ರಾಜ್ಯ ಸರ್ಕಾರ (Government of Karnataka) ಹೊಸ ರೇಷನ್ ಕಾರ್ಡ್ (New Ration Card) ವಿತರಿಸಲು ಸಿದ್ಧವಾಗಿದೆ. ಯಾರಿಗೆಲ್ಲ ಹೊಸ ಕಾರ್ಡ್ ಸಿಗಲಿದೆ? ಹೊಸ ರೇಷನ್ ಕಾರ್ಡ್ ವಿತರಣೆಗೆ ಸರ್ಕಾರ ನಡೆಸಿದ ತಯಾರಿ ಏನು? ಸಂಪೂರ್ಣ ಮಾಹಿತಿ ಇಲ್ಲಿದೆ…
ರಾಜ್ಯದಲ್ಲಿ ಹೊಸ ಬಿಪಿಎಲ್ ಮತ್ತು ಎಪಿಎಲ್ ರೇಷನ್ ಕಾರ್ಡ್ ವಿತರಣೆಗೆ ಸರ್ಕಾರ ಸನ್ನದ್ಧವಾಗಿದೆ. ಹೊಸ ಪಡಿತರ ಚೀಟಿಗಳನ್ನು ಹೊಸದಾಗಿ ವಿತರಿಸುವ ನಿಟ್ಟಿನಲ್ಲಿ ಅರ್ಜಿ ಆಹ್ವಾನಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಈ ಸಂಬAಧ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರು ಇಲಾಖೆಯ ಕಾರ್ಯದರ್ಶಿಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಹೊಸ ಪಡಿತರ ಚೀಟಿಗಳ ಅರ್ಜಿ ಆಹ್ವಾನಕ್ಕೆ ಅನುಮತಿ ಪಡೆಯುವ ಸಲುವಾಗಿ ಸಚಿವ ಸಂಪುಟದ ಅನುಮೋದನೆಗೆ ಪ್ರಸ್ತಾವನೆ ಸಲ್ಲಿಸಲು ಆಹಾರ ಇಲಾಖೆ ತಯಾರಿ ನಡೆಸುತ್ತಿದೆ.
1.5 ಲಕ್ಷ ಹೊಸ ರೇಷನ್ ಕಾರ್ಡಿಗೆ ಹಸಿರು ನಿಶಾನೆ?
ರಾಜ್ಯದಲ್ಲಿ ಲಕ್ಷಾಂತರ ಜನ ಹೊಸ ರೇಷನ್ ಕಾರ್ಡ್ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಕಳೆದ 2023-24 ಮತ್ತು 2024-25ರ ಆರ್ಥಿಕ ವರ್ಷಗಳಲ್ಲಿ ಬರೋಬ್ಬರಿ 3,93,450 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ 3,05,325 ಅರ್ಜಿಗಳನ್ನು ಅರ್ಹ ಎಂದು ಗುರುತಿಸಲಾಗಿದೆ. ಇದರಲ್ಲಿ 88,125 ಅರ್ಜಿಗಳು ತಿರಸ್ಕೃತಗೊಂಡಿವೆ.
ಇಲ್ಲಿಯ ತನಕ ಒಟ್ಟು 2,04,760 ರೇಷನ್ ಕಾರ್ಡ್ ವಿತರಿಸಲಾಗಿದೆ. 1,00,565 ಅರ್ಜಿಗಳಿಗೆ ರೇಷನ್ ಕಾರ್ಡ್ ವಿತರಣೆಗೆ ಆಗಬೇಕಿದೆ. ಈ ಪೈಕಿ ಇ-ಶ್ರಮ್ ಕಾರ್ಡುದಾರರಿಗೆ 8,766 ಮತ್ತು ಅರಣ್ಯ ಪ್ರದೇಶದ ನಿವಾಸಿಗಳಿಗೆ 573 ಪಡಿತರ ಚೀಟಿಗಳನ್ನು ನೀಡಲಾಗಿದೆ. ಇದೀಗ ಬಾಕಿ ಉಳಿದಿರುವ 1,00,565 ಅರ್ಜಿಗಳಿಗೆ ಹೊಸ ರೇಷನ್ ಕಾರ್ಡ್ ನೀಡಲು ತಯಾರಿ ನಡೆಸಿದೆ.
ರೇಷನ್ ಕಾರ್ಡ್ ಮಿತಿ ತಿದ್ದುಪಡಿಗೆ ಪ್ರಸ್ತಾವನೆ
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (NFSA) ಅಡಿಯಲ್ಲಿ ಬಿಪಿಎಲ್ ಹಾಗೂ ಎಎವೈ (ಅಂತ್ಯೋದಯ ಅನ್ನ ಯೋಜನೆ) ಫಲಾನುಭವಿಗಳ ಉಚಿತ ಆಹಾರ ವಿತರಣೆಗೋಸ್ಕರ ಕೇಂದ್ರ ಸರ್ಕಾರ ರಾಜ್ಯಗಳಿಗೆ ಗರಿಷ್ಠ ಮಿತಿ ನಿಗದಿಪಡಿಸಿದೆ. ಕರ್ನಾಟಕಕ್ಕೆ 4.02 ಕೋಟಿ ಫಲಾನುಭವಿಗಳ ಮಿತಿ ನಿಗದಿಪಡಿಸಲಾಗಿದೆ.
ಆದರೆ, ಈ ಮಿತಿಯು 2011ರ ಜನಗಣತಿಯ ಮೇಲೆ ಆಧಾರಿತವಾಗಿದ್ದು; ಈಗಿನ ಜನಸಂಖ್ಯೆಗೆ ಅನುಗುಣವಾಗಿಲ್ಲ. 2025ರ ಸಮೀಕ್ಷೆಯ ಅನ್ವಯ ಫಲಾನುಭವಿಗಳ ಸಂಖ್ಯೆ 4.60 ಕೋಟಿಗೂ ಮೀರುವ ಸಾಧ್ಯತೆ ಇದೆ. ಹೀಗಾಗಿ ಈಗಾಗಲೇ ಈ ಕುರಿತು ಕೇಂದ್ರಕ್ಕೆ ತಿದ್ದುಪಡಿ ಮಾಡಲು ಹೊಸ ಪ್ರಸ್ತಾವವನ್ನು ಸಲ್ಲಿಸಲಾಗಿದೆ.
ಅನರ್ಹ ಕಾರ್ಡುಗಳ ಪರಿಷ್ಕರಣೆ
2023ರ ಸೆಪ್ಟೆಂಬರ್ 16ರಂದು ರಾಜ್ಯ ಆರ್ಥಿಕ ಇಲಾಖೆ ಹೊರಡಿಸಿದ ಆದೇಶದಂತೆ, ಹೊಸ ಕಾರ್ಡುಗಳನ್ನು ನೀಡುವುದಕ್ಕಿಂತ ಮೊದಲು ಅನರ್ಹ ಬಿಪಿಎಲ್ ಪಡಿತರ ಚೀಟಿಗಳನ್ನು ಗುರುತಿಸಿ ರದ್ದುಪಡಿಸುವುದು ಕಡ್ಡಾಯವೆಂಬ ಷರತ್ತು ವಿಧಿಸಲಾಯಿತು. ಈ ಹಿನ್ನೆಲೆ 2024-25ರಲ್ಲಿ 3.81 ಲಕ್ಷ ಬಿಪಿಎಲ್ ಪಡಿತರ ಚೀಟಿಗಳನ್ನು ಅನರ್ಹ ಎಂದು ಗುರುತಿಸಿ, ಅವುಗಳನ್ನು ಎಪಿಎಲ್ ಕಾರ್ಡುಗಳಾಗಿ ಪರಿವರ್ತಿಸಲಾಗಿದೆ.
ಈ ನಿರ್ಧಾರದಿಂದ ಸಾರ್ವಜನಿಕರ ಅಸಮಾಧಾನ ಭುಗಿಲೆದ್ದಿದ್ದು, ಆದಾಯ ತೆರಿಗೆ ಪಾವತಿದಾರರು (55,713) ಹಾಗೂ ಸರ್ಕಾರಿ ನೌಕರರು (2,300) ಹೊರತುಪಡಿಸಿ ಉಳಿದ 3.23 ಲಕ್ಷ ಬಿಪಿಎಲ್ ಕಾರ್ಡುಗಳನ್ನು ಮತ್ತೆ ಎಪಿಎಲ್ ಕಾರ್ಡುಳಾಗಿ ಪರಿಗಣಿಸಲು ಆಹಾರ ಇಲಾಖೆ ಬಲವಂತವಾಗಿ ಮುಂದಾಯಿತು.
ಹೊಸ ಕಾರ್ಡ್ ವಿತರಣೆಗೆ ಹೆಚ್ಚಿದ ಒತ್ತಡ
ಹೊಸ ರೇಷನ್ ಕಾರ್ಡ್ ವಿತರಿಸುವಂತೆ ವಿಧಾನಮಂಡಲ ಅಧಿವೇಶನಗಳಲ್ಲಿ ಶಾಸಕರು ಮತ್ತು ಸಚಿವರು ಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ಸಾರ್ವಜನಿಕ ಒತ್ತಡವೂ ಹೆಚ್ಚಾಗಿದೆ. ಹೀಗಾಗಿ, ಆಹಾರ ಸಚಿವರು ಆಹಾರ ಇಲಾಖೆಯ ಕಾರ್ಯದರ್ಶಿಗೆ ಬರೆದಿರುವ ಟಿಪ್ಪಣಿಯಲ್ಲಿ, ಸಚಿವ ಸಂಪುಟದ ಮುಂದಿನ ಸಭೆಯಲ್ಲಿ ಈ ವಿಷಯಕ್ಕೆ ಅನುಮೋದನೆ ಪಡೆದು ಹೊಸ ಪಡಿತರ ಚೀಟಿ ಅರ್ಜಿಗಳನ್ನು ಆಹ್ವಾನಿಸುವಂತೆ ಸೂಚನೆ ನೀಡಿದ್ದಾರೆ.
ಆಹಾರ ಸಚಿವರ ಅಭಿಪ್ರಾಯದ ಪ್ರಕಾರ, ‘ಹೊಸದಾಗಿ ಮದುವೆಯಾಗಿ ಕುಟುಂಬ ವಿಭಜನೆಯಾಗುವ ಸಂದರ್ಭಗಳಲ್ಲಿ ಹೊಸ ಕಾರ್ಡು ಅಗತ್ಯವಿದೆ. ಇಂಥವರಿಗೆ ಹೊಸ ಪಡಿತರ ಚೀಟಿಗಳನ್ನು ನೀಡಿದರೆ ಕಾರ್ಡುಗಳ ಸಂಖ್ಯೆ ಹೆಚ್ಚಾಗಬಹುದೇ ಹೊರತು ಫಲಾನುಭವಿಗಳ ಸಂಖ್ಯೆ ಹೆಚ್ಚಾಗುವುದಿಲ್ಲ. ಇದರಿಂದ ಆರ್ಥಿಕ ಭಾರ ಬೀಳುವುದಿಲ್ಲ.
ಲೈಂಗಿಕ ಅಲ್ಪಸಂಖ್ಯಾತರು, ಕೊಳೆಗೇರಿ ನಿವಾಸಿಗಳು, ತುರ್ತು ವೈದ್ಯಕೀಯ ಅವಶ್ಯಕತೆ ಹೊಂದಿರುವವರು, ಸಫಾಯಿ ಕಾರ್ಮಿಕರು ಮತ್ತು ಇನ್ನಿತರೆ ಅತೀ ಬಡ ಕುಟುಂಬಗಳು ಪಡಿತರ ಚೀಟಿಯಿಲ್ಲದೆ ಸರ್ಕಾರದ ಹಲವಾರು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇದರಿಂದಾಗಿ ಹೊಸ ರೇಷನ್ ಕಾರ್ಡ್ ವಿತರಣೆ ಮಾಡಲೇ ಬೇಕಾದ ಪರಿಸ್ಥಿತಿ ಎದುರಾಗಿದೆ.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.