ಕೋವಿಡ್ (Covid-19) ಆತಂಕದ ನಡುವೆ ಶಾಲೆ ಆರಂಭಕ್ಕೆ (School Start 2025) ಸಿದ್ಧತೆ ನಡೆದಿದೆ. ಈ ಬಗ್ಗೆ ಶಿಕ್ಷಣ ಇಲಾಖೆ ಸೂಚನೆ ಏನು? ಆರೋಗ್ಯ ಇಲಾಖೆ ಎಚ್ಚರಿಕೆ ಕ್ರಮಗಳೇನು? ಈ ಕುರಿತ ಮಾಹಿತಿ ಇಲ್ಲಿದೆ…
ಎರಡು ತಿಂಗಳ ಬೇಸಿಗೆ ರಜೆಯ ನಂತರ ಮಕ್ಕಳಿಗೆ ಪುನಃ ಪಠ್ಯ ಚಟುವಟಿಕೆಗಳು ಆರಂಭವಾಗುತ್ತಿವೆ. ರಾಜ್ಯದ ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಮೇ 29ರಿಂದ 2025-26ನೇ ಶೈಕ್ಷಣಿಕ ವರ್ಷವನ್ನು ಪ್ರಾರಂಭಿಸಲಿವೆ. ಆದರೆ ಈ ಬಾರಿ ಶಾಲೆ ಆರಂಭದ ಸಮಯಕ್ಕೆ ಸರಿಯಾಗಿ ಕೊರೋನಾ ವಾತಾವರಣ ಉಂಟಾಗಿರುವುದು ಆತಂಕ ಸೃಷ್ಟಿಸಿದೆ.
Rohini Rain- ಮೇ 25ರಿಂದ ರಾಜ್ಯದಲ್ಲಿ ರೋಹಿಣಿ ಮಳೆ ಆರ್ಭಟ | ಈ ಜಿಲ್ಲೆಗಳಿಗೆ ರೆಡ್ ಅಲರ್ಟ್
ಶಿಕ್ಷಣ ಇಲಾಖೆಯ ಸೂಚನೆಗಳೇನು?
ರಾಜ್ಯ ಶಿಕ್ಷಣ ಇಲಾಖೆಯು ಶಾಲೆ ಪ್ರಾರಂಭದ ಮೊದಲ ದಿನ ‘ಶಾಲಾ ಪ್ರಾರಂಭೋತ್ಸವ’ ಆಚರಿಸುವಂತೆ ಸೂಚನೆ ನೀಡಿದ್ದು, ಎಲ್ಲ ಶಿಕ್ಷಕರೂ ಇದರಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂಬ ಆದೇಶವಿದೆ. ಮಕ್ಕಳಿಗೆ ಆತ್ಮೀಯವಾದ ಆತಿಥ್ಯ ನೀಡಿ, ಹೊಸದಾಗಿ ದಾಖಲಾತಿಗೆ ಬರುವ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸುವ ಕಾರ್ಯದಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕು ಎಂದು ಇಲಾಖೆ ತಿಳಿಸಿದೆ.
ದಾಖಲಾತಿಯ ಗುರಿ: ಶಾಲಾ ಪ್ರಾರಂಭ ದಿನಾಂಕದಿಂದಲೇ ಮಕ್ಕಳ ದಾಖಲಾತಿ ಪ್ರಕ್ರಿಯೆ ಆರಂಭವಾಗಿ ಜೂನ್ 30ರೊಳಗೆ ಮುಗಿಯಬೇಕು. ಶಿಕ್ಷಣ ಇಲಾಖೆಯು ಈ ಬಾರಿಗೆ ಕೂಡ ಹೆಚ್ಚಿನ ಮಕ್ಕಳನ್ನು ಸರಕಾರಿ ಶಾಲೆಗಳತ್ತ ಆಕರ್ಷಿಸುವ ಗುರಿಯನ್ನು ಹೊಂದಿದೆ.
ಸೌಲಭ್ಯಗಳ ಪೂರೈಕೆ: ಮಧ್ಯಾಹ್ನದ ಬಿಸಿಯೂಟ, ಕ್ಷೀರಭಾಗ್ಯ, ಪಠ್ಯಪುಸ್ತಕಗಳು, ಉಚಿತ ಸಮವಸ್ತ್ರಗಳ ವಿತರಣೆ ಮೊದಲಾದ ಸೌಲಭ್ಯಗಳನ್ನು ಸಮಯಕ್ಕೆ ತಕ್ಕಂತೆ ನೀಡುವ ವ್ಯವಸ್ಥೆಯನ್ನು ಜಿಲ್ಲಾಧಿಕಾರಿಗಳು ಹಾಗೂ ಶಾಲಾ ಆಡಳಿತ ಮಂಡಳಿಗಳು ಒದಗಿಸಬೇಕು ಎಂದು ಸೂಚಿಸಲಾಗಿದೆ.

ಆರೋಗ್ಯ ಸಚಿವರ ಮಾಹಿತಿ
ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಕೋವಿಡ್-19 J-1 ಉಪತಳಿ ಚಟುವಟಿಕೆ ತೀವ್ರಗೊಂಡಿರುವ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆ ಎಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದೆ. ನಿನ್ನೆ ಮೇ 25ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ‘ಈ ಉಪತಳಿ ತೀವ್ರತೆ ಹೊಂದಿಲ್ಲವಾದರೂ, ಮುಂದಿನ ಮೂರಾಲ್ಕು ದಿನಗಳ ಕಾಲ ಸೋಂಕಿನ ಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸೋಂಕಿಗೆ ಒಂದು ಸಾವು
ಮೇ 24ರಂದು ಬೆಂಗಳೂರಿನಲ್ಲಿ 84 ವರ್ಷದ ವೃದ್ಧರೊಬ್ಬರು ಕೋವಿಡ್ ಸೋಂಕಿನಿAದ ಮೃತಪಟ್ಟಿರುವುದಾಗಿ ವರದಿಯಾಗಿದೆ. ಆದರೆ ಅವರಿಗೆ ಹೃದಯದ ಸಮಸ್ಯೆ, ಕ್ಷಯರೋಗ ಹಾಗೂ ಹಿಪ್ ಶಸ್ತ್ರಚಿಕಿತ್ಸೆಗೊಂಡಿದ್ದ ಹಿನ್ನಲೆ ಇದ್ದ ಕಾರಣ, ಅವರ ಮರಣಕ್ಕೆ ನಿಖರವಾಗಿ ಕೋವಿಡ್ ಕಾರಣವೋ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.
ರಾಜ್ಯ ಆರೋಗ್ಯ ಇಲಾಖೆ ಕೇಂದ್ರ ಆರೋಗ್ಯ ಇಲಾಖೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ದೇಶದ ಇತರ ಭಾಗಗಳಲ್ಲೂ ಈ ಉಪತಳಿಯ ಪರಿಣಾಮಗಳ ಬಗ್ಗೆ ಅವಲೋಕನೆ ನಡೆಸುತ್ತಿದೆ. ರಾಜ್ಯದಲ್ಲಿ ವಿಶೇಷ ನಿರ್ಬಂಧಗಳು ಅಥವಾ ಲಾಕ್‌ಡೌನ್‌ಗೆ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದು, ಶಾಲೆಗಳು ಆರಂಭವಾಗಲು ಯಾವುದೇ ಅಡಚಣೆಗಳಿಲ್ಲವೆಂದು ಅಭಯ ನೀಡಲಾಗಿದೆ.
ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರ ಆತಂಕ
ಮಕ್ಕಳು ಮತ್ತೆ ಶಾಲೆಗೆ ಹೋಗಲು ಸಜ್ಜಾಗುತ್ತಿರುವಾಗ, ಹಲವಾರು ಪೋಷಕರು ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ಚಿಂತೆ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯ ಕೋವಿಡ್ ನಿಯಂತ್ರಣ ಸಲಹಾ ಸಮಿತಿಗೆ ಪ್ರತಿವಾರ ಸಭೆ ನಡೆಸುವಂತೆ ಸೂಚನೆ ನೀಡಲಾಗಿದೆ. ದೇಶ ಹಾಗೂ ರಾಜ್ಯದಲ್ಲಿ ಸೋಂಕಿನ ಹರಡುವಿಕೆ ಬಗ್ಗೆ ನಿಗಾ ವಹಿಸಲು ವ್ಯವಸ್ಥೆ ಜಾರಿಯಲ್ಲಿದೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.
ಈಗಾಗಲೇ ರಾಜ್ಯದ ಗಡಿಭಾಗಗಳಲ್ಲಿ ಕೇರಳದ ಪ್ರಭಾವವನ್ನು ಗಮನದಲ್ಲಿಟ್ಟುಕೊಂಡು ಪರಿಶೀಲನೆ ನಡೆಯುತ್ತಿದೆ. ಆದರೆ ರಾಜ್ಯದಲ್ಲಿ ಯಾವುದೇ ರೀತಿಯ ಗಡಿ ಪ್ರವಾಸ ನಿರ್ಬಂಧ ಅಥವಾ ಸಾಮಾಜಿಕ ಚಟುವಟಿಕೆಗಳ ಮೇಲೆ ನಿಯಂತ್ರಣ ಇಲ್ಲ. ಆದರೆ ಪರಿಸ್ಥಿತಿ ಕೈ ಮೀರುತ್ತಿದ್ದರೆ, ತಕ್ಷಣ ಕ್ರಮ ಕೈಗೊಳ್ಳಲು ಎಲ್ಲಾ ಜಿಲ್ಲಾಧಿಕಾರಿಗಳು ಸಜ್ಜಾಗಿರಬೇಕು ಎಂಬ ಸೂಚನೆ ನೀಡಲಾಗಿದೆ.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.