OPS Relaunch for Govt Employees : ಇದು ಸ್ವತಃ ಆಡಳಿತರೂಢ ಕಾಂಗ್ರೆಸ್ ಪಕ್ಷ ಕಳೆದ ವಿಧಾನಸಭೆ ಚುನಾವಣೆ ಸಂದರ್ಭದ ತನ್ನ ಪ್ರಣಾಳಿಕೆಯಲ್ಲಿ ಪ್ರಕಟಿಸಿದ್ದ ಪ್ರಮುಖ ಭರವಸೆ. ಎನ್‌ಪಿಎಸ್ (New Pension Scheme – NPS) ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ (Old Pension Scheme – OPS) ಮರು ಜಾರಿಗೊಳಿಸುವ ಕುರಿತು ಭರವಸೆ ನೀಡಿದ್ದ ಕಾಂಗ್ರೆಸ್ ಪಕ್ಷ ಇದೀಗ ಒಪಿಎಸ್ ಮರುಜಾರಿ ಕುರಿತು ಮೀನಮೇಷ ಏಣಿಸುತ್ತಿದೆ. ಆದರೆ ಸರ್ಕಾರಿ ನೌಕರರ ಸಂಘ ಈ ಭರವಸೆ ಈಡೇರಿಕೆಗೆ ಪಟ್ಟು ಹಿಡಿದಿದೆ.
ಈಚೆಗಷ್ಟೇ ನೌಕರರ ಬಹುದೊಡ್ಡ ಬೇಡಿಕೆಯಾದ್ದ 7ನೇ ವೇತನ ಆಯೋಗದ ವರದಿಯ (7th Pay Commission Report) ಶಿಫಾರಸುಗಳನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ಅಧಿಕೃತ ಒಪ್ಪಿಗೆ ನೀಡಿದೆ. ಇದರ ಜೊತೆಗೆ ‘ಹಳೇ ಪಿಂಚಣಿ ಯೋಜನೆ ಮರುಜಾರಿ’ ಹಾಗೂ ‘ಕರ್ನಾಟಕ ಆರೋಗ್ಯ ಸಂಜೀವಿನಿ’ (Karnataka Arogya Sanjeevani Scheme) ಯೋಜನೆ ಜಾರಿ ಮಾಡುವ ಬೇಡಿಕೆಯನ್ನು ಕೂಡ ಸರ್ಕಾರದ ಮುಂದಿಡಲಾಗಿತ್ತು. ಈ ಪೈಕಿ ಒಪಿಎಸ್ ಮರುಜಾರಿ ವಿಚಾರ ಇದೀಗ ಗಂಭೀರವಾಗುತ್ತಿದೆ.
ನೌಕರರಿಗೆ ಕಂಟಕವಾದ ರಾಷ್ಟ್ರೀಯ ಪಿಂಚಣಿ ಯೋಜನೆ
ಹೌದು, ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು (ಒಪಿಎಸ್) ಕೇವಲ ರಾಜ್ಯ ಸರ್ಕಾರಿ ನೌಕರರು ಮಾತ್ರ ವಿರೋಧಿಸುತ್ತಿಲ್ಲ, ಕೇಂದ್ರ ಸರ್ಕಾರಿ ನೌಕರರು ಕೂಡ ಈ ಬಗ್ಗೆ ವರ್ಷಗಳಿಂದ ಗಂಭೀರ ಹೋರಾಟ ಹಮ್ಮಿಕೊಂಡು ಬರುತ್ತಿದ್ದಾರೆ. ನೌಕರರಿಗೆ ಕಂಟಕವಾಗಿರುವ ಎನ್‌ಪಿಎಸ್ ರದ್ದುಪಡಿಸಿ ಹಳೇ ಪಿಂಚಣೆ ಯೋಜನೆಯನ್ನೇ ಮರು ಜಾರಿಗೊಳಿಸಬೇಕು ಎಂದು ಸರ್ಕಾರಗಳನ್ನು ಆಗ್ರಹಿಸುತ್ತಿದ್ದಾರೆ.
ಕರ್ನಾಟಕದಲ್ಲಿ ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಹಳೆ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವ ಸಲುವಾಗಿ ಈ ಹಿಂದಿನ ಸರ್ಕಾರ ಇತರೆ ರಾಜ್ಯಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿ ವರದಿ ನೀಡಲು 2023ರ ಮಾರ್ಚ್‍ನಲ್ಲಿ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿತ್ತು. ಸಮಿತಿಯು ಈತನಕ ಸರ್ಕಾರಕ್ಕೆ ಯಾವುದೇ ವರದಿ ನೀಡಿಲ್ಲ. ಹೀಗಾದರೆ ಕಾಂಗ್ರೆಸ್ ತನ್ನ ಪ್ರಣಾಳಿಕಯಲ್ಲಿ ನೀಡಿದ್ದ ಭರವಸೆ ಈಡೇರಿಕೆ ಯಾವಾಗ? ಎಂಬುವುದು ನೌಕರರ ಪ್ರಶ್ನಿಸುತ್ತಿದ್ದಾರೆ.
ಇವರಿಗೆ ಮಾತ್ರ ಹಳೇ ಪಿಂಚಣಿ ಅನ್ವಯ
ಈಚೆಗೆ ರಾಜ್ಯ ಸರ್ಕಾರ 2006ರ ಏಪ್ರಿಲ್ 1ಕ್ಕಿಂತ ಮೊದಲು ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದ೦ದು ಅಥವಾ ನಂತರದಲ್ಲಿ ರಾಜ್ಯ ಸರ್ಕಾರದ ಸೇವೆಗೆ ಸೇರಿದ ನೌಕರರನ್ನು ಹಿಂದಿನ ಡಿಫೈನ್ಸ್ ಪಿಂಚಣಿ ಯೋಜನೆ (ಒಪಿಎಸ್) ವ್ಯಾಪ್ತಿಗೆ ಒಳಪಡಿಸುವ ಕುರಿತು ಆದೇಶ ಹೊರಡಿಸಿದೆ. ಆದರೆ ಈ ಸೌಲಭ್ಯ ಎಲ್ಲ ಸರ್ಕಾರಿ ನೌಕರರಿಗೂ ಸಿಗುತ್ತಿಲ್ಲ. ಕೇವಲ 11,000 ನೌಕರರಿಗೆ ಮಾತ್ರ ಇದರಿಂದ ಅನುಕೂಲವಾಗಲಿದೆ.
ಇದೀಗ ಹಳೇ ಪಿಂಚಣಿ ಯೋಜನೆಯು ಎಲ್ಲ ಸರ್ಕಾರಿ ನೌಕರರಿಗೂ ಅನ್ವಯವಾಗಬೇಕು ಎಂದು ನೌಕರರು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಸದನದಲ್ಲಿ ನೀಡಿರುವ ಮಾಹಿತಿ ಪ್ರಕಾರ ಎನ್‌ಪಿಎಸ್ ವ್ಯಾಪ್ತಿಯಲ್ಲಿ ಸುಮಾರು 2,65,715 ರಾಜ್ಯ ಸರ್ಕಾರಿ ನೌಕರರಿದ್ದಾರೆ. ಎನ್‌ಪಿಎಸ್ ಅಡಿ ಬರುವ 1,169 ನೌಕರರು ಮೃತಪಟ್ಟಿದ್ದಾರೆ. 1,463 ನೌಕರರು ನಿವೃತ್ತಿ ಹೊಂದಿದ್ದಾರೆ. ಈ ಎಲ್ಲಾ ಸರ್ಕಾರಿ ನೌಕರರನ್ನು ಒಪಿಎಸ್ ವ್ಯಾಪ್ತಿಗೆ ತರಬೇಕು ಎಂಬುದು ನೌಕರರ ಪ್ರಮುಖ ಬೇಡಿಕೆಯಾಗಿದೆ.
ಒಪಿಎಸ್ ಮರುಜಾರಿಯಾಗುತ್ತಾ?
ಮೊನ್ನೆ ಜುಲೈ 15ರ ಸಂಜೆ ನಡೆದ ಸಚಿವ ಸಂಪುಟ ಸಭೆಯಲ್ಲಿ 7ನೇ ವೇತನ ಆಯೋಗ ವರದಿಯ ಶಿಫಾರಸು ಜಾರಿಗೆ ಅಧಿಕೃತ ಒಪ್ಪಿಗೆ ಸಿಕ್ಕಿದೆ. ಆದರೆ ಇದೇ ಸಂದರ್ಭದಲ್ಲಿ ಎನ್‌ಪಿಎಸ್ ರದ್ದು ಚರ್ಚೆ ಕೂಡ ನಡೆದು ಶುಭಸುದ್ದಿ ಸಿಗಲಿದೆ ಎಂಬ ನಿರೀಕ್ಷೆ ನೌಕರರಲ್ಲಿತ್ತು. ಆದರೆ ಈ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ಇದೀಗ ಸರ್ಕಾರಿ ನೌಕರರು ಈ ಕುರಿತು ಬೇಗ ತೀರ್ಮಾನ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇಷ್ಟಕ್ಕೂ ಎನ್‌ಪಿಎಸ್ ರದ್ದುಗೊಳಿಸಿ ಒಪಿಎಸ್ ಮರುಜಾರಿಗೊಳಿಸಿದರೆ ಸರ್ಕಾರಕ್ಕೆ ಸುಮಾರು 21,000 ಕೋಟಿ ರೂಪಾಯಿ ಲಭ್ಯವಾಗಲಿದೆ ಎಂದು ಅಂದಾಜಿಸಲಾಗಿದೆ. ಸರ್ಕಾರ ಈ ಬಗ್ಗೆ ಯಾವುದೇ ತೀರ್ಮಾನವನ್ನು ಕೈಗೊಂಡಿಲ್ಲ. ಇದೇ ಜುಲೈ 23ರಂದು ಸರ್ಕಾರಿ ನೌಕರರ ಸಭೆ ನಡೆಯಲಿದ್ದು; ಈ ಸಭೆಯಲ್ಲಿ ಎನ್‌ಪಿಎಸ್ ರದ್ದುಗೊಳಿಸಲು ಹೋರಾಟ ತೀವ್ರಗೊಳಿಸುವ ಕುರಿತು ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
Yes