ಹಳೆಯ ಪಿಂಚಣಿ ಯೋಜನೆ ಮರುಜಾರಿಗೆ (OPS Reintroduction 2025) ರಾಜ್ಯ ಸರ್ಕಾರ ಉತ್ಸುಕವಾಗಿದ್ದು; ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಯೋಜನೆ ಮರುಜಾರಿಯ ಸೂಚನೆ ನೀಡಿದ್ದಾರೆ. ಈ ಕುರಿತ ಮಾಹಿತಿ ಇಲ್ಲಿದೆ…
ರಾಜ್ಯದ ಲಕ್ಷಾಂತರ ಸರ್ಕಾರಿ ನೌಕರರ ಬಹುಕಾಲದ ಬೇಡಿಕೆಯಾದ ಹಳೆಯ ಪಿಂಚಣಿ ಯೋಜನೆ (Old Pension Scheme – OPS) ಮರು ಜಾರಿಗೆ ಸರ್ಕಾರ ಇದೀಗ ಗಂಭೀರ ಹೆಜ್ಜೆ ಇಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ಬಗ್ಗೆ ಚುರುಕಾಗಿ ಚಿಂತನೆ ನಡೆಸಿದ್ದು, ಸಂಬಂಧಿತ ಪ್ರಕ್ರಿಯೆಗೂ ಚಾಲನೆ ನೀಡಿದೆ.
ಹಳೇ ಪಿಂಚಣಿ ಯೋಜನೆ ಮರುಜಾರಿಗೆ ರಾಜ್ಯ ಸರ್ಕಾರ ಸನ್ನದ್ಧವಾಗಿದೆ. ಈ ಬಗ್ಗೆ ಮಹತ್ವದ ಸೂಚನೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಓಪಿಎಸ್ (OPS) ಮರು ಜಾರಿ ಕುರಿತು ಚರ್ಚಿಸಿ ಶೀಘ್ರದಲ್ಲಿಯೇ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.
OPS ಜಾರಿ ಸಿಎಂ ಮಹತ್ವದ ಘೋಷಣೆ
ನಿನ್ನೆ ಜೂನ್ 18ರಂದು ಬೆಂಗಳೂರುನಲ್ಲಿ ಆಯೋಜಿಸಿದ್ದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನೌಕರರ ಸಂಘದ ವಜ್ರಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ ಅವರು, ‘ಹಳೆಯ ಪಿಂಚಣಿ ಯೋಜನೆಯ ಕುರಿತು ನೌಕರರ ಮನವಿಯನ್ನು ಪರಿಶೀಲಿಸಲಾಗುವುದು. ಈ ಯೋಜನೆಯನ್ನು ನಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದೇವೆ. ಸಮಿತಿಗಳ ಶಿಫಾರಸುಗಳ ಆಧಾರದ ಮೇಲೆ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದ್ದಾರೆ.
ಮೂರು ಸಮಿತಿಗಳ ರಚನೆ
ಈಗಾಗಲೇ ರಾಜ್ಯ ಸರ್ಕಾರ ಹಳೆಯ ಪಿಂಚಣಿ ಮರು ಜಾರಿಗೆ ಸಂಬಂಧಿಸಿದಂತೆ 2025ರ ಜನವರಿ 24ರಂದು ಮೂರು ಸಮಿತಿಗಳನ್ನು ರಚಿಸಿದೆ. ಈ ಸಮಿತಿಗಳಲ್ಲಿರುವ ಹಿರಿಯ ಅಧಿಕಾರಿಗಳು OPS ಜಾರಿಗೆ ಸಂಬಂಧಿಸಿದ ಎಲ್ಲಾ ಆಯಾಮಗಳನ್ನು ಪರಿಶೀಲಿಸಿ ಸರ್ಕಾರಕ್ಕೆ ಶಿಫಾರಸು ಸಲ್ಲಿಸಲಿದ್ದಾರೆ. ಈ ಸಮಿತಿಗಳ ಮುಖ್ಯ ಉದ್ದೇಶಗಳು:
- ಹಳೆಯ ಪಿಂಚಣಿ ಯೋಜನೆಯ ವ್ಯಾಪ್ತಿ ನಿರ್ಧಾರ
- ಯಾರು OPSಗೆ ಅರ್ಹ ಎಂಬುದರ ನಿರ್ಧಾರ
- ಯೋಜನೆಯ ಮರು ಜಾರಿಗೆ ರಾಜ್ಯದ ಹಣಕಾಸಿನ ಮೇಲೆ ಬೀರುವ ಪರಿಣಾಮಗಳ ವಿಶ್ಲೇಷಣೆ
- ಪಿಂಚಣಿ ನಿಧಿಯ ಪ್ರಸ್ತುತ ಸ್ಥಿತಿಯ ಅಧ್ಯಯನ
- ಇತರ ರಾಜ್ಯಗಳ ಅನುಭವ ಮತ್ತು ಫಲಿತಾಂಶಗಳ ಪರಿಶೀಲನೆ

ಹಳೆಯ ಪಿಂಚಣಿ ಯೋಜನೆ ಯಾಕೆ ಮುಖ್ಯ?
2004ರ ನಂತರ ಜಾರಿಗೆ ಬಂದ ರಾಷ್ಟ್ರೀಯ ಪಿಂಚಣಿ ಯೋಜನೆ (OPS) ಒಂದು ಕೊಡುಗೆ ಆಧಾರಿತ ವ್ಯವಸ್ಥೆಯಾಗಿದ್ದು, ಪಿಂಚಣಿಯ ಪ್ರಮಾಣ ಮಾರುಕಟ್ಟೆಯ ಲಾಭ-ನಷ್ಟದ ಮೇಲೆ ಅವಲಂಬಿತವಾಗಿರುತ್ತದೆ. ಇದರಿಂದ ನೌಕರರಲ್ಲಿ ಅಭದ್ರತೆ ಶುರುವಾಗಿದ್ದು, ಮತ್ತೆ OPS ಕಡೆಗೆ ಬಯಕೆ ಹೆಚ್ಚಾಗಿದೆ. OPS ಅಡಿಯಲ್ಲಿ ನೌಕರರಿಗೆ ಸಿಗುವ ಪ್ರಮುಖ ಲಾಭಗಳು ಹೀಗಿವೆ:
- ನಿವೃತ್ತಿಯ ನಂತರ ಖಚಿತ ಮಾಸಿಕ ಪಿಂಚಣಿ
- ಮಾರುಕಟ್ಟೆ ನಿರ್ಣಯದ ಮೇಲೆ ಅವಲಂಬನೆ ಇಲ್ಲ
- ನೌಕರರ ವೇತನದಿಂದ ಕಡಿತವಿಲ್ಲ
- ಪಿಂಚಣಿ ಆದಾಯ ತೆರಿಗೆ ರಹಿತ
- ಕುಟುಂಬ ಸದಸ್ಯರಿಗೆ ಪಿಂಚಣಿ ವರ್ಗಾವಣೆ ವ್ಯವಸ್ಥೆ
ಈಗಾಗಲೇ OPS ಜಾರಿಗೊಳಿಸಿರುವ ರಾಜ್ಯಗಳು
ಹಳೇ ಪಿಂಚಣಿ ಯೋಜನೆಯನ್ನು ಮರು ಜಾರಿಗೆ ದೇಶದ ಕೆಲವು ರಾಜ್ಯಗಳು ಈಗಾಗಲೇ ಕ್ರಮ ಕೈಗೊಂಡಿವೆ. ಈ ಪೈಕಿ ರಾಜಸ್ಥಾನ, ಪಂಜಾಬ್, ಛತ್ತೀಸ್‌ಗಢ, ಜಾರ್ಖಂಡ್, ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಸರ್ಕಾರಿ ನೌಕರರಿಗೆ ಹಳೇ ಪಿಂಚಣಿ ಯೋಜನೆ ಅನ್ವಯವಾಗುತ್ತಿದೆ.
ಇದೀಗ ಕರ್ನಾಟಕ ಸರ್ಕಾರ ಕೂಡ ತನ್ನ ನೌಕರರಿಗೆ ಹಳೇ ಪಿಂಚಣಿ ಯೋಜನೆ ಜಾರಿ ಕುರಿತು ಉತ್ಸುಕವಾಗಿದೆ. ಇದೇ ರೀತಿ ಇನ್ನಷ್ಟು ರಾಜ್ಯಗಳು OPS ಜಾರಿಗೆ ಉತ್ಸುಕರಾಗಿದ್ದು, ಮಹಾರಾಷ್ಟ್ರ ಕೂಡ ಶೀಘ್ರ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಭವಿಷ್ಯದ ನಿರೀಕ್ಷೆಗಳೇನು?
ಮೂರು ಸಮಿತಿಗಳ ವರದಿ ಸರ್ಕಾರಕ್ಕೆ ಲಭ್ಯವಾದ ಬಳಿಕ, ಹಳೆಯ ಪಿಂಚಣಿ ಮರು ಜಾರಿಗೆ ಸೂಕ್ತ ನಿರ್ಧಾರ ಕೈಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಆದರೆ ಈ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಸರ್ಕಾರ ರಾಜ್ಯದ ಆರ್ಥಿಕ ಸ್ಥಿತಿ, ಮುಂದಿನ ಬಜೆಟ್ ಮೇಲಿನ ಪರಿಣಾಮ, ನೌಕರರ ಒತ್ತಡ ಮತ್ತು ನಿರೀಕ್ಷೆಗಳು, ಸಾರ್ವಜನಿಕ ಖರ್ಚು ನಿರ್ವಹಣಾ ಸಾಮರ್ಥ್ಯ ಇವುಗಳ ಪರಿಶೀಲನೆ ಮಾಡಬೇಕಾಗುತ್ತದೆ.
ಚುನಾವಣಾ ಪ್ರಣಾಳಿಕೆಯಲ್ಲಿ OPS ಮರುಜಾರಿ ವಿಚಾರ ಪ್ರಸ್ತಾಪಿಸಿದ್ದ ಕಾಂಗ್ರೆಸ್ ಸರ್ಕಾರ, ಆನಂತರ ಬಜೆಟ್‌ನಲ್ಲಿ ಈ ಬಗ್ಗೆ ಘೋಷಣೆ ಮಾಡಿದ್ದಲ್ಲದೇ OPS ಮರುಜಾರಿ ಕುರಿತು ಅಧ್ಯಯನಕ್ಕೆ ಸಮಿತಿ ಕೂಡ ರಚಿಸಿದೆ. ಇದೀಗ ಸಿಎಂ ಬಹಿರಂಗವಾಗಿ ಘೋಷಣೆ ಮಾಡಿದ್ದಾರೆ. ಸರ್ಕಾರದ ಈ ತೀರ್ಮಾನ ನೌಕರರಲ್ಲಿ ಭರವಸೆಯ ಹೊಸ ಬೆಳಕು ಮೂಡಿಸಿದೆ.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.