ಕರ್ನಾಟಕ ರಾಜ್ಯದ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ 2025-26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಬರೋಬ್ಬರಿ 123 ದಿನ ರಜೆ ಘೋಷಣೆ (Karnataka School Holidays 2025-26) ಮಾಡಲಾಗಿದೆ.
ಈ ಸಾಲಿನಲ್ಲಿ ಶಾಲೆಯ ಆರಂಭಿಕ ಅವಧಿ, ಶೈಕ್ಷಣಿಕ ಅವಧಿ, ಶಾಲಾ ಕರ್ತವ್ಯದ ದಿನಗಳು, ಪರೀಕ್ಷೆ, ಫಲಿತಾಂಶ ಅವಧಿ ಸೇರಿದಂತೆ ಸಮಗ್ರ ವೇಳಾಪಟ್ಟಿಯನ್ನು ಶಾಲಾ ಶಿಕ್ಷಣ ಇಲಾಖೆ (Karnataka Education Department Notification) ಪ್ರಕಟಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ಶಾಲೆಯ ಆರಂಭ ಮತ್ತು ಶೈಕ್ಷಣಿಕ ಅವಧಿಗಳು
ಈಗ ಘೋಷಣೆಯಾಗಿರುವ ಬೇಸಿಗೆ ರಜೆಯು ಬರಲಿರುವ ಮೇ ಕೊನೆಯಲ್ಲಿ ಮುಕ್ತಾಯವಾಗಲಿದ್ದು; ಹೊಸ ಶೈಕ್ಷಣಿಕ ವರ್ಷವು 2025ರ ಮೇ 29ರಂದು ಪ್ರಾರಂಭವಾಗಲಿದೆ. ಶಾಲಾ ವರ್ಷವನ್ನು ಈ ಕೆಳಗಿನಂತೆ ಎರಡು ಅವಧಿಗಳಾಗಿ ವಿಭಜಿಸಲಾಗಿದೆ:
ಮೊದಲ ಅವಧಿ: ಮೇ 29, 2025 ರಿಂದ ಸೆಪ್ಟೆಂಬರ್ 19, 2025ರ ವರೆಗೆ. ಈ ಅವಧಿಯಲ್ಲಿಯೇ ಮೊದಲ ತ್ರೈಮಾಸಿಕ ಪರೀಕ್ಷೆಗಳು ಹಾಗೂ ಹಲವಾರು ಪಠ್ಯೇತರ ಚಟುವಟಿಕೆಗಳು ನಡೆಯಲಿವೆ.
ದಸರಾ ರಜೆ: 2025ರ ಸೆಪ್ಟೆಂಬರ್ 20ರಿಂದ ಅಕ್ಟೋಬರ್ 7ರ ವರೆಗೆ ಎಲ್ಲಾ ಶಾಲೆಗಳಿಗೆ ದಸರಾ ಉತ್ಸವಕ್ಕಾಗಿ ರಜೆ ನೀಡಲಾಗುತ್ತದೆ.

ಎರಡನೇ ಅವಧಿ: 2025 ಅಕ್ಟೋಬರ್ 8 ರಿಂದ 2026ರ ಏಪ್ರಿಲ್ 10ರ ವರೆಗೆ ಎರಡನೇ ಅವಧಿಯು ಆರಂಭವಾಗಲಿದ್ದು; ಮುಖ್ಯವಾಗಿ ವಾರ್ಷಿಕ ಪರೀಕ್ಷೆ, ಸಮಗ್ರ ಮೌಲ್ಯಮಾಪನ, ಕಲಿಕಾ ಮೌಲ್ಯಾಂಕನ ಮತ್ತು ಫಲಿತಾಂಶಗಳ ಘೋಷಣೆಯ ನಡೆಯುತ್ತದೆ.
ಬೇಸಿಗೆ ರಜೆ: 2026ರ ಏಪ್ರಿಲ್ 11 ರಿಂದ ಮೇ 28ರ ವರೆಗೆ ಶಾಲಾ ಶೈಕ್ಷಣಿಕ ಚಟುವಟಿಕೆಗಳ ಕೊನೆಗೊಳ್ಳುವ ಮೂಲಕ ಮತ್ತೆ ಬೇಸಿಗೆ ರಜೆ ಜಾರಿಯಾಗಲಿದೆ.
ವಾರ್ಷಿಕ ದಿನಗಳ ಲೆಕ್ಕಾಚಾರ
ವರ್ಷದ ಒಟ್ಟು 365 ದಿನಗಳ ಪೈಕಿ 123 ದಿನ ಶಾಲಾ ರಜೆಗಳಾಗಿದ್ದು; 242 ದಿನ ಕರ್ತವ್ಯದ ದಿನಗಳಾಗಿವೆ. ಈ 242 ದಿನಗಳಲ್ಲಿ ಶಾಲೆಯಲ್ಲಿ ನಡೆಯುವ ವಿವಿಧ ಚಟುವಟಿಕೆಗಳ ಹಂಚಿಕೆ ಈ ಕೆಳಗಿನಂತಿದೆ:
- ಪರೀಕ್ಷೆ ಮತ್ತು ಮೌಲ್ಯಾಂಕನ ಕಾರ್ಯ- 26 ದಿನ
- ಪಠ್ಯೇತರ/ಪಠ್ಯ ಚಟುವಟಿಕೆಗಳು- 22 ದಿನ
- ಸ್ಪರ್ಧಾತ್ಮಕ ಕಾರ್ಯಕ್ರಮಗಳು- 22 ದಿನ
- ಮೌಲ್ಯಮಾಪನ ಮತ್ತು ಫಲಿತಾಂಶ ವಿಶ್ಲೇಷಣೆ- 10 ದಿನ
- ಸ್ಥಳೀಯ ರಜೆ- 04 ದಿನ
- ಶುದ್ಧ ಬೋಧನಾ ಕಲಿಕಾ ದಿನಗಳು- 178 ದಿನ
ಈ ವರ್ಷ ಪ್ರಾಥಮಿಕ ಶಾಲೆಗಳಲ್ಲಿ ಏಪ್ರಿಲ್ 8 ಮತ್ತು ಪ್ರೌಢಶಾಲೆಗಳಲ್ಲಿ ಏಪ್ರಿಲ್ 9ರಂದು ಸಮುದಾಯ ದತ್ತ ಶಾಲೆ/ಪಾಲಕರ ಸಭೆ ಕರೆದು ಫಲಿತಾಂಶ ಪ್ರಕಟಿಸಬೇಕು. ಏಪ್ರಿಲ್ 14ರಂದು ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ಎಲ್ಲ ಶಾಲೆಗಳಲ್ಲಿಯೂ ಆಚರಿಸಬೇಕು ಎಂದು ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ.