RTC aadhar card link karnataka Land Records : ರೈತರು ತಮ್ಮ ಜಮೀನು ಪಹಣಿ ಅಥವಾ ಉತಾರ್ ಪತ್ರಿಕೆಗೆ (RTC) ಆಧಾರ್ ಜೋಡಣೆ ಮಾಡದ ಕಾರಣಕ್ಕೆ ಬಹಳಷ್ಟು ರೈತರು ಬರ ಪರಿಹಾರದಿಂದ ವಂಚಿತರಾಗಿದ್ದಾರೆ. ಕೇವಲ ಬರ ಪರಿಹಾರ ಮಾತ್ರವಲ್ಲ ಸರಕಾರದ ಅನೇಕ ಸೌಲಭ್ಯಗಳು ಪಹಣಿ-ಆಧಾರ್ ಲಿಂಕ್ ಆಗಿರದ ರೈತರಿಗೆ ಸಿಗುತ್ತಿಲ್ಲ.
ಈಚೆಗೆ ಕೇಂದ್ರ ಸರಕಾರದಿಂದ ಬಿಡುಗಡೆಯಾಗಿರುವ ಬರ ಪರಿಹಾರ ಹಣ ರಾಜ್ಯದ ಲಕ್ಷಾಂತರ ರೈತರ ಖಾತೆಗೆ ಜಮಾ ಆಗಿಲ್ಲ. ಇದಕ್ಕೆ ಆಧಾರ್-ಪಹಣಿ ಜೋಡಣೆ ಆಗದೇ ಇರುವುದು ಕೂಡ ಒಂದು ಕಾರಣವಾಗಿದೆ. ಹೀಗಾಗಿ ಇದೀಗ ಆಧಾರ್-ಪಹಣಿ ಲಿಂಕ್ ಮಾಡದ ರೈತರು ಎರಡನ್ನೂ ಜೋಡಣೆ ಮಾಡಲು ಪರದಾಡುತ್ತಿದ್ದಾರೆ.
ರಾಜ್ಯದ ಬಹುತೇಕ ಗ್ರಾಮ ಲೆಕ್ಕಾಧಿಕಾರಿಗಳ ಕಾರ್ಯಾಲಯಗಳಲ್ಲಿ ಪಹಣಿಗೆ ಆಧಾರ್ ಜೋಡಣೆ ಕಾರ್ಯ ನಡೆಯುತ್ತಿದೆ. ಆದರೆ ಅದು ವಿಳಂಬವಾಗುತ್ತಿರುವುದರಿ೦ದ ಬಿತ್ತನೆ ಸಮಯದಲ್ಲಿ ಕೆಲಸ ಕಾರ್ಯ ಬಿಟ್ಟು ಕೃಷಿಕರು ದಿನಗಟ್ಟಲೇ ಅಲೆಯುವ ಪಾಡು ನಿರ್ಮಾಣವಾಗಿದೆ.
ಏನಿದು ಆಧಾರ್-ಪಹಣಿ ಲಿಂಕ್ ಯೋಜನೆ?
ವರ್ಷಗಳ ಹಿಂದೆಯೇ ರಾಜ್ಯ ಕಂದಾಯ ಇಲಾಖೆಯು ಸರ್ಕಾರದಿಂದ ಜಮೀನಿಗೆ ಸಂಬ೦ಧಿಸಿದ೦ತೆ ಹಲವಾರು ಯೋಜನೆಗಳ ಲಾಭ ಪಡೆಯಲು ಹಾಗೂ ಜಮೀನಿನ ಸುರಕ್ಷತೆಗಾಗಿ ಪಹಣಿಗಳಿಗೆ ಆಧಾರ್ ಲಿಂಕ್ ಮಾಡಿಸುವುದನ್ನು ಕಡ್ಡಾಯಗೊಳಿಸಿ ಆದೇಶಿಸಿದೆ. ಈ ಹಿನ್ನಲೆಯಲ್ಲಿ ‘ನನ್ನ ಆಧಾರನೊಂದಿಗೆ ನನ್ನ ಆಸ್ತಿ ಸುಭದ್ರ’ ಯೋಜನೆ ಆರಂಭಿಸಿದೆ.
ಜಮೀನು ಪಹಣಿ-ಆಧಾರ್ ಜೋಡಣೆ ಅತ್ಯಂತ ಸರಳ ಪ್ರಕ್ರಿಯೆಯಾಗಿದ್ದು; ಈ ಬಗ್ಗೆ ಹಲವು ಬಾರಿ ಕೃಷಿ ಅಧಿಕಾರಿಗಳು ಸೂಚನೆ ನೀಡಿದರೂ ಕೂಡ ಈಗಲೂ ಲಕ್ಷಾಂತರ ರೈತರು ಈ ಕೆಲಸ ಮಾಡಿಲ್ಲ. ಇದೀಗ ಬರ ಪರಿಹಾರ, ಬೆಳೆ ವಿಮೆ, ಪಿ ಎಂ ಕಿಸಾನ್ ಯೋಜನೆಗಳ ಪರಿಹಾರ ಹಣ ಕೈ ತಪ್ಪುತ್ತಿರುವುದರಿಂದ ಅಂತಹ ರೈತರು ಪಹಣಿಗೆ ಆಧಾರ್ ಕಾರ್ಡ್ ಜೋಡಣೆ ಮಾಡಲು ಮುಗಿ ಬಿದ್ದಿದ್ದಾರೆ.
ಆಧಾರ್-ಪಹಣಿ ಲಿಂಕ್ ಪ್ರಕ್ರಿಯೆ ಹೇಗೆ?
ಜಮೀನಿನ ಪಹಣಿಗಳಿಗೆ ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆಯನ್ನು ಹಲವಾರು ವಿಧಾನದಲ್ಲಿ ಮಾಡಬಹುದು. ರೈತರು ಹತ್ತಿರದ ‘ಗ್ರಾಮ ಒನ್’ ಕೇಂದ್ರಗಳಿಗೆ ತೆರಳಿ ಮಾಡಿಸಬಹುದು, ಗ್ರಾಮ ಲೆಕ್ಕಾಧಿಕಾರಿ ಕಚೇರಿಯಲ್ಲೂ ಕೂಡ ಪಹಣಿಗೆ ಆಧಾರ್ ಲಿಂಕ್ ಮಾಡಿಸಬಹುದು. ಮೊಬೈಲ್‌ನಲ್ಲಿ ಸ್ವತಃ ರೈತರೇ ಆಧಾರ್-ಪಹಣಿ ಜೋಡಣೆ ಮಾಡಿಕೊಳ್ಳಬಹುದಾಗಿದೆ.
ಹೀಗೆ ಎರಡಕ್ಕೂ ಲಿಂಕ್ ಮಾಡಲು ಮೊದಲನೆಯದಾಗಿ ಬಳಕೆಯಲ್ಲಿರುವ ಮೊಬೈಲ್ ಸಂಖ್ಯೆ ಆಧಾರ್‌ಗೆ ಜೋಡಣೆಯಾಗಿರಬೇಕು. ಆಧಾರ್-ಪಹಣಿ ಲಿಂಕ್ ಮಾಡುವ ಸಂದರ್ಭದಲ್ಲಿ ಎರಡು ಪ್ರತ್ಯೇಕ ಒಟಿಪಿ ಬರುತ್ತವೆ. ಅಲ್ಲೇ ರೈತರ ಫೋಟೋ ತೆಗೆದು ಅಪ್‌ಲೋಡ್ ಮಾಡುವ ಮೂಲಕ ಆಧಾರ್ ಜೋಡಣೆ ಪ್ರಕ್ರಿಯೆ ನಡೆಯುತ್ತದೆ.
ಹಲವು ತೊಡಕುಗಳ ಸಂಕಷ್ಟ
ರೈತರು ಸ್ವತಃ ತಮ್ಮ ಮೊಬೈಲ್ ಮೂಲಕ ಆನ್‌ಲೈನ್’ನಲ್ಲಿ ಆಧಾರ್-ಪಹಣಿ ಜೋಡಣೆಗೆ ಅವಕಾಶ ಇದ್ದರೂ ಆಧಾರ್‌ನಲ್ಲಿರುವ ಹೆಸರು ಹಾಗೂ ಪಹಣಿಯಲ್ಲಿರುವ ಹೆಸರಿಗೆ ವ್ಯತ್ಯಾಸದಿಂದಾಗಿ ಜೋಡಣೆಯಾಗುತ್ತಿಲ್ಲ. ಆದರೆ, ಗ್ರಾಮ ಲೆಕ್ಕಾಧಿಕಾರಿಗಳ ಕಾರ್ಯಾಲಯದಲ್ಲಿ ಈ ಕೆಲಸ ಸುಲಭವಾಗಿ ಆಗುತ್ತಿದೆ. ಸಮಸ್ಯೆ ಎಂದರೆ ಕೆಲವು ಗ್ರಾಮಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಕಾಡುತ್ತಿದೆ.
ನೆಟ್‌ವರ್ಕ್ ಸಮಸ್ಯೆಯ ಜೊತೆಗೆ ಆಧಾರ್’ಗೆ ಜೋಡಣೆ ಆಗಿರುವ ರೈತರ ಮೊಬೈಲ್ ಸಂಖ್ಯೆ ಚಾಲ್ತಿಯಲ್ಲಿ ಇಲ್ಲದಿರುವುದು, ಜೋಡಣೆ ಸಂದರ್ಭದಲ್ಲಿ ಒಟಿಪಿ ಬರುವುದು ವಿಳಂಬವಾಗುವುದು, ಆಧಾರ್ ಕಾರ್ಡ್ಗೆ ಮೊಬೈಲ್ ಸಂಖ್ಯೆ ಜೋಡಣೆ ಆಗದಿರುವುದು ಮತ್ತಿತ್ತರ ತೊಡಕುಗಳಿಂದ ಇಡೀ ಪ್ರಕ್ರಿಯೆ ವಿಳಂಬವಾಗುತ್ತಿದೆ.
ರೈತರಿಗೆ ಸಿಗುವ ತೋಟಗಾರಿಕೆ ಇಲಾಖೆ ಸಬ್ಸಿಡಿ ಯೋಜನೆಗಳು Horticulture Department Subsidy Schemes
ಮೊಬೈಲ್‌ನಲ್ಲಿ ಪಹಣಿಗೆ ಆಧಾರ್ ಲಿಂಕ್ ಮಾಡಿಸುವ ವಿಧಾನ
ರೈತರು ನಾವು ಕೆಳಗೆ ನೀಡಿರುವ ಲಿಂಕ್ ಬಳಸಿ ಸರಕಾರದ landrecords.karnataka ಜಾಲತಾಣಕ್ಕೆ ಭೇಟಿ ನೀಡಿ ತಮ್ಮ ಮೊಬೈಲ್’ನಲ್ಲಿಯೇ ಪಹಣಿಗೆ ಆಧಾರ್ ಲಿಂಕ್ ಮಾಡಬಹುದಾಗಿದೆ.
ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಸರಕಾರದ ಅಧಿಕೃತ ‘ಭೂಮಿ ನಾಗರಿಕ ಸೇವೆಗಳು’ ವೆಬ್‌ಸೈಟ್ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಆಧಾರ್’ಗೆ ಜೋಡಣೆ ಆಗಿರುವ ಮೊಬೈಲ್ ನಂಬರ್ ಮತ್ತು ಕ್ಯಾಪ್ಚ ಕೋಡ್ ನಮೂದಿಸಿ ಸೆಂಡ್ ಓಟಿಪಿ (Send OTP) ಮೇಲೆ ಕ್ಲಿಕ್ ಮಾಡಬೇಕು. ಆಗ ಮೊಬೈಲ್ ನಂಬರಿಗೆ ಆರು ಅಂಕಿಯ ಒಟಿಪಿ ಬರುತ್ತದೆ. ಅದನ್ನು ನಮೂದಿಸಿ ಲಾಗಿನ್ ಕ್ಲಿಕ್ ಮಾಡಬೇಕು.
ಮೊಬೈಲ್ ನಂಬರ್ ಬಳಸಿ ಲಾಗಿನ್ ಆದ ಬಳಿಕ ತೆರೆದುಕೊಳ್ಳುವ ಹೊಸ ಪುಟದಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಮತ್ತು ನಿಮ್ಮ ಆಧಾರ್ ಕಾರ್ಡ್’ನಲ್ಲಿರುವಂತೆ ನಿಮ್ಮ ಹೆಸರನ್ನು ಇಂಗ್ಲಿಷ್’ನಲ್ಲಿ ಟೈಪ್ ಮಾಡಿ ವೇರಿಫೈ ಆಯ್ಕೆ ಮೇಲೆ ಒತ್ತಿದರೆ ಜಮೀನು ಪಹಣಿಗೆ ಆಧಾರ್ ಯಶಸ್ವಿಯಾಗಿ ಜೋಡಣೆ ಆಗುತ್ತದೆ.
ಆದರೆ ಈ ಪ್ರಕ್ರಿಯೆ ರೈತರಿಂದ ಕಷ್ಟಕರವಾಗಿದೆ. ಗ್ರಾಮ ಒನ್’ನಂತಹ ಆನ್‌ಲೈನ್ ಕೇಂದ್ರಗಳಲ್ಲೂ ವಿವಿಧ ಕಾರಣಗಳಿಂದ ಯಶಸ್ವಿಯಾಗಿ ಲಿಂಕ್ ಮಾಡಲಾಗುತ್ತಿಲ್ಲ. ಹೀಗಾಗಿ ಈಗ ರೈತರಿಗೆ ಉಳಿದಿರುವ ಏಕೈಕ ಮಾರ್ಗ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿ ಮೂಲಕ ಲಿಂಕ್ ಮಾಡಿಸುವುದಾಗಿದೆ. ಆದರೆ ಇಲ್ಲಿ ನೆಟ್‌ವರ್ಕ್ ಸಮಸ್ಯೆ ಇತ್ಯಾದಿ ಕಾರಣಕ್ಕೆ ವಿಳಂಬವಾಗುತ್ತಿದ್ದು; ರೈತರು ಪರದಾಡುವಂತಾಗಿದೆ.
RTC ಆಧಾರ್ ಲಿಂಕ್ ಮಾಡುವ ಜಾಲತಾಣದ ಲಿಂಕ್ : https://landrecords.karnataka.gov.in/service4/
ಎಫ್‌ಐಡಿ ಹೊಂದಿದ ರೈತರಿಗೆ ಮಾತ್ರ ಬರ ಪರಿಹಾರ : ಇಲ್ಲಿದೆ ಕೃಷಿ ಇಲಾಖೆ ಮಾಹಿತಿ FID Registration