ಗಂಗಾಕಲ್ಯಾಣ ಯೋಜನೆಯಡಿ ಉಚಿತ ಬೋರ್‌ವೆಲ್ (Free Borewell) ಪಡೆಯುವುದು ಹೇಗೆ? ಯಾವೆಲ್ಲ ಜಾತಿಯ ರೈತರು ಈ ಸೌಲಭ್ಯ ಪಡೆಯಲು ಅರ್ಹರು? ಮಾನದಂಡಗಳೇನು? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು? ಎಲ್ಲಿ ಅರ್ಜಿ ಸಲ್ಲಿಸಬೇಕು? ಫಲಾನುಭವಿಗಳ ಆಯ್ಕೆ ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ…
ನೀರಾವರಿ ಅನುಕೂಲಕ್ಕಾಗಿ ವಿವಿಧ ನಿಗಮಗಳ ಮೂಲಕ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ರಾಜ್ಯ ಸರ್ಕಾರ ಉಚಿತ ಬೋರ್‌ವೆಲ್ ಯೋಜನೆ ಅನುಷ್ಠಾನಗೊಳಿಸಿದೆ. ಈ ಪೈಕಿ ಗಂಗಾಕಲ್ಯಾಣ ಯೋಜನೆ ಅತ್ಯಂತ ಜನಪ್ರಿಯವಾಗಿದೆ. ಸದರಿ ಯೋಜನೆಯಡಿ ಅನೇಕ ರೈತರು ನೀರಾವರಿ ಅನುಕೂಲ ಹೊಂದುವ ಮೂಲಕ ಸುಸ್ಥಿರ ಆದಾಯ ಗಳಿಸುತ್ತಿದ್ದಾರೆ.
ಸಹಾಯಧನ ಮತ್ತು ಸಾಲದ ಸೌಲಭ್ಯವೆಷ್ಟು?
ಈ ಯೋಜನೆಯಡಿ ಅಂತರ್ಜಲ ಕಡಿಮೆಯಾಗಿರುವ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು ಜಿಲ್ಲೆಗಳಿಗೆ ಘಟಕದ ವೆಚ್ಚವನ್ನು 4.25 ಲಕ್ಷ ರೂ. ಸಹಾಯಧನ ನಿಗದಿಪಡಿಸಲಾಗಿದೆ. ಘಟಕ ಪೂರ್ಣಗೊಳಿಸಲು ಸಾಧ್ಯವಾಗದಿದ್ದಲ್ಲಿ 50,000 ರೂ. ಶೇ.4ರ ಬಡ್ಡಿದರದಲ್ಲಿ ಸಾಲ ಒದಗಿಸಲಾಗುವುದು.
ರಾಜ್ಯದ ಇತರೆ ಜಿಲ್ಲೆಗಳ ರೈತರಿಗೆ 3.25 ಲಕ್ಷ ಸಹಾಯಧನ ನಿಗದಿಪಡಿಸಲಾಗಿದ್ದು, ಘಟಕ ಪೂರ್ಣಗೊಳಿಸಲು ಸಾಧ್ಯವಾಗದಿದ್ದಲ್ಲಿ 50,000 ರೂ. ಶೇ.4ರ ಬಡ್ಡಿದರದಲ್ಲಿ ಸಾಲ ಒದಗಿಸಲಾಗುವುದು.
ಅರ್ಜಿ ಸಲ್ಲಿಕೆಗೆ ಮಾನದಂಡವೇನು?
- ಗಂಗಾಕಲ್ಯಾಣ ನೀರಾವರಿ ಯೋಜನೆಯ ಪ್ರಯೋಜನ ಪಡೆಯಲು ಸಣ್ಣ ಮತ್ತು ಅತಿ ಸಣ್ಣ ರೈತರಾಗಿರಬೇಕು.
- ಕನಿಷ್ಠ 1.20 ಎಕರೆ ಗರಿಷ್ಠ 5 ಎಕರೆ ಜಮೀನು ಹೊಂದಿರಬೇಕು.
- ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಶಿವಮೊಗ್ಗ ಜಿಲ್ಲೆಯ ರೈತರಿಗೆ ಕನಿಷ್ಠ 1 ಎಕರೆ ಇದ್ದರೆ ಸಾಕು.
- ಅರ್ಜಿದಾರ ಯಾವುದೇ ಕೇಂದ್ರ-ರಾಜ್ಯ ಸರ್ಕಾರದ ನೌಕರಿಯಲ್ಲಿ ಇರಬಾರದು.
- ಯೋಜನೆಗೆ ಅರ್ಜಿ ಸಲ್ಲಿಸುವ ರೈತರು ಆಧಾರ್ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರಬೇಕು.
- ಆಧಾರ್ ಕಾರ್ಡ್ನಲ್ಲಿರುವಂತೆ (ಶ್ರೀ/ಶ್ರೀಮತಿ, ಕುಮಾರಿ ಮುಂತಾದ ಮಾಹಿತಿಗಳೆಲ್ಲವು) ಬ್ಯಾಂಕ್ ಖಾತೆಯ ಪುಸ್ತಕದಲ್ಲಿಯೂ ಹೊಂದಾಣಿಕೆಯಾಗಬೇಕು.
- ಆಯಾ ಜಾತಿ ಸಮುದಾಯದ ನಿಗಮದ ಯಾವುದಾದರೂ ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
- ಜಾತಿ ಮತ್ತು ಆದಾಯ ಪ್ರಮಾಣಪತ್ರ
- ಪಡಿತರ ಚೀಟಿ, ಆಧಾರ್ ಕಾರ್ಡ್
- ಆಧಾರ್ ಜೋಡಿಸಲಾದ ಬ್ಯಾಂಕ್ ಖಾತೆ ಮಾಹಿತಿ
- ರೈತರ FID ಸಂಖ್ಯೆ
- ಪಾಸ್‌ಪೋರ್ಟ್ ಅಳತೆಯ 3 ಫೋಟೋಗಳು
- ಭೂಮಿಯ ದಾಖಲೆಗಳು- ಪಹಣಿ, ಖಾತಾ ಉದ್ದರಣೆ, ಪಟ್ಟಿ ಪುಸ್ತಕ
- ನೀರಾವರಿ ಇಲ್ಲ ಎಂಬ ಸ್ವಘೋಷಣಾ ಪತ್ರ
- ಭಾಗಶಃ ಸಾಲದ ಅಗತ್ಯವಿದ್ದರೆ ಒಪ್ಪಿಗೆ ಪತ್ರ
Karnataka Old Pension Scheme- ಸರ್ಕಾರಿ ನೌಕರರಿಗೆ ಹಳೇ ಪಿಂಚಣಿ ಯೋಜನೆ ಮರುಜಾರಿ | ರಾಜ್ಯ ಸರ್ಕಾರದ ಮಹತ್ವದ ಕ್ರಮ

ಯಾವೆಲ್ಲ ಜಾತಿಯ ರೈತರು ಅರ್ಜಿ ಸಲ್ಲಿಸಬಹುದು?
1. ಹಿಂದುಳಿದ ವರ್ಗದ ರೈತರು: ಹಿಂದುಳಿದ ವರ್ಗಗಕ್ಕೆ ಸೇರಿದ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದ ಸಣ್ಣ ಮತ್ತು ಅತೀ ಸಣ್ಣ ರೈತರು ಗಂಗಾಕಲ್ಯಾಣ ಉಚಿತ ಬೋರ್‌ವೆಲ್‌ಗೆ ಅರ್ಜಿ ಸಲ್ಲಿಸಬಹುದು. ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು ಈ ವರ್ಗದ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
2. ಅಲ್ಪಸಂಖ್ಯಾತರ ವರ್ಗದ ರೈತರು: ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಬೌದ್ಧ, ಜೈನ್, ಪಾರ್ಸಿ ಹಾಗೂ ಈ ಸಮುದಾಯಕ್ಕೆ ಒಳಪಡುವ ನಧಾಪ್, ಪಿಂಜಾರ, ಲೂಹಾರಿ, ಪಟ್ಟೆಗಾರ್, ದಿಗಂಬರ್(ಜೈನ್) ಸೇರಿ ಸಮಸ್ತ ಉಪಜಾತಿಯ ರೈತರು ಅರ್ಜಿ ಸಲ್ಲಿಸಬಹುದು. ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ಈ ವರ್ಗದ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
3. ಪರಿಶಿಷ್ಟ ಜಾತಿ-ಪಂಗಡದ ರೈತರು: ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಒಳಪಡುವ ಹಾಗೂ ಈ ವರ್ಗದ ಉಪಜಾತಿಯ ಎಲ್ಲ ರೈತರು ಗಂಗಾ ಕಲ್ಯಾಣ ಯೋಜನೆಗೆ ಅರ್ಹರಾಗಿರುತ್ತಾರೆ. ಪರಿಶಿಷ್ಟ ಜಾತಿ-ವರ್ಗಗಳ ಅಭಿವೃದ್ಧಿ ನಿಗಮವು ಈ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
4. ಲಿಂಗಾಯತ ರೈತರು: ವೀರಶೈವ ಲಿಂಗಾಯತ ಸಮುದಾಯಕ್ಕೆ ಒಳಪಡುವ ಎಲ್ಲ ರೀತಿಯ ಉಪ ಜಾತಿಯ ರೈತರು ಗಂಗಾಕಲ್ಯಾಣ ಉಚಿತ ಬೋರ್‌ವೆಲ್‌ಗೆ ಅರ್ಜಿ ಸಲ್ಲಿಸಬಹುದು. ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಇವರಿಂದ ಅರ್ಜಿ ಆಹ್ವಾನಿಸಲಾಗಿದೆ.
5. ವಿಶ್ವಕರ್ಮ ಸಮುದಾಯದ ರೈತರು: ಬಡಗಿ, ಆಚಾರಿ, ಅಕ್ಕಸಾಲಿ, ಕಮ್ಮಾರ ಹಾಗೂ ಈ ಸಮುದಾಯದ 41 ಜಾತಿಯ ರೈತರು ಅರ್ಜಿ ಸಲ್ಲಿಸಬಹುದು. ವಿಶ್ವಕರ್ಮ ಅಭಿವೃದ್ಧಿ ನಿಗಮವು ಇವರಿಂದ ಅರ್ಜಿ ಆಹ್ವಾನಿಸಲಾಗಿದೆ.
6. ಉಪ್ಪಾರ ಸಮುದಾಯದ ರೈತರು: ಉಪ್ಪಾರ, ಬೆಲ್ದರ್, ಕಲ್ಲುಕುಟಿಗೆ ಉಪ್ಪಾರ, ಸುಣಗಾರ ಹಾಗೂ ಈ ಸಮುದಾಯದ ಸುಮಾರ 22 ಉಪಜಾತಿಯ ರೈತರು ಅರ್ಜಿ ಸಲ್ಲಿಸಬಹುದು. ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮವು ಈ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
7. ಆದಿ ಜಾಂಬವ ಸಮುದಾಯದ ರೈತರು: ಪರಿಶಿಷ್ಟ ಜಾತಿಯಲ್ಲಿರುವ ಮಾದಿಗ ಮತ್ತು ಸಂಬಂಧಿತ ದಕ್ಕಲಿಗ, ಭಂಗಿ, ಜಾಡಮಾಲಿ, ಚಮಾರ್, ಸಮಗಾರ ಸೇರಿ 16 ಜಾತಿಗಳ ರೈತರು ಅರ್ಜಿ ಸಲ್ಲಿಸಬಹುದು. ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ ಇವರಿಂದ ಅರ್ಜಿ ಆಹ್ವಾನಿಸಲಾಗಿದೆ.
8. ಅಂಬಿಗರ ಸಮುದಾಯದ ರೈತರು: ಬೆಸ್ತ, ಅಂಬಿಗ, ಬಾರ್ಕಿ, ಗಂಗೆಮಕ್ಕಳು, ಗಂಗಾಮತ, ಜಲಗಾರ, ಕಬ್ಬೇರ್, ಕಬ್ಬಲಿಗ, ಕೋಳಿ, ಮೊಗವೀರ, ಖಾರ್ವಿ ಸೇರಿ 35 ಜಾತಿಯ ರೈತರು ಅರ್ಜಿ ಸಲ್ಲಿಸಬಹುದು. ನಿಜಗುಣ ಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮವು ಇವರಿಂದ ಅರ್ಜಿ ಆಹ್ವಾನಿಸಲಾಗಿದೆ.
9. ಭೋವಿ ಸಮುದಾಯದ ರೈತರು: ಪರಿಶಿಷ್ಟ ಜಾತಿ ಭೋವಿ ಜನಾಂಗ ಹಾಗೂ ಈ ಸಮುದಾಯದ ಭೋವಿ, ವಡ್ಡರ್, ವಡ್ಡೆ, ಕಲ್ಲುವಡ್ಡರ್ ಸೇರಿ 8 ಉಪಜಾತಿಯ ರೈತರು ಅರ್ಜಿ ಸಲ್ಲಿಸಬಹುದು. ಕರ್ನಾಟಕ ಬೋವಿ ಅಭಿವೃದ್ಧಿ ನಿಗಮವು ಇವರಿಂದ ಅರ್ಜಿ ಆಹ್ವಾನಿಸಲಾಗಿದೆ.
10. ಸವಿತಾ ಸಮುದಾಯದ ರೈತರು: ಸವಿತಾ ಸಮುದಾಯದ ಪರಿಯಾಳ (ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ), ಭಜಂತ್ರಿ, ಬಂಡಾರಿ, ಹಡಪದ, ಕೆಲಸಿ, ಕ್ಷೌರಿಕ, ನಾಡಿಗ, ನಾಪಿತ, ನಾವಿ ಸೇರಿ ಈ ಸಮುದಾಯದ 24 ಉಪಜಾತಿಯ ರೈತರು ಅರ್ಜಿ ಸಲ್ಲಿಸಬಹುದು. ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮವು ಇವರಿಂದ ಅರ್ಜಿ ಆಹ್ವಾನಿಸಲಾಗಿದೆ.
11. ಮಡಿವಾಳ ಸಮುದಾಯದ ರೈತರು: ಮಡಿವಾಳ, ಅಗಸ, ಧೋಬಿ, ಸೇರಿ ಈ ಸಮುದಾಯದ 11 ಉಪಜಾತಿಯ ರೈತರು ಅರ್ಜಿ ಸಲ್ಲಿಸಬಹುದು. ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮವು ಇವರಿಂದ ಅರ್ಜಿ ಆಹ್ವಾನಿಸಲಾಗಿದೆ.
ಮೇಲ್ಕಾಣಿಸಿದ ವಿವಿಧ ಜಾತಿ /ಸಮುದಾಯಗಳ ಪೈಕಿ ವಿಶ್ವಕರ್ಮ, ಉಪ್ಪಾರ, ಅಂಬಿಗ ಜಾತಿಯ ರೈತರು ಹಿಂದುಳಿದ ವರ್ಗಕ್ಕೆ ಒಳಪಡುವುದರಿಂದ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದಲೂ ಹಾಗೂ ಭೋವಿ, ಆದಿ ಜಾಂಬವ ಪರಿಶಿಷ್ಟ ಜಾತಿ-ಪಂಗಡದ ಸಮುದಾಯಕ್ಕೆ ಒಳಪಡುವುದರಿಂದ ಪರಿಶಿಷ್ಟ ಜಾತಿ-ವರ್ಗಗಳ ಅಭಿವೃದ್ಧಿ ನಿಗಮದಿಂದಲೂ ಈ ರೈತರು ಅರ್ಜಿ ಸಲ್ಲಿಸಬಹುದಾಗಿದೆ.
Ration Card Raddu- ರೇಷನ್ ಕಾರ್ಡ್ ರದ್ದು | ಸಿಎಂ ಖಡಕ್ ಸೂಚನೆ | ನಿಮ್ಮ ಕಾರ್ಡ್ ರದ್ದಾಗಿದೆಯಾ? ಈಗಲೇ ಚೆಕ್ ಮಾಡಿ
ಎಲ್ಲಿ ಅರ್ಜಿ ಸಲ್ಲಿಸಬೇಕು?
ಅರ್ಹ ಫಲಾಪೇಕ್ಷಿಗಳು ಗ್ರಾಮ ಒನ್/ ಬೆಂಗಳೂರು ಒನ್/ ಕರ್ನಾಟಕ ಒನ್ ನಾಗರಿಕ ಸೇವಾ ಕೇಂದ್ರಗಳಲ್ಲಿ ಅಗತ್ಯ ದಾಖಲೆಗಳೊಂದಿಗೆ ಸೇವಾಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ
ಜೂನ್ 30, 2025 – ಈ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು. ಈ ನಂತರದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಯೋಜನೆಯ ಕುರಿತು ಹೆಚ್ಚಿನ ಮಾಹಿತಿ ಹಾಗೂ ತಾಂತ್ರಿಕ ಸಹಾಯಕ್ಕಾಗಿ ಈ ಕೆಳಗಿನ ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು:
- 080-22374832
- 8050770004 / 8050770005
ಅರ್ಜಿ ಸಲ್ಲಿಕೆಗೆ ಸೇವಾಸಿಂಧು ನೇರ ಲಿಂಕ್: Apply ಮಾಡಿ