ಕೆಲವು ತಿಂಗಳಿಂದ ಬಾಕಿ ಉಳಿದಿದ್ದ ‘ಗೃಹಲಕ್ಷ್ಮೀ’ ಯೋಜನೆ ಹಣಕ್ಕಾಗಿ (Grehalakshmi Baki Hana) ಕಾಯುತ್ತಿರುವವರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನೀಡಿದ ಮಾಹಿತಿ ಇಲ್ಲಿದೆ…
ಕಾಂಗ್ರೆಸ್ ಸರ್ಕಾರದ ಐದು ಮಹತ್ವದ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮೀ ಯೋಜನೆ ಅತ್ಯಂತ ಜನಪ್ರಿಯ. ಮಹಿಳೆಯರ ಹಣಕಾಸು ಸ್ವಾವಲಂಬನೆಗಾಗಿ ಪ್ರತಿ ತಿಂಗಳು ₹2,000 ನೇರ ಹಣಕಾಸು ಸಹಾಯ ನೀಡುವ ಈ ಯೋಜನೆ, ಲಕ್ಷಾಂತರ ಕುಟುಂಬಗಳ ಆರ್ಥಿಕ ಆಶಾಕಿರಣವಾಗಿದೆ.
ಆದರೆ, ಇತ್ತೀಚೆಗೆ ಈ ಯೋಜನೆಯ ಹಣ ಸಕಾಲಕ್ಕೆ ಪಾವತಿ ಆಗುತ್ತಿಲ್ಲ. ಎರಡು ಮೂರು ತಿಂಗಳು ಬಾಕಿ ಉಳಿಯುತ್ತಿದ್ದು; ಫಲಾನುಭವಿ ಮಹಿಳೆಯರಲ್ಲಿ ಆಕ್ರೋಶ ಹುಟ್ಟು ಹಾಕಿದೆ. ಇದೀಗ ಗೃಹಲಕ್ಷ್ಮೀ ಹಣ ಜಮೆ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಅವರು ಶೀಘ್ರದಲ್ಲಿಯೇ ಎರಡು ತಿಂಗಳ ಹಣ ಜಮಾ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಬಾಕಿ ಹಣ ಪಾವತಿ ವಿಳಂಬಕ್ಕೆ ಕಾರಣವೇನು?
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಿನ್ನೆ ಜೂನ್ 1ರಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯದ ಕುರಿತು ಮಾತನಾಡಿದ್ದಾರೆ. ಮಾರ್ಚ್ ಹಣಕಾಸು ವರ್ಷಾಂತ್ಯದ ಗೊಂದಲ ಮತ್ತು ಲೆಕ್ಕಪತ್ರಗಳ ತಡೆ ಕಾರಣವಾಗಿ ಏಪ್ರಿಲ್ ಮತ್ತು ಮೇ ತಿಂಗಳ ಗೃಹಲಕ್ಷ್ಮೀ ಹಣ ಬಿಡುಗಡೆ ವಿಳಂಬವಾಗಿರುವುದಾಗಿ ಅವರು ವಿವರಿಸಿದ್ದಾರೆ.
ಈ ವೇಳೆ ಅವರು, ‘ಮಾರ್ಚ್ ತಿಂಗಳ ಹಣ ಬಹುಮಟ್ಟಿಗೆ ಜಮೆ ಮಾಡಲಾಗಿದೆ. ಆದರೆ ಏಪ್ರಿಲ್ ಮತ್ತು ಮೇ ತಿಂಗಳದ್ದು ಇನ್ನೂ ಜಮೆ ಮಾಡಿಲ್ಲ. ಶೀಘ್ರದಲ್ಲಿಯೇ ಈ ಎರಡು ತಿಂಗಳ ಹಣ ಸೇರಿ ₹4,000 ಪಾವತಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಗ್ಯಾರಂಟಿಗಳ ಮುಂದಿನ ನಡೆ ಏನು?
ಏತನ್ಮಧ್ಯೆ, ಕಾಂಗ್ರೆಸ್ ಪಕ್ಷದ ಕೆಲವು ಶಾಸಕರು ಮತ್ತು ಮುಖಂಡರು ಗ್ಯಾರಂಟಿ ಯೋಜನೆಗಳ ಭವಿಷ್ಯದ ಬಗ್ಗೆ ಶಂಕೆ ವ್ಯಕ್ತಪಡಿಸುತ್ತಿದ್ದು; ಗ್ಯಾರಂಟಿ ಯೋಜನೆಗಳ ಪರಿಶೀಲನೆ ಆಗಬೇಕಿದೆ ಎಂಬ ಒತ್ತಡ ಕೇಳಿ ಬರುತ್ತಿದೆ. ಇದು ಸಹಜವಾಗಿಯೇ ಫಲಾನುಭವಿಗಳಲ್ಲಿ ಗೊಂದಲವನ್ನುಂಟು ಮಾಡಿದೆ.
ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು ‘ಗ್ಯಾರಂಟಿಗಳನ್ನು ಮರು ಪರಿಶೀಲಿಸಬೇಕಿದೆ’ ಎಂಬ ಇತ್ತೀಚಿನ ಹೇಳಿಕೆಗೆ ಪ್ರತಿಪಕ್ಷಗಳು ಸಹ ಧ್ವನಿ ಸೇರಿಸುತ್ತಿದ್ದು, ಗೃಹಲಕ್ಷ್ಮಿಯಂತಹ ಯೋಜನೆಗಳು ಮುಂದಿನ ದಿನಗಳಲ್ಲಿ ಹೇಗೆ ಸಾಗಲಿವೆ ಎಂಬ ಚರ್ಚೆಗೆ ಗ್ರಾಸವಾಗಿದೆ.
ಗ್ಯಾರಂಟಿ ಸಮಿತಿಗೆ ಮುಂಗಡ ಗೌರವಧನ
ಗೃಹಲಕ್ಷ್ಮಿ ಯೋಜನೆಯ ಮೂರು ತಿಂಗಳ ಹಣ ಬಾಕಿ ಇದ್ದು; ಈ ಬಗ್ಗೆ ಸಾಕಷ್ಟು ಆಕ್ರೋಶ, ಟೀಕೆ ವ್ಯಕ್ತವಾಗುತ್ತಿರುವ ಸಮಯದಲ್ಲಿಯೇ ಸರ್ಕಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗೆ ಮುಂಗಡವಾಗಿ ಗೌರವಧನ ಬಿಡುಗಡೆ ಮಾಡಿರುವುದು ಮತ್ತಷ್ಟು ಟೀಕೆಗೆ ಗುರಿಯಾಗಿದೆ.
ಪ್ರಮುಖ ಪ್ರತಿಪಕ್ಷ ಬಿಜೆಪಿ ‘ಜನರ ತೆರಿಗೆ ಹಣವನ್ನು ಪಕ್ಷದ ಕಾರ್ಯಕರ್ತರಿಗೆ ಗೌರವಧನವಾಗಿ ಹಂಚುತ್ತಿದೆ!’ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಗೃಹಲಕ್ಷ್ಮೀ ಹಣ ಪಾವತಿಯಲ್ಲಿ ವಿಳಂಬವಾಗಿರುವ ಸಂದರ್ಭದಲ್ಲಿ ಈ ತೀರ್ಮಾನ ಸರ್ಕಾರದ ಪ್ರಾಮಾಣಿಕತೆಯ ಮೇಲೂ ಪ್ರಶ್ನೆ ಹುಟ್ಟು ಹಾಕುತ್ತಿದೆ.
ಬಾಕಿ ಕಂತುಗಳ ಬಿಡುಗಡೆ ಯಾವಾಗ?
ಕಳೆದ ಮೇ ತಿಂಗಳ ಮೊದಲ ವಾರದಲ್ಲಿ ಸಚಿವೆ ಹೆಬ್ಬಾಳ್ಕರ್ ಅವರು ಬಾಕಿ ಹಣವನ್ನು ಒಂದೇ ಬಾರಿಗೆ ಜಮೆ ಮಾಡಲಾಗುತ್ತದೆ ಎಂಬ ಭರವಸೆ ನೀಡಿದ್ದರು. ಮೇ ತಿಂಗಳು ಒಂದರಲ್ಲಿಯೇ ಮೂರು ಕಂತುಗಳ 6,000 ರೂ. ಬಾಕಿ ಹಣ ಒಂದೊಂದು ವಾರದ ಹಿಂದೆ ಮುಂದೆ ಜಮಾ ಮಾಡುವುದಾಗಿ ಹೇಳಲಾಗಿತ್ತು.
ಆದರೆ, ಮೇ 20ರಂದು ಕಾಂಗ್ರೆಸ್ ಸರ್ಕಾರಕ್ಕೆ ಎರಡು ವರ್ಷ ತುಂಬಿದ್ದರ ಹಿನ್ನಲೆಯಲ್ಲಿ ನಡೆದ ‘ಸಾಧನಾ ಸಮಾವೇಶ’ದ ಹಿಂದಿನ ದಿನ ಮೇ 19ರಂದು ಕೇವಲ ಒಂದು ಕಂತಿನ ಹಣ ಬಿಡುಗಡೆ ಮಾಡಲಾಗಿತ್ತು. ಈ ಹಣ ಬಹುತೇಕ ಮಹಿಳೆಯರಿಗೆ ಇನ್ನೂ ತಲುಪಿಲ್ಲ ಎಂಬ ಮಾತುಗಳಿವೆ. ಇದೀಗ ಶೀಘ್ರದಲ್ಲಿ ಉಳಿದ ಎರಡು ಕಂತಿನ ಹಣ ಪಾವತಿಸುವುದಾಗಿ ಸಚಿವರು ತಿಳಿಸಿದ್ದಾರೆ.
Ration Card Raddu- ರೇಷನ್ ಕಾರ್ಡ್ ರದ್ದು | ಸಿಎಂ ಖಡಕ್ ಸೂಚನೆ | ನಿಮ್ಮ ಕಾರ್ಡ್ ರದ್ದಾಗಿದೆಯಾ? ಈಗಲೇ ಚೆಕ್ ಮಾಡಿ