ಕಡೆಗೂ ರಾಜ್ಯ ಸರ್ಕಾರಿ ನೌಕರರ ಮಹತ್ವಾಕಾಂಕ್ಷಿ ಯೋಜನೆಯಾದ ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ಯನ್ನು (Karnataka Arogya Sanjeevini Scheme KASS) ಜಾರಿಗೆ ತರಲು ರಾಜ್ಯ ಸಚಿವ ಸಂಪುಟ ಸಭೆ ನಿರ್ಣಯಿಸಿದೆ…
ರಾಜ್ಯ ಸರಕಾರಿ ನೌಕರರು (Govt Employees) ಹಾಗೂ ಅವರ ಅವಲಂಬಿತ ಕುಟುಂಬದ ಸದಸ್ಯರಿಗೆ ನಗದು ರಹಿತ ವೈದ್ಯಕೀಯ ಸೌಲಭ್ಯ ಒದಗಿಸುವ ಸದರಿ ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ಯು 2021-22ನೇ ಸಾಲಿನ ಬಜೆಟ್’ನಲ್ಲಿ ಘೋಷಣೆಯಾಗಿ, 2021ರ ಜುಲೈ 22 ರಂದು ಕ್ಯಾಬಿನೆಟ್ ಅನುಮೋದನೆ ಪಡೆಯಲಾಗಿತ್ತು. ಆದರೆ, ಅನೇಕ ಗೊಂದಲದಲ್ಲಿ ಸಿಲುಕಿದ್ದರಿಂದ ಯೋಜನೆ ಅನುಷ್ಠಾನಕ್ಕೆ ಬಂದಿರಲಿಲ್ಲ.
ಇದೀಗ ಸುವರ್ಣ ಆರೋಗ್ಯ ಟ್ರಸ್ಟ್, ಆರೋಗ್ಯ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹಾಗೂ ನೌಕರ ಸಂಘಟನೆಗಳ ಅಭಿಪ್ರಾಯದೊಂದಿಗೆ ಸಮಗ್ರ ವರದಿ ಪಡೆದುಕೊಂಡು ತಾಂತ್ರಿಕ ಮತ್ತು ಹಣಕಾಸು ಸಂಬ೦ಧಿತ ಎಲ್ಲ ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳಲಾಗಿದೆ.
ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ನ್ನು ಜಾರಿಗೆ ತರಲು ನಿರ್ಣಯಿಸಿದ್ದು; ನೌಕರರಿಗೆ ಅನುಕೂಲವಾಗುವಂತೆ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತಿದೆ.
ಇದನ್ನೂ ಓದಿ: East Monsoon Rain- ಕರ್ನಾಟಕದ ಈ ಜಿಲ್ಲೆಗಳಲ್ಲಿ ಒಂದು ವಾರ ಮಳೆ | ರಾಜ್ಯಾದ್ಯಂತ ಪೂರ್ವ ಮುಂಗಾರು ಮಳೆ ಅಬ್ಬರ
ಯೋಜನೆಯ ಮುಖ್ಯ ಅಂಶಗಳು
ಇನ್ಮು೦ದೆ ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ಯಡಿಯಲ್ಲಿ ರಾಜ್ಯ ಸರಕಾರಿ ನೌಕರರು ಮತ್ತು ಅವರ ಕುಟುಂಬ ಅವಲಂಬಿತ ಕುಟುಂಬ ಸದಸ್ಯರು ಹಲವು ಗಂಭೀರ ಕಾಯಿಲೆಗಳಿಗೆ ಆಸ್ಪತ್ರೆಗೆ ತೆರಳಿ ಉಚಿತವಾಗಿ ಚಿಕಿತ್ಸೆ ಪಡೆಯಬಹುದು.
ಈ ಯೋಜನೆಯಡಿ ಸುಮಾರು ರಾಜ್ಯದ ಅಷ್ಟೂ ಸರ್ಕಾರಿ ನೌಕರರು ಮತ್ತು ಅವರ ಕುಟುಂಬ ಸದಸ್ಯರಿಗೆ ಉಚಿತ ವೈದ್ಯಕೀಯ ಸೌಲಭ್ಯ ಒದಗಿಸಲಾಗುತ್ತದೆ.ಮಾರಣಾಂತಿಕ ಕಾಯಿಲೆಗಳು, ಅಂಗಾ೦ಗ ಕಸಿ, ಶಸ್ತ್ರಚಿಕಿತ್ಸೆ ಸೇರಿದಂತೆ ಹಲವು ಗಂಭೀರ ಕಾಯಿಲೆಗಳಿಗೆ ಈ ಯೋಜನೆಯಡಿ ಉಚಿತ ಚಿಕಿತ್ಸೆ ದೊರೆಯಲಿದೆ.
ಈ ಯೋಜನೆಯನ್ನು ನಿರ್ವಹಿಸಲು ರಾಜ್ಯ ಸರ್ಕಾರ ಪ್ರತಿ ವರ್ಷ ಸುಮಾರು 1,000 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ. ನಿರ್ದಿಷ್ಟ ಕಾಯಿಲೆಗಳ ಚಿಕಿತ್ಸೆಗೆ ಸರ್ಕಾರ ಪ್ಯಾಕೇಜ್ ಮಾದರಿಯಲ್ಲಿ ದರಗಳನ್ನು ನಿಗದಿಪಡಿಸಲಿದೆ.
ಯಾವೆಲ್ಲ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ಸಿಗಲಿದೆ?
‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ ಯೋಜನೆಯಡಿಯಲ್ಲಿ ಸರ್ಕಾರಿ ನೌಕರರು ಮತ್ತು ಕುಟುಂಬ ಸದಸ್ಯರಿಗೆ ಸುಮಾರು 1,500ಕ್ಕೂ ಹೆಚ್ಚು ಕಾಯಿಲೆಗಳಿಗೆ ಉಚಿತ ಚಿಕಿತ್ಸಾ ಸೇವೆ ಸಿಗಲಿದೆ. ಪ್ರಮುಖ ಖಾಯಿಲೆಗಳ ವಿವರ ಕೆಳಗಿನಂತಿದೆ:
- ಹೃದಯ ಸಂಬ೦ಧಿತ ಕಾಯಿಲೆಗಳು
- ಕ್ಯಾನ್ಸರ್ ಚಿಕಿತ್ಸೆಗಳು
- ಕಿಡ್ನಿ ವೈಫಲ್ಯ ಮತ್ತು ಡಯಾಲಿಸಿಸ್
- ಅಂಗಾ೦ಗ ಕಸಿ (ಉದಾಹರಣೆಗೆ – ಲಿವರ್, ಕಿಡ್ನಿ)
- ಮೂಳೆ ಸಂಬ೦ಧಿತ ಸಮಸ್ಯೆಗಳು
- ನವಜಾತ ಶಿಶುಗಳ ಚಿಕಿತ್ಸಾ ಸೇವೆಗಳು
- ತುರ್ತು ಶಸ್ತ್ರಚಿಕಿತ್ಸೆಗಳು
ಯಾರು ಈ ಯೋಜನೆಯ ಪ್ರಯೋಜನ ಪಡೆಯಬಹುದು?
ಮೊದಲೇ ಹೇಳಿದಂತೆ ಈ ಯೋಜನೆಯಡಿ ರಾಜ್ಯ ಸರ್ಕಾರದಲ್ಲಿ ನೌಕರರಾಗಿರುವ ಮತ್ತು ಸೇವೆಯಲ್ಲಿ ಇರುವವರು ಮಾತ್ರ ಅರ್ಹರಾಗುತ್ತಾರೆ. ರಾಜ್ಯ ಸರ್ಕಾರಿ ನೌಕರರು, ನೌಕರರ ಪತಿ ಅಥವಾ ಪತ್ನಿ, ಪೋಷಕರು (ತಂದೆ-ತಾಯಿ), ಅವಲಂಬಿತ ಮಕ್ಕಳು ಈ ಸೌಲಭ್ಯ ಪಡೆಯಬಹುದು.
ಗಮನಾರ್ಹವೆಂದರೆ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯಡಿ ಅನುದಾನಿತ ಮತ್ತು ಸ್ಥಳೀಯ ಸಂಸ್ಥೆಗಳ ನೌಕರರು, ಗುತ್ತಿಗೆ ನೌಕರರು, ಅರೆಕಾಲಿಕ ನೌಕರರು ಹಾಗೂ ದಿನಗೂಲಿ ನೌಕರರು ಒಳಪಡುವುದಿಲ್ಲ.
ಯೋಜನೆಯ ಅನುಷ್ಠಾನ ಹೇಗೆ?
ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಸರಕಾರದಿಂದ ನಿಗದಿತ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರಲಿದೆ. ಈ ಯೋಜನೆಯಡಿ ನೋಂದಣಿಯಾಗಿರುವ ಆಸ್ಪತ್ರೆಗಳಲ್ಲಿ, ನೌಕರರು ತಮ್ಮ ಆರೋಗ್ಯ ಕಾರ್ಡ್ ಅಥವಾ ಸರಕಾರಿ ಗುರುತು ಪತ್ರದ ಆಧಾರದ ಮೇಲೆ ನೇರವಾಗಿ ಚಿಕಿತ್ಸೆ ಪಡೆಯಬಹುದು. ಸರ್ಕಾರಿ ಆಸ್ಪತ್ರೆಗಳಿಗೆ ಆದ್ಯತೆ ನೀಡಲಾಗಿದ್ದು, ಖಾಸಗಿ ಆಸ್ಪತ್ರೆಗಳೊಂದಿಗೆ ಸಹ ಒಡಂಬಡಿಕೆ ಮಾಡಲಾಗುತ್ತಿದೆ.
ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ರಾಜ್ಯ ಸರ್ಕಾರಿ ನೌಕರರ ಆರೋಗ್ಯ ಸುರಕ್ಷತೆಗಾಗಿ ಮಹತ್ವದ ಹೆಜ್ಜೆಯಾಗಿದ್ದು; ಇದರ ಜಾರಿಯೊಂದಿಗೆ, ಸಾವಿರಾರು ಕುಟುಂಬಗಳು ಉತ್ತಮ ಗುಣಮಟ್ಟದ ಚಿಕಿತ್ಸೆ ಪಡೆಯಲು ಸಾಧ್ಯವಾಗಲಿದೆ. ಸರ್ಕಾರದ ನಿರ್ಧಾರದಂತೆ ಶೀಘ್ರದಲ್ಲಿಯೇ ಈ ಯೋಜನೆ ಸಂಪೂರ್ಣ ಜಾರಿಗೆ ಬರಲಿದ್ದು; ಇದರಿಂದ ಸರಕಾರಿ ನೌಕರರ ಆರೋಗ್ಯ ಸುಧಾರಣೆಗೆ ಸಹಾಯವಾಗಲಿದೆ.