ರೈತರಿಗೆ ಸಿಗುವ ತೋಟಗಾರಿಕೆ ಇಲಾಖೆ ಸಬ್ಸಿಡಿ ಯೋಜನೆಗಳು Horticulture Department Subsidy Schemes

Spread the love

Horticulture Department Subsidy Schemes : ಬಹುವಾರ್ಷಿಕ ಬೆಳೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆಯ ಜೊತೆಗೆ ತೋಟಗಾರಿಕೆ ಇಲಾಖೆ (Horticulture Department) ಕೂಡ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಇಲಾಖೆಯ ಸಬ್ಸಿಡಿ ಸೌಲಭ್ಯಗಳ ಪ್ರಯೋಜನವನ್ನು ರೈತರು ಪಡೆದುಕೊಳ್ಳಬಹುದಾಗಿದೆ.

WhatsApp Group Join Now
Telegram Group Join Now

ಈ ಹಿನ್ನಲೆಯಲ್ಲಿ ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಏನೆಲ್ಲ ಯೋಜನೆಗಳಿವೆ? ಅವುಗಳಿಂದ ರೈತರಿಗಾಗುವ ಅನುಕೂಲಗಳೇನು? ಯೋಜನೆಯ ಲಾಭ ಪಡೆಯುವುದು ಹೇಗೆ? ಇತ್ಯಾದಿ ಸಮಗ್ರ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಹನಿ ನೀರಾವರಿ

ಪ್ರತಿ ಫಲಾನುಭವಿ ರೈತನಿಗೆ ಗರಿಷ್ಟ 5 ಹೆಕ್ಟೇರ್ ಅಂದರೆ 15 ಎಕರೆ ಪ್ರದೇಶಕ್ಕೆ ಹಾಗೂ ತರಕಾರಿ ಮತ್ತು ವಾಣಿಜ್ಯ ಹೂವು ಬೆಳೆಗಳಿಗೆ ಗರಿಷ್ಟ 5 ಎಕರೆ ಪ್ರದೇಶಕ್ಕೆ ಹನಿ ನೀರಾವರಿ ಘಟಕ ಅಳವಡಿಕೆಗೆ ಸಹಾಯಧನ ನೀಡಲಾಗುತ್ತದೆ. 10 ಎಕರೆ ಪ್ರದೇಶಕ್ಕೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ರೈತರಿಗೆ ಶೇ.90ರಷ್ಟು ಮತ್ತು ಇತರೆ ವರ್ಗದ ರೈತರಿಗೆ ಶೇ.75 ಸಹಾಯಧನ ನೀಡಲಾಗುತ್ತದೆ.

ನರ್ಸರಿ ಸ್ಥಾಪನೆ

ನರ್ಸರಿಗಳನ್ನು ಯಾರೂ ಬೇಕಾದರು ಮಾಡಬಹುದಾಗಿದೆ. ಗುಣಮಟ್ಟದ ಪ್ರಮಾಣೀಕೃತ ಸಸಿಗಳನ್ನು ಪೂರೈಸುವ ನರ್ಸರಿಗಳಿಗೆ ಸದಾ ಬೇಡಿಕೆ ಇದ್ದೇ ಇದೆ. ನರ್ಸರಿಗಳ ನಿರ್ಮಾಣಕ್ಕೆ ಅಗತ್ಯವಾದ ಸೌಕರ್ಯಗಳಿಗಾಗಿ ಮೂಲ ಶೇ.50ರಷ್ಟು ಪ್ರೋತ್ಸಾಹಧನವನ್ನು ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಸರಕಾರ ಅನುದಾನ ಒದಗಿಸುತ್ತಿದೆ. ಈ ಸೌಲಭ್ಯ ಪಡೆಯಲು ರೈತರು ಕನಿಷ್ಠ 2.5 ಎಕರೆ ಜಮೀನನ್ನು ಹೊಂದಿರಬೇಕು.

ಕೃಷಿ ಯಂತ್ರಗಳ ಖರೀದಿ

ತೋಟಗಾರಿಕೆ ಬೆಳೆಯಲ್ಲಿ ಯಂತ್ರೋಪಕರಣವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಯಂತ್ರೋಪಕರಣಗಳ ಖರೀದಿಗೆ ತೋಟಗಾರಿಕೆ ಇಲಾಖೆಯಿಂದ ಸಬ್ಸಿಡಿ ಸಿಗಲಿದೆ. ಖರೀದಿಸುವ ಯಂತ್ರಗಳಿಗೆ ಅನುಗುಣವಾಗಿ ಶೇ.40 ರಿಂದ 50ರಷ್ಟು ಸಹಾಯಧನ ದೊರೆಯುತ್ತದೆ. ಒಂದು ಕುಟುಂಬದಲ್ಲಿ ಓರ್ವರಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ.

ಅಡಿಕೆ ಒಣಗಿಸುವ ಸೋಲಾರ್ ಘಟಕ

ಪ್ರಕೃತಿದತ್ತವಾಗಿ ದೊರೆಯುವ ಸೂರ್ಯನ ಶಾಖವನ್ನು ಬಳಸಿಕೊಳ್ಳುವ ತಂತ್ರಜ್ಞಾನವಿದು. ಮಳೆಗಾಲದಲ್ಲಿ ಸೂಕ್ತ ತಾಪಮಾನದಲ್ಲಿ ಅಡಿಕೆ ಒಣಗಿಸಲು ಇದು ಸಹಕಾರಿಯಾಗಿದೆ. ದೊಡ್ಡ ಸೋಲಾರ್ ಘಟಕ (Solar Tunnel Dryer) ನಿರ್ಮಿಸುವುದಾದರೆ ಅದಕ್ಕೆ ದೊಡ್ಡ ಮೊತ್ತವು ಬೇಕಾಗುತ್ತದೆ. ಅದರಿಂದಾಗಿ ಒಂದಷ್ಟು ರೈತರು ತಯಾರಿಗೆ ಹಿಂದೇಟು ಹಾಕುತ್ತಾರೆ.

ಈ ಘಟಕ ತಯಾರಿಗೆ ತೋಟಗಾರಿಕಾ ಇಲಾಖೆ ಅನುದಾನವನ್ನು ನೀಡುತ್ತಿದೆ. ಸರಕಾರವು ಕೃಷಿಕರನ್ನು ಪ್ರೋತ್ಸಾಹಿಸಲು 1000 ಕೆ.ಜಿ. ಸಾಮರ್ಥ್ಯದ ಘಟಕ ಅಳವಡಿಕೆಗೆ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ ಗರಿಷ್ಠ 2.28 ಲಕ್ಷ ರೂಪಾಯಿ ಸಬ್ಸಿಡಿ ನೀಡುತ್ತ್ತದೆ. ಈ ಸಹಾಯಧನ ಪಡೆಯಬೇಕೆಂದರೆ ರೈತರು ಕನಿಷ್ಠ 2.5 ಎಕರೆ ಜಮೀನು ಹೊಂದಿರಬೇಕು.

ಶೀತಲೀಕೃತ ಘಟಕಗಳು

ಕೊಲ್ಲೋತ್ತರ ನಿರ್ವಹಣೆ ತೋಟಗಾರಿಕಾ ಬೆಳೆಗಳಲ್ಲಿ ದೊಡ್ಡ ಸವಾಲಿನ ಕೆಲಸ. ಇದಕ್ಕೆ ಶೀತಲೀಕೃತ ಘಟಕಗಳಿದ್ದರೆ ಉತ್ತಮ. ತೋಟಗಾರಿಕಾ ಬೆಳೆಗಳು ಬಹುಬೇಗ ಹಾಳಾಗುವ ಕಾರಣ ಶೀತಲೀಕೃತ ಘಟಕಗಳಲ್ಲಿ ಬೆಳೆಗಳನ್ನು ಸಂಗ್ರಹಿಸಿಟ್ಟು ಮಾರುಟ್ಟೆಯಲ್ಲಿ ಉತ್ತಮ ದರ ಇರುವಾಗ ಮಾರಾಟ ಮಾಡಬಹುದಾಗಿದೆ. ಶೀತಲೀಕೃತ ಘಟಕ ನಿರ್ಮಾಣಕ್ಕೆ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಶೇ. 25 ರಿಂದ 50 ರಷ್ಟು ಸಹಾಯಧನ ಲಭ್ಯವಿದೆ.

ಪ್ಯಾಕ್ ಹೌಸ್ ಸ್ಥಾಪನೆ

ತೋಟಗಾರಿಕಾ ಬೆಳೆಗಳಾದ ಹಣ್ಣು-ಹಂಪಲು, ತರಕಾರಿಗಳ ಪ್ಯಾಕಿಂಗ್ ಸೌಕರ್ಯಗಳಿಗಾಗಿ, ಸಾಗಾಣಿಕೆ ಪೂರ್ವ ಯೋಗ್ಯ ವಾತಾವರಣ ನಿರ್ಮಿಸಿಕೊಂಡು 9 ಮೀಟರ್ ಹಾಗೂ 6 ಮೀಟರ್ ಉದ್ದ, ಅಗಲವನ್ನು ಹೊಂದಿರುವ ಕಟ್ಟಡವನ್ನು ನೀರಿನ ಲಭ್ಯತೆ ಹಾಗೂ ಸಾಗಾಟ ಯೋಗ್ಯ ಸಾಮಗ್ರಿಗಳೊಂದಿಗೆ ನಿರ್ಮಿಸಿದಲ್ಲಿ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ 2 ಲಕ್ಷ ರೂಪಾಯಿವರೆಗೆ ಸಹಾಯಧನ ದೊರೆಯುತ್ತದೆ. ಘಟಕ ರಚಿಸಲು ಆಸಕ್ತರು ಕನಿಷ್ಠ ಒಂದು ಎಕರೆ ಜಮೀನನ್ನು ಹೊಂದಿರಬೇಕು.

Government Schemes for Women : ಮಹಿಳೆಯರಿಗಾಗಿ ಇರುವ ವಿಶೇಷ ಸರಕಾರಿ ಯೋಜನೆಗಳು

ಅಣಬೆ ಬೆಳೆಯಲು ನೆರವು

ಅಣಬೆ ಬೆಳೆಯುವ ಘಟಕ, ಅಣಬೆ ಬೀಜ ಉತ್ಪಾದನೆ ಘಟಕ ತಯಾರಿಗೆ ಶೇ. 40 ರಷ್ಟು ಸಹಾಯಧನ ಲಭ್ಯವಿದೆ. ಬೆಳೆಗಾರರು ಅಣಬೆ ಬೆಳೆಯುವ ಘಟಕ, ಅಣಬೆ ಬೀಜ ಉತ್ಪಾದನಾ ಘಟಕ, ಅಣಬೆ ಕಾಂಪೋಸ್ಟ್ ತಯಾರಿ ಘಟಕ ಹೀಗೆ ಈ ಮೂರು ಘಟಕಗಳನ್ನು ನಿರ್ಮಿಸಿಕೊಳ್ಳಲು ಆಸಕ್ತರಿದ್ದಲ್ಲಿ ಅವುಗಳಿಗೆ ಪ್ರತ್ಯೇಕವಾಗಿ ಸಹಾಯಧನ ಲಭ್ಯವಿದೆ. ಅಣಬೆ ಉತ್ಪಾದನೆಯನ್ನು ಪ್ರೋತ್ಸಾಹಿಸುವ ಹಾಗೂ ಅಣಬೆಯನ್ನು ಪೌಷ್ಟಿಕಾಂಶ ಕೊಡುವ ಆಹಾರವಾಗಿ ಉತ್ತೇಜಿಸುವ ಕೆಲಸವನ್ನು ಸರಕಾರ ಮಾಡುತ್ತಿದೆ.

ಪಾಲಿಹೌಸ್ ನಿರ್ಮಾಣ

ಯಾವುದೇ ಋತುಗಳಲ್ಲೂ ಕೂಡ ಪಾಲಿಹೌಸ್ ಮೂಲಕ ತರಕಾರಿ, ಹೂವು, ಹಣ್ಣುಗಳನ್ನು ಬೆಳೆಯಬಹುದು. ಆದರೆ ಪಾಲಿಮನೆ ತಯಾರಿಗೆ ಸಾಕಷ್ಟು ಖರ್ಚು ತಗಲುತ್ತದೆ. ಪಾಲಿಮನೆ ನಿರ್ಮಾಣದ ಬಗ್ಗೆ ಆಸಕ್ತಿಯುಳ್ಳ ರೈತರಿಗೆ ತೋಟಗಾರಿಕೆ ಇಲಾಖೆ ಘಟಕ ನಿರ್ಮಿಸಲು ಶೇ.50ರ ದರದಲ್ಲಿ ಸಹಾಯಧನವನ್ನು ನೀಡುತ್ತಿದೆ. ಇದಲ್ಲದೇ ಸದರಿ ಘಟಕದೊಳಗೆ ಬೆಳೆಯುವ ತರಕಾರಿ ಮತ್ತು ಹೂವಿನ ಬೆಳೆಗಳಿಗೂ ಕೂಡಾ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಸಹಾಯಧನವನ್ನು ನೀಡುತ್ತಿದೆ.

ರೈತ ಉತ್ಪಾದಕ ಸಂಸ್ಥೆಗಳಿಗೆ ನೆರವು

ಬೀಜ ಖರೀದಿ, ಗೊಬ್ಬರ ಖರೀದಿ, ಮಾರುಕಟ್ಟೆ, ಸಂಸ್ಕರಣೆ ಮುಂತಾದ ಸಮಸ್ಯೆಗಳಿಗೆ ಸ್ವತಃ ರೈತರೇ ಪರಿಹಾರ ಕಂಡುಕೊಳ್ಳಲು ಪ್ರೊತ್ಸಾಹಿಸುವ ನಿಟ್ಟಿನಲ್ಲಿ ‘ರೈತ ಉತ್ಪಾದಕ ಸಂಸ್ಥೆ’ಗಳನ್ನು ಸ್ಥಾಪಿಸಲು ಸರಕಾರ ಅನುದಾನ ಮಾಡುತ್ತಿದೆ. ಸಮಾನ ಮನಸ್ಕ ಕೃಷಿಕರನ್ನು ಒಗ್ಗೂಡಿಸಿ ರೈತ ಉತ್ಪಾದಕ ಸಂಸ್ಥೆಯನ್ನು ಆರಂಭಿಸಬೇಕು. ಅವುಗಳನ್ನು ಸ್ಥಾಪಿಸಲು ಮತ್ತು ಅವುಗಳ ಬಲವರ್ಧನೆಗೆ ರಾಜ್ಯ ಸರಕಾರ ತನ್ನ ‘ಅಮೃತ ರೈತ ಉತ್ಪಾದಕ ಸಂಸ್ಥೆ ರಚನೆ’ ಯೋಜನೆಯಡಿ ಹಾಗೂ ಕೇಂದ್ರ ಸರಕಾರದ ‘ರೈತ ಉತ್ಪಾದಕ ಸಂಸ್ಥೆ ರಚನೆ’ ಯೋಜನೆಯಡಿ ಅರ್ಥಿಕ ನೆರವನ್ನು ನೀಡುತ್ತದೆ.

ಪಿಯುಸಿ ಪಾಸಾದವರಿಗೆ ಕೇಂದ್ರ ಸರಕಾರಿಗೆ ಹುದ್ದೆಗಳು | ಅತೀ ಹೆಚ್ಚು ಸಂಬಳದ ಹುದ್ದೆಗಳ ಪಟ್ಟಿ ಇಲ್ಲಿದೆ… PUC Passed Central Government Jobs

ಜೇನು ಕೃಷಿಗೆ ಸಹಾಯ

ಜೇನು ಕೃಷಿಯನ್ನು ಕಸುಬಾಗಿಸಿಕೊಂಡು ಅದರಿಂದಲೂ ಆದಾಯ ಪಡೆಯುವ ಸಲುವಾಗಿ ಕೃಷಿಕರಿಗೆ ಜೇನು ಕೃಷಿಯಲ್ಲಿ ತರಬೇತಿಯನ್ನು ನೀಡುತ್ತಿದೆ. ರೈತರು ತಮ್ಮ ತನ್ನ ಜಮೀನಿನಲ್ಲಿ ಜೇನು ಪೆಟ್ಟಿಗೆಯನ್ನು ಸ್ಥಾಪಿಸಲು ಜಿಲ್ಲಾ ಮತ್ತು ರಾಜ್ಯ ವಲಯ ಯೋಜನೆಗಳಡಿ ಶೇ.75ರಷ್ಟು ಸಹಾಯಧನವನ್ನು ನೀಡಲಾಗುತ್ತದೆ. ಕೇಂದ್ರ ಸರಕಾರ ಸಹ ಶೇ.40ರ ಸಹಾಯಧನವನ್ನು ಒದಗಿಸುತ್ತದೆ.

ಈ ಮೇಲಿನ ಯೋಜನೆಗಳಲ್ಲದೆ ಅಡಕೆ ಸಸಿ ನೆಡಲು ಗುಂಡಿ ರಚನೆ, ರಬ್ಬರ್ ಪ್ಲ್ಲಾಂಟ್ ತಯಾರಿ, ತೆಂಗು ನಾಟಿ ಮುಂತಾದ ಕೆಲಸಗಳನ್ನು ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯೂ ಮಾಡಬಹುದಾಗಿದೆ. ಇದರಿಂದ ಕೃಷಿ ಭೂಮಿ ಅಭಿವೃದ್ಧಿಯೊಂದಿಗೆ ಆದಾಯವು ಕೈ ಸೇರುತ್ತದೆ. ಇತರೆ ಯೋಜನೆಗಳ ಪಟ್ಟಿ ಈ ಕೆಳಗಿನಂತಿದೆ.

  • ತೆಂಗಿನ ಬೆಳೆಯಲ್ಲಿ ಪಕ್ಷಿ, ಕೀಟ, ಆಲಿಕಲ್ಲು ನಿರೋಧಕ ಬಲೆ
  • ಜೈವಿಕ ನಿಯಂತ್ರಕಗಳ ಉತ್ಪಾದನಾ ಪ್ರಯೋಗಾಲಯ
  • ಸಮುದಾಯ ನೀರು ಸಂಗ್ರಹಣಾ ಘಟಕ
  • ವೈಯಕ್ತಿಕ ನೀರು ಸಂಗ್ರಹಣಾ ಘಟಕ
  • ಸಮಗ್ರ ಪೋಷಕಾಂಶ ನಿರ್ವಹಣೆ ಹಾಗೂ ಸಮಗ್ರ ರೋಗ-ಕೀಟ ನಿಯಂತ್ರಣ
  • ಔಷಧ ಸಿಂಪಡಿಸುವ ಸಂಪ್
  • ನೀರಾವರಿಗೆ ಬಳಸುವ ಪಂಪ್
  • ಟಾರ್ಪಲ್, ಕಟಾವು ಯಂತ್ರ ಖರೀದಿ
  • ಪ್ಲಾಸ್ಟಿಕ್ ಹೊದಿಕೆ
  • ಸಸ್ಯಾಗಾರಗಳ ಸ್ಥಾಪನೆ
  • ಈರುಳ್ಳಿ ಶೇಖರಣಾ ಘಟಕ
  • ಪ್ರಾಥಮಿಕ ಸಂಸ್ಕರಣಾ ಘಟಕ
  • ಶೀತಲ ವಾಹನ
  • ಹಣ್ಣು ಮಾಗಿಸುವ ಘಟಕ
  • ಬೀಜ ಸಂಸ್ಕರಣೆಯ ಮೂಲಸೌಕರ್ಯ ಅಭಿವೃದ್ಧಿ
  • ಅಂಗಾ೦ಶ ಕೃಷಿ ಪ್ರಯೋಗ ಶಾಲೆ
  • ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ
  • ಪರಂಪರಾಗತ ಕೃಷಿ ವಿಕಾಸ ಯೋಜನೆ
  • ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ

ತೋಟಗಾರಿಕೆ ಇಲಾಖೆಯ ಈ ಎಲ್ಲಾ ಯೋಜನೆಗಳಡಿಯಲ್ಲಿ ಕಾಲಕಾಲಕ್ಕೆ ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗುತ್ತದೆ. ರೈತರು ಅಗತ್ಯ ಆರ್ಥಿಕ ಸೌಲಭ್ಯ ಪಡೆಯಲು ಹತ್ತಿರದ ತೋಟಗಾರಿಕಾ ಇಲಾಖೆಗೆ ಭೇಟಿ ನೀಡಿ. ಈ ಸಹಾಯಧನ ರಾಜ್ಯದ ಎಲ್ಲ ವರ್ಗದ ರೈತರಿಗೂ ಲಭ್ಯವಿದೆ.

ಪ್ರಾಥಮಿಕ ಮಾಹಿತಿಗಾಗಿ ಇಲ್ಲಿ ತೋಟಗಾರಿಕೆ ಇಲಾಖೆಯ ಯೋಜನೆಗಳ ಸಂಕ್ಷಿಪ್ತ ಮಾಹಿತಿ ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ರೈತರು ಹತ್ತಿರದ ತೋಟಗಾರಿಕೆ ಇಲಾಖೆ ಸಂಪರ್ಕಿಸುವ ಮೂಲಕ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

Honge Krushi : ರೈತರ ಕೈ ಹಿಡಿಯುವ ಹೊಂಗೆ ಕೃಷಿ | ಹೊಂಗೆ ಬೆಳೆಯಲು ಸಿಗಲಿದೆ ನರೇಗಾ ನೆರವು


Spread the love
WhatsApp Group Join Now
Telegram Group Join Now

Leave a Comment

error: Content is protected !!