ಈ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳಿಗೆ ವಿಮೆ (Mungaru Bele Vime 2025) ಮಾಡಿಸಲು ಸರ್ಕಾರ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಕುರಿತು ರೈತರಿಗೆ ಉಪಯುಕ್ತವಾಗುವ ಮಹತ್ವದ ಮಾಹಿತಿ ಇಲ್ಲಿದೆ…
‘ಪ್ರಧಾನಮಂತ್ರಿ ಫಸಲ್ ಭೀಮಾ’ (PMFBY) ಯೋಜನೆಯಡಿಯಲ್ಲಿ 2025-26ನೇ ಸಾಲಿನ ಬೆಳೆ ವಿಮೆ ಮಾಡಿಸಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ನೈಸರ್ಗಿಕ ವಿಕೋಪಗಳ ಆತಂಕದಲ್ಲಿರುವ ರೈತರಿಗೆ ಇದು ಮಹತ್ವದ ಆರ್ಥಿಕ ಭದ್ರತಾ ಸಾಧನವಾಗಿದೆ.
2016ರಲ್ಲಿ ಪ್ರಾರಂಭಗೊಂಡ ಫಸಲ್ ಭೀಮಾ ಯೋಜನೆಯು ಮಳೆಯ ಕೊರತೆ, ಪ್ರವಾಹ, ಭಾರಿ ಗಾಳಿ, ಹುಳುಪೀಡೆ, ರೋಗ ಸೇರಿದಂತೆ ನೈಸರ್ಗಿಕ ಅಪಾಯಗಳಿಂದ ಉಂಟಾಗುವ ನಷ್ಟಕ್ಕೆ ಆರ್ಥಿಕ ಪರಿಹಾರ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಇದನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿಯಾಗಿ ಅನುದಾನ ನೀಡುವ ಮೂಲಕ ಜಾರಿಗೆ ತರುತ್ತಿವೆ.
ಯೋಜನೆಯ ಮುಖ್ಯ ಉದ್ದೇಶಗಳು
- ಬೆಳೆ ಹಾನಿಯಿಂದ ಉಂಟಾಗುವ ಆರ್ಥಿಕ ನಷ್ಟಕ್ಕೆ ಪರಿಹಾರ.
- ಕೃಷಿಯಲ್ಲಿ ಹೂಡಿಕೆಯ ಭದ್ರತೆ ಮತ್ತು ಮರುಬಿತ್ತನೆಗೆ ಸಹಾಯ.
- ರೈತರ ಆತ್ಮಹತ್ಯೆ ತಡೆಗಟ್ಟುವುದು ಮತ್ತು ಸಾಲದ ಭಾರವನ್ನು ಕಡಿಮೆ ಮಾಡುವುದು.
- ಖರೀಫ್ ಮತ್ತು ರಬಿ ಎರಡೂ ಋತುಗಳಲ್ಲಿ ಹಾನಿಗೆ ವಿಮಾ ರಕ್ಷಣೆ.
2025-26 ಮುಂಗಾರು ಬೆಳೆಗಳು ಮತ್ತು ಅರ್ಜಿ ದಿನಾಂಕಗಳು
ಈ ಬಾರಿ ಒಟ್ಟು 36 ಅಧಿಸೂಚಿತ ಬೆಳೆಗಳನ್ನು ವಿಮೆಗೆ ಒಳಪಡಿಸಲಾಗಿದೆ. ಕೆಲವು ಪ್ರಮುಖ ಬೆಳೆ ಮತ್ತು ಅವುಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದ ವಿವರ ಹೀಗಿದೆ:
- ಟೊಮ್ಯಾಟೊ, ಎಳ್ಳು: 30 ಜೂನ್ 2025
- ಈರುಳ್ಳಿ, ಹತ್ತಿ: 15 ಜುಲೈ 2025
- ಮುಸುಕಿನ ಜೋಳ, ಭತ್ತ, ಜೋಳ, ರಾಗಿ, ತೊಗರಿ, ನೆಲಗಡಲೆ, ನವಣೆ, ಸಜ್ಜೆ: 31 ಜುಲೈ 2025
- ಸೂರ್ಯಕಾಂತಿ: 16 ಆಗಸ್ಟ್ 2025
ಪ್ರತಿ ಜಿಲ್ಲೆಗೆ ಅನುಗುಣವಾಗಿ ಬೆಳೆಗಳು ಬದಲಾಗಬಹುದು. ಹೀಗಾಗಿ ನಿಮ್ಮ ಗ್ರಾಮಕ್ಕೆ ಅನ್ವಯವಾಗುವ ಬೆಳೆ ವಿಮೆ ಮಾಹಿತಿಯನ್ನು ಸರ್ಕಾರದ samrakshane.karnataka.gov.inಗೆ ಭೇಟಿ ನೀಡಿ ತಿಳಿಯಿರಿ.

ಬೆಳೆವಾರು ಪ್ರಿಮಿಯಂ ಮೊತ್ತ ಎಷ್ಟು?
ರೈತರಿಂದ ಪಡೆಯಲಾಗುವ ಪ್ರಿಮಿಯಂ ಮೊತ್ತ ಅತ್ಯಂತ ಕಡಿಮೆ ಶೇಕಡಾವಾರು ದರದಲ್ಲಿದ್ದು, ಉಳಿದ ಮೊತ್ತವನ್ನು ಸರ್ಕಾರವೇ ನೀಡುತ್ತದೆ.ಉದಾಹರಣೆಗೆ: ನೀವು 1 ಎಕರೆ ಭತ್ತ ಬೆಳೆದಿದ್ದರೆ, ವಿಮಾ ಮೊತ್ತ ₹50,000 ಅಂದಾಜು ಇದ್ದರೆ ರೈತನು ಕೇವಲ ₹1,000 ಪಾವತಿಸಿದರೂ ಸಾಕು (2%).
ರೈತರು ಈ ಮಾಹಿತಿಯನ್ನು samrakshane.karnataka.gov.in ತಾಣಕ್ಕೆ ಭೇಟಿ ತಿಳಿಯಬಹುದಾಗಿದೆ.
ಅರ್ಜಿ ಸಲ್ಲಿಸುವ ವಿಧಾನಗಳು
ರೈತರು ಸ್ವತಃ ಆನ್‌ಲೈನ್ ಅರ್ಜಿ ಸಲ್ಲಿಸಬಹುದು. ಅಥವಾ ಗ್ರಾಮ ಒನ್ / ಕರ್ನಾಟಕ ಒನ್ ಕೇಂದ್ರಗಳು, ಬ್ಯಾಂಕುಗಳು, ರೈತ ಸಂಪರ್ಕ ಕೇಂದ್ರಗಳು ಹಾಗೂ ಕೃಷಿ ಇಲಾಖೆ ಕಚೇರಿಗಳ ಮೂಲಕ ನೇರವಾಗಿ ಹೋಗಿ ಪ್ರಿಮಿಯಂ ಪಾವತಿಸಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಕೆಗೆ ಅಗತ್ಯವಿರುವ ದಾಖಲೆಗಳು
- ರೈತನ ಹೆಸರು ಇರುವ ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್ (ಆಧಾರ್ ಲಿಂಕ್ ಆಗಿರಬೇಕು)
- ಪಹಣಿ ದಾಖಲೆ / RTC
- 2 ಪಾಸ್‌ಪೋರ್ಟ್ ಗಾತ್ರದ ಫೋಟೋಗಳು
- ದೃಢೀಕೃತ ಮೊಬೈಲ್ ಸಂಖ್ಯೆ
ರೈತರಿಗೆ ಮಹತ್ವದ ಸೂಚನೆಗಳು
- ಈ ವರ್ಷ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಳೆ ಹೆಚ್ಚಾಗಿಯೋ? ಅಥವಾ ಸಕಾಲಕ್ಕೆ ಸಮೃದ್ಧ ಮಳೆಯಾಗದೇಯೋ ಬೆಳೆ ನಷ್ಟವಾಗುವ ಸಂಭವವಿದೆ. ಹೀಗಾಗಿ ತಪ್ಪದೇ ಬೆಳೆ ವಿಮೆ ಮಾಡಿಸಿ.
- ಕೆಲವು ಬೆಳೆಗಳಿಗೆ ಅರ್ಜಿ ದಿನಾಂಕಗಳು ಜೂನ್ ಅಂತ್ಯದೊಳಗೆ ಮುಕ್ತಾಯವಾಗುತ್ತವೆ. ಆದ್ದರಿಂದ ತಡಮಾಡದೇ ಅರ್ಜಿ ಸಲ್ಲಿಸಿ. ಬಿತ್ತನೆ ಪೂರ್ವದಲ್ಲಿಯೇ ವಿಮೆ ಮಾಡಿಸುವುದು ಉತ್ತಮ.
- ವಿಮೆ ಮಾಡಿಸದ ರೈತರಿಗೆ ಬೆಳೆ ನಾಶವಾದ ಬಳಿಕ ಯಾವುದೇ ರೀತಿಯ ಪರಿಹಾರ ಸಿಗುವುದಿಲ್ಲ. ಅರ್ಜಿಯ ಪ್ರತಿಯನ್ನು ಕಚ್ಚಾ ದಾಖಲೆಗಳೊಂದಿಗೆ ಸಂಗ್ರಹಿಸಿ ಇಟ್ಟುಕೊಳ್ಳುವುದು ಉತ್ತಮ.
ಇಂದೇ ವಿಮೆ ಮಾಡಿಸಿ. ನಷ್ಟದ ಭೀತಿಯಿಂದ ದೂರವಿರಿ. ಈ ಲೇಖನವನ್ನು ರೈತ ಸ್ನೇಹಿತರು, ಕುಟುಂಬಸ್ಥರು ಹಾಗೂ ಹತ್ತಿರದ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳಿ. ಹೆಚ್ಚಿನ ರೈತರು ಲಾಭ ಪಡೆಯಲಿ.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.