Sarkari Noukarara Sambala Erike : ರಾಜ್ಯಾದ್ಯಂತ ಸರಕಾರಿ ನೌಕರರು ಸಿಡಿದೆದ್ದಿದ್ದಾರೆ. 7ನೇ ವೇತನ ಆಯೋಗದ ವರದಿ (7th Pay Commission Report) ಜಾರಿಗೆ ಸಂಬಂಧಿಸಿದಂತೆ ಸರಕಾರದ ವಿಳಂಬ ನಡೆಯಿಂದ ಅಸಮಾಧಕ್ಕೊಳಗಾಗಿರುವ ಉದ್ಯೋಗಿಗಳು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಈಗಾಗಲೇ ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಕೆ ಆಂದೋಲನ ನಡೆಸುತ್ತಿದ್ದಾರೆ. ತಿಂಗಳಾ೦ತ್ಯಕ್ಕೆ ಮುಷ್ಕರಕ್ಕೂ ಸನ್ನದ್ಧರಾಗಿದ್ದಾರೆ.
ಹೀಗಿರುವಾಗಲೇ, ನೌಕರರ ಬೇಡಿಕೆ ಈಡೇರಿಕೆ ರಾಜ್ಯ ಸರಕಾರ ಶತಾಯಗತಾಯ ಪ್ರಯತ್ನ ನಡೆಸಿದ್ದು; ಇಂದು (ಜುಲೈ 15) ಆರಂಭವಾಗಲಿರುವ ಮುಂಗಾರು ಅಧಿವೇಶನದಲ್ಲಿ ಸರಕಾರಿ ನೌಕರರ ಬಹುದಿನಗಳ ಬೇಡಿಕೆಯಾಗಿರುವ 7ನೇ ವೇತನ ಆಯೋಗ ವರದಿಯ ಶಿಫಾರಸುಗಳ ಜಾರಿ ಕುರಿತು ಸರಕಾರದ ಖಚಿತ ತೀರ್ಮಾನ ಹೊರಬೀಳಲಿದೆ. ಈ ಸಂಬ೦ಧ ರಾಜ್ಯ ಸಚಿವ ಸಂಪುಟ ಸಭೆ (Cabinet Meeting) ನಿರ್ಣಯ ಕೈಗೊಳ್ಳುವ ನಿರೀಕ್ಷೆಯಿದೆ.
ನೌಕರರ ವೇತನ ಹಾಗೂ ಭತ್ಯೆಗಳ ಪರಿಷ್ಕರಣೆ
ಇಂದು ನಡೆಯಲಿರುವ 1ನೇ ದಿನದ ಅಧಿವೇಶನ ಮುಗಿದ ಬಳಿಕ ಸಾಯಂಕಾಲ ಮುಖ್ಯಮಂತ್ರಿ ಸಿದ್ದರಾಮಯ್ಯರ ಅಧ್ಯಕ್ಷತೆಯಲ್ಲಿ ಸಂಪುಟ ಸಭೆ ನಿಗದಿಯಾಗಿದೆ. ಸದರಿ ಸಂಪುಟ ಕಾರ್ಯಸೂಚಿಯಲ್ಲಿ 7ನೇ ವೇತನ ಆಯೋಗ ವರದಿಯ ಶಿಫಾರಸು ವಿಷಯ ಕೂಡ ಸೇರ್ಪಡೆಯಾಗಿದೆ. ಈಗಾಗಲೇ ಹಣಕಾಸು ಇಲಾಖೆಯ ವರದಿ ಕೂಡ ಮುಖ್ಯಮಂತ್ರಿ ಕೈ ಸೇರಿದ್ದು; ಸಂಪುಟ ಸಭೆ ನೌಕರರ ವೇತನ ಹಾಗೂ ಭತ್ಯೆಗಳ ಪರಿಷ್ಕರಣೆ (Government Employees Salary Hike) ತೀರ್ಮಾನ ಕೈಗೊಳ್ಳಲಿದೆ.
ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗವು ಶೇ.27.5 ವೇತನ ಪರಿಷ್ಕರಣೆಗೆ ಸರಕಾರಕ್ಕೆ ಶಿಫಾರಸು ಮಾಡಿತ್ತು. ಕಳೆದ ಮಾರ್ಚ್ 2023ರಿಂದಲೇ ಶೇ.17 ಮಧ್ಯಂತರ ಪರಿಹಾರ ನೀಡಲಾಗಿದ್ದು, ಇನ್ನು ಗರಿಷ್ಠ ಶೇ.10.5 ವೇತನ ಹೆಚ್ಚಳ ಆಗಬೇಕಿದೆ. ಇದರಿಂದ ಬೊಕ್ಕಸಕ್ಕೆ ಸುಮಾರು 7,500 ಕೋಟಿ ರೂಪಾಯಿ ಹೆಚ್ಚುವರಿ ಹೊರೆ ಬೀಳುವ ನಿರೀಕ್ಷೆಯಿದೆ.
ಹಳೆ ಪಿಂಚಣಿ ಯೋಜನೆ ಮರು ಜಾರಿ?
ಅದೇ ರೀತಿ ಸಂಪುಟದ ಮುಂದೆ ಹೊಸ ಪಿಂಚಣಿ ಯೋಜನೆಯ (NPS) ರದ್ದು ಕಡತ ಕೂಡ ಮಂಡಿನೆಯಾಗಲಿದೆ. ಈ ಕುರಿತು ಹಣಕಾಸು ಇಲಾಖೆ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ. ಹೊಸ ಪಿಂಚಣಿ ಯೋಜನೆ ರದ್ದು ಮಾಡುವುದರಿಂದ ಸರಕಾರಕ್ಕೆ ಯಾವುದೇ ಹೊರೆ ಇಲ್ಲ, ಬದಲಾಗಿ ಉಳಿತಾಯವಾಗಲಿದೆ ಎನ್ನಲಾಗುತ್ತಿದೆ. ಜೊತೆಗೆ ರಾಜ್ಯದ 2.78 ಲಕ್ಷ ಎನ್‌ಪಿಎಸ್ ನೌಕರರಿಗೆ ಅನುಕೂಲವಾಗಲಿದೆ.
ಸದ್ಯಕ್ಕೆ ನಿವೃತ್ತಿಯಾಗಿರುವ ಸರಕಾರಿ ನೌಕರರಿಗೆ ಹೊಸ ಪಿಂಚಣಿ ಯೋಜನೆಯಲ್ಲಿ ತಿಂಗಳಿಗೆ ಕೇವಲ 1,500 ರೂಪಾಯಿ ಪಿಂಚಣಿ ಸಿಗುತ್ತಿದೆ. ಹೊಸ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಟ್ಟಿರುವ ಸುಮಾರು 2.50 ಲಕ್ಷ ನಿವೃತ್ತ ನೌಕರರ ಬಾಳಸಂಚೆ ಬದುಕು ಆರ್ಥಿಕ ಅಭದ್ರತೆಗೆ ಸಿಲುಕುತ್ತಿದೆ. ಈ ಕುರಿತ ಚರ್ಚೆ ಕೂಡ ಮುಂಗಾರು ಅಧಿವೇಶನದಲ್ಲಿ ನಡೆಯಲಿದೆ.