National Means Com-Merit Scholarship Scheme : 8ನೇ ತರಗತಿಯಿಂದ 12 ತರಗತಿ ವರೆಗೆ ಓದುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೇಂದ್ರ ಸರಕಾರ ಪ್ರತಿ ವರ್ಷ 12,000 ರೂಪಾಯಿ ವಿದ್ಯಾರ್ಥಿವೇತನ ನೀಡಲು ಅರ್ಜಿ ಆಹ್ವಾನಿಸಿದೆ. ಕೇಂದ್ರ ಸರಕಾರದ ನ್ಯಾಷನಲ್ ಮೀನ್ಸ್ ಕಂ-ಮೆರಿಟ್ ಸ್ಕಾಲರ್‌ಶಿಪ್ ಯೋಜನೆಯು (National Means Com-Merit Scholarship Scheme- NMMSS) ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವರದಾನವಾಗಿದೆ.
1,827 ಕೋಟಿ ರೂಪಾಯಿ ಅನುದಾನ
ಭಾರತದಲ್ಲಿ ಒಟ್ಟು ಒಂದು ಲಕ್ಷ ವಿದ್ಯಾರ್ಥಿಗಳಿಗೆ ಈ ಸ್ಕಾಲರ್‌ಶಿಪ್ ನೀಡಲಾಗುತ್ತದೆ. ಇದಕ್ಕಾಗಿ ಕೇಂದ್ರ ಸರಕಾರವು 2021-22 ರಿಂದ 2025-26 ಸಾಲಿನ ವರೆಗೆ ಈ ಯೋಜನೆಯನ್ನು ಮುಂದುವರಿಸಲು ಅನುಮೋದನೆ ನೀಡಿದ್ದು; ಒಟ್ಟು 1,827 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ.
ಒಟ್ಟು ಮಕ್ಕಳ 3ನೇ ಒಂದು ಭಾಗವನ್ನು ಅರ್ಹತೆಯಾಗಿ ಪರಿಗಣಿಸಿ ಆಯಾ ರಾಜ್ಯಕ್ಕೆ ಸ್ಕಾಲರ್‌ಶಿಪ್ ಸಂಖ್ಯೆ ನಿಗದಿ ಮಾಡಲಾಗುತ್ತದೆ. ಮೀಸಲಾತಿ ನಿಯಮಗಳ ಅನ್ವಯ ಕರ್ನಾಟಕ ರಾಜ್ಯದಲ್ಲಿ 5,534 ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.
ಎಷ್ಟು ಸಿಗುತ್ತದೆ ವಿದ್ಯಾರ್ಥಿವೇತನ?
ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರತಿವರ್ಷ 12,000 ರೂಪಾಯಿಗಳನ್ನು ಶಿಷ್ಯವೇತನವಾಗಿ ನೀಡಲಾಗುತ್ತದೆ. 9ನೇ ತರಗತಿಯಿಂದ 12ನೇ ತರಗತಿಯ ವರೆಗೂ ನಾಲ್ಕು ವರ್ಷಗಳ ತನಕ ಈ ಶಿಷ್ಯವೇತನ ಸಿಗಲಿದೆ. ಹಣವನ್ನು ಫಲಾನುಭವಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರ ವರ್ಗಾವಣೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರು?
- ನ್ಯಾಷನಲ್ ಮೀನ್ಸ್ ಕಂ-ಮೆರಿಟ್ ಸ್ಕಾಲರ್‌ಶಿಪ್ ಯೋಜನೆಗೆ ಸರ್ಕಾರಿ, ಅನುದಾನಿತ ಹಾಗೂ ಸ್ಥಳೀಯ ಸಂಸ್ಥೆಗಳ ಶಾಲೆಗಳಲ್ಲಿ 8ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ವಿದ್ಯಾರ್ಥಿಗಳ ಪಾಲಕರ ಆದಾಯ ವಾರ್ಷಿಕ 3.50 ಲಕ್ಷ ರೂಪಾಯಿಮಿತಿಯಲ್ಲಿರಬೇಕು.
- 7ನೇ ತರಗತಿಯಲ್ಲಿ ಕನಿಷ್ಠ ಶೇ.55 ಅಂಕಗಳನ್ನು ಗಳಿಸಿರಬೇಕು. ಪರಿಶಿಷ್ಟ ವಿದ್ಯಾರ್ಥಿಗಳು ಶೇ.50 ಅಂಕ ಪಡೆದಿರಬೇಕು. ರೆಗ್ಯುಲರ್ ವಿದ್ಯಾರ್ಥಿಯಾಗಿ ವಿದ್ಯಾಭ್ಯಾಸವನ್ನು ಮುಂದುವರಿಸಿರಬೇಕು.
- ಕೇ೦ದ್ರೀಯ ವಿದ್ಯಾಲಯ, ನವೋದಯ ಶಾಲೆ, ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ನಡೆಸಲಾಗುವ ವಸತಿ ಶಾಲೆಗಳಲ್ಲಿ ಪ್ರವೇಶ ಪಡೆದವರು ಈ ಸ್ಕಾಲರ್‌ಶಿಪ್‌ಗೆ ಅರ್ಹರಲ್ಲ.
- 9ನೇ ತರಗತಿಯಲ್ಲಿ ಶಿಷ್ಯವೇತನ ಪಡೆದವರು 10ನೇ ತರಗತಿಯಲ್ಲೂ ಶಿಷ್ಯ ವೇತನ ಪಡೆಯಬೇಕಾದರೆ ಎಸ್‌ಎಸ್‌ಎಲ್‌ಸಿಯಲ್ಲಿ ಕನಿಷ್ಠ ಶೇ.60 ಅಂಕಗಳನ್ನು ಪಡೆದಿರಬೇಕು.
ವಿದ್ಯಾರ್ಥಿಗಳನ್ನು ಹೇಗೆ ಆಯ್ಕೆ ಮಡಲಾಗುತ್ತದೆ?
ನ್ಯಾಷನಲ್ ಮೀನ್ಸ್ ಕಂ-ಮೆರಿಟ್ ಸ್ಕಾಲರ್‌ಶಿಪ್ ಯೋಜನೆಗೆ ಅರ್ಹರನ್ನು ಆಯ್ಕೆ ಮಾಡಲು ಆಯಾ ರಾಜ್ಯ ಸರ್ಕಾರಗಳು ಪರೀಕ್ಷೆ ನಡೆಸುತ್ತವೆ. ಈ ಪರೀಕ್ಷೆಯಲ್ಲಿ ಸಾಮಾನ್ಯ ಅಭ್ಯರ್ಥಿಗಳು ಶೇ.40 ಅಂಕ, ಪರಿಶಿಷ್ಟ ಸಮುದಾಯಗಳ ವಿದ್ಯಾರ್ಥಿಗಳು ಶೇ.32 ಅಂಕ ಗಳಿಸಿ ಅರ್ಹತೆ ಪಡೆದವರು ಸ್ಕಾಲರ್‌ಶಿಪ್ ಪಡೆಯಲು ಅರ್ಹರಾಗಿರುತ್ತಾರೆ.
ವಿದ್ಯಾರ್ಥಿಗಳ ಮೆಂಟಲ್ ಎಬಿಲಿಟಿ ಟೆಸ್ಟ್ ಹಾಗೂ ಸ್ಕಾಲಸ್ಟಿಕ್ ಎಬಿಲಿಟಿ ಟೆಸ್ಟ್ ನಡೆಸಲಾಗುತ್ತದೆ. ಈ ಎರಡೂ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗಬೇಕಿದೆ. ಮೊದಲನೇ ಪರೀಕ್ಷೆಯಲ್ಲಿ 90 ವಸ್ತುನಿಷ್ಠ, ಬಹು ಆಯ್ಕೆ ಮಾದರಿಯ ಪ್ರಶ್ನೆಗಳಿರುತ್ತವೆ. ಎರಡನೇ ಪರೀಕ್ಷೆಯಲ್ಲಿ ವಿಜ್ಞಾನ, ಸಮಾಜ ವಿಜ್ಞಾನ ಹಾಗೂ ಗಣಿತ ವಿಷಯಕ್ಕೆ ಸಂಬ೦ಧಿಸಿದ 90 ಪ್ರಶ್ನೆಗಳಿರುತ್ತವೆ. ಪ್ರತಿ ಪರೀಕ್ಷೆಗೆ 90 ನಿಮಿಷಗಳ ಕಾಲಾವಕಾಶ ನೀಡಲಾಗಿರುತ್ತದೆ.
ನೋಂದಣಿ ಹೇಗೆ ಮಾಡುವುದು?
ಅರ್ಹ ವಿದ್ಯಾರ್ಥಿಗಳಿಗೆ ನ್ಯಾಷನಲ್ ಸ್ಕಾಲರ್‌ಶಿಪ್ ಪೋರ್ಟಲ್‌ನಲ್ಲಿ (National Scholarship Portal) ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಒಂದು ಬಾರಿಯ ನೋಂದಣಿಯನ್ನು ಮಾಡಿಕೊಳ್ಳಬೇಕಿದೆ. ಹೊಸದಾಗಿ ನೋಂದಣಿ ಹಾಗೂ ನೋಂದಣಿ ನವೀಕರಣಕ್ಕೂ ಇದು ಅನ್ವಯಿಸಲಿದೆ. ವಿದ್ಯಾರ್ಥಿಗಳ ಆಧಾರ್ ಸಂಖ್ಯೆ ಆಧರಿಸಿ ಅವರಿಗೆ ನೋಂದಣಿ ಸಂಖ್ಯೆಯನ್ನು ನೀಡಲಾಗುತ್ತದೆ. ಅದನ್ನು ಬಳಸಿಕೊಂಡು ಅವರ ಅರ್ಜಿ ಸಂಖ್ಯೆ ಸೃಷ್ಟಿಯಾಗಲಿದೆ. ಈ ಮೂಲಕ ಒಂದೇ ನೋಂದಣಿಗೆ ಒಂದಕ್ಕಿ೦ತ ಹೆಚ್ಚು ಅರ್ಜಿಗಳು ಇರದಂತೆ ನೋಡಿಕೊಳ್ಳಲಾಗುತ್ತದೆ.
ನೋಂದಣಿಗೆ ಕೊನೆಯ ದಿನಾಂಕ : 31-08-2024
ನೋಂದಣಿ ಲಿಂಕ್: Apply Now
Scholer Shep