Solar Power At Home- ಮನೆಗೆ ಸೋಲಾರ್ ಕರೆಂಟ್ ಪಡೆಯಲು ಹೊಸ ಯೋಜನೆ ಜಾರಿ | ಇನ್ಮುಂದೆ ಚಾವಣಿಯಿಲ್ಲದ ಮನೆಗೂ ಸೌರ ವಿದ್ಯುತ್

ಮನೆಗೆ ಸೌರ ವಿದ್ಯುತ್ (Solar Power At Home) ಪಡೆಯಲು ಸರ್ಕಾರ ಹೊಸ ವಿಶೇಷ ಸೌರ ವಿದ್ಯುತ್ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ಇನ್ನು ಮುಂದೆ ಚಾವಣಿಯಿಲ್ಲದ ಮನೆಗಳೂ ಸೌರ ವಿದ್ಯುತ್ ಉತ್ಪಾದಿಸಬಹುದು. ಹೌದು, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು (KERC) ಹೊಸ ‘ಡಿಸ್ಟ್ರಿಬ್ಯೂಟೆಡ್ ಸೌರ ಫೋಟೋವೋಲ್ಟಾಯಿಕ್ (DSPV)’ ಯೋಜನೆಗೆ ಅನುಮತಿ ನೀಡಿದೆ.
ಮನೆ ಮುಂದೆ ಅಥವಾ ಮನೆಯ ಹಿಂದೆ ಇರುವ ಅಂಗಳ-ಹಿತ್ತಿಲು, ಕಾರು ಪಾರ್ಕಿಂಗ್ ತಾಣ, ಗೋಡೆಗಳ ಮೇಲೆ ಅಥವಾ ಇತರ ಲಭ್ಯವಿರುವ ಕಟ್ಟಡಗಳ ಚಾವಣಿಗಳಲ್ಲಿ ಸೌರ ಫಲಕ ಅಳವಡಿಸಿ ವಿದ್ಯುತ್ ಉತ್ಪಾದಿಸಲು ಅವಕಾಶ ನೀಡಿದೆ.
ಹಳೆಯ ಯೋಜನೆಯ ಪರಿಷ್ಕರಣೆ
ಈ ಹೊಸ ಯೋಜನೆಯು ಚಾವಣಿ ಸೌರ ವಿದ್ಯುತ್ ಯೋಜನೆಯ (Solar Rooftop Photovoltaic- SRTPV) ಪರಿಷ್ಕೃತ ರೂಪವಾಗಿದೆ. ಹಿಂದೆ ಸೌರ ಫಲಕವನ್ನು ಉಪಯೋಗಿಸುವ ಸ್ಥಳದಲ್ಲೇ ಅಳವಡಿಸಬೇಕಿತ್ತು. ಆದರೆ DSPV (Distributed Solar Photovoltaic) ಯೋಜನೆಯಡಿಯಲ್ಲಿ, ವರ್ಚುವಲ್ ನೆಟ್ ಮೀಟರಿಂಗ್ (VNM) ಮತ್ತು ಗ್ರೂಪ್ ನೆಟ್ ಮೀಟರಿಂಗ್ (GNM) ವ್ಯವಸ್ಥೆಗೆ ಅನುವು ಮಾಡಿಕೊಡಲಾಗಿದೆ.
DSPV ಯೋಜನೆಯ ಅನ್ವಯ ಚಾವಣಿಯಲ್ಲದೆ ಅಂಗಳ, ಪಾರ್ಕಿಂಗ್, ಗೋಡೆ, ಇತರ ಕಟ್ಟಡಗಳ ಮೇಲೆಯೂ ಫಲಕಗಳನ್ನು ಅಳವಡಿಸಬಹುದು. ನೆಲದ ಮೇಲೂ ಕೂಡ 8 ಅಡಿ ಎತ್ತರದಲ್ಲಿ ಸೌರ ಫಲಕ ಅಳವಡಿಕೆ ಮಾಡಿ ವಿದ್ಯುತ್ ಉತ್ಪಾದಿಸಬಹುದು. ಮನೆಗೆ ಉಪಯೋಗಿಸಿ ಉಳಿದ ವಿದ್ಯುತ್ ಅನ್ನು ವಿದ್ಯುತ್ ಗ್ರಿಡ್‌ಗೆ ಮಾರಾಟ ಮಾಡಬಹುದು.

ವರ್ಚುವಲ್ ನೆಟ್ ಮೀಟರಿಂಗ್ (VNM) ಎಂದರೆ ಏನು?
ಒಬ್ಬ ಗ್ರಾಹಕ ಅಥವಾ ಗುಂಪು, ತಮ್ಮ ಎಸ್ಕಾಂ ವ್ಯಾಪ್ತಿಯ ಯಾವುದೇ ಲಭ್ಯ ಜಾಗದಲ್ಲಿ ಅಂದರೆ, ಅಪಾರ್ಟ್ಮೆಂಟ್, ಹೌಸಿಂಗ್ ಸೊಸೈಟಿ, ಸರ್ಕಾರಿ ಕಟ್ಟಡ, ಟ್ರಸ್ಟ್ ಸಂಸ್ಥೆಗಳಲ್ಲಿ ಸೌರ ಫಲಕ ಅಳವಡಿಸಿ, ಉತ್ಪಾದಿತ ವಿದ್ಯುತ್ ಅನ್ನು ಪೂರ್ಣ ಪ್ರಮಾಣದಲ್ಲಿ ಗ್ರಿಡ್‌ಗೆ ಕಳುಹಿಸಬಹುದು.
ಗ್ರಾಹಕರು ಈ ಉತ್ಪಾದಿತ ವಿದ್ಯುತ್‌ನಿಂದ ತಮ್ಮ ಮನೆ ವಿದ್ಯುತ್ ಬಿಲ್ಲಿಗೆ ಹೊಂದಾಣಿಕೆ ಮಾಡಬಹುದು. ಹೆಚ್ಚುವರಿ ವಿದ್ಯುತ್ ಇದ್ದರೆ, ಬೆಸ್ಕಾಂ ಹಣ ನೀಡುತ್ತದೆ.
ಗ್ರೂಪ್ ನೆಟ್ ಮೀಟರಿಂಗ್ (GNM) ಹೇಗೆ ಕಾರ್ಯನಿರ್ವಹಿಸುತ್ತದೆ?
ಒಬ್ಬ ಗ್ರಾಹಕನಿಗೆ ಎರಡು ಅಥವಾ ಹೆಚ್ಚು ಮನೆಗಳು ಇದ್ದರೆ, ಒಂದು ಮನೆಯಲ್ಲಿಯೇ ಸೌರ ಫಲಕ ಅಳವಡಿಸಿ ಉತ್ಪಾದಿತ ವಿದ್ಯುತ್ ಅನ್ನು ಎಲ್ಲಾ ಮನೆಗಳಿಗೂ ಹಂಚಿಕೊಳ್ಳಬಹುದು. ಇದನ್ನು GNM ಎನ್ನುತ್ತಾರೆ. DSPV ಯೋಜನೆಯಡಿ ಈ ವ್ಯವಸ್ಥೆಯನ್ನೂ ಸೇರಿಸಲಾಗಿದೆ.
ಯಾರು ಈ ಯೋಜನೆಯ ಲಾಭ ಪಡೆಯಬಹುದು?
ಚಾವಣಿಯ ಜಾಗದ ಕೊರತೆಯಿರುವ ಮನೆಗಳು, ಅಪಾರ್ಟ್ಮೆಂಟ್ ನಿವಾಸಿಗಳು, ಸಣ್ಣ ಜಾಗದ ಮನೆಗಳು, ಚಾವಣಿಯಿದ್ದರೂ ಬಿಸಿಲಿನ ಲಭ್ಯತೆ ಕಡಿಮೆ ಇರುವವರು ಹಾಗೂ ಪಾರ್ಕಿಂಗ್ ಸ್ಥಳಗಳಲ್ಲಿ ಫಲಕ ಅಳವಡಿಸಿ ಇಗಿ ಚಾರ್ಜಿಂಗ್ ಮಾಡಬಯಸುವವರಿಗೆ ಇದರ ಪ್ರಯೋಜನ ಸಿಗಲಿದೆ.
ಅಪಾರ್ಟ್ಮೆಂಟ್‌ಗಳಲ್ಲಿ ಕಾರು/ಸೈಕಲ್ ಪಾರ್ಕಿಂಗ್ ಪ್ರದೇಶಗಳಲ್ಲಿ ಸೌರ ಫಲಕ ಅಳವಡಿಸಿದರೆ, ಕಾಮನ್ ಏರಿಯಾ ಲೈಟಿಂಗ್, ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಮೊದಲಾದ ಪರಿಕರಗಳಿಗೆ ಇದರ ಸದುಪಯೋಗವಾಗುತ್ತದೆ.
ಈ ಯೋಜನೆಯಡಿಯಲ್ಲಿ ವಿಎನ್‌ಎಂ ಅಥವಾ ಜಿಎನ್‌ಎಂ ಬಳಸುವವರು ಕನಿಷ್ಠ 5 ಕಿಲೋವಾಟ್ ಸಾಮರ್ಥ್ಯದ ಘಟಕ ಅಳವಡಿಸಿರಬೇಕು ಎಂದು ಏಇಖಅ ಸೂಚಿಸಿದೆ. ಈ ಯೋಜನೆಯಿಂದಾಗಿ, ಈಗ ಚಾವಣಿಯ ಕೊರತೆ ಇರುವವರು ಅಥವಾ ಅಪಾರ್ಟ್ಮೆಂಟ್ ನಿವಾಸಿಗಳೂ ಸೌರ ವಿದ್ಯುತ್ ಉತ್ಪಾದನೆ ಮಾಡಬಹುದು. ಇದು ವಿದ್ಯುತ್ ಬಿಲ್ ಉಳಿತಾಯ ಮಾಡಿಕೊಡಲಿದೆ.
ಹೆಚ್ಚಿನ ಮಾಹಿತಿಗೆ ಬೆಸ್ಕಾಂ ಅಥವಾ ನಿಮ್ಮ ಎಸ್ಕಾಂ ವಲಯದ ಕಚೇರಿಯನ್ನು ಸಂಪರ್ಕಿಸಿ ಅಥವಾ ಅಧಿಕೃತ ವೆಬ್‌ಸೈಟ್ bescom.karnataka.gov.inಗೆ ಭೇಟಿ ನೀಡಿ…



