ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯು ಸರ್ಕಾರಿ ನೌಕರರ ಪಿಂಚಣಿ ನಿಯಮಗಳಿಗೆ (Central Govt Pension Rules) ತಿದ್ದುಪಡಿ ಮಾಡಿ ಅಧಿಸೂಚನೆ ಹೊರಡಿಸಿದ್ದು; ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ಕೇಂದ್ರ ಸರ್ಕಾರವು ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ನಿವೃತ್ತಿ ನಂತರದ ಭದ್ರತೆಗೆ ಸಂಬಂಧಿಸಿದ ಮಹತ್ವದ ತಿದ್ದುಪಡಿಯನ್ನು ಜಾರಿಗೆ ತಂದಿದೆ. ಕಳೆದ ಮೇ 22ರಂದು ಭಾರತ ಸರ್ಕಾರದ ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯು (Department of Pension and Pensioners’ Welfare – DoPPW) ಈ ಕುರಿತು ಅಧಿಸೂಚನೆ ಹೊರಡಿಸಿದೆ.
ಈ ಅಧಿಸೂಚನೆಯು ಕೇಂದ್ರ ನಾಗರಿಕ ಸೇವೆಗಳ ಪಿಂಚಣಿ ನಿಯಮಗಳಲ್ಲಿ (Central Civil Services – CCS Pension Rules) ತಿದ್ದುಪಡಿ ಮಾಡಿದ್ದು, ಸರ್ಕಾರಿ ನೌಕರರು ಸಾರ್ವಜನಿಕ ವಲಯದ ಸಂಸ್ಥೆಗಳಿಗೆ (PSUs) ವರ್ಗವಾದ ಬಳಿಕ ಅವರ ಶಿಸ್ತು ಮತ್ತು ನಡವಳಿಕೆಗೆ ಆಧಾರಿತವಾಗಿ ಪಿಂಚಣಿ ಸೌಲಭ್ಯಗಳನ್ನು ಕೊಡಬೇಕಾ ಅಥವಾ ಇಲ್ಲವೇ ಎಂಬ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಸರ್ಕಾರಕ್ಕಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.
ಹೊಸ ನಿಯಮ ಏನು ಹೇಳುತ್ತದೆ?
ಈ ಹೊಸ ಅಧಿಸೂಚನೆಯು CCS (ಪಿಂಚಣಿ) ನಿಯಮ 2021ರ ನಿಯಮ 37ರ ಉಪನಿಯಮ 29ಕ್ಕೆ ತಿದ್ದುಪಡಿ ಮಾಡಲಾಗಿದೆ. ಈ ನಿಯಮವು ಯಾವ ಸಂದರ್ಭಗಳಲ್ಲಿ ಸರ್ಕಾರಿ ನೌಕರನ ಪಿಂಚಣಿ ಮತ್ತು ಇತರ ನಿವೃತ್ತಿ ಸೌಲಭ್ಯಗಳನ್ನು ಸ್ಥಗಿತಗೊಳಿಸಬಹುದು ಎಂಬುದನ್ನು ವಿವರಿಸುತ್ತದೆ. ಹೊಸ ತಿದ್ದುಪಡಿಯ ಪ್ರಕಾರ:
- ಸರ್ಕಾರಿ ಸೇವೆಯಿಂದ ಪಿಎಸ್ಯುಗಳಿಗೆ ಹೋಗುವ ನೌಕರರು ಅಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಶಿಸ್ತುಭಂಗ ಅಥವಾ ಅನೈತಿಕ ವರ್ತನೆ ಮಾಡಿದ್ದರೆ,
- ಅವರನ್ನು ಪಿಎಸ್ಯುದಿಂದ ವಜಾ ಮಾಡಿದರೆ ಅಥವಾ ಶಿಸ್ತಿನ ಕ್ರಮ ಕೈಗೊಳ್ಳಲಾಗಿದೆ ಎಂದಾದರೆ,
- ಅವರು ಸರ್ಕಾರಿ ಸೇವೆಯಲ್ಲಿ ಇದ್ದಾಗ ಸಂಪಾದಿಸಿದ ಪಿಂಚಣಿ ಹಾಗೂ ಗ್ರಾಚ್ಯುಟಿ ಸೌಲಭ್ಯಗಳನ್ನು ಪೂರ್ತಿ ಅಥವಾ ಭಾಗಶಃ ಕತ್ತರಿಸಬಹುದಾಗಿದೆ.
ಅಂತಿಮ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಯಾರಿಗೆ?
ಈ ವಿಷಯದಲ್ಲಿ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಅಧಿಕಾರವನ್ನು ಅದನ್ನು ಮೇಲ್ವಿಚಾರಣೆ ಮಾಡುವ ಕೇಂದ್ರ ಸಚಿವಾಲಯಕ್ಕೆ ನೀಡಲಾಗಿದೆ. ಅಂದರೆ, ನೌಕರರು ಕೆಲಸ ಮಾಡುತ್ತಿರುವ ಪಿಎಸ್ಯು ಯಾವ ಸಚಿವಾಲಯಕ್ಕೆ ಸೇರಿದೆವೋ, ಆ ಸಚಿವಾಲಯವೇ ಪಿಂಚಣಿಯ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ.
ಇದು ಅನೇಕ ಪಿಎಸ್ಯುಗಳ ಅಧಿಕಾರ ವ್ಯವಸ್ಥೆಗೆ ಹೊಸ ಬದಲಾವಣೆಗಳನ್ನು ತರುತ್ತದೆ. ಈ ಹಿಂದೆ ನಿವೃತ್ತಿ ಸೌಲಭ್ಯಗಳು ‘ನೌಕರರ ಹಕ್ಕು’ ಎಂದು ಪರಿಗಣಿಸಲಾಗುತ್ತಿದ್ದರೆ, ಈಗ ಅದೇ ಹಕ್ಕುಗಳು ನೌಕರರ ನಡವಳಿಕೆಗೆ ಅವಲಂಬಿತವಾಗಿವೆ.
ನಿಯಮ 37 ಎಂದರೇನು?
CCS (Pension) Rule 37 ಅಡಿಯಲ್ಲಿ, ಕೇಂದ್ರ ಸರ್ಕಾರಿ ಇಲಾಖೆಯು ಪಿಎಸ್ಯುವಾಗಿ ಪರಿವರ್ತಿತವಾದಾಗ ಅಥವಾ ನೌಕರರು ಸೇವೆಯಿಂದ ಪಿಎಸ್ಯುವಿಗೆ ವರ್ಗವಾದಾಗ ಅವರ ನಿವೃತ್ತಿ ಸೌಲಭ್ಯಗಳು ಹೇಗೆ ನಿರ್ವಹಿಸಬೇಕು ಎಂಬುದನ್ನು ವಿವರಿಸಲಾಗುತ್ತದೆ. ಇದರ ಪ್ರಕಾರ:
- ನೌಕರನ ಬಾಕಿ ರಜೆಗಳು (Earned Leave, Half Pay Leave) ಪಿಎಸ್ಯುವಿಗೆ ವರ್ಗವಾಗುತ್ತವೆ.
- ಪಿಎಫ್ (PF) ಖಾತೆಯ ಬಾಕಿ ಮೊತ್ತವನ್ನು ಪಿಎಸ್ಯು ಪಿಎಫ್ ಖಾತೆಗೆ ವರ್ಗಿಸಲಾಗುತ್ತದೆ.
- ನಿವೃತ್ತಿ ಆದ ನಂತರ ಪಿಂಚಣಿ ನೀಡುವ ಹೊಣೆಗಾರಿಕೆಯನ್ನು ಸರ್ಕಾರವೇ ನಿರ್ವಹಿಸುತ್ತದೆ. ಆದರೆ ನೌಕರನು ಶಿಸ್ತಿನ ಉಲ್ಲಂಘನೆ ಮಾಡಿದರೆ ಈ ಹಕ್ಕು ಹೋಗಬಹುದು.
ಜವಾಬ್ದಾರಿಯುತವಾಗಿ ವರ್ತಿಸುವುದು ಅನಿವಾರ್ಯ
ಈ ನಿಯಮದ ಪ್ರಕಾರ, ಸರ್ಕಾರಿ ನೌಕರರು ತಮ್ಮ ಸೇವೆಯುಳ್ಳ ಸ್ಥಾನದಿಂದ ಪಿಎಸ್ಯುಗಳಿಗೆ ವರ್ಗವಾಗುವ ಸಂದರ್ಭದಲ್ಲಿ ಹೆಚ್ಚು ಜವಾಬ್ದಾರಿಯುತವಾಗಿ ಮತ್ತು ಶಿಸ್ತುಬದ್ಧವಾಗಿ ವರ್ತಿಸಬೇಕಾಗುತ್ತದೆ. ಏಕೆಂದರೆ ಹಕ್ಕುಬದ್ದವಾಗಿದ್ದ ಪಿಂಚಣಿ ಇದೀಗ ನೌಕರನ ವರ್ತನೆ ಮೇಲೆ ಆಧಾರಿತವಾಗಿದೆ.
ಪಿಎಸ್ಯುಗಳಲ್ಲಿ ಕೆಲಸ ಮಾಡುವವರು ಅಥವಾ ವರ್ಗವಾಗಲು ಉತ್ಸುಕರಾಗಿರುವವರು ಇನ್ನು ಮುಂದೆ ತಮ್ಮ ಕೆಲಸದ ನಡವಳಿಕೆಯಲ್ಲಿ ಹೆಚ್ಚು ಎಚ್ಚರಿಕೆಯಿಂದ ಇರಬೇಕಾಗಿದೆ. ಇಲ್ಲದಿದ್ದರೆ, ನಿವೃತ್ತಿ ನಂತರದ ಆರ್ಥಿಕ ಭದ್ರತೆಗೆ ಧಕ್ಕೆಯಾಗಬಹುದು.
ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರವು ಪಿಂಚಣಿ ಎಂಬ ಹಕ್ಕಿಗೆ ಶರತ್ತುಗಳನ್ನು ಕಟ್ಟಿಕೊಟ್ಟಿದೆ. ಶಿಸ್ತು, ನೈತಿಕತೆ ಮತ್ತು ನೌಕರನ ನಡವಳಿಕೆ ಎಂತಹುದೇ ಸರ್ಕಾರಿ ಅಥವಾ ಪಿಎಸ್ಯು ಸ್ಥಾನದಲ್ಲಿರಲಿ, ನಿವೃತ್ತಿ ಸೌಲಭ್ಯಗಳನ್ನು ಆಧರಿಸುವ ಪ್ರಮುಖ ಅಂಶವಾಗಿವೆ. ಇದು ಕೇವಲ ನಿಯಮದ ಬದಲಾವಣೆ ಅಲ್ಲ, ನೌಕರರ ಹೊಣೆಗಾರಿಕೆಗೆ ಹೊಸ ಅರ್ಥ ನೀಡುವ ಕ್ರಮವಾಗಿದೆ.