
ಉದ್ಯೋಗಿಗಳು ಇನ್ನುಮುಂದೆ ಇನ್ನು ಮುಂದೆ ಭವಿಷ್ಯ ನಿಧಿಯಲ್ಲಿನ ಶೇ.100ರಷ್ಟು ಪಿಎಫ್ ಹಣವನ್ನು ವಾಪಸ್ (PF 100 Percent Withdrawal) ಪಡೆಯಲು ಅವಕಾಶ ನೀಡಲಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ…
ಉದ್ಯೋಗಿಗಳ ಭವಿಷ್ಯ ನಿಧಿ (EmployeesProvidentFund) ಕುರಿತು ಕೇಂದ್ರ ಸರ್ಕಾರ ಹೊಸ ತೀರ್ಮಾನ ಕೈಗೊಂಡಿದೆ. ಇನ್ಮುಂದೆ 7 ಕೋಟಿಗೂ ಹೆಚ್ಚು ಇಪಿಎಫ್‌ಒ ಸದಸ್ಯರು ತಮ್ಮ ಖಾತೆಯಲ್ಲಿರುವ ಶೇ.100ರಷ್ಟು ಪಿಎಫ್ ಹಣವನ್ನು ಹಿಂಪಡೆಯಬಹುದಾಗಿದೆ. ಇದರಿಂದ ಪಿಎಫ್ ಹಣ ವಿತ್‌ಡ್ರಾ ಸಮಸ್ಯೆಗೆ ಪೂರ್ಣ ವಿರಾಮ ಬಿದ್ದಂತಾಗಿದೆ.
ಪಿಎಫ್ ಖಾತೆಯಲ್ಲಿ ಶೇ.25ರಷ್ಟು ಶಿಲ್ಕು ಸಾಕು
ಕೇಂದ್ರ ಕಾರ್ಮಿಕ ಸಚಿವ ಮನಸುಖ್ ಮಾಂಡಾವಿಯಾ ನೇತೃತ್ವದಲ್ಲಿ ನಡೆಸಲಾದ ನೌಕರರ ಭವಿಷ್ಯ ನಿಧಿ ಸಂಘಟನೆಯ (EPFO) ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟೀಸ್ (CBT) ಸಭೆಯಲ್ಲಿ ಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.
ನಿರ್ಣಯದ ಪ್ರಕಾರ, ಸದಸ್ಯರು ತಮ್ಮ ಪಿಎಫ್ ಖಾತೆಯಲ್ಲಿ ಉದ್ಯೋಗಿ ಮತ್ತು ಉದ್ಯೋಗದಾತರ ಪಾಲು ಸೇರಿ ಶೇ.25ರಷ್ಟು ಮೊತ್ತವನ್ನು ಕನಿಷ್ಠ ಶಿಲ್ಕು ಎಂದು ಉಳಿಸಿಕೊಂಡರೆ ಸಾಕು. ಉಳಿದ ಮೊತ್ತವನ್ನು ಯಾವುದೇ ದಾಖಲೆಗಳನ್ನು ನೀಡದೇ, ಸಂಪೂರ್ಣವಾಗಿ ವಾಪಸ್ ಪಡೆಯಬಹುದು.
ಹಣ ಹಿಂಪಡೆಯುವ ಅವಕಾಶಗಳು ಹೆಚ್ಚಳ
ಈಗಾಗಲೇ ಪಿಎಫ್ ಹಣವನ್ನು ಹಿಂಪಡೆಯಲು ಅನಾರೋಗ್ಯ, ಶಿಕ್ಷಣ, ಮದುವೆ, ಗೃಹ ನಿರ್ಮಾಣ ಮತ್ತು ವಿಶೇಷ ಸನ್ನಿವೇಶಗಳು ಸೇರಿ ಕೆಲವು ನಿರ್ದಿಷ್ಟ ಕಾರಣಗಳು ನಿಗದಿಯಾಗಿದ್ದವು.
ಹೊಸ ನಿಯಮಗಳ ಪ್ರಕಾರ, ಶಿಕ್ಷಣಕ್ಕಾಗಿ ಪಿಎಫ್ ಹಣವನ್ನು 10 ಬಾರಿ ಹಿಂಪಡೆಯಬಹುದು. ಮದುವೆಗಾಗಿ ಪಿಎಫ್ ಹಣವನ್ನು 5 ಬಾರಿ ವಾಪಸ್ ಪಡೆಯಲು ಅವಕಾಶವಿದೆ. ಈ ಎರಡೂ ಕಾರಣಗಳಿಗೆ ಈ ಹಿಂದೆ 3 ಬಾರಿ ಮತ್ತು 5 ಬಾರಿ ಮಾತ್ರ ಅವಕಾಶವಿತ್ತು.
ಇದೇ ರೀತಿ ಭಾಗಶಃ ಹಣವನ್ನು ಪಡೆಯುವ ಪ್ರಕ್ರಿಯೆಯಲ್ಲೂ ಬದಲಾವಣೆ ಆಗಿದೆ. ಸೇವಾ ಅವಧಿಯನ್ನು ಈಗ 12 ತಿಂಗಳು ವಿಸ್ತರಿಸಿದ್ದು, ಹೊಸ ಸದಸ್ಯರೂ ಕೂಡ ತಮ್ಮ ಖಾತೆಯ ಹಣವನ್ನು ಬೇಗನೆ ಬಳಸಿಕೊಳ್ಳಬಹುದಾಗಿದೆ.
ಹಣ ಪಡೆಯಲು ಕಾರಣ ನೀಡುವ ಅಗತ್ಯವಿಲ್ಲ
ಹಿಂದಿನ ನಿಯಮಗಳ ಪ್ರಕಾರ ನೈಸರ್ಗಿಕ ವಿಕೋಪ, ಕಂಪನಿ ಬಂದ್ ಆಗುವುದು, ಲಾಕ್ ಔಟ್ ಅಥವಾ ನಿರಂತರ ನಿರುದ್ಯೋಗ ಇತ್ಯಾದಿ ವಿಶೇಷ ಸನ್ನಿವೇಶಗಳಲ್ಲಿ ಪಿಎಫ್ ಹಣ ಪಡೆಯಲು ಕಾರಣವನ್ನು ಸ್ಪಷ್ಟವಾಗಿ ನಮೂದಿಸಬೇಕಾಗುತ್ತಿತ್ತು.
ಈ ಕಾರಣದಿಂದಾಗಿ ಹಲವಾರು ಸದಸ್ಯರ ಅರ್ಜಿಗಳು ತಿರಸ್ಕೃತಗೊಳ್ಳುತ್ತಿದವು. ಆದರೆ, ಈಗ ಈ ಕಡ್ಡಾಯ ನಿಯಮಕ್ಕೆ ತೆರೆ ಬಿದ್ದಿದೆ. ಇನ್ನು ಮುಂದೆ ಸದಸ್ಯರು ಯಾವುದೇ ಕಾರಣ ನೀಡದೆ ಹಣವನ್ನು ವಾಪಸ್ ಪಡೆಯಲು ಅವಕಾಶವಿದೆ.
ಪಿಂಚಣಿ ಮತ್ತು ಸೆಟ್ಲಮೆಂಟ್ ಅವಧಿಯಲ್ಲೂ ಬದಲಾವಣೆ
ಹೊಸ ನಿಯಮಗಳ ಪ್ರಕಾರ, ಪಿಎಫ್ ಸೆಟ್ಲಮೆಂಟ್ ಅವಧಿಯನ್ನು ಹಿಂದಿನ 2 ತಿಂಗಳಿನಿAದ 12 ತಿಂಗಳಿಗೆ ವಿಸ್ತರಿಸಲಾಗಿದೆ. ಪಿಂಚಣಿ ಪಡೆಯುವ ಅವಧಿಯನ್ನೂ 2 ತಿಂಗಳಿನಿಂದ 36 ತಿಂಗಳಿಗೆ ವಿಸ್ತರಿಸಲಾಗಿದೆ. ಈ ಬದಲಾವಣೆಗಳಿಂದ ನಿವೃತ್ತಿಯ ಬಳಿಕ ಅಥವಾ ಕೆಲಸ ಬಿಟ್ಟ ನಂತರದ ಅವಧಿಯಲ್ಲಿ ಹಣ ಪಡೆಯುವ ಪ್ರಕ್ರಿಯೆ ಇನ್ನಷ್ಟು ಸರಳವಾಗಲಿದೆ.
ವಿವಾದ ಪರಿಹಾರಕ್ಕೆ ಹೊಸ ದಾರಿ
ಇಪಿಎಫ್‌ಒ ವ್ಯವಸ್ಥೆಯಲ್ಲಿ ವರ್ಷಗಳಿಂದ ಬಾಕಿ ಉಳಿದಿರುವ ಸಾವಿರಾರು ದಾವೆಗಳ ಇತ್ಯರ್ಥಕ್ಕಾಗಿ ಸರ್ಕಾರ ‘ವಿಶ್ವಾಸ್ ಯೋಜನೆ’ಗೆ ಅನುಮೋದನೆ ನೀಡಿದೆ. ಸದರಿ ವಿಶ್ವಾಸ್ ಯೋಜನೆಯಿಂದ ಈ ದಾವೆಗಳನ್ನು ವೇಗವಾಗಿ ಇತ್ಯರ್ಥಗೊಳಿಸಲು ಸಾಧ್ಯವಾಗಲಿದೆ.
ಹೈಕೋರ್ಟ್, ಸುಪ್ರೀಂ ಕೋರ್ಟ್ ಹಾಗೂ ಇತರ ನ್ಯಾಯಾಂಗಗಳಲ್ಲಿ 6,000ಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇವೆ. ಜೊತೆಗೆ ಇಪಿಎಫ್ ಇ-ಪ್ರೊಸೀಡಿಂಗ್ಸ್ ಪೋರ್ಟಲ್‌ನಲ್ಲಿ 21,000ಕ್ಕೂ ಹೆಚ್ಚು ಪ್ರಕರಣಗಳು ತಟಸ್ಥವಾಗಿವೆ.



