ಬಿಪಿಎಲ್ ರೇಷನ್ ಕಾರ್ಡ್’ಗಳ (BPL Ration Card) ವಿತರಣೆ ಮಾಡುವಂತೆ ಆಹಾರ ಇಲಾಖೆಯ ಅಧಿಕಾರಿಗಳ ಮೇಲೆ ಒತ್ತಡ ಹೆಚ್ಚುತ್ತಿದೆ. ಹಾಗಿದ್ದರೆ ಹೊಸ ರೇಷನ್ ಕಾರ್ಡ್ ವಿತರಣೆ ಯಾವಾಗ? ಇಲ್ಲಿದೆ ಮಾಹಿತಿ…
ರಾಜ್ಯದಲ್ಲಿ ಬಿಪಿಎಲ್ (Below Poverty Line) ರೇಷನ್ ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ ಕಳೆದ ಮಾರ್ಚ್’ನಿಂದ 10 ಕೆ.ಜಿ ಅಕ್ಕಿ ವಿತರಣೆ ಆರಂಭವಾಗಿದೆ. ಇದರ ಬೆನ್ನಲ್ಲೇ ಬಿಪಿಎಲ್ ಕಾರ್ಡ್’ಗೆ ಅರ್ಜಿ ಸಲ್ಲಿಸಿರುವ 2.86 ಲಕ್ಷ ಫಲಾನುಭವಿಗಳು ತಮಗೂ ಆದಷ್ಟು ಬೇಗ ಪಡಿತರ ಚೀಟಿ ಮಂಜೂರು ಮಾಡುವಂತೆ ಅಧಿಕಾರಿಗಳಿಗೆ ದುಂಬಾಲು ಬಿದ್ದಿದ್ದಾರೆ.
5 ಕೆ.ಜಿ ಬದಲಾಗಿ 10 ಕೆ.ಜಿ ಅಕ್ಕಿ ವಿತರಣೆ ಮಾಡುವ ಮೂಲಕ ರಾಜ್ಯ ಸರಕಾರ ನುಡಿದಂತೆ ನಡೆಯುತ್ತಿದೆ. ಆದರೆ, ರಾಜ್ಯದ ನೈಜ ಫಲಾನುಭವಿಗಳಿಗೆ ಬಿಪಿಎಲ್ ಕಾರ್ಡ್ ಸಿಗದಂತೆ ಮಾಡಿ, ಅವರಿಗೆ ಅನ್ನಭಾಗ್ಯ, ಗೃಹಲಕ್ಷ್ಮೀ ಯೋಜನೆಯಿಂದ ಹೊರಗಿಡುವುದು ಯಾವ ನ್ಯಾಯ ಎಂದು ಅರ್ಜಿದಾರರು ಪ್ರಶ್ನಿಸುತ್ತಿದ್ದಾರೆ.
ಅರ್ಜಿಗಳ ಸ್ಥಿತಿಗತಿ ಚಿತ್ರಣ
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಮಾಹಿತಿ ಪ್ರಕಾರ, ಏಪ್ರಿಲ್ 3, 2025ರ ತನಕ ರಾಜ್ಯದಾದ್ಯಂತ 11.36 ಲಕ್ಷ ಹೊಸ ಬಿಪಿಎಲ್ ಕಾರ್ಡ್ ಅರ್ಜಿಗಳು ಸಲ್ಲಿಕೆಯಾಗಿದೆ. ಈ ಪೈಕಿ 9.18 ಲಕ್ಷ ಅರ್ಜಿ ಸ್ವೀಕೃತವಾಗಿದೆ. 5.76 ಲಕ್ಷ ಅರ್ಜಿ ಪರಿಶೀಲನೆಗೆ ಒಳಪಟ್ಟಿದೆ.
ಒಟ್ಟು ಸಲ್ಲಿಕೆಯಾದ 11.36 ಲಕ್ಷ ಅರ್ಜಿಗಳಲ್ಲಿ 2.24 ಲಕ್ಷ ಅರ್ಜಿ ತಿರಸ್ಕೃತವಾಗಿದ್ದು 47,000 ಜನ ವಿವಿಧ ಕಾರಣಗಳಿಂದ ತಮ್ಮ ಅರ್ಜಿಗಳನ್ನು ಹಿಂಪಡೆದಿದ್ದಾರೆ. 2.86 ಲಕ್ಷ ಅರ್ಜಿ ಸಂಪೂರ್ಣವಾಗಿ ಅರ್ಹರಾಗಿದ್ದು, ಅವರಿಗೆ ಬಿಪಿಎಲ್ ಕಾರ್ಡ್ ನೀಡಲಾಗಿಲ್ಲ.

ಅತೀ ಹೆಚ್ಚು ಅರ್ಜಿ ಸಲ್ಲಿಕೆಯಾದ ಜಿಲ್ಲೆಗಳು
ರಾಜ್ಯಾದ್ಯಂತ ಲಕ್ಷಾಂತರ ಜನ ಈಗಾಗಲೇ ಹೊಸ ರೇಷನ್ ಕಾರ್ಡ್’ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಅದರಲ್ಲೂ ಕೆಲವೊಂದು ಜಿಲ್ಲೆಗಳಲ್ಲಿ ಅತೀ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಹಾಗೇ ಅತೀ ಹೆಚ್ಚು ಅರ್ಜಿ ಸಲ್ಲಿಕೆಯಾದ ಜಿಲ್ಲೆಗಳ ಪಟ್ಟಿ ಈ ಕೆಳಗಿನಂತಿದೆ:
- ಬೆಳಗಾವಿ- 35,823
- ಕಲಬುರ್ಗಿ- 32,178
- ವಿಜಯಪುರ- 21,237
- ಬೆಂಗಳೂರು ಗ್ರಾಮ- 17,186
- ರಾಯಚೂರು- 16,225
ಹೆಚ್ಚೂಕಮ್ಮಿ ಈ ಜಿಲ್ಲೆಗಳೆಲ್ಲಾ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಜಿಲ್ಲೆಗಳಾಗಿವೆ. ಇಂತಹ ಪ್ರದೇಶಗಳಲ್ಲಿ ಬಿಪಿಎಲ್ ಕಾರ್ಡ್ ವಿತರಣೆಯ ವಿಳಂಬವು ಇನ್ನೂ ಹೆಚ್ಚಿನ ಸಮಸ್ಯೆಗಳ ಉದ್ಭವಕ್ಕೆ ಕಾರಣವಾಗುತ್ತಿದೆ.
ಅಧಿಕಾರಿಗಳ ಮೇಲೆ ಹೆಚ್ಚಿದ ಒತ್ತಡ
ಗ್ಯಾರಂಟಿ ಯೋಜನೆಗಳು ಘೋಷಣೆಯಾದ ನಂತರ ರಾಜ್ಯಾದ್ಯಂತ ಆಹಾರ ಇಲಾಖೆ ಕಚೇರಿಗಳ ಎದುರು ಅರ್ಜಿದಾರರ ದಂಡು ಹೆಚ್ಚುತ್ತಾ ಹೋಗುತ್ತಿದೆ. ‘ನಮಗೂ ಗೃಹಲಕ್ಷ್ಮೀ ಹಣ, ಅಕ್ಕಿ ಬೇಕು. ನಾವು ಅರ್ಹರು, ನಮ್ಮ ಅರ್ಜಿ ಅನುಮೋದನೆ ಆಗಲಿ’ ಎಂದು ಅಧಿಕಾರಿಗಳ ಮೇಲೆ ಒತ್ತಡ ಹೆಚ್ಚುತ್ತಿದೆ.
ಆಹಾರ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರುಗಳು ಮತ್ತು ಸ್ಥಳೀಯ ಅಧಿಕಾರಿಗಳು ‘ರೇಷನ್ ಕಾರ್ಡ್ ಅರ್ಜಿ ಆರಂಭ ಮತ್ತು ಅರ್ಹ ಅರ್ಜಿ ಅನುಮೋದನೆ ಸರ್ಕಾರದ ನಿರ್ಧಾರದ ಮೇಲೆ ಅವಲಂಬಿತವಾಗಿದೆ. ಸರ್ಕಾರ ತಕ್ಷಣ ಅನುಮತಿಸಿದರೆ ನಾವು ಕಾರ್ಡ್ ನೀಡಲು ಸಿದ್ಧವಾಗಿದ್ದೇವೆ’ ಎಂದು ಸ್ಪಷ್ಟಪಡಿಸುತ್ತಿದ್ದಾರೆ.
ಸರ್ಕಾರದ ನಿರ್ಧಾರವೇನು?
‘ಹೊಸ ಬಿಪಿಎಲ್ ಅರ್ಜಿ ಸ್ವೀಕಾರ ಸದ್ಯಕ್ಕೆ ನಿಲ್ಲಿಸಲಾಗಿದೆ. ಆದರೆ ಹಿಂದಿನ ಅರ್ಜಿಗಳ ಪರಿಶೀಲನೆ ಪ್ರಕ್ರಿಯೆ ಮುಗಿದ ನಂತರ, ತೀರ್ಮಾನ ಮಾಡುವ ಹೊಣೆ ಸರ್ಕಾರದದಾಗಿದೆ’ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಕೆ.ಎಚ್. ಮುನಿಯಪ್ಪ ಸ್ಪಷ್ಟವಾಗಿ ಹೇಳಿದ್ದಾರೆ.
ವರ್ಷಗಳಿಂದ ಅರ್ಜಿ ಸಲ್ಲಿಸಿದ ಹಲವಾರು ಫಲಾನುಭವಿಗಳು, ತಮ್ಮ ಅರ್ಜಿ ಯಾವ ಹಂತದಲ್ಲಿದೆ? ಗ್ಯಾರಂಟಿ ಯೋಜನೆಗಳು ಬಂದ್ ಆಗುವುದರೊಳಗೆ ನಿಜಕ್ಕೂ ನಮಗೆ ಹೊಸ ರೇಷನ್ ಕಾರ್ಡ್ ಸಿಗುತ್ತದಾ? ಗ್ಯಾರಂಟಿ ಯೋಜನೆಗಳ ಫಲ ನಮಗೂ ಸಿಗುತ್ತಾ? ಎಂಬ ಅನುಮಾನದಲ್ಲಿ ಮುಳುಗಿದ್ದಾರೆ.
ಸರ್ಕಾರದ ಮಟ್ಟದಲ್ಲಿ ತೀರ್ಮಾನವಾದ ನಂತರಷ್ಟೇ ಹೊಸ ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ ಆಹ್ವಾನ ಮತ್ತು ಈಗಾಗಲೇ ಸಲ್ಲಿಕೆಯಾದ ಅರ್ಜಿಗಳ ಅನುಮೋದನೆಯಾಗಲಿದೆ. ಸರ್ಕಾರ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಿರ್ಧಾರದ ಮೇಲೆ ಮುಂದಿನ ಸಾಧ್ಯತೆ ಅವಲಂಬಿತವಾಗಿದೆ.
BPL Ration Card Update- ಹೊಸ ರೇಷನ್ ಕಾರ್ಡ್ ಅರ್ಜಿ | ಆಹಾರ ಇಲಾಖೆಯ ಮಹತ್ವದ ಮಾಹಿತಿ ಇಲ್ಲಿದೆ…

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.