
ಲಕ್ಷಾಧಿಪತಿಯಾಗುವ ಕನಸು ಕಾಣುವವರಿಗಾಗಿ ಎಸ್‌ಬಿಐ ‘ಹರ್ ಘರ್ ಲಖ್ಪತಿ’ ಯೋಜನೆ (Har Ghar Lakhpati Yojana) ಜಾರಿಗೊಳಿಸಿದೆ. ಈ ಯೋಜನೆಯಡಿ ತಿಂಗಳಿಗೆ 500 ಠೇವಣಿ ಮಾಡುವ ಮೂಲಕ ಲಕ್ಷ ಗಳಿಸಬಹುದು…
ದೇಶದ ಸರ್ಕಾರಿ ಸ್ವಾಮ್ಯದ ಪ್ರತಿಷ್ಟಿತ ಬ್ಯಾಂಕುಗಳಲ್ಲಿ ಒಂದಾಗಿರುವ ಎಸ್‌ಬಿಐ ಬ್ಯಾಂಕ್ (State Bank of India) ‘ಹರ್ ಘರ್ ಲಖ್ಪತಿ’ (ಪ್ರತೀ ಮನೆಯಲ್ಲೂ ಲಕ್ಷಾಧಿಪತಿ) ಯೋಜನೆಯಡಿ ಪ್ರತೀ ತಿಂಗಳು ಕೇವಲ 500 ರೂ. ತೊಡಗಿಸಿ ಲಕ್ಷಾಧಿಪತಿಯಾಗುವ ಅವಕಾಶ ಕಲ್ಪಿಸಿದೆ.
ಏನಿದು ‘ಹರ್ ಘರ್ ಲಖ್ಪತಿ’ ಯೋಜನೆ? ಈ ಯೋಜನೆಯಡಿ ಹೂಡಿಕೆ ಮಾಡುವುದು ಹೇಗೆ? ಖಾತೆ ತೆರೆಯುವುದು ಹೇಗೆ? ಬಡ್ಡಿ ಎಷ್ಟು? ಇದರ ಪ್ರಯೋಜನಗಳೇನು? ಮುಂತಾದ ಪ್ರಮುಖ ಮಾಹಿತಿಯನ್ನು ಇಲ್ಲಿ ತಿಳಿಯೋಣ…
ಏನಿದು ‘ಹರ್ ಘರ್ ಲಖ್ಪತಿ’ ಯೋಜನೆ?
ಇದೊಂದು ಮರುಕಳಿಸುವ ಠೇವಣಿ (Recurring Deposit – RD) ಯೋಜನೆಯಾಗಿದ್ದು; ಎಸ್‌ಬಿಐ ಗ್ರಾಹಕರು ಸಣ್ಣ ಮಾಸಿಕ ಠೇವಣಿ ಮಾಡುವ ಮೂಲಕ 1 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಸಂಗ್ರಹಿಸಬಹುದು.
ನಿಶ್ಚಿತ ಆದಾಯದೊಂದಿಗೆ ವ್ಯವಸ್ಥಿತ ಉಳಿತಾಯ ಯೋಜನೆಯನ್ನು ಬಯಸುವವರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ. ಮಾಸಿಕ ಕೇವಲ 576 ರೂ. ಠೇವಣಿ ಮಾಡಿ ಮೆಚ್ಯುರಿಟಿ ಅವಧಿಗೆ ಒಂದು ಲಕ್ಷ ರೂ. ಪಡೆಯಬಹುದು. ನಿರ್ಧಿಷ್ಟ ಅವಧಿಯ ನಂತರ ಠೇವಣಿ ಮೇಲೆ ಸಾಲ ಸೌಲಭ್ಯ ಕೂಡ ಸಿಗುತ್ತದೆ.

ಯಾರು ಹೂಡಿಕೆ ಮಾಡಬಹುದು?
ಎಸ್‌ಬಿಐ ‘ಹರ್ ಘರ್ ಲಖ್ಪತಿ’ ಯೋಜನೆಯು 18 ವರ್ಷ ಮೇಲ್ಪಟ್ಟ ಎಲ್ಲಾ ಭಾರತೀಯರಿಗೂ ಮುಕ್ತವಾಗಿದೆ. ಅಪ್ರಾಪ್ತರ ಹೆಸರಿನಲ್ಲಿ ಕೂಡ ಅವರ ಪೋಷಕರು ಖಾತೆ ತೆರೆಯಬಹುದು. ಜಂಟೀ ಖಾತೆ ತೆರೆಯಲು ಕೂಡ ಅವಕಾಶವಿದೆ.
ದಿನಗೂಲಿ ಮಾಡುವವ ಕಾರ್ಮಿಕರು, ದಿನನಿತ್ಯ ಸಂಬಳ ಪಡೆಯುವವರು, ಸಣ್ಣ ಉಳಿತಾಯದ ಅಭಿಲಾಷೆಯುಳ್ಳ ಗೃಹಿಣಿಯರು, ಸಣ್ಣ ವ್ಯಾಪಾರ ಮಾಡುವವರು, ವಿದ್ಯಾರ್ಥಿಗಳಿಗೆ ‘ಹರ್ ಘರ್ ಲಖ್ಪತಿ’ ಯೋಜನೆ ಸೂಕ್ತವಾಗಿದೆ.
ಖಾತೆ ತೆರೆಯುವುದು ಹೇಗೆ?
ನಿಮ್ಮ ಹತ್ತಿರದ ಎಸ್‌ಬಿಐ ಬ್ಯಾಂಕಿಗೆ ಭೇಟಿ ನೀಡಿ ಆರ್.ಡಿ ಅರ್ಜಿ ಫಾರ್ಮ್ ಪಡೆದು ಭರ್ತಿ ಮಾಡಿ, ಕೆವೈಸಿ ದಾಖಲೆಗಳನ್ನು ಸಲ್ಲಿಸುವ ಮೂಲಕ ‘ಹರ್ ಘರ್ ಲಖ್ಪತಿ’ ಯೋಜನೆ ಖಾತೆ ತೆರೆಯಬಹುದು.
ಅಥವಾ SBI YONO ಆ್ಯಪ್ ಅಥವಾ ಆನ್‌ಲೈನ್ ಮೂಲಕವೂ ‘ಹರ್ ಘರ್ ಲಖ್ಪತಿ’ ಯೋಜನೆ ಖಾತೆ ತೆರೆಯಲು ಅವಕಾಶವಿದೆ. ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಲ್ಲಿ ವ್ಯವಹಾರ ಪ್ರತಿನಿಧಿಗಳ ಮೂಲಕವೂ ಮನೆ ಬಾಗಿಲಲ್ಲೇ ಖಾತೆ ತೆರೆಯಬಹುದಾಗಿದೆ.
ಖಾತೆ ತೆರೆಯಲು ಪಾನ್ ಕಾರ್ಡ್, ಆಧಾರ್ ಕಾರ್ಡು, ಪಾಸ್‌ಪೋರ್ಟ್ ಅಳತೆಯ ಫೋಟೋ ಹಾಗೂ ವಿಳಾಸ ಪುರಾವೆಗೆ ವಿದ್ಯುತ್ ಬಿಲ್, ಓಟರ್ ಐಟಿ, ರೇಷನ್ ಕಾರ್ಡುಗಳ ಪೈಕಿ ಯಾವುದಾರು ಒಂದು ದಾಖಲೆ ಸಾಕು.
ಎಷ್ಟು ವರ್ಷಕ್ಕೆ ಎಷ್ಟು ಠೇವಣಿ?
‘ಹರ್ ಘರ್ ಲಖ್ಪತಿ’ ಯೋಜನೆಯಡಿ 1 ಲಕ್ಷ ರೂ. ಪಡೆಯಲು ಕನಿಷ್ಟ 3 ವರ್ಷಗಳಿಂದ 10 ವರ್ಷಗಳ ವರೆಗೂ ಠೇವಣಿ ಮಾಡಲು ಅವಕಾಶವಿದೆ. ಆದರೆ, ನೀವು ಆಯ್ಕೆ ಮಾಡಿಕೊಂಡ ವರ್ಷಗಳಿಗೆ ಅನುಗುಣವಾಗಿ ಠೇವಣಿ ಮೊತ್ತವು ಈ ಕೆಳಗಿನಂತಿದೆ:
- 10 ವರ್ಷಗಳಿಗೆ: 576 ರೂ.
- 7 ವರ್ಷಗಳಿಗೆ: 923 ರೂ.
- 5 ವರ್ಷಗಳಿಗೆ: 1,391 ರೂ.
- 3 ವರ್ಷಗಳಿಗೆ: 2,482
ಬಡ್ಡಿ ದರ ಎಷ್ಟು?
ಆರ್.ಡಿ ಬಡ್ಡಿದರವನ್ನು ತ್ರೈಮಾಸಿಕವಾಗಿ ಲೆಕ್ಕ ಹಾಕಲಾಗುತ್ತದೆ. ಎಸ್‌ಬಿಐ ‘ಹರ್ ಘರ್ ಲಖ್ಪತಿ’ ಯೋಜನೆಯಡಿಯಲ್ಲಿ 3 ಮತ್ತು 4 ವರ್ಷಗಳ ಅವಧಿಗೆ ಗರಿಷ್ಠ ಶೇ.6.75 ಬಡ್ಡಿ ನೀಡುತ್ತದೆ. 4 ವರ್ಷಕ್ಕೆ ಮೇಲ್ಪಟ್ಟ ಅವಧಿಗೆ ಶೇ.6.50ರಷ್ಟು ಬಡ್ಡಿ ಸಿಗಲಿದೆ.
ಖಾತೆ ಮುಂದುವರೆಸಲು ಅಡಚಣೆಗಳಾದರೆ ಖಾತೆ ಮುಚ್ಚಲು ಕೂಡ ಅವಕಾಶವಿದೆ. ಕನಿಷ್ಠ 12 ತಿಂಗಳ ನಂತರ ಖಾತೆ ಮುಚ್ಚಿದರೆ ಅನ್ವಯವಾಗುವ ಬಡ್ಡಿದರದಿಂದ ಸಣ್ಣ ದಂಡವನ್ನು ಕಡಿತ ಮಾಡಿ ಬಡ್ಡಿಯನ್ನು ಪಾವತಿಸಲಾಗುತ್ತದೆ. 12 ತಿಂಗಳು ಒಳಗೇ ಖಾತೆ ಮುಚ್ಚಿದರೆ ಯಾವುದೇ ಬಡ್ಡಿ ಸಿಗುವುದಿಲ್ಲ.