Dharwad Krishi Mela 2025- ಧಾರವಾಡದಲ್ಲಿ ಇಂದಿನಿಂದ ರೈತರ ಜಾತ್ರೆ | ಕೃಷಿಮೇಳ 2025 ಭರ್ಜರಿ ಪ್ರಾರಂಭ

ಇಂದಿನಿಂದ ಧಾರವಾಡ ಕೃಷಿಮೇಳ 2025 (Dharwad Krishi Mela 2025) ಅದ್ಧೂರಿಯಾಗಿ ಆರಂಭವಾಗಿದೆ. ಈ ಮೇಳದ ವಿಶೇಷತೆ ಏನು? ಮೇಳದಲ್ಲಿ ಏನೆಲ್ಲ ಇರಲಿದೆ? ಎಂಬ ಮಾಹಿತಿ ಇಲ್ಲಿದೆ…
ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಇಂದಿನಿಂದ (ಸೆಪ್ಟೆಂಬರ್ 13) ನಾಲ್ಕು ದಿನಗಳ ಕಾಲ ರೈತರ ಜಾತ್ರೆ ‘ಕೃಷಿ ಮೇಳ 2025’ ಕಳೆಗಟ್ಟಲಿದೆ. ಸೆಪ್ಟೆಂಬರ್ 13ರಿಂದ 16ರ ವರೆಗೆ ನಡೆಯುವ ಈ ಬಾರಿಯ ಕೃಷಿ ಮೇಳವು ‘ಪೌಷ್ಟಿಕ ಆಹಾರ ಭದ್ರತೆಗೆ ಮಣ್ಣಿನ ಆರೋಗ್ಯ ಮತ್ತು ಸಾಂಪ್ರದಾಯಿಕ ತಳಿಗಳು’ ಎಂಬ ಧ್ಯೇಯ ಹೊಂದಿದೆ.
ಫಲ-ಪುಷ್ಪ ಪ್ರದರ್ಶನ, ಬೀಜ ಮೇಳ, ಶ್ರೇಷ್ಠ ಕೃಷಿಕ ಹಾಗೂ ಶ್ರೇಷ್ಠ ಕೃಷಿಕ ಮಹಿಳೆ ಪ್ರಶಸ್ತಿ ಪ್ರದಾನ ಹಾಗೂ ಕೃಷಿ ವಿಜ್ಞಾನಿಗಳಿಂದ ವಿವಿಧ ಉಪನ್ಯಾಸ ಆಯೋಜಿಸಲಾಗುತ್ತಿದೆ.
ಇದನ್ನೂ ಓದಿ: Unauthorized BPL Ration Card- 12 ಲಕ್ಷ ಬಿಪಿಎಲ್ ಕಾರ್ಡ್ ರದ್ದತಿಗೆ ಸರ್ಕಾರದ ಸಿದ್ಧತೆ | ನೀವು ಈ ಪಟ್ಟಿಯಲ್ಲಿದ್ದೀರಾ?

ಸೆಪ್ಟೆಂಬರ್ 15ರಂದು ಬೆಳಗ್ಗೆ 11:30ಕ್ಕೆ ಸಿಎಂ ಸಿದ್ದರಾಮಯ್ಯ ಕೃಷಿ ಮೇಳಕ್ಕೆ ಅಧಿಕೃತವಾಗಿ ಚಾಲನೆ ನೀಡಲಿದ್ದರೂ, 13ರಿಂದಲೇ ಮೇಳ ಶುರುವಾಗಲಿದೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸೇರಿದಂತೆ ಗಣ್ಯರು ಉದ್ಘಾಟನಾ ಸಮಾರಂಭದ ಭಾಗವಾಗಲಿದ್ದಾರೆ.
ಈ ಬಾರಿ ಕೃಷಿಯಲ್ಲಿ ಕೃತಕ ಬುದ್ಧಿಮತ್ತೆ (AI) ಕುರಿತು ಉಪನ್ಯಾಸ ಆಯೋಜಿಸುತ್ತಿರುವುದು ವಿಶೇಷವಾಗಿದೆ. ಸಾಧಕ ಕೃಷಿಕರು ತಮ್ಮ ಯಶೋಗಾಥೆ ಹಂಚಿಕೊಳ್ಳಲಿದ್ದಾರೆ. ವಿಚಾರ ವಿನಿಮಯ ಗೋಷ್ಠಿಗಳಲ್ಲಿ ಕೃಷಿ ವಿಜ್ಞಾನಿಗಳು ರೈತರ ಸಂದೇಹಗಳನ್ನು ಬಗೆಹರಿಸಲಿದ್ದಾರೆ.
ನೂರಾರು ಕೃಷಿ ಹಾಗೂ ವಾಣಿಜ್ಯ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಮೇಳದಲ್ಲಿ ಪ್ರದರ್ಶಿಸುತ್ತಿದ್ದು, ವರ್ಷದಿಂದ ವರ್ಷಕ್ಕೆ ಧಾರವಾಡ ಕೃಷಿ ಮೇಳಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಕೃಷಿ ಮಾಹಿತಿ ಕಣಜ, ತಜ್ಞರ ಮಾರ್ಗದರ್ಶನ, ಉತ್ಪನ್ನಗಳ ಪರಿಚಯ ಮಾಡಿಕೊಳ್ಳಲು ಬರುತ್ತಾರೆ ಎಂಬ ನಿರೀಕ್ಷೆ ಧಾರವಾಡ ಕೃಷಿ ವಿಶ್ವವಿದ್ಯಾಲಯದ್ದಾಗಿದೆ. ಆದರೆ, ನಿನ್ನೆ (ಸೆಪ್ಟೆಂಬರ್ 12) ಏಕಾಏಕಿ ಮಧ್ಯಾಹ್ನದಿಂದ ಭಾರಿ ಮಳೆ ಸುರಿದಿದ್ದು, ಮೇಳದ ಉತ್ಸಾಹಕ್ಕೆ ತುಸು ಅಡ್ಡಿಯುಂಟಾಗಿದೆ.