ಕೆಲವು ತಿಂಗಳಿಂದ ಬಾಕಿ ಉಳಿದಿದ್ದ ‘ಗೃಹಲಕ್ಷ್ಮೀ’ ಯೋಜನೆ ಹಣಕ್ಕಾಗಿ ಕಾಯುತ್ತಿದ್ದವರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಸದ್ಯಕ್ಕೆ ಒಂದು ಕಂತಿನ ಹಣ ಜಮೆ (Gruhalakshmi Amount Released) ಮಾಡಿದ್ದು; ಈ ಕುರಿತ ಅಪ್ಡೇಟ್ ಇಲ್ಲಿದೆ…
ರಾಜ್ಯ ಸರ್ಕಾರದ ಮಹತ್ವದ ‘ಪಂಚ ಗ್ಯಾರಂಟಿ’ಗಳಲ್ಲಿ ಪ್ರಮುಖವಾದ ‘ಗೃಹಲಕ್ಷ್ಮೀ’ ಯೋಜನೆಯಡಿ ಕಳೆದ ಮೇ 19ರಂದು ಫಲಾನುಭವಿಗಳ ಖಾತೆಗೆ ₹2000 ಒಂದು ಕಂತು ಜಮೆಯಾಗಿದ್ದು, ಇದರ ಬಗ್ಗೆ ರಾಜ್ಯದಾದ್ಯಂತ ಚರ್ಚೆ ಶುರುವಾಗಿದೆ.
ಕಳೆದ ಮೂರು ತಿಂಗಳಿನಿಂದ ಹಣ ಬಾಕಿಯಾಗಿದ್ದ ಈ ಯೋಜನೆಯ ಮೊದಲ ಕಂತು ಇದೀಗ ಬಿಡುಗಡೆ ಆಗಿದ್ದರೂ, ಉಳಿದ ಕಂತುಗಳ ವಿಚಾರದಲ್ಲಿ ಮಹಿಳೆಯರು ಇನ್ನೂ ನಿರೀಕ್ಷೆಯಲ್ಲಿದ್ದಾರೆ.
ಮೂರು ತಿಂಗಳು ಬಾಕಿ, ಒಂದೇ ಕಂತು ಬಿಡುಗಡೆ
ಮೇ 20ರಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ದ್ವಿತೀಯ ವರ್ಷದ ಸಾಧನಾ ಸಮಾವೇಶ ನಡೆದಿದೆ. ಈ ಹಿನ್ನೆಲೆಯಲ್ಲಿ, ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳ ಯಶಸ್ಸುಗಳನ್ನು ಸುದೀರ್ಘವಾಗಿ ಹೈಲೈಟ್ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಸರ್ಕಾರ ಗೃಹಲಕ್ಷ್ಮೀ ಯೋಜನೆಯ ಒಂದು ಕಂತಿನ ಹಣ ಬಿಡುಗಡೆ ಮಾಡಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಇದೇ ಮೇ ತಿಂಗಳಲ್ಲಿ ಬಾಕಿ ಉಳಿದ ಮೂರು ಕಂತುಗಳ ಹಣವನ್ನು ಜಮೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದರು. ಆದರೆ ಈಗ ಬಿಡುಗಡೆಗೊಂಡಿರುವುದು ಕೇವಲ ಒಂದು ಕಂತು ಮಾತ್ರ. ಇನ್ನೂ ಎರಡು ತಿಂಗಳ ಬಾಕಿ ಉಳಿದಿದ್ದು, ಈ ಕುರಿತಾಗಿ ಸ್ಪಷ್ಟ ಮಾಹಿತಿ ಸರ್ಕಾರದಿಂದ ಇನ್ನೂ ಹೊರಬಿದ್ದಿಲ್ಲ.
1.25 ಕೋಟಿ ಮಹಿಳೆಯರಿಗೆ ನೆರವು
ಕಳೆದ ಆಗಸ್ಟ್ 2023ರಿಂದ ಪ್ರಾರಂಭವಾಗಿರುವ ‘ಗೃಹಲಕ್ಷ್ಮೀ’ ಯೋಜನೆಯಡಿ ಇಲ್ಲಿಯ ತನಕ ಸುಮಾರು 1.25 ಕೋಟಿ ಮಹಿಳೆಯರು ಪ್ರತಿ ತಿಂಗಳು ₹2000ನಂತೆ ಲಾಭ ಪಡೆದಿದ್ದಾರೆ. ಸ್ವತಃ ಸರ್ಕಾರವೇ ಇದುವರೆಗೆ ಒಟ್ಟು ₹50,000 ಕೋಟಿ ಹಣ ವಿತರಣೆ ಮಾಡಲಾಗಿದೆ ಎಂದು ಅಧಿಕೃತ ಅಂಕಿ-ಅAಶ ನೀಡುತ್ತದೆ.
ಹಣ ಬಿಡುಗಡೆ ವಿಳಂಬವಾಗುವುದು ಸಾರ್ವಜನಿಕ ಯೋಜನೆಗಳ ಮೇಲೆ ನಂಬಿಕೆಗೆ ಧಕ್ಕೆಯಾಗಿ ಪರಿಣಮಿಸುತ್ತಿದೆ. ‘ಗೃಹಲಕ್ಷ್ಮೀ’ ಯೋಜನೆಯ ಬಾಕಿ ಉಳಿದ ಕಂತುಗಳನ್ನು ಯಾವಾಗ ಬಿಡುಗಡೆ ಮಾಡಲಾಗುತ್ತದೆ ಎಂಬ ಪ್ರಶ್ನೆಗೆ ಸರಕಾರ ಸ್ಪಷ್ಟ ಉತ್ತರ ನೀಡದೆ ಇರುವುದರಿಂದ, ಫಲಾನುಭವಿ ಮಹಿಳೆಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುವಂತಾಗಿದೆ.
KEA CET Result 2025- ಕೆಇಎ ಸಿಇಟಿ ಫಲಿತಾಂಶ 2025 | ರಿಸಲ್ಟ್ ಬಿಡುಗಡೆ ಕುರಿತ ಹೊಸ ಅಪ್ಡೇಟ್ ಇಲ್ಲಿದೆ…
ಹಣದ ನಿರೀಕ್ಷೆಯ ನಡುವೆ ಗೊಂದಲ
‘ಗೃಹಲಕ್ಷ್ಮೀ’ ಯೋಜನೆಯ ನಿಯಮದ ಪ್ರಕಾರ ಮಾಸಿಕವಾಗಿ ಹಣ ಜಮೆಯಾಗಬೇಕಾದರೂ, ಹಲವು ಬಾರಿ ತಾಂತ್ರಿಕ ದೋಷಗಳು, ಬ್ಯಾಂಕ್ ಖಾತೆಗಳ ಪ್ರಮಾಣೀಕರಣ ಸಮಸ್ಯೆ ಮತ್ತು ರಾಜ್ಯದ ಆರ್ಥಿಕ ಸ್ಥಿತಿಗತಿಯ ಅಸಮತೋಲನದಿಂದಾಗಿ ಹಣ ತಡವಾಗಿ ಜಮೆಯಾಗುತ್ತಿರುವುದು ಹಲವಾರು ಮಹಿಳೆಯರಲ್ಲಿ ಆತಂಕ ಹಾಗೂ ಗೊಂದಲಕ್ಕೆ ಕಾರಣವಾಗಿದೆ.
ಈಚೆಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ‘ನಾವು ತಿಂಗಳು ತಿಂಗಳು ಹಣ ಕೊಡುತ್ತೇವೆಂದು ಹೇಳಿಲ್ಲ. ಹಣ ಬಂದಾಗ ಕೊಡುತ್ತೇವೆ’ ಎಂದು ಸ್ಪಷ್ಟನೆ ನೀಡಿದ್ದು; ಗೃಹಲಕ್ಷ್ಮೀ ಫಲಾನುಭವಿಗಳಲ್ಲಿ ಮತ್ತಷ್ಟು ಗೊಂದಲ ಶುರುವಾಗಿದೆ.
ಬಾಕಿ ಕಂತುಗಳ ಬಿಡುಗಡೆ ಯಾವಾಗ?
‘ಗೃಹಲಕ್ಷ್ಮೀ’ ಯೋಜನೆ ಅತ್ಯಂತ ಜನಪ್ರೀತಿಯ ಹಾಗೂ ಸ್ತ್ರೀ ಸಬಲೀಕರಣಕ್ಕೆ ದಾರಿ ಮಾಡಿಕೊಡುವ ಮಹತ್ವದ ಧನಸಹಾಯ ಯೋಜನೆಯಾಗಿದೆ. ಆದರೆ, ನಿರಂತರ ಹಣ ಜಮೆ ವ್ಯತ್ಯಯ ಯೋಜನೆಯ ಮೇಲಿನ ನಂಬಿಕೆಗೆ ಧಕ್ಕೆಯುಂಟು ಮಾಡುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ.
ಸಚಿವೆ ಹೆಬ್ಬಾಳ್ಕರ್ ಅವರು ಬಾಕಿ ಹಣವನ್ನು ಒಂದೇ ಬಾರಿಗೆ ಜಮೆ ಮಾಡಲಾಗುತ್ತದೆ ಎಂಬ ಭರವಸೆ ನೀಡಿದ್ದು; ಸಾಧನಾ ಸಮಾವೇಶದ ನಂತರ ಉಳಿದ ಹಣದ ಬಗ್ಗೆ ನಿರ್ಧಾರ ಆಗುವ ಸಾಧ್ಯತೆ ಇದೆ. ತ್ವರಿತವಾಗಿ ಬಾಕಿ ಹಣ ಬಿಡುಗಡೆ ಮಾಡುವುದರ ಜೊತೆಗೆ, ತಾಂತ್ರಿಕ ದೋಷ ಪರಿಹರಿಸುವಲ್ಲಿ ಸೂಕ್ತ ಕ್ರಮ ಕೈಗೊಂಡಲ್ಲಿ ಮಾತ್ರ ಈ ಯೋಜನೆಯ ಗುರಿ ತಲುಪಲು ಸಾಧ್ಯ!
ಹಣ ಜಮಾ ಸ್ಥಿತಿಯನ್ನು ಹೇಗೆ ಪರಿಶೀಲಿಸುವುದು?
ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ಹಣವನ್ನು ಪಡೆಯುತ್ತಿರುವ ಫಲಾನುಭವಿಗಳು ಮೊದಲು ಈ ಲಿಂಕ್ ಮೂಲಕ Google Play Storeಗೆ ಹೋಗಿ ‘DBT Karnataka’ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ.
ನಂತರ ಅರ್ಜಿದಾರರ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ ಮತ್ತು ಮೊಬೈಲ್ ನಂಬರ್’ಗೆ ಬರುವ OTP ಅನ್ನು ಹಾಕಿ ಬಳಕೆದಾರ ಐಡಿ ಮತ್ತು ಪಾಸ್’ವರ್ಡ್ ಅನ್ನು ರಚನೆ ಮಾಡಿಕೊಂಡು ಲಾಗಿನ್ ಆಗಿ ‘ಪಾವತಿ ಸ್ಥಿತಿ’ ಅಥವಾ ‘Payment Status’ ಬಟನ್ ಮೇಲೆ ಕ್ಲಿಕ್ ಮಾಡಿ ಪ್ರತಿ ತಿಂಗಳು ಜಮಾ ಆಗಿರುವ ಹಣದ ಸಂಪೂರ್ಣ ವಿವರವನ್ನು ಪಡೆಯಬಹುದು.