ಯಾವುದೇ ಶ್ಯೂರಿಟಿ ಇಲ್ಲದೆ (without Security) ಸಿಗುವ ಸಾಲ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಮುದ್ರಾ ಯೋಜನೆ’ (Pradhan Mantri Mudra Yojana) ಆರಂಭವಾಗಿ ನಿನ್ನೆ ಏಪ್ರಿಲ್ 8ಕ್ಕೆ ಬರೋಬ್ಬರಿ ಹತ್ತು ವರ್ಷವಾಗಿದೆ. ಈ ಹತ್ತು ವರ್ಷಗಳಲ್ಲಿ 33 ಲಕ್ಷ ಕೋಟಿ ರೂ.ಗಳ ಖಾತರಿ ರಹಿತ ಅಂದರೆ ಯಾವುದೇ ಶ್ಯೂರಿಟಿ ಇಲ್ಲದ ಸಾಲಗಳನ್ನು ವಿತರಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಹೌದು, 2015ರಲ್ಲಿ ಆರಂಭಿಸಲಾದ ‘ಪ್ರಧಾನ ಮಂತ್ರಿ ಮುದ್ರಾ ಯೋಜನೆ’ಯಲ್ಲಿ ಸಣ್ಣ ಹಾಗೂ ಸೂಕ್ಷ್ಮ ವ್ಯವಹಾರಗಳಿಗೆ ಸಾಲವನ್ನು ನೀಡಲಾಗುತ್ತದೆ. ಈ ಸಾಲವನ್ನು ಯಾವುದೇ ಮೇಲಾಧಾರ ಮುಕ್ತ ಅಂದರೆ ಯಾವುದೇ ಗ್ಯಾರಂಟಿ ಇಲ್ಲದೇ ನೀಡುತ್ತಿರುವುದು ವಿಶೇಷವಾಗಿದೆ.
ಕೇಂದ್ರ ಸರ್ಕಾರದ ಮಾಹಿತಿ ಪ್ರಕಾರ 2015-18ರ ನಡುವೆ ಮುದ್ರಾ ಯೋಜನೆಯಿಂದಾಗಿ 1 ಕೋಟಿಗೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಿವೆ. ಒಟ್ಟು ಮುದ್ರಾ ಸಾಲದಲ್ಲಿ ಶೇ.70ರಷ್ಟು ಸಾಲವನ್ನು ಮಹಿಳಾ ಉದ್ಯಮಿಗಳು ಪಡೆದುಕೊಂಡಿದ್ದಾರೆ. ಒಟ್ಟು ಸಾಲದ ಶೇ.50ಕ್ಕಿಂತ ಹೆಚ್ಚು ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ಉದ್ಯಮಿಗಳೇ ಪಡೆದುಕೊಂಡಿದ್ದಾರೆ.
ಮುದ್ರಾ ಯೋಜನೆ ಎಂದರೇನು?
ಪ್ರಧಾನ ಮಂತ್ರಿ ಮುದ್ರಾ ಯೋಜನೆಯು ಕೇಂದ್ರ ಸರ್ಕಾರದ ಮೈಕ್ರೋ-ಯುನಿಟ್ ಡೆವಲಪ್‌ಮೆಂಟ್ ಮತ್ತು ರಿಫೈನಾನ್ಸ್ ಏಜೆನ್ಸಿ (MUDRA) ಅಡಿಯಲ್ಲಿ ಚಾಲನೆಯಲ್ಲಿರುವ ಯೋಜನೆ. ಸಣ್ಣ, ಸೂಕ್ಷ್ಮ ಮತ್ತು ಮಧ್ಯಮ ವ್ಯವಹಾರಗಳಿಗೆ (MSMEs) ಸಾಲ ನೀಡುವ ಮೂಲಕ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡುವುದು ಇದರ ಉದ್ದೇಶವಾಗಿದೆ.
ಈ ಯೋಜನೆಯ ವಿಶೇಷತೆ ಎಂದರೆ ಯಾವುದೇ ಶ್ಯೂರಿಟಿ ಅಗತ್ಯವಿಲ್ಲ. ಸಾಮಾನ್ಯ ಬ್ಯಾಂಕ್ ಅಥವಾ NBFCಗಳ ಮೂಲಕವೇ ಸಾಲ ಸಿಗುತ್ತದೆ. ಅರ್ಜಿದಾರನ ಕ್ರೆಡಿಟ್ ಸ್ಕೋರ್, ವ್ಯಾಪಾರದ ಯೋಚನೆ ಮತ್ತು ದಾಖಲೆಗಳ ಆಧಾರದ ಮೇಲೆ ಲೋನ್ ಮಂಜೂರು ಆಗುತ್ತದೆ.

ಯಾರು ಬೇಕಾದರೂ ಸಾಲ ಪಡೆಯಬಹುದು
ಬೀದಿ ವ್ಯಾಪಾರಿಗಳಿಂದ ಹಿಡಿದು ಸಣ್ಣ ಉದ್ಯಮಿಗಳ ವರೆಗೆ ಎಲ್ಲರಿಗೂ ತಮ್ಮ ವ್ಯವಹಾರಗಳನ್ನು ವಿಸ್ತರಿಸಲು ಆರ್ಥಿಕ ನೆರವು ಒದಗಿಸುವುದು ‘ಪ್ರಧಾನ ಮಂತ್ರಿ ಮುದ್ರಾ ಯೋಜನೆ’ಯ ಉದ್ದೇಶವಾಗಿದೆ.
ಯಾವುದೇ ಬ್ಯಾಂಕ್, ಮೈಕ್ರೋ ಫೈನಾನ್ಸ್ ಕಂಪನಿ ಅಥವಾ NBFC ಮೂಲಕ ಸಾಲವನ್ನು ಪಡೆಯಬಹುದು. ಈಗಾಗಲೇ ವ್ಯಾಪಾರ ಮಾಡುತ್ತಿರುವವರು ಅಥವಾ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಬಯಸುವವರು ಸೇರಿದಂತೆ ಯಾವುದೇ ಭಾರತೀಯನು ಮುದ್ರಾ ಸಾಲವನ್ನು ಪಡೆಯಬಹುದು.
BPL Ration Card- ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ | ಹೊಸ ಕಾರ್ಡ್ ಯಾವಾಗ?
ನಾಲ್ಕು ಬಗೆಯ ಸಾಲಗಳು
ಮುದ್ರಾ ಯೋಜನೆಯಡಿಯಲ್ಲಿ ಸಣ್ಣ ಹಾಗೂ ಸೂಕ್ಷ್ಮ ವ್ಯವಹಾರಗಳಿಗೆ ಮೇಲಾಧಾರ ಮುಕ್ತ ಸಾಲವನ್ನು ನೀಡಲಾಗುತ್ತದೆ. ಈ ಯೋಜನೆಯು ಉದ್ಯೋಗಿಗಳಿಗಿಂತ ಉದ್ಯೋಗದಾತರನ್ನು ಹೆಚ್ಚು ಸೃಷ್ಟಿಸಿದೆ. ಶಿಶು ಸಾಲ, ಕಿಶೋರ ಸಾಲ ತರುಣ್ ಸಾಲ ಹಾಗೂ ತರುಣ್ ಪ್ಲಸ್ ಸಾಲ ಹೆಸರಿನ ನಾಲದಕು ಬಗೆಯ ಸಾಲ ಸೌಲಭ್ಯ ಸಿಗುತ್ತದೆ. ಸಾಲ ಪ್ರಮಾಣ ಈ ಕೆಳಗಿನಂತಿದೆ:
- ಶಿಶು ಸಾಲ- ₹50,000 ವರೆಗೆ
- ಕಿಶೋರ್ ಸಾಲ- ₹50,000 ರಿಂದ ₹1 ಲಕ್ಷ
- ತರುಣ್ ಸಾಲ- ₹5 ಲಕ್ಷ ರಿಂದ ₹10 ಲಕ್ಷ
- ತರುಣ್ ಪ್ಲಸ್ ಸಾಲ- ₹10 ಲಕ್ಷ ರಿಂದ ₹20 ಲಕ್ಷ
ಹೀಗೆ ಅರ್ಜಿ ಸಲ್ಲಿಸಿ…
ನೀವು ಮುದ್ರಾ ಸಾಲಕ್ಕೆ ಆನ್‌ಲೈನ್ ಮತ್ತು ಆಫ್‌ಲೈನ್ ಎರಡರಲ್ಲೂ ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು, https://www.udyamimitra.in/ ಪೋರ್ಟಲ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅದೇ ಸಮಯದಲ್ಲಿ, ನೀವು ಯಾವುದೇ ಬ್ಯಾಂಕ್, NBFC ಅಥವಾ MFIಯ ಹತ್ತಿರದ ಶಾಖೆಗೆ ಭೇಟಿ ನೀಡುವ ಮೂಲಕ ಕೂಡ ನೇರವಾಗಿ ಮುದ್ರಾ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.