Udyogini Women Loan Scheme 2024 : ಮಹಿಳೆಯರು ಸ್ವಯಂ ಉದ್ಯೋಗ ಕೈಗೊಳ್ಳಲು ಸರಕಾರ 3 ಲಕ್ಷ ರೂಪಾಯಿ ಬಡ್ಡಿ ಇಲ್ಲದ ಸಾಲ, ಸಹಾಯಧನ ಸೌಲಭ್ಯ ನೀಡುತ್ತಿದೆ. ಈ ಯೋಜನೆಯಲ್ಲಿ ಸಾಲ ಪಡೆಯುವುದು ಹೇಗೆ? ಯಾವ್ಯಾವ ಸ್ವಯಂ ಉದ್ಯೋಗಕ್ಕೆ ಸಾಲ ಸಿಗಲಿದೆ? ಅರ್ಜಿ ಸಲ್ಲಿಕೆ ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ…
ಮಹಿಳೆಯರು ಸ್ವಯಂ ಉದ್ಯೋಗ ಕೈಗೊಂಡು ಸ್ವಾವಲಂಬಿ ಜೀವನ ಸಾಗಿಸಲು ಸರಕಾರ ಯಾವುದೇ ರೀತಿಯ ಬಡ್ಡಿ ಇಲ್ಲದೇ 3 ಲಕ್ಷ ರೂಪಾಯಿ ವರೆಗೂ ಸಾಲ ಸೌಲಭ್ಯ (3 Lakh Rupees Interest Free Loan) ನೀಡುತ್ತದೆ. ವಿಶೇಷವೆಂದರೆ ಪಡೆದ 3 ಲಕ್ಷ ರೂಪಾಯಿ ಸಾಲದಲ್ಲಿ ಅರ್ಧಕ್ಕರ್ಧ ಸಾಲಕ್ಕೆ ಸಬ್ಸಿಡಿ ಇದೆ. ಅಂದರೆ ನಿಯಮಕ್ಕೆ ಅನುಗುಣವಾಗಿ ಗರಿಷ್ಠ ಒಂದೂವರೆ ಲಕ್ಷ ರೂಪಾಯಿ ವರೆಗೂ ಸಾಲ ಮನ್ನಾ ಆಗಲಿದೆ!
ಇದು ಉದ್ಯೋಗಿನಿ ಯೋಜನೆ
ಮಹಿಳಾ ಉದ್ಯಮಿಗಳನ್ನು ಉತ್ತೇಜಿಸುವ, ಆ ಮೂಲಕ ಮಹಿಳೆಯರನ್ನು ಸ್ವಾವಲಂಬಿಯನ್ನಾಗಿ ಮಾಡುವ ಸದುದ್ದೇಶದಿಂದ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ‘ಉದ್ಯೋಗಿನಿ’ (Udyogini Scheme) ಯೋಜನೆಯನ್ನು ಜಾರಿಗೆ ತಂದಿದೆ. ಮಹಿಳೆಯರು ಆದಾಯ ಉತ್ಪನ್ನಕರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸ್ವಯಂ ಉದ್ಯೋಗಿಗಳಾಗಲು ಬ್ಯಾಂಕುಗಳ ಮೂಲಕ ಸಾಲ ಮತ್ತು ನಿಗಮದ ಮೂಲಕ ಸಹಾಯಧನ ನೀಡಲಾಗುತ್ತದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧೀನದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು (Karnataka State Womens Development Corporation) ಯೋಜನೆಯನ್ನು ಅನುಷ್ಠಾನ ಮಾಡುತ್ತದೆ. ಸದರಿ ಯೋಜನೆಯಡಿಯಲ್ಲಿ ಒಟ್ಟು 88 ವಿಧದ ಕಿರು ಉದ್ಯಮ ಸ್ಥಾಪಿಸಲು 3 ಲಕ್ಷ ರೂಪಾಯಿ ವರೆಗೂ ಬಡ್ಡಿರಹಿತ ಸಾಲ ಸೌಲಭ್ಯ ಒದಗಿಸಲಾಗುತ್ತದೆ.
ಯಾರಿಗೆ ಎಷ್ಟು ಸಹಾಯಧನ?
ಸಾಮಾನ್ಯ ವರ್ಗದ ಎಲ್ಲ ಮಹಿಳೆಯರು ಈ ಯೋಜನೆಯ ಲಾಭ ಪಡೆಯಬಹುದಾಗಿದೆ. ಇವರಿಗೆ ಘಟಕ ವೆಚ್ಚ ಗರಿಷ್ಟ 3 ಲಕ್ಷ ರೂಪಾಯಿಗಳಾಗಿದ್ದು ಶೇ.30ರಷ್ಟು ಸಹಾಯಧನ ಸಿಗಲಿದೆ. ಅಂದರೆ ಶೇ.30ರಷ್ಟು ಸಾಲವನ್ನು ಮರುಪಾವತಿಸುವಂತಿಲ್ಲ. ಆ ಹಣ ಮನ್ನಾ ಆಗಲಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಘಟಕ ವೆಚ್ಚ ಕನಿಷ್ಟ 1 ಲಕ್ಷದಿಂದ ಗರಿಷ್ಟ 3 ಲಕ್ಷ ರೂಪಾಯಿಗಳಾಗಿದ್ದು ಶೇ.50ರಷ್ಟು ಸಹಾಯಧನ ಸಿಗಲಿದೆ. ಅಂದರೆ ಈ ವರ್ಗದ ಮಹಿಳೆಯರು ಶೇ.50ರಷ್ಟು ಹಣ ಮರುಪಾವತಿಸುವಂತಿಲ್ಲ.
ಸಾಲ ಪಡೆಯಲು ಅರ್ಹತೆಗಳೇನು?
ಈ ಸಾಲ ಸೌಲಭ್ಯಕ್ಕೆ ಕುಟುಂಬದ ಮಹಿಳೆಯರು ಮಾತ್ರ ಅರ್ಹರಾಗಿರುತ್ತಾರೆ. 18ರಿಂದ 55 ವರ್ಷದೊಳಗಿನ ಮಹಿಳೆಯರು ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಪರಿಶಿಷ್ಟ ಜಾತಿ/ ಪಂಗಡದವರಾಗಿದ್ದಲ್ಲಿ ವಾರ್ಷಿಕ ಆದಾಯ 2 ಲಕ್ಷ ರೂಪಾಯಿಗಳ ಒಳಗಿರಬೇಕು.
ಸಾಮಾನ್ಯ ವರ್ಗದವರ ವಾರ್ಷಿಕ ಆದಾಯ 1.5 ಲಕ್ಷ ರೂಪಾಯಿಗಳ ಒಳಗಿರಬೇಕು. ಅರ್ಜಿ ಸಲ್ಲಿಸಲು ಬಯಸುವ ಮಹಿಳೆಯರು ಯಾವುದೇ ಬ್ಯಾಂಕಿನಲ್ಲಿ ಸುಸ್ತಿದಾರಳಾಗಿರಬಾರದು. ಸುಸ್ತಿದಾರಳಾಗಿದ್ದರೆ ಅಂಥವರಿಗೆ ಈ ಸಾಲ ಸೌಲಭ್ಯ ಸಿಗುವುದಿಲ್ಲ. ಅರ್ಜಿದಾರರು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮಾಡಿಸಿರಬೇಕು.
ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳೇನು?
- ಜಾತಿ/ಆದಾಯ ಪ್ರಮಾಣ ಪತ್ರ
- ರೇಷನ್ ಕಾರ್ಡ್
- ಆಧಾರ್ ಕಾರ್ಡ್
- ಶಾಲಾ ವರ್ಗಾವಣೆ ಪತ್ರ
- ಎಸ್‌ಎಸ್‌ಎಲ್‌ಸಿ ಅಂಕ ಪಟ್ಟಿ
- ಯೋಜನಾ ವರದಿ
- ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ
- ವಿಧವೆ, ಅಂಗವಿಕಲರು, ಸಂಕಷ್ಟಗೊಳಗಾದ ಮಹಿಳೆಯರು ತಮ್ಮ ಅರ್ಜಿಯೊಂದಿಗೆ ಪ್ರಮಾಣ ಪತ್ರವನ್ನು ಲಗತ್ತಿಸಬೇಕು.
ಯಾವ್ಯಾವ ಸ್ವಯಂ ಉದ್ಯೋಗಕ್ಕೆ ಸಾಲ ಸಿಗಲಿದೆ?
ಉದ್ಯೋಗಿನಿ ಯೋಜನೆಯಡಿ ಲಭ್ಯವಿರುವ 3 ಲಕ್ಷ ರೂಪಾಯಿ ಸಾಲ ಪಡೆದು ಒಟ್ಟು 88 ವಿಧದ ಸ್ವಯಂ ಉದ್ಯೋಗವನ್ನು ಕೈಗೊಳ್ಳಬಹುದು. ಬೇಕರಿ, ಮೀನು ಮಾರಾಟ, ದಿನಸಿ ಅಂಗಡಿ, ಉಪ್ಪಿನಕಾಯಿ, ಅಗರಬತ್ತಿ, ಕಾಫಿ-ಟೀ ಅಂಗಡಿ, ಟೈಲರಿಂಗ್, ಎಸ್‌ಟಿಡಿ ಬೂತ್, ಬ್ಯೂಟಿ ಪಾರ್ಲರ್, ಅಗರಬತ್ತಿ ತಯಾರಿಕೆ, ಕ್ಲಿನಿಕ್, ಜಿಮ್, ಸಿಹಿ ಅಂಗಡಿ, ಹಿಟ್ಟಿನ ಗಿರಣಿ, ಪೋಟೋ ಸ್ಟೂಡಿಯೋ, ಕಾಂಡಿಮೆ೦ಟ್ಸ್, ಚಪ್ಪಲಿ ಮಾರಾಟ ಮಳಿಗೆ ಸೇರಿದಂತೆ 88ಕ್ಕೂ ಹೆಚ್ಚು ಪ್ರಮಾಣದ ಸಣ್ಣ ಉದ್ಯಮಗಳ ಆರಂಭಕ್ಕೆ ಸಾಲ ಸಿಗಲಿದೆ.
ಸ್ವಂತ ಮನೆಗಾಗಿ ಗೃಹ ಸಾಲ ಪಡೆಯಬೇಕೆ? ಇಲ್ಲಿದೆ ಸಾಲ ಪಡೆಯುವ ಮಹತ್ವದ ಮಾಹಿತಿ Types of Home Loan
ಹೇಗೆ ಅರ್ಜಿ ಸಲಿಸುವುದು?
ಪ್ರತೀ ವರ್ಷ ನವೆಂಬರ್ ಅಥವಾ ಡಿಸೆಂಬರ್ ತಿಂಗಳಿನಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ‘ಉದ್ಯೋಗಿನಿ’ ಯೋಜನೆಗೆ ಅರ್ಹ ಮಹಿಳೆಯರಿಂದ ಅರ್ಜಿ ಆಹ್ವಾನಿಸುತ್ತದೆ. ಆಸಕ್ತ, ಅರ್ಹ ಮಹಿಳೆಯರು ಆ ಸಮಯದಲ್ಲಿ ಮೇಲ್ಕಾಣಿಸಿದ ದಾಖಲೆ ಸಹಿತ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಉದ್ಯೋಗಿನಿ ಯೋಜನೆ ಅರ್ಜಿ ಆಹ್ವಾನಿಸಿದ ಸಂದರ್ಭದಲ್ಲಿ ನಿಮ್ಮ ಹತ್ತಿರದ ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ, ಬೆಂಗಳೂರು ಒನ್, ಕರ್ನಾಟಕ ಒನ್ ಸೇವಾ ಕೇಂದ್ರಗಳಿಗೆ ಹೋಗಿ ‘ಸೇವಾ ಸಿಂಧು’ ಮೂಲಕ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗೆ : ಆಯಾ ಜಿಲ್ಲೆಯ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲೆಯ ಅಭಿವೃದ್ಧಿ ನಿರೀಕ್ಷಕರು, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಕಛೇರಿ ಸಂಪರ್ಕಿಸಬಹುದಾಗಿದೆ.
4 thoughts on “ಮಹಿಳೆಯರಿಗೆ ಬಡ್ಡಿ ಇಲ್ಲದೇ 3 ಲಕ್ಷ ರೂಪಾಯಿ ಸಾಲ | 1.5 ಲಕ್ಷ ರೂಪಾಯಿ ಸಬ್ಸಿಡಿ | ಈ ಸೌಲಭ್ಯ ಪಡೆಯುವುದು ಹೇಗೆ? ಮಾಹಿತಿ ಇಲ್ಲಿದೆ… Udyogini Women Loan Scheme 2024”