2025-26ನೇ ಸಾಲಿನಿಂದಲೇ ರಾಜ್ಯದ 4,134 ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭಿಸಲು (Karnataka Govt English Medium Schools) ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದ ಮೇಲೆ ಹೆಚ್ಚುತ್ತಿರುವ ವಿದ್ಯಾರ್ಥಿ ಮತ್ತು ಪಾಲಕರ ಬೇಡಿಕೆಗೆ ಸ್ಪಂದನೆ ನೀಡಲು ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. 2025-26ನೇ ಶೈಕ್ಷಣಿಕ ವರ್ಷದಿಂದಲೇ ರಾಜ್ಯದ 4,134 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮ (ಕನ್ನಡ ಮತ್ತು ಇಂಗ್ಲೀಷ್) ತರಗತಿಗಳನ್ನು ಆರಂಭಿಸಲು ಸರಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ.
ಯೋಜನೆಯ ಪ್ರಮುಖ ಉದ್ದೇಶ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಯುಕ್ತ ಡಾ. ಕೆ.ವಿ. ತ್ರಿಲೋಕಚಂದ್ರ ಅವರು ನೀಡಿರುವ ಮಾಹಿತಿಯಂತೆ, ಈ ಹೊಸ ಕ್ರಮವು ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಹೆಚ್ಚಿಸಲು ಹಾಗೂ ಗ್ರಾಮೀಣ ಮತ್ತು ನಗರ ಭಾಗದ ಮಕ್ಕಳಿಗೆ ಉತ್ತಮ ಮಟ್ಟದ ಆಂಗ್ಲ ಭಾಷಾ ಶಿಕ್ಷಣವನ್ನು ನೀಡಲು ರೂಪುಗೊಂಡಿದೆ.
ಇದರಿಂದ ಸರ್ಕಾರಿ ಶಾಲೆಗಳ ಮೇಲೆ ಪಾಲಕರ ವಿಶ್ವಾಸ ಹೆಚ್ಚಿಸಿ ಖಾಸಗಿ ಶಾಲೆಗಳ ಮೇಲೆ ಇರುವ ಅವಲಂಬನೆ ಕಡಿಮೆಯಾಗುವುದು ಸರ್ಕಾರದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಇದೇ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಆಂಗ್ಲ ಮಾಧ್ಯಮ ತರಗತಿಗೆ ಚಾಲನೆ ನೀಡಲಾಗಿದೆ.
ಇದೇ ವರ್ಷದಿಂದಲೇ ಇಂಗ್ಲೀಷ್ ಮಿಡಿಯಂ ಆರಂಭ
ಸರ್ಕಾರ 2025-26ನೇ ಸಾಲಿನ ಬಜೆಟ್‌ನಲ್ಲಿ ಈ ಯೋಜನೆಯನ್ನು ಘೋಷಿಸಿದ್ದು, ಸ್ಥಳೀಯವಾಗಿ ಲಭ್ಯವಿರುವ ಮೂಲಸೌಕರ್ಯ ಮತ್ತು ಸೌಲಭ್ಯಗಳನ್ನು ಬಳಸಿಕೊಂಡು ಈ ವರ್ಷ 1ನೇ ತರಗತಿಗೆ ಆಂಗ್ಲ ಮಾಧ್ಯಮ ತರಗತಿಗಳನ್ನು ಪ್ರಾರಂಭಿಸಲು ಅನುಮತಿ ನೀಡಿದೆ.
ಇದೇ ಜುಲೈ 31ರ ವರೆಗೂ ಈ ತರಗತಿಗಳಿಗೆ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ನಡೆಯಲಿದೆ. ಈ ಕಾಲಾವಧಿಯಲ್ಲಿ ಸಂಬಂಧಪಟ್ಟ ಶಾಲೆಗಳಲ್ಲಿ ಮಕ್ಕಳನ್ನು ದಾಖಲಿಸಲು ಪಾಲಕರಿಗೆ ಅವಕಾಶವಿದೆ.
ಈ ತರಗತಿಗಳಿಗೆ ಅಗತ್ಯವಿರುವ ಆಂಗ್ಲ ಭಾಷಾ ಶಿಕ್ಷಕರನ್ನು ನೇಮಿಸಲು ಸರ್ಕಾರ ಅನುಮತಿ ನೀಡಿದ್ದು, ಅಧ್ಯಾಪಕರ ಹುದ್ದೆಗಳ ಹೆಚ್ಚುವರಿ ಪ್ರಕ್ರಿಯೆ ಮೂಲಕ ಶಿಕ್ಷಕರನ್ನು ವ್ಯವಸ್ಥಿತವಾಗಿ ನಿಯೋಜನೆ ಮಾಡುವ ಯೋಜನೆ ರೂಪಿಸಲಾಗಿದೆ.

ಈಗಾಗಲೇ 4,404 ಶಾಲೆಗಳಲ್ಲಿ ದ್ವಿಭಾಷಾ ತರಗತಿಗಳು
ರಾಜ್ಯದಲ್ಲಿ ಇಂಗ್ಲಿಷ್ ಮಾಧ್ಯಮದ ಪ್ರಾಯೋಗಿಕ ಪರಿಚಯ 2019-20ನೇ ಸಾಲಿನಿಂದ ಆರಂಭಗೊಂಡಿತ್ತು. ನಂತರದ ವರ್ಷಗಳಲ್ಲಿ ಈ ಕ್ರಮ ಹಂತ ಹಂತವಾಗಿ ವಿಸ್ತರಿಸಲಾಯಿತು. 2024-25ನೇ ಸಾಲಿನಲ್ಲಿ 1,792 ಶಾಲೆಗಳಿಗೆ ಹೊಸದಾಗಿ ದ್ವಿಭಾಷಾ ತರಗತಿಗಳಿಗೆ ಅನುಮತಿ ನೀಡಲಾಯಿತು.
ಬಳಿಕ ಈ ವರೆಗೆ ಸರ್ಕಾರಿ ಪ್ರಾಥಮಿಕ ಶಾಲೆ, ಕರ್ನಾಟಕ ಪಬ್ಲಿಕ್ ಸ್ಕೂಲ್, ಮತ್ತು ಪಿಎಂಶ್ರೀ ಶಾಲೆಗಳನ್ನು ಸೇರಿಸಿ ಒಟ್ಟು 4,404 ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮದ ತರಗತಿಗಳು ಆರಂಭಗೊಂಡಿವೆ. ಅದರಲ್ಲಿ ಬೆಂಗಳೂರಿನಲ್ಲಿಯೇ 1,465 ಶಾಲೆಗಳು ಇವೆ ಎಂಬುದು ಗಮನಾರ್ಹ.
Solar Free Electricity- ಮನೆಗೆ 20 ವರ್ಷ ಉಚಿತ ಸೋಲಾರ್ ವಿದ್ಯುತ್ ಪಡೆಯಲು ಹೀಗೆ ಅರ್ಜಿ ಸಲ್ಲಿಸಿ…
ಪ್ರೌಢಶಾಲೆಗಳಿಗೆ ಕೂಡ ವಿಸ್ತರಣೆ
ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಮುಂದಿನ ಹಂತದಲ್ಲಿ ಸತತ ಶಿಕ್ಷಣ ನೀಡಲು ಪ್ರೌಢಶಾಲೆಗಳಲ್ಲಿ ಕೂಡ ಆಂಗ್ಲ ಮಾಧ್ಯಮ ಕಲಿಕೆ ಜಾರಿಗೆ ತರಲು ಯೋಜನೆ ರೂಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮೂಲಸೌಕರ್ಯ, ಸುಸಜ್ಜಿತ ಕಟ್ಟಡಗಳು, ಪೀಠೋಪಕರಣಗಳು ಹಾಗೂ ಶಿಕ್ಷಕರ ಲಭ್ಯತೆ ಇರುವ ಶಾಲೆಗಳಲ್ಲಿ ಹಂತ ಹಂತವಾಗಿ ಆಂಗ್ಲ ಮಾಧ್ಯಮ ಕಲಿಕೆ ನೀಡಲು ಕ್ರಮ ಕೈಗೊಳ್ಳಲಾಗಿದೆ.
ಉದಾಹರಣೆಗೆ, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಬಿಳಲುಕೊಪ್ಪ ಸರ್ಕಾರಿ ಪ್ರೌಢಶಾಲೆ, ಹೊಸೂರು-ಗುಡ್ಡಕೇರಿ ಸರ್ಕಾರಿ ಪ್ರೌಢಶಾಲೆ, ಹೆದ್ದೂರು ಸರ್ಕಾರಿ ಪ್ರೌಢಶಾಲೆ ಮತ್ತು ತೀರ್ಥಹಳ್ಳಿ ಸರ್ಕಾರಿ ಪ್ರೌಢಶಾಲೆಗಳಲ್ಲಿ 2025-26ನೇ ಶೈಕ್ಷಣಿಕ ವರ್ಷದಿಂದ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಆರಂಭಿಸಲು ಅನುಮತಿ ನೀಡಲಾಗಿದೆ.
ಸುಸಜ್ಜಿತ ಶಾಲೆಗಳಿಗೆ ಆದ್ಯತೆ
ಹೊಸ ದ್ವಿಭಾಷಾ ತರಗತಿಗಳಿಗೆ ಶಾಲೆಗಳ ಆಯ್ಕೆ ಪ್ರಕ್ರಿಯೆಯು ವಿಶೇಷವಾಗಿ ರೂಪುಗೊಂಡಿದೆ. ಯಾವ ಶಾಲೆಗಳಲ್ಲಿ ಹೆಚ್ಚು ವಿದ್ಯಾರ್ಥಿಗಳ ಹೊಸ ದಾಖಲಾತಿ ಆಗುತ್ತದೆ ಎಂಬುದನ್ನು ಪ್ರಮುಖ ಮಾನದಂಡವಾಗಿ ತೆಗೆದುಕೊಳ್ಳಲಾಗಿದೆ.
ಪ್ರತಿ ತಾಲೂಕು ಅಥವಾ ವಲಯದಲ್ಲಿ ಅತಿ ಹೆಚ್ಚು ದಾಖಲಾತಿ ಇರುವ ಮೊದಲ 15 ಶಾಲೆಗಳಿಗೆ ಆದ್ಯತೆ ನೀಡಲು ಸೂಚಿಸಲಾಗಿದೆ. ಇಂತಹ 15 ಶಾಲೆಗಳು ಲಭ್ಯವಿಲ್ಲದಿದ್ದಲ್ಲಿ ಉಳಿದ ಎಲ್ಲಾ ಅರ್ಹ ಶಾಲೆಗಳನ್ನು ಪರಿಗಣಿಸಬಹುದು.
ಈ ರೀತಿಯ ಆಯ್ಕೆ ಪ್ರಕ್ರಿಯೆ ಮೂಲಕ ಸರಿಯಾದ ಸ್ಥಳದಲ್ಲಿ ಸೂಕ್ತ ಸಂಪನ್ಮೂಲಗಳ ಬಳಕೆ ಮಾಡಿ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸಲು ಶಿಕ್ಷಣ ಇಲಾಖೆ ಬದ್ಧವಾಗಿದೆ. ಮಕ್ಕಳಿಗೆ ತಮ್ಮ ಮಾತೃಭಾಷೆಯ ಜೊತೆಗೆ ಆಂಗ್ಲ ಭಾಷೆಯ ನೈಪುಣ್ಯ ಬೆಳೆಸಲು ಹಾಗೂ ಅವರ ಭವಿಷ್ಯಕ್ಕೆ ಹೆಚ್ಚು ಅವಕಾಶಗಳು ಕಲ್ಪಿಸಲು ಈ ಯೋಜನೆ ನೆರವಾಗಲಿದೆ.