ಮತ್ತೊಂದು ಚಂಡಮಾರುತದ ಅಬ್ಬರ ಶುರುವಾಗಿದ್ದು; ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾಗಲಿದೆ (Karnataka Rain Forecast) ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ…
ನೈಋತ್ಯ ಬಂಗಾಳ ಕೊಲ್ಲಿ ಮತ್ತು ಶ್ರೀಲಂಕಾ ಕರಾವಳಿ ತೀರದಲ್ಲಿ ವಾಯುಭಾರ ಕುಸಿತವಾಗಿದ್ದು, ಇದರ ಪರಿಣಾಮವಾಗಿ ನಿನ್ನೆ ನವೆಂವರ್ 27ರಂದು ‘ದಿತ್ವಾ’ ಚಂಡಮಾರುತವು ರೂಪುಗೊಂಡಿದೆ. ಯೆಮನ್ ದೇಶವು ತನ್ನ ದೇಶದಲ್ಲಿರುವ ಈ ದಿತ್ವಾ ಎಂಬ ನೈಸರ್ಗಿಕ ಲಗೂನ್ನ (ಸಮುದ್ರ ಕೊಳ) ಹೆಸರನ್ನು ಈ ಚಂಡಮಾರುತಕ್ಕೆ ಸೂಚಿಸಿದೆ.
ಸದರಿ ‘ದಿತ್ವಾ’ ಚಂಡಮಾರುತವು ಉತ್ತರ-ವಾಯವ್ಯ ದಿಕ್ಕಿನಲ್ಲಿ ಚಲಿಸಲಿದ್ದು, ನವೆಂಬರ್ 30ರ ಮುಂಜಾನೆ ಹೊತ್ತಿಗೆ ಪೂರ್ವ ಕರಾವಳಿಗೆ ಅಂದರೆ ಉತ್ತರ ತಮಿಳುನಾಡು, ಪುದುಚೇರಿ ಮತ್ತು ಆಂಧ್ರ ಪ್ರದೇಶದ ದಕ್ಷಿಣ ಕರಾವಳಿಗೆ ಅಪ್ಪಳಿಸುವ ನಿರೀಕ್ಷೆಯಿದೆ.
ಹಲವೆಡೆ ಮಳೆ ಸಾಧ್ಯತೆ
ಈ ಚಂಡಮಾರುತದ ಪ್ರಭಾವದಿಂದಾಗಿ ದಕ್ಷಿಣ ಭಾರತದ ಹಲವೆಡೆ ಮಳೆಯಾಗುವ ಸಾಧ್ಯತೆಗಳಿದ್ದು, ಕರ್ನಾಟಕದ ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗಗಳ ಹಲವು ಜಿಲ್ಲೆಗಳಲ್ಲೂ ಮಳೆಯಾಗಲಿದೆ.
ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ನವೆಂಬರ್ 27ರಿಂದ 30ರ ವರೆಗೆ ತಮಿಳುನಾಡಿನಲ್ಲಿ, ನವೆಂಬರ್ 28ರಿಂದ ಡಿಸೆಂಬರ್ 2ರ ವರೆಗೆ ಆಂಧ್ರಪ್ರದೇಶ ಕರಾವಳಿಯಲ್ಲಿ ಹಾಗೂ ನವೆಂಬರ್ 29 ಮತ್ತು 30ರಂದು ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: Karnataka Bank Personal Loan- ಕರ್ನಾಟಕ ಬ್ಯಾಂಕ್ ಪರ್ಸನಲ್ ಲೋನ್ | ಕಡಿಮೆ ಬಡ್ಡಿಯಲ್ಲಿ ₹25 ಲಕ್ಷವರೆಗೆ ಸುಲಭ ಸಾಲ
ರಾಜ್ಯದ 5 ಜಿಲ್ಲೆಗಳಿಗೆ ಎಚ್ಚರಿಕೆ
‘ದಿತ್ವಾ’ ಚಂಡಮಾರುತದ ಪ್ರಭಾವದಿಂದಾಗಿ ಕರ್ನಾಟಕದ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ತುಮಕೂರು, ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ ಮತ್ತು ರಾಮನಗರ ಜಿಲ್ಲೆಗಳ ಕೆಲವು ಕಡೆ ನವೆಂಬರ್ 29ರಂದು ಭಾರಿ ಮಳೆಯಾಗುವ ಸಾಧ್ಯತೆಗಳಿವೆ. ಹವಾಮಾನ ಇಲಾಖೆ ಈ ಜಿಲ್ಲೆಗಳಿಗೆ ಹಳದಿ ಅಲರ್ಟ್ ಘೋಷಿಸಿದೆ.
ನಾಳೆ ಮತ್ತು ನಾಡಿದ್ದು ಅಂದರೆ ನವೆಂಬರ್ 29 ಮತ್ತು 30ರಂದು ಕರಾವಳಿ ಭಾಗದ ಕೆಲವು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಜೊತೆಗೆ ಈ ಎರಡು ದಿನಗಳಲ್ಲಿ ರಾಜಧಾನಿ ಬೆಂಗಳೂರಿನಲ್ಲೂ ಸಾಧಾರಣ ಮಳೆ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.