ಬಗರ್ ಹುಕುಂ ಯೋಜನೆಯಡಿ ಸರ್ಕಾರಿ ಭೂಮಿ ಹಕ್ಕುಪತ್ರಕ್ಕಾಗಿ (Bagar Hukum Land Rights) ಲಕ್ಷಾಂತರ ರೈತರು ಅರ್ಜಿ ಸಲ್ಲಿಸಿದ್ದಾರೆ. ಸರ್ಕಾರ ಈ ಅರ್ಜಿಗಳ ಪರೀಶಿಲನೆ ನಡೆಸುತ್ತಿದ್ದು; ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ರಾಜ್ಯದಲ್ಲಿ ಲಕ್ಷಾಂತರ ರೈತರು ದಶಕಗಳಿಂದ ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಾ ಬದುಕು ನಡೆಸುತ್ತಿದ್ದಾರೆ. ಇಂತಹ ರೈತರಿಗೆ ಭೂಮಿ ಹಕ್ಕಾಗಿ ನೀಡಲು ಸರ್ಕಾರವು ‘ಬಗರ್ ಹುಕುಂ ಭೂಮಿ ಹಕ್ಕುಪತ್ರ’ ಯೋಜನೆ (Bagar Hukum Land Grant Scheme) ಆರಂಭಿಸಿತ್ತು. ಈ ಯೋಜನೆಯಡಿ ರಾಜ್ಯದಲ್ಲಿ ಲಕ್ಷಾಂತ ರೈತರು ಅರ್ಜಿ ಸಲ್ಲಿಸಿದ್ದಾರೆ.
ಆದರೆ, ಇತ್ತೀಚಿನ ತಪಾಸಣೆಗಳಲ್ಲಿ ಹೆಚ್ಚಿನ ಅರ್ಜಿಗಳು ತಿರಸ್ಕೃತಗೊಂಡಿದ್ದು, ರೈತ ಸಮುದಾಯದಲ್ಲಿ ಆತಂಕ ಮೂಡಿಸಿದೆ. ಈ ಲೇಖನದಲ್ಲಿ ಬಗರ್ ಹುಕುಂ ಸಂಬಂಧಿತ ಅರ್ಜಿ ಪ್ರಕ್ರಿಯೆ, ಅರ್ಜಿಗಳ ಸ್ಥಿತಿ, ತಿರಸ್ಕಾರದ ಕಾರಣಗಳು, ಹಕ್ಕುಪತ್ರದ ಮಿತಿಗಳು ಮತ್ತು ರೈತರಿಗೆ ಇರುವ ಆಯ್ಕೆಗಳನ್ನು ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.
ಬಗರ್ ಹುಕುಂ ಯೋಜನೆಯ ಉದ್ದೇಶವೇನು?
‘ಬಗರ್ ಹುಕುಂ’ ಎಂಬುದು ಸರ್ಕಾರಿ ಖಾಲಿ ಜಮೀನಿನಲ್ಲಿ ದಶಕಗಳಿಂದ ಸಾಗುವಳಿ ಮಾಡುತ್ತಿರುವ ಅರ್ಹ ರೈತರಿಗೆ ಆ ಭೂಮಿಯ ಮಾಲೀಕತ್ವದ ಕುರುಹಾಗಿ ಹಕ್ಕುಪತ್ರ ನೀಡುವ ಯೋಜನೆ. ಇದರಿಂದ ರೈತರು ಭೂಮಿ ಮೇಲಿನ ನೈಜ ಹಕ್ಕು ಪಡೆದು ಸರ್ಕಾರದ ಹಲವು ಪ್ರಯೋಜನ ಪಡೆಯಬಹುದಾಗಿದೆ.
ಬಗರ್ ಹುಕುಂ ಹಕ್ಕು ಪತ್ರ ಸಿಕ್ಕರೆ ಕೃಷಿ ಸಾಲ ಪಡೆಯಬಹುದು. ಸರಕಾರಿ ಸೌಲಭ್ಯಗಳನ್ನು ಪಡೆಯಲು ಅರ್ಹರಾಗುತ್ತಾರೆ. ಭೂಮಿ ಲೀಜು ಅಥವಾ ಒತ್ತುವರಿ ಅನ್ನುವ ಆತಂಕ ಕಳೆದು ಸಾಗುವಳಿ ಭೂಮಿ ರೈತರ ಮಾಲಿಕತ್ವದಲ್ಲಿ ಭದ್ರವಾಗಿರುತ್ತದೆ.
ಅರ್ಜಿ ನಮೂನೆಗಳ ಸ್ಥಿತಿಗತಿ
ಸರ್ಕಾರ ಅರ್ಹ ರೈತರಿಗೆ ಹಕ್ಕುಪತ್ರ ನೀಡಲು ಮೂರು ಹಂತಗಳಲ್ಲಿ ಬಗರ್ ಹುಕುಂ ಅರ್ಜಿ ಸಲ್ಲಿಕೆ ಅವಕಾಶ ನೀಡಿತ್ತು:
- 1980ರ ದಶಕದಲ್ಲಿ ನಮೂನೆ 50ರ ಅಡಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು.
- 1990ರ ದಶಕದಲ್ಲಿ ನಮೂನೆ 53ರ ಅಡಿಯಲ್ಲಿ ಎರಡನೇ ಹಂತದ ಅರ್ಜಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು.
- 2013 ನಂತರ ನಮೂನೆ 57ರ ಅಡಿಯಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿತ್ತು.
Monsoon Alert- ಮತ್ತೆ ಮುಂಗಾರು ಬಿರುಸು | ರಾಜ್ಯದ ಹಲವೆಡೆಗೆ ಮಳೆ ಎಚ್ಚರಿಕೆ

ಅರ್ಜಿಗಳ ಪ್ರಸ್ತುತ ಸ್ಥಿತಿ ಹೇಗಿದೆ?
ಮೇಲ್ಕಾಣಿಸಿದ ನಮೂನೆಗಳ ಆಧಾರದ ಮೇಲೆ ಸರ್ಕಾರದ ಕಡೆಯಿಂದ ಭೂಮಿ ವಿಲೇವಾರಿ ಪ್ರಕ್ರಿಯೆ ನಡೆದಿದೆ. ಆದರೆ ಹೆಚ್ಚಿನ ಅರ್ಜಿಗಳು ನಿರಾಕರಣೆಗೆ ಒಳಗಾಗಿವೆ. ಒಟ್ಟಾರೆ ಸಲ್ಲಿಕೆಯಾದ ಅರ್ಜಿಗಳ ಸ್ಥಿತಿಗತಿ ಹೀಗಿದೆ:
ನಮೂನೆ 50
- ಒಟ್ಟು ಅರ್ಜಿ: 11,57,516
- ಮಂಜೂರಾದವು: 3,87,520
- ತಿರಸ್ಕೃತ: 7,64,541
ನಮೂನೆ 53
- ಒಟ್ಟು ಅರ್ಜಿ: 11,81,228
- ಮಂಜೂರಾದವು: 2,19,604
- ತಿರಸ್ಕೃತ: 8,18,019
ನಮೂನೆ 57
- ಒಟ್ಟು ಅರ್ಜಿ: 10,69,990
- ಮಂಜೂರಾದವು: 8,733
- ತಿರಸ್ಕೃತ: 1,63,284
- ಪರಿಶೀಲನೆಯಲ್ಲಿರುವ ಅರ್ಜಿ: 8,97,973
ಅರ್ಜಿ ತಿರಸ್ಕೃತವಾಗಲು ಪ್ರಮುಖ ಕಾರಣಗಳು
- ಇಡೀ ಕುಟುಂಬದಿಂದ ಒಬ್ಬನೇ ಅರ್ಜಿ ಸಲ್ಲಿಸಬಹುದೆಂಬ ನಿಯಮ ಉಲ್ಲಂಘಿಸಿ ಒಂದೇ ಕುಟುಂಬದ ಹೆಚ್ಚಿನ ಜನ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
- ಹಲವು ಅರ್ಜಿಗಳಿಗೆ ದಾಖಲೆಗಳ ಕೊರತೆ ಅಥವಾ ದಾಖಲೆ ಇಲ್ಲದ ಕಾರಣದಿಂದ ನಿಷೇಧವಾಗಿವೆ.
- ಅನೇಕ ಕಡೆಗಳಲ್ಲಿ ಉಳುಮೆ ನಿಲ್ಲಿಸಿ ವಾಣಿಜ್ಯ ಬಳಕೆಗೆ ಸರ್ಕಾರಿ ಭೂಮಿ ಬಳಸಲಾಗುತ್ತಿದೆ. ಇಂಥ ಅರ್ಜಿ ತಿರಸ್ಕಾರವಾಗಿವೆ.
- ತಾಲೂಕು ಬದಲಾವಣೆ ಅಥವಾ ಸ್ಥಳಾಂತರದ ಗೊಂದಲದಿಂದ ಸ್ಥಳೀಯ ದಾಖಲೆಗಳು ಇಲ್ಲದ ಅರ್ಜಿಗಳನ್ನು ಕಡೆಗಣಿಸಲಾಗಿದೆ.
- ನಗರ ವ್ಯಾಪ್ತಿಗೆ ಸೇರಿದ ಗ್ರಾಮಗಳಿಂದ ಅನೇಕ ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ ಬಗರ್ ಹುಕುಂ ಯೋಜನೆಯಲ್ಲಿ ನಗರ ಪ್ರದೇಶದಲ್ಲಿ ಸಾಗುವಳಿ ಪತ್ರ ನೀಡಲು ಅವಕಾಶವಿಲ್ಲ.
- ಸಾಕಷ್ಟು ಖಾಸಗಿ ಭೂಮಿ ಹೊಂದಿರುವವರು ಕೂಡ ಬಗರ್ ಹುಕುಂ ಯೋಜನೆಯಡಿ ಸರ್ಕಾರಿ ಭೂಮಿ ಹಕ್ಕುಪತ್ರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇಂಥ ಅರ್ಜಿಗಳಿಗೆ ಮಾನ್ಯ ನೀಡಲಾಗಿಲ್ಲ.
ಹಕ್ಕುಪತ್ರ ವಿತರಣೆಯ ನಿಯಮಗಳು
- ಗರಿಷ್ಠ 4.34 ಎಕರೆ ಭೂಮಿ ಮಂಜೂರಾತಿ ಮಿತಿ
- 2 ಎಕರೆ ಖಾಸಗಿ ಭೂಮಿಯುಳ್ಳವರಿಗೆ ಇನ್ನೂ 2.34 ಎಕರೆ ಮಾತ್ರ
- ಇಡೀ ಕುಟುಂಬದಿಂದ ಒಬ್ಬರ ಅರ್ಜಿ ಮಾತ್ರ
- ನಗರ ಪ್ರದೇಶದಲ್ಲಿ ಹಕ್ಕುಪತ್ರ ಮಂಜೂರು ಆಗದು
- ಭೂಮಿಯನ್ನು ಮಾರಾಟ ಮಾಡಲು ಅವಕಾಶವಿಲ್ಲ
- ಕೇವಲ ಕೃಷಿ ಉದ್ದೇಶಕ್ಕಾಗಿ ಮಾತ್ರ ಭೂಮಿ ಬಳಕೆ
ಪ್ರತಿಭಟನೆ ಹಾದಿ ತುಳಿದ ರೈತರು
ರಾಜ್ಯದ ಅನೇಕ ಕಡೆಯಲ್ಲಿ ಅರ್ಜಿಗಳು ತಿರಸ್ಕೃತಗೊಂಡಿರುವ ರೈತರು ಸ್ಥಳೀಯ ಮಟ್ಟದಲ್ಲಿ ತಾಲ್ಲೂಕು ಕಚೇರಿಗಳ ಮುಂದೆ ಧರಣಿ ಮಾಡುತ್ತಿದ್ದಾರೆ. ‘ನಮಗೂ ಹಕ್ಕುಪತ್ರ ಬೇಕು’ ಎಂಬ ಘೋಷಣೆ ಕೂಗುತ್ತ ಸರ್ಕಾರದ ನಿಯಮಗಳನ್ನು ಪುನರ್ ಪರಿಶೀಲಿಸಲು ಒತ್ತಾಯಿಸುತ್ತಿದ್ದಾರೆ.
ಆದರೆ, ಅಧಿಕಾರಿಗಳು ಮಾತ್ರ ‘ಹಕ್ಕುಪತ್ರ ನೀಡುವುದು ಕಾನೂನುಬದ್ಧ ಪ್ರಕ್ರಿಯೆ. ದಾಖಲೆ ಇಲ್ಲದವರಿಗೆ, ನಿಯಮ ಮೀರಿ ಅರ್ಜಿ ಸಲ್ಲಿಸಿದವರಿಗೆ ಬಗರ್ ಹುಕುಂ ಯೋಜನೆಯಡಿ ಹಕ್ಕುಪತ್ರ ನೀಡಲು ಸಾಧ್ಯವಿಲ್ಲ’ ಎಂದು ಸ್ಪಷ್ಟವಾಗಿ ಹೇಳುತ್ತಿದ್ದಾರೆ.
ರೈತರಿಗೆ ಸಲಹೆಗಳು
- ನಿಮ್ಮ ಅರ್ಜಿ ತಿರಸ್ಕೃತಗೊಂಡಿದ್ದರೆ RTI ಮೂಲಕ ಕಾರಣ ತಿಳಿದುಕೊಳ್ಳಿ
- ಪಟ್ಟಿ ಪ್ರಕಟವಾದರೆ ತಕ್ಷಣವೇ ಪರಿಶೀಲಿಸಿ
- ಸಂಬಂಧಿತ ಅಧಿಕಾರಿಗಳ ಗಮನಕ್ಕೆ ನಿಮ್ಮ ಅರ್ಜಿ/ದಾಖಲೆಗಳ ನಕಲು ನೀಡಿ
- ಮಾನದಂಡ ಪೂರೈಸಿದರೆ ಮರು ಅರ್ಜಿಗಾಗಿ ಅವಕಾಶ ಕೇಳಿ
- ಯಾವುದೇ ಸಾಲ ಅಥವಾ ಭೂಮಿ ಖರೀದಿಗೆ ವಂಚನೆಗೊಳಗಾಗಬೇಡಿ
ಬಗರ್ ಹುಕುಂ ಯೋಜನೆ ರೈತರಿಗೆ ಭೂಮಿಯ ಹಕ್ಕು ನೀಡುವ ಮಹತ್ವದ ಯೋಜನೆಯಾದರೂ, ನಿಯಮಾನುಸಾರ ದಾಖಲೆಗಳಿದ್ದವರಿಗೆ ಮಾತ್ರ ಹಕ್ಕುಪತ್ರ ಸಿಗಲಿದೆ. ಸರ್ಕಾರ ಈ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುತ್ತಿದೆ. ರೈತರು ಈ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ನಿರ್ಧಾರ ಕೈಗೊಳ್ಳಬೇಕಿದೆ.
e-Swathu Abhiyana- ಇ-ಸ್ವತ್ತು ಸಮಸ್ಯೆ ಪರಿಹಾರಕ್ಕೆ ಸರ್ಕಾರದ ಅಭಿಯಾನ | ಇನ್ನು ಸ್ವತ್ತು ವಿತರಣೆ ಮತ್ತಷ್ಟು ಸುಲಭ

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.