ಸಿಇಟಿ ಸೀಟ್ ಬ್ಲಾಕಿಂಗ್ (KCET Seat Blocking) ತಡೆಗೆ ಕೆಇಎ ಹೊಸ ಕಟ್ಟುನಿಟ್ಟಿನ ಕ್ರಮಗಳನ್ನು ಕ್ಯಗೊಂಡಿದ್ದು; ಬೇಕಾಬಿಟ್ಟಿ ಆಪ್ಷನ್ ಎಂಟ್ರಿಗೆ ಬ್ರೇಕ್ ಹಾಕಿದೆ. ಈ ಕುರಿತ ಮಾಹಿತಿ ಇಲ್ಲಿದೆ…
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸಿಇಟಿ ಸೀಟ್ ಹಂಚಿಕೆ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕಗೊಳಿಸಲು ಹಾಗೂ ಸೀಟ್ ಬ್ಲಾಕಿಂಗ್ ದಂಧೆಯನ್ನು ತಡೆಗಟ್ಟಲು ಈ ವರ್ಷದಿಂದ ಹೊಸ ತಂತ್ರಜ್ಞಾನಾಧಾರಿತ ನಿಯಮಗಳನ್ನು ಜಾರಿಗೆ ತಂದಿದೆ. ಸ್ಫಷ್ಟವಾಗಿ ಹೇಳುವುದಾದರೆ, ವಿದ್ಯಾರ್ಥಿಗಳು ಬೇಕಾಬಿಟ್ಟಿ ಆಪ್ಷನ್ ಎಂಟ್ರಿ ಮಾಡುವುದಕ್ಕೆ ಕಡಿವಾಣ ಹಾಕಲಾಗಿದೆ!
ಸಿಇಟಿ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಕೆಲವು ವಿದ್ಯಾರ್ಥಿಗಳು ಉತ್ತಮ ಕಾಲೇಜು ಹಾಗೂ ಕೋರ್ಸುಗಳ ಆಯ್ಕೆಯನ್ನು ಎಂಟ್ರಿ ಮಾಡುತ್ತಾರೆ. ಆದರೆ, ಅವರು ಈ ಸೀಟುಗಳನ್ನು ತಾವೇ ಪಡೆಯುವುದಿಲ್ಲ. ಇದರಿಂದ ಇತರ ಅರ್ಹ ವಿದ್ಯಾರ್ಥಿಗಳಿಗೆ ಆ ಸೀಟುಗಳು ಸಿಗದಂತಾಗುತ್ತದೆ. ಈ ಕ್ರಮದಿಂದ ವಿದ್ಯಾರ್ಥಿಗಳ ಅವಕಾಶ ಕಸಿದುಕೊಂಡಂತಾಗುತ್ತದೆ.
ಕಳೆದ ವರ್ಷ ಬೇಕಾಬಿಟ್ಟಿ ಆಪ್ಷನ್ ಎಂಟ್ರಿ
ಕಳೆದ ವರ್ಷ (2024) 1,450 ವಿದ್ಯಾರ್ಥಿಗಳು ಆಪ್ಷನ್ ಎಂಟ್ರಿ ಮಾಡಿ, ನಂತರ ಸೀಟು ಪಡೆಯದೆ ಪ್ರಕ್ರಿಯೆಯಿಂದ ಹಿಂದೆ ಸರಿದಿದ್ದರು. ಇದರಿಂದ ಅನೇಕ ಆಸಕ್ತ ವಿದ್ಯಾರ್ಥಿಗಳು ತಮಗೆ ಸೂಕ್ತವಾದ ಸೀಟುಗಳನ್ನು ಪಡೆಯಲು ವಿಫಲರಾಗಿದ್ದರು.
ಸುಮಾರು 1,600 ವಿದ್ಯಾರ್ಥಿಗಳು ನಕಲಿ ವಿವರಗಳೊಂದಿಗೆ ಸೀಟ್ ಬ್ಲಾಕ್ ಮಾಡಿದ ಅನುಮಾನದ ಮೇಲೆ ತನಿಖೆ ನಡೆಯುತ್ತಿದೆ. ಆದರೆ, ವಿದ್ಯಾರ್ಥಿಗಳ ವಿಳಾಸ, ಆದಾರ್ ನಂಬರ್ ಹಾಗೂ ಪ್ರಾಮಾಣಿಕ ಮಾಹಿತಿಯ ಕೊರತೆಯಿಂದ ತನಿಖೆಗೆ ಅಡ್ಡಿ ಉಂಟಾಗಿದೆ.

ಈ ಬಾರಿ ಹೊಸ ನಿಯಮಗಳು ಜಾರಿಗೆ
ಈ ಬಾರಿ KEA ಹೀಗೆ ಬೇಕಾಬಿಟ್ಟಿ ಆಪ್ಷನ್ ಎಂಟ್ರಿ ಹಂತದಲ್ಲಿಯೇ ಕಠಿಣ ಕ್ರಮಗಳನ್ನು ಜಾರಿಗೊಳಿಸಿದೆ. ಹೊಸ ಕ್ರಮಗಳು ಹೀಗಿವೆ:
- ಆಪ್ಷನ್ ಎಂಟ್ರಿ ಆರಂಭದಲ್ಲಿಯೇ ₹750/- ಶುಲ್ಕ ಪಾವತಿಸಬೇಕು. ಇದರಿಂದ ವಿದ್ಯಾರ್ಥಿಯ ನಿಜವಾದ ಉದ್ದೇಶವನ್ನು ಪತ್ತೆ ಹಚ್ಚಲು ಸಹಾಯವಾಗುತ್ತದೆ.
- ಆಧಾರ್ ಮೂಲಕ ದೃಢೀಕರಣದಿಂದ ವಿದ್ಯಾರ್ಥಿಯ ಖಚಿತ ಗುರುತನ್ನು ದಾಖಲಿಸಲಾಗುತ್ತಿದೆ.
- ಕಾಲೇಜಿಗೆ ಹೋಗುವ ಸಮಯದಲ್ಲಿ OTP ರಿಜಿಸ್ಟರ್ ಮಾಡಿದ ಮೊಬೈಲ್‌ಗೆ ಬರುತ್ತದೆ. ಇದರಿಂದ ನಕಲಿ ಪ್ರವೇಶ ಸಾಧ್ಯವಿಲ್ಲ.
- Seat allotment ಸಂದರ್ಭದಲ್ಲಿ ವಿದ್ಯಾರ್ಥಿಯ ಮುಖ ಸ್ಕ್ಯಾನ್ ಮಾಡಲಾಗುತ್ತದೆ. ಇದು ಪರ್ಸನಲ್ ಐಡೆಂಟಿಟಿಯನ್ನು ಮತ್ತಷ್ಟು ಭದ್ರಗೊಳಿಸುತ್ತದೆ.
ಕಾನೂನು ಕ್ರಮಕ್ಕೂ ಸುಲಭವಾದ ಮಾರ್ಗ
ಹಿಂದಿನ ಪ್ರಕ್ರಿಯೆಗಳಲ್ಲಿ ವಿದ್ಯಾರ್ಥಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವುದು ಕಷ್ಟವಾಗಿತ್ತು. ವಿಳಾಸ, ವಿಳಾಸದ ದೃಢೀಕರಣ, ಭದ್ರ ದಾಖಲೆಗಳ ಕೊರತೆಯಿಂದ ಅವರ ಮೇಲಿನ ಕ್ರಮಗಳು ವಿಳಂಬಗೊಂಡವು. ಆದರೆ ಈಗ
ಶುಲ್ಕ ಪಾವತಿಯ ಬ್ಯಾಂಕ್ ಮಾಹಿತಿ, ಪಾವತಿ ಸ್ಥಳದ IP ವಿಳಾಸ, ಮುಖ ಗುರುತು, OTP ದಾಖಲೆಗಳು ಸುಲಭವಾಗಿ ಸಿಗುವುದರಿಂದ ಬೇಕಾಬಿಟ್ಟಿ ಆಪ್ಷನ್ ಎಂಟ್ರಿ ಮಾಡುವ ವಿದ್ಯಾರ್ಥಿಗಳ ವಿರುದ್ಧದ ಕ್ರಮಕ್ಕೆ ಸಾಕ್ಷ್ಯಾಧಾರವಾಗಲಿವೆ.
ಈ ಹೊಸ ಕ್ರಮಗಳು ವಿದ್ಯಾರ್ಥಿಗಳನ್ನು ಜವಾಬ್ದಾರಿಯುತ ಹಾಗೂ ಪ್ರಾಮಾಣಿಕ ನಿರ್ಧಾರಗಳನ್ನು ತೆಗೆದುಕೊಳ್ಳುವತ್ತ ಪ್ರೇರೇಪಿಸುತ್ತವೆ. ಪಾರದರ್ಶಕ ಸೀಟು ಹಂಚಿಕೆಗೆ ಸಹಕಾರಿಯಾಗಲಿದೆ ಎಂಬುವುದು ಕೆಇಎ ಅಭಿಮತವಾಗಿದೆ.
ವಿದ್ಯಾರ್ಥಿಗಳಲ್ಲಿ ಜವಾಬ್ದಾರಿಯುತ ಅರಿವು ಅಗತ್ಯ
ಇಷ್ಟಕ್ಕೂ ಸಿಇಟಿ ಅಥವಾ ಯಾವುದೇ ಪ್ರವೇಶ ಪರೀಕ್ಷೆಯಲ್ಲಿ ಭಾಗವಹಿಸುವುದು ಕೇವಲ ಸೀಟು ಪಡೆಯುವ ಸ್ಪರ್ಧೆ ಅಲ್ಲ. ಅದು ಶಿಸ್ತು, ಪ್ರಾಮಾಣಿಕತೆ, ನೈತಿಕತೆ ಹಾಗೂ ಇತರರ ಹಕ್ಕುಗಳನ್ನು ಗೌರವಿಸುವ ಅರಿವಿನ ಪರೀಕ್ಷೆಯೂ ಹೌದು. ಬೇಕಾಬಿಟ್ಟಿ ಆಪ್ಷನ್ ಎಂಟ್ರಿ ಮಾಡುವ ಮೂಲಕ ಕೆಲವರು ಇತರರ ಪರಿಶ್ರಮವನ್ನು ಹಾನಿ ಮಾಡುತ್ತಿದ್ದಾರೆ.
ವಿದ್ಯಾರ್ಥಿಗಳೇ, ಆಪ್ಷನ್ ಎಂಟ್ರಿ ಮಾಡುವ ಮುನ್ನ, ನಿಮ್ಮ ಆಯ್ಕೆ ಹಾಗೂ ಉದ್ದೇಶಗಳ ಬಗ್ಗೆ ಸ್ಪಷ್ಟತೆ ಇಟ್ಟುಕೊಳ್ಳಿ. ಬೇಡದ ಬ್ಲಾಕಿಂಗ್, ನಕಲಿ ಎಂಟ್ರಿಗಳಿಂದ ದೂರವಿರಿ. ಇದು ನಿಮ್ಮಂತಹ ಹತ್ತು ಮಂದಿಗೆ ಅನ್ಯಾಯವಾಗಬಹುದು. ಹೊಸ ನಿಯಮಗಳು ನಿಮ್ಮ ಭವಿಷ್ಯವನ್ನು ರಕ್ಷಿಸಲು ಜಾರಿಗೆ ಬಂದಿವೆ, ಪ್ರಾಮಾಣಿಕರಾಗಿ ತೊಡಗಿಸಿಕೊಳ್ಳಿ…