ಜೂನ್ 1ರಿಂದ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಮಹತ್ವದ ಬದಲಾವಣೆಯಾಗಲಿದ್ದು; ರಜಾದಿನಗಳಲ್ಲೂ ಆಸ್ತಿ ನೋಂದಣಿ (Sub Registrar Weekend Property Registration) ಮಾಡಬಹುದು. ಈ ಕುರಿತ ಮಾಹಿತಿ ಇಲ್ಲಿದೆ…
ರಾಜ್ಯದಲ್ಲಿ ಆಸ್ತಿ ನೋಂದಣಿಯ ಕಾರ್ಯವ್ಯವಹಾರಗಳು ಇನ್ನುಮುಂದೆ ಹೆಚ್ಚು ಸರಳವಾಗಲಿವೆ. ಹೌದು, ಕರ್ನಾಟಕ ಸರ್ಕಾರದ ಮಹತ್ವದ ನಿರ್ಧಾರದಂತೆ ಉಪ ನೋಂದಣಿ ಕಚೇರಿಗಳ ಕಾರ್ಯನಿರ್ವಹಣಾ ಸಮಯದಲ್ಲಿ ದೊಡ್ಡ ಬದಲಾವಣೆ ಮಾಡಲಾಗಿದೆ.
ಈಗವರೆಗೆ 2ನೇ ಶನಿವಾರ, 4ನೇ ಶನಿವಾರ ಮತ್ತು ಭಾನುವಾರಗಳನ್ನು ರಜಾ ದಿನಗಳಾಗಿ ಪರಿಗಣಿಸಲಾಗುತ್ತಿತ್ತು. ಆದರೆ 2025ರ ಜೂನ್ 1ರಿಂದ ಈ ದಿನಗಳಲ್ಲಿಯೂ ಸಹ ಸಬ್ ರಿಜಿಸ್ಟ್ರಾರ್ ಕಚೇರಿಗಳು ಕಾರ್ಯನಿರ್ವಹಿಸಲಿವೆ.
ಯಾವ ಕಚೇರಿಗಳಿಗೆ ಈ ನಿಯಮ ಅನ್ವಯ?
ಈ ನಿಯಮವು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿರುವ ಒಟ್ಟು 257 ಉಪ ನೋಂದಣಿ ಕಚೇರಿಗಳಿಗೆ ಅನ್ವಯಿಸುತ್ತದೆ. ರಾಜ್ಯದ ಎಲ್ಲಾ ತಾಲೂಕು ಮಟ್ಟದ ಕಚೇರಿಗಳನ್ನು ಒಳಗೊಂಡಿರುತ್ತದೆ. ಎಲ್ಲ ಕಚೇರಿಗಳು ಈ ಹೊಸ ಪದ್ಧತಿಗೆ ಒಳಪಟ್ಟು ಕಾರ್ಯನಿರ್ವಹಿಸಬೇಕೆಂದು ಸರ್ಕಾರ ನಿರ್ದೇಶನ ನೀಡಿದೆ.
ಈ ಕುರಿತು ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕ ಆಯುಕ್ತರು ದಿನಾಂಕ 20-05-2025ರಂದು ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ್ದಾರೆ. ಸದರಿ ಅಧಿಸೂಚನೆ ಉಲ್ಲೇಖಿಸಿ ಇದೀಗ ಉಪ ನೋಂದಣಿ ಕಚೇರಿಗಳಿಗೆ ಜ್ಞಾಪನ ಪತ್ರ ಹೊರಡಿಸಿದ್ದಾರೆ. ಅಧಿಸೂಚನೆಯ ಪ್ರಕಾರ ಈ ಕೆಳಗಿನ ಮುಖ್ಯ ಅಂಶಗಳನ್ನು ಸರ್ಕಾರ ಸ್ಪಷ್ಟಪಡಿಸಿದೆ:
- 2ನೇ ಶನಿವಾರ, 4ನೇ ಶನಿವಾರ ಮತ್ತು ಭಾನುವಾರಗಳು ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ಕಾರ್ಯದಿನಗಳಾಗಲಿವೆ.
- ಈ ದಿನಗಳಲ್ಲಿ ಸಾರ್ವಜನಿಕರು ತಮ್ಮ ಆಸ್ತಿ ದಾಖಲೆಗಳನ್ನು ನೋಂದಾಯಿಸಿಕೊಳ್ಳಲು ಅನುಮತಿಸಲಾಗುತ್ತದೆ.
- ಈ ಹೊಸ ನಿಯಮವು 01-06-2025 ರಿಂದ 28-12-2025ರ ವರೆಗೆ ಪ್ರಯೋಗಾತ್ಮಕವಾಗಿ ಜಾರಿಯಾಗುತ್ತದೆ.

ಮಂಗಳವಾರ ರಜಾ ದಿನ
ರಜಾದಿನಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಉಪನೋಂದಣಿ ಕಚೇರಿಗಳಿಗೆ ಮುಂದಿನ ಮಂಗಳವಾರ ರಜಾ ದಿನವೆಂದು ಘೋಷಿಸಲಾಗಿದೆ. ಉದಾಹರಣೆಗೆ, ಒಂದು ಕಚೇರಿ ಭಾನುವಾರ ಕಾರ್ಯನಿರ್ವಹಿಸಿದರೆ, ಅದೇ ವಾರದ ಮಂಗಳವಾರ ಆ ಕಚೇರಿ ಮುಚ್ಚಿರುತ್ತದೆ. ಇದರಿಂದ ಸಿಬ್ಬಂದಿಗಳಿಗೆ ಸಮತೋಲಿತ ಕಾರ್ಯ ಸಮಯ ಸಿಗಲಿದೆ ಹಾಗೂ ಸಾರ್ವಜನಿಕರಿಗೂ ಕೆಲಸಕ್ಕೆ ಅಡಚಣೆ ಆಗುವುದಿಲ್ಲ.
ಎನಿವೇರ್ ನೋಂದಣಿ ವ್ಯವಸ್ಥೆಯ ಸದುಪಯೋಗ
ಈ ನಿಯಮದ ಪರಿಣಾಮವಾಗಿ, ಎನಿವೇರ್ ನೋಂದಣಿ ವ್ಯವಸ್ಥೆ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ. ಈ ವ್ಯವಸ್ಥೆಯಂತೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಯಾವುದೇ ಉಪ ನೋಂದಣಿ ಕಚೇರಿಯಲ್ಲಿ, ಜಿಲ್ಲೆಯೊಳಗಿನ ಯಾವುದೇ ಆಸ್ತಿ ನೋಂದಾಯಿಸಬಹುದಾಗಿದೆ.
ಈ ಮೂಲಕ ಸಾರ್ವಜನಿಕರಿಗೆ ಸ್ಥಳ ನಿರ್ಬಂಧ ಇಲ್ಲದೆ, ಯಾವುದೇ ಹತ್ತಿರದ ಕಚೇರಿಯಲ್ಲಿ ಹಾಜರಾಗಿ ದಾಖಲೆಗಳನ್ನು ನೋಂದಾಯಿಸುವ ಅನುಕೂಲ ಒದಗುತ್ತದೆ.

ಈ ಹೊಸ ನಿಯಮದ ಪ್ರಯೋಜನಗಳು
- ರಜಾದಿನದಲ್ಲೂ ನೋಂದಣಿ ಕಾರ್ಯ ಸಾಧ್ಯವಾಗುವುದರಿಂದ ಹೆಚ್ಚು ಜನರಿಗೆ ಅನುಕೂಲವಾಗಲಿದೆ.
- ಅತ್ಯವಶ್ಯಕ ಸೇವೆಗಳ ಲಭ್ಯತೆ, ಬೇಡಿಕೆ ಹೆಚ್ಚಿರುವ ದಿನಗಳಲ್ಲಿ ಸೇವೆ ನಿರ್ವಹಣೆ ಸುಗಮವಾಗುತ್ತದೆ
- ಇತರ ಕಚೇರಿ ಕೆಲಸದ ದಿನಗಳಲ್ಲಿ ಸಮಯ ಸಿಗದವರಿಗೆ ಶನಿವಾರ/ಭಾನುವಾರ ಸದಾವಕಾಶ ಸಿಗುತ್ತದೆ
- ಈ ವ್ಯವಸ್ಥೆಯಿಂದನ ‘ಎನಿವೇರ್’ ನೋಂದಣಿ ವ್ಯವಸ್ಥೆಗೆ ಹೆಚ್ಚಿನ ಬಲ ಸಿಗಲಿದೆ
ಕರ್ನಾಟಕ ಸರ್ಕಾರದ ಈ ಹೊಸ ಕ್ರಮವು ಸರಳವಾದ ಆಸ್ತಿ ನೋಂದಣಿಯತ್ತ ಒಂದು ಮಹತ್ವದ ಹೆಜ್ಜೆಯಾಗಿದ್ದು, ಸಾರ್ವಜನಿಕರಿಗೆ ಸುಲಭ ಹಾಗೂ ವೇಗದ ಸೇವೆಯನ್ನು ಒದಗಿಸಲು ಸಹಕಾರಿಯಾಗಿದೆ. ಇದರ ಮೂಲಕ ಭವಿಷ್ಯದಲ್ಲಿ ಡಿಜಿಟಲ್ ಇಂಡಿಯಾ ಹೋರಾಟದ ಭಾಗವಾಗಿ ಹೆಚ್ಚು ಸೌಕರ್ಯಯುತ ಸೇವೆಗಳು ಇನ್ನಷ್ಟು ಮುಂದುವರೆಯಬಹುದು.