ರೈತರಿಂದ ಮೆಕ್ಕೆಜೋಳವನ್ನು ಎಂಎಸ್‌ಪಿ ಬೆಂಬಲ ಬೆಲೆಯಲ್ಲಿ ಕೆಎಂಎಫ್ ನೇರ ಖರೀದಿ (KMF Maize Direct Purchase) ಆರಂಭಿಸಿದೆ. ಬೆಲೆ, ನಿಯಮಗಳು, ಬೇಕಾಗುವ ದಾಖಲಾತಿಗಳ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ರಾಜ್ಯದ ಮೆಕ್ಕೆಜೋಳ ಬೆಳೆಗಾರರಿಗೆ ಇದೀಗ ದೊಡ್ಡ ಮಟ್ಟದ ನೆರವು ಲಭ್ಯವಾಗಲಿದೆ. ಬೆಲೆ ಕುಸಿತದಿಂದ ಸಂಕಷ್ಟ ಅನುಭವಿಸುತ್ತಿರುವ ರೈತರ ನೆರವಿಗೆ ರಾಜ್ಯ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ (KMF) ಮುಂದಾಗಿದ್ದು, ಕನಿಷ್ಠ ಬೆಂಬಲ ಬೆಲೆ (MSP) ಯೋಜನೆಯಡಿ 50,000 ಮೆಟ್ರಿಕ್ ಟನ್ ಮೆಕ್ಕೆಜೋಳವನ್ನು ನೇರವಾಗಿ ರೈತರಿಂದಲೇ ಖರೀದಿಸಲು ನಿರ್ಧರಿಸಿದೆ.
ಇದನ್ನೂ ಓದಿ: Karnataka Rain Forecast- ಮತ್ತೆ ಚಂಡಮಾರುತದ ಅಬ್ಬರ | ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ
ಕೆಎಂಎಫ್‌ಗೆ ಸರ್ಕಾರದ ಸೂಚನೆ
2025-26ನೇ ಸಾಲಿನಲ್ಲಿ ರಾಜ್ಯದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮೆಕ್ಕೆಜೋಳ ಬೆಳೆದಿದ್ದಾರೆ. ಆದರೆ, ಉತ್ಪಾದನೆ ಹೆಚ್ಚಾದ ಕಾರಣ ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ದರ ಭಾರಿ ಕುಸಿತ ಕಂಡಿದೆ. ಸಾಧಾರಣವಾಗಿ ಪ್ರತಿ ಕ್ವಿಂಟಾಲ್‌ಗೆ 19,000 ಸಿಕ್ಕರೇ ಪುಣ್ಯ ಎನ್ನುವಂತಾಗಿದೆ.
ಇದು ಅತ್ಯಂತ ಕನಿಷ್ಠ ಬೆಲೆಯಾಗಿದ್ದು; ಸಹಜವಾಗಿಯೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಆರ್ಥಿಕ ಸ್ಥಿತಿಯನ್ನು ಗಮನಿಸಿದ ರಾಜ್ಯ ಸರ್ಕಾರವು ಕೆಎಂಎಫ್‌ಗೆ ಸಲಹೆ ನೀಡಿ, ಅವಶ್ಯಕತೆಯಿರುವ ಮೆಕ್ಕೆಜೋಳವನ್ನು ಎಂಎಸ್‌ಪಿ ಅಡಿ ನೇರವಾಗಿ ರೈತರಿಂದಲೇ ಖರೀದಿಸುವಂತೆ ಸೂಚಿಸಿದೆ.

ಕೆಎಂಎಫ್‌ಗೆ ಏಕೆ ಅಷ್ಟೊಂದು ಮೆಕ್ಕೆಜೋಳ ಬೇಕು?
ಕೆಎಂಎಫ್‌ಗೆ ರಾಜ್ಯಾದ್ಯಂತ ಐದು ಪ್ರಮುಖ ಪಶು ಆಹಾರ ಉತ್ಪಾದನಾ ಘಟಕಗಳಿದ್ದು, ಇವು ತಿಂಗಳಿಗೆ 54,000 ಮೆಟ್ರಿಕ್ ಟನ್ ‘ನಂದಿನಿ ಗೋಲ್ಡ್’ ಪಶು ಆಹಾರವನ್ನು ತಯಾರಿಸುತ್ತವೆ. ಈ ಉತ್ಪಾದನೆಗೆ ವರ್ಷಕ್ಕೆ ಒಟ್ಟು 1.62 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಬೇಕಾಗುತ್ತದೆ.
ಪ್ರತಿ ವರ್ಷದಂತೆ ಈ ಬಾರಿಯೂ ಕೆಎಂಎಫ್ ಸುಗ್ಗಿಯ ಸಮಯದಲ್ಲಿ ದಾಸ್ತಾನು ಮಾಡಲು ಮೆಕ್ಕೆಜೋಳ ಖರೀದಿಸುತ್ತಿದೆ. ಈಗಾಗಲೇ 80,000 ಮೆಟ್ರಿಕ್ ಟನ್ ಖರೀದಿ ಪೂರ್ಣಗೊಂಡಿದ್ದು, ಉಳಿದ 50,000 ಮೆಟ್ರಿಕ್ ಟನ್ ಅನ್ನು MSP ಅಡಿಯಲ್ಲಿ ರೈತರಿಂದಲೇ ನೇರವಾಗಿ ಖರೀದಿಸುವ ನಿರ್ಧರಿಸಿದೆ.
ಕ್ವಿಂಟಾಲ್‌ಗೆ ₹2,400 ಬೆಲೆ ನಿಗದಿ
ಈ ಬಾರಿ ಎಂಎಸ್‌ಪಿ ಅಡಿಯಲ್ಲಿ ನಿಗದಿಪಡಿಸಿದ ದರ ಕಿಲೋಗೆ ₹24, ಅಂದರೆ ಒಂದು ಕ್ವಿಂಟಾಲ್‌ಗೆ ₹2,400 ಬೆಲೆ ನಿಗದಿ ಮಾಡಲಾಗಿದೆ. ಸಾಮಾನ್ಯ ಮಾರುಕಟ್ಟೆಯಿಂದ ಹೆಚ್ಚು ದರ ಪಡೆಯಲು ಸಾಧ್ಯವಾಗದ ರೈತರಿಗೆ ಈ MSP ದರ ಆರ್ಥಿಕ ನೆಮ್ಮದಿ ನೀಡಲಿದೆ.
ಖರೀದಿ ಎಲ್ಲೆಲ್ಲಿ ನಡೆಯಲಿದೆ?
ಕೆಎಂಎಫ್‌ನಡಿ ಕಾರ್ಯನಿರ್ವಹಿಸುವ ರಾಜಾನುಕುಂಟೆ ಗುಬ್ಬಿ, ಧಾರವಾಡ, ಹಾಸನ ಹಾಗೂ ಶಿಕಾರಿಪುರ ಪಶು ಆಹಾರ ಘಟಕಗಳ ಮೂಲಕ ಖರೀದಿ ನಡೆಯಲಿದೆ. ಇವುಗಳ ವ್ಯಾಪ್ತಿಯ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರಿ ಸಂಘಗಳು (MPCS) ಖರೀದಿ ಕೇಂದ್ರಗಳಾಗಿ ಕಾರ್ಯನಿರ್ವಹಿಸಲಿವೆ.
ಇದನ್ನೂ ಓದಿ: Karnataka Bank Personal Loan- ಕರ್ನಾಟಕ ಬ್ಯಾಂಕ್ ಪರ್ಸನಲ್ ಲೋನ್ | ಕಡಿಮೆ ಬಡ್ಡಿಯಲ್ಲಿ ₹25 ಲಕ್ಷವರೆಗೆ ಸುಲಭ ಸಾಲ
ರೈತರ ನೋಂದಣಿ ಯಾವಾಗ?
ಧಾರವಾಡ, ಶಿವಮೊಗ್ಗ, ಹಾಸನ ಜಿಲ್ಲಾ ಒಕ್ಕೂಟಗಳು ಇಂದಿನಿಂದ (ನವೆಂಬರ್ 29) ನೋಂದಣಿ ಪ್ರಕ್ರಿಯೆ ಆರಂಭಿಸಿವೆ. ಉಳಿದ ಎಲ್ಲಾ ಜಿಲ್ಲಾ ಹಾಲು ಒಕ್ಕೂಟಗಳು ಡಿಸೆಂಬರ್ 1ರಿಂದ ನೋಂದಣಿ ಪ್ರಾರಂಭಿಸಲಿವೆ. ರೈತರು ತಮ್ಮ ಸಂಬAಧಿತ ಎಂಪಿಸಿಎಸ್‌ನಲ್ಲಿ ನೋಂದಣಿ ಮಾಡಿಸಿಕೊಂಡು, ನಂತರ ಸರಬರಾಜು ಮಾಡಲು ಅವಕಾಶ ಪಡೆಯಬೇಕು.
ಒಬ್ಬ ರೈತನಿಂದ ಗರಿಷ್ಠ 25 ಕ್ವಿಂಟಾಲ್ ಅವಕಾಶ
ಖರೀದಿ ಪ್ರಕ್ರಿಯೆಯಲ್ಲಿ ಎಲ್ಲಾ ರೈತರಿಗೂ ಸಮಾನ ಅವಕಾಶ ಕಲ್ಪಿಸಿದ್ದು; ಒಬ್ಬ ರೈತನಿಂದ ಗರಿಷ್ಠ 25 ಕ್ವಿಂಟಾಲ್ ಮೆಕ್ಕೆಜೋಳ ಮಾತ್ರ ಸ್ವೀಕರಿಸಲಾಗುತ್ತದೆ. ಮೆಕ್ಕೆಜೋಳ ನಿಗದಿತ ಗುಣಮಟ್ಟದ್ದಾಗಿರಬೇಕು. ತೇವಾಂಶ ಇತ್ಯಾದಿಗಳ ಪ್ರಮಾಣ ನಿಗದಿಗಿಂತ ಹೆಚ್ಚು ಇದ್ದರೆ ಅಂತಹ ಮೆಕ್ಕೆಜೋಳ ಖರಿದಿಸುವುದಿಲ್ಲ.
ಇದನ್ನೂ ಓದಿ: Toilet Subsidy Karnataka- ಶೌಚಾಲಯ ನಿರ್ಮಾಣಕ್ಕೆ ₹12,000 ಸಹಾಯಧನ | ಈಗಲೇ ಅರ್ಜಿ ಹಾಕಿ
ರೈತರು ಸಲ್ಲಿಸಬೇಕಾದ ದಾಖಲೆಗಳು
ರೈತರು ಮೆಕ್ಕೆಜೋಳವನ್ನು ಕೆಎಂಎಫ್ ಪಶು ಆಹಾರ ಘಟಕಗಳಿಗೆ ಸರಬರಾಜು ಮಾಡುವಾಗ ರೈತರು ಕೆಳಗಿನ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ:
- ಎಂಪಿಸಿಎಸ್ ನೀಡಿದ ನೋಂದಣಿ ಪತ್ರ
- ಫೂಟ್ಸ್ ಐಡಿ / Farmer ID
- ಆಧಾರ್ ಕಾರ್ಡ್ ಪ್ರತಿ
ನೇರವಾಗಿ ರೈತರ ಖಾತೆಗೆ ಹಣ ಜಮಾ
ಕೆಎಂಎಫ್ ಸ್ವೀಕರಿಸಿದ ಮೆಕ್ಕೆಜೋಳದ ಹಣವನ್ನು Direct Benefit Transfer (DBT) ಮೂಲಕ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಿದೆ. ಇದರಿಂದ ಮಧ್ಯವರ್ತಿಗಳ ಅವಶ್ಯಕತೆ ಇಲ್ಲದಂತೆ ಆಗುತ್ತದೆ ಮತ್ತು ಪಾವತಿ ಪಾರದರ್ಶಕವಾಗಿ ತಲುಪುತ್ತದೆ.
ರೈತರು ಹೆಚ್ಚಿನ ಮಾಹಿತಿಗಾಗಿ ಕೆಎಂಎಫ್ ನೀಡಿರುವ ಸಂಪರ್ಕ ಸಂಖ್ಯೆ 080-26096885ಗೆ ಕರೆ ಮಾಡಬಹುದು. ಅಥವಾ ತಮ್ಮ ಜಿಲ್ಲಾ ಹಾಲು ಒಕ್ಕೂಟ ಕಚೇರಿಗಳಿಗೆ ಭೇಟಿ ನೀಡಬಹುದಾಗಿದೆ.
Karnataka Crop Compensation Payment- ರೈತರಿಗೆ ಬೆಳೆ ಪರಿಹಾರ ಜಮಾ | ನಿಮ್ಮ ಖಾತೆಗೆ ಹಣ ಬಂದಿದೆಯೇ?