ಇನ್ನು ಮುಂದೆ ಹಳ್ಳಿಗಳಲ್ಲಿಯೂ ಮನೆ ಅಥವಾ ಕಟ್ಟಡ ಕಟ್ಟಲು ನಿಯಮಬದ್ಧ ಅನುಮತಿ (Regulatory permission) ಪಡೆಯುವುದು ಕಡ್ಡಾಯವಾಗಿದೆ. ಈ ಕುರಿತ ಸಂಪೂರ್ಣ ಮಾತಿ ಇಲ್ಲಿದೆ…
ರಾಜಧಾನಿ ಬೆಂಗಳೂರು ಸೇರಿದಂತೆ ಇತರೆ ನಗರ ಪ್ರದೇಶಗಳಲ್ಲಿ ಈಗಾಗಲೇ ಕಡ್ಡಾಯವಾಗಿರುವ ಆರಂಭಿಕ ಪ್ರಮಾಣ ಪತ್ರ (Commencement Certificate – CC) ಹಾಗೂ ವಾಸಯೋಗ್ಯ ಪ್ರಮಾಣ ಪತ್ರ (Occupancy Certificate – OC) ಪಡೆಯುವುದು ಈಗ ಹಳ್ಳಿಗಳಲ್ಲಿಯೂ ಕಡ್ಡಾಯವಾಗುತ್ತಿದೆ.
ಈ ಹೊಸ ತೀರ್ಮಾನವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸುಪ್ರೀಂ ಕೋರ್ಟ್ ಆದೇಶದಂತೆ ಜಾರಿಗೊಳಿಸಿದ್ದು, ಈ ಮೂಲಕ ಹಳ್ಳಿಗಳಲ್ಲೂ ಕಟ್ಟಡ ನಿರ್ಮಾಣವನ್ನು ನಿಯಂತ್ರಿತವಾಗಿ, ಕಾನೂನುಬದ್ಧವಾಗಿ ನಡೆಸುವ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ.
ಅಕ್ರಮ ಕಟ್ಟಡ ನಿರ್ಮಾಣ ತಡೆಗಟ್ಟುವುದು, ಸಾರ್ವಜನಿಕ ಮತ್ತು ಸರ್ಕಾರದ ಜಮೀನಿನಲ್ಲಿ ನಡೆಯುವ ಅಕ್ರಮ ಭೂಸ್ವಾಧೀನವನ್ನು ತಡೆಯುವುದು, ಮನೆ ಕಟ್ಟುವ ಪ್ರಕ್ರಿಯೆಗೆ ಶಿಸ್ತಿನ ಒತ್ತಡ ತರುವುದು ಹಾಗೂ ಸುಪ್ರೀಂ ಕೋರ್ಟ್ ಆದೇಶವನ್ನು ರಾಜ್ಯಮಟ್ಟದಲ್ಲಿ ಅನುಸರಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಹಳ್ಳಿಗಳಲ್ಲಿ ಮನೆ ಕಟ್ಟಲು ಹೊಸ ನಿಯಮಗಳೇನು?
ಮನೆ ನಿರ್ಮಾಣಕ್ಕೆ ಮುನ್ನ ಪರವಾನಗಿ ಕಡ್ಡಾಯ: ಗ್ರಾಮಠಾಣಾ ವ್ಯಾಪ್ತಿಯನ್ನು ಹೊರತುಪಡಿಸಿ ಹೊಸದಾಗಿ ಅಭಿವೃದ್ಧಿಪಡಿಸಿರುವ ಲೇಔಟ್‌ಗಳಲ್ಲಿ ಕಟ್ಟಡ ನಿರ್ಮಿಸುವ ಮುನ್ನ ಗ್ರಾಪಂ ಅಥವಾ ಸ್ಥಳೀಯ ಯೋಜನಾ ಪ್ರಾಧಿಕಾರದ ಅನುಮೋದನೆ ಬೇಕು.
ಸೈಟ್ ಕ್ರಮಬದ್ಧತೆ ಪರಿಶೀಲನೆ: ಕಟ್ಟಡ ನಿರ್ಮಾಣಕ್ಕೆ ಮುನ್ನ ಸೈಟ್ ಕಾನೂನುಬದ್ಧವಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ನಿರ್ಮಾಣ ಕಾರ್ಯಗಳು ಅನುಮೋದಿತ ಕಟ್ಟಡ ನಕ್ಷೆಗೆ ತಕ್ಕಂತೆ ನಡೆಯಬೇಕು.
ಸ್ಥಳ ಪರಿಶೀಲನೆ ಕಡ್ಡಾಯ: ಗ್ರಾಮ ಪಂಚಾಯತಿ ಅಧಿಕಾರಿಗಳು (PDO) ಹಾಗೂ ಸ್ಥಳೀಯ ಯೋಜನಾ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಯೇ ಸಿಸಿ ಅಥವಾ ಒಸಿ ನೀಡಬೇಕು.

ಅನುಮತಿ ಇಲ್ಲದಿದ್ದರೆ ಈ ಸೌಲಭ್ಯಗಳು ಕಟ್!
ಇನ್ನು ಮುಂದೆ ಹಳ್ಳಿಗಳಲ್ಲಿಯೂ ಮನೆ ಅಥವಾ ಕಟ್ಟಡ ನಿರ್ಮಿಸಿದ್ದರೆ ಮಾತ್ರ ಸಾಕಾಗುವುದಿಲ್ಲ. ಸಾರ್ವಜನಿಕ ಸೇವೆಗಳಿಗೂ ಈ ಪ್ರಮಾಣಪತ್ರಗಳು ಬೇಕೇ ಬೇಕು. ಸರ್ಕಾರ ಅಥವಾ ಪಂಚಾಯಿತಿ ಕಚೇರಿಯಿಂದ ಈ ಕೆಳಕಂಡ ಸೌಲಭ್ಯಗಳನ್ನು ಪಡೆಯಬೇಕಾದರೆ, ಸಿಸಿ ಮತ್ತು ಒಸಿ ಲಭ್ಯವಿರುವುದು ಕಡ್ಡಾಯ:
- ನೀರು ಸಂಪರ್ಕ
- ವಿದ್ಯುತ್ ಸಂಪರ್ಕ
- ಒಳಚರಂಡಿ ಸಂಪರ್ಕ
- ನಗರಾಭಿವೃದ್ಧಿ ಮಂಡಳಿ ಸೌಲಭ್ಯಗಳು
ಅನುಮತಿ ಪಡೆಯದೇ ಮನೆ ಕಟ್ಟಿದರೆ…
ಸಿಸಿ ಅಥವಾ ಒಸಿ ಪಡೆಯದೇ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡಿದರೆ ನಿರ್ಮಾಣದ ವಿರುದ್ಧ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಲಾಗುತ್ತದೆ. ಯಾವುದೇ ರೀತಿಯ ವಿನ್ಯಾಸ ಉಲ್ಲಂಘಿಸಿದರೆ, ಮನೆ ಮಾಲೀಕರು, ನಿರ್ಮಾಣಗಾರರಿಗೆ ನೋಟಿಸ್ ನೀಡಲಾಗುತ್ತದೆ.
ತಿದ್ದುಪಡಿ ಅವಧಿಯೊಳಗೆ ಸರಿಪಡಿಸದಿದ್ದರೆ ಕಟ್ಟಡವನ್ನು ನೆಲಸಮಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಕಾನೂನುಬದ್ಧವಲ್ಲದ ಕಟ್ಟಡಗಳಿಗೆ ಲೈಸೆನ್ಸ್, ವ್ಯಾಪಾರ ಅನುಮತಿ ಅಥವಾ ಬ್ಯಾಂಕ್ ಸಾಲ ನೀಡುವುದಕ್ಕೆ ಅವಕಾಶವಿಲ್ಲ.
ಸರ್ಕಾರಿ ಭೂಮಿಯಲ್ಲಿ ಮನೆ ನಿರ್ಮಿಸಿದರೆ?
ಕೆರೆ, ಕುಂಟೆ, ಕಾಲುವೆ, ಸರ್ಕಾರಿ ಸ್ಥಳ, ಶಾಲಾ ಆವರಣ, ಸಾರ್ವಜನಿಕ ಉಪಯೋಗದ ಜಾಗಗಳಲ್ಲಿ ನಿರ್ಮಿಸಲಾದ ಯಾವುದೇ ಕಟ್ಟಡಗಳನ್ನು ಸುಪ್ರೀಂ ಕೋರ್ಟ್ ಆದೇಶದಂತೆ ತಕ್ಷಣವೇ ನೆಲಸಮಗೊಳಿಸಬೇಕು.
ಈ ವಿಚಾರದಲ್ಲಿ ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಗ್ರಾಮ ಪಂಚಾಯತಿ ಜಂಟಿಯಾಗಿ ಕಾರ್ಯಾಚರಣೆ ನಡೆಸಬೇಕು. ಜಮೀನನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಳ್ಳುವಂತಹ ಪ್ರಯತ್ನಗಳಿಗೆ ಕಡಿವಾಣ ಹಾಕಬೇಕು.
ಅನಧಿಕೃತ ಕಟ್ಟಡಗಳಿಗೆ ಸಾಲ ಸೌಲಭ್ಯವಿಲ್ಲ
ಹಳ್ಳಿಗಳಲ್ಲಿ ನಿರ್ಮಾಣ ಮಾಡಲಾದ ಅನಧಿಕೃತ ಕಟ್ಟಡಗಳಿಗೆ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳು ಗೃಹ ಸಾಲ, ವಾಣಿಜ್ಯ ಕಟ್ಟಡ ಸಾಲ ಅಥವಾ ರಿಯಾಯಿತಿ ದರದ ಸಾಲಗಳನ್ನು ಮಂಜೂರು ಮಾಡುವ ಮುನ್ನ ಸಿಸಿ ಮತ್ತು ಒಸಿ ಇದೆಯೇ ಎಂಬುದನ್ನು ಪರಿಶೀಲಿಸಿಯೇ ಸಾಲ ನೀಡಬೇಕು.
ನೀವು ಮನೆ ಕಟ್ಟಲು ಯೋಜಿಸುತ್ತಿದ್ದರೆ, ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಅಗತ್ಯ ದಾಖಲೆಗಳೊಂದಿಗೆ ಪರವಾನಗಿ ಪಡೆದು ನಿರ್ಮಾಣ ಕಾರ್ಯ ಆರಂಭಿಸಬೇಕು. ಇಲ್ಲದಿದ್ದರೆ ಯಾವುದೇ ಸಮಯದಲ್ಲಿ ಕಾನೂನು ಕ್ರಮಕ್ಕೆ ಗುರಿಯಾಗುವ ಸಾಧ್ಯತೆ ಇದೆ!