ್ಳಿ. ಎಲ್ಲ ಹಂತಗಳನ್ನು ಎಚ್ಚರಿಕೆಯಿಂದ ಅನುಸರಿಸಿದರೆ ನಿಮ್ಮ ಇಷ್ಟದ ಕೋರ್ಸ್ ಹಾಗೂ ಕಾಲೇಜಿನಲ್ಲಿ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಬಹುದು.