ಹೈನುಗಾರಿಕೆ, ಕೋಳಿ, ಕುರಿ-ಮೇಕೆ ಸಾಕಾಣಿಕೆಗೆ ಸಂಬಂಧಿಸಿದ ಪಶುಪಾಲನಾ ಇಲಾಖೆಯ 2025-26ನೇ ಸಾಲಿನ ಪ್ರಮುಖ ಸಬ್ಸಿಡಿ ಯೋಜನೆಗಳ (Karnataka Animal Husbandry Subsidy Schemes) ಸಂಪೂರ್ಣ ಮಾಹಿತಿ ಇಲ್ಲಿದೆ…
ಕೃಷಿ ಜೊತೆಗೆ ಪಶುಪಾಲನೆಯೂ ಗ್ರಾಮೀಣ ಜೀವನದ ಅಡಿಪಾಯವಾಗಿದೆ. ಹೈನುಗಾರಿಕೆ, ಕುರಿ-ಮೇಕೆ ಸಾಕಣೆ, ನಾಟಿಕೋಳಿ ಹಾಗೂ ಮೇವು ಉತ್ಪಾದನೆಯಂತಹ ಚಟುವಟಿಕೆಗಳು ಗ್ರಾಮೀಣ ಕುಟುಂಬಗಳಿಗೆ ನಿರಂತರ ಆದಾಯದ ಮೂಲಗಳಾಗಿವೆ.
ಈ ಕಾರಣದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪಶುಪಾಲಕರಿಗೆ ಆರ್ಥಿಕ ನೆರವು ನೀಡುವ ಹಲವಾರು ಸಬ್ಸಿಡಿ ಯೋಜನೆಗಳನ್ನು ಜಾರಿಗೊಳಿಸಿವೆ. ನಾವು 2025-26ನೇ ಸಾಲಿಗೆ ಕರ್ನಾಟಕ ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯಿಂದ ಜಾರಿಗೆ ತಂದಿರುವ ಮುಖ್ಯ ಯೋಜನೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ…
1. ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ಹಾಗೂ ಬಡ್ಡಿ ಸಹಾಯಧನ
ಹಾಲು ಉತ್ಪಾದನೆಗೆ ಪ್ರೋತ್ಸಾಹ ನೀಡಿ ಹೈನುಗಾರರ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಕೆಎಂಎಫ್ಗೆ ಹಾಲು ಪೂರೈಕೆ ಮಾಡುವ ರೈತರಿಗೆ ಪ್ರತಿ ಲೀಟರ್ ಹಾಲಿಗೆ ₹5 ಪ್ರೋತ್ಸಾಹಧನ ನೀಡಲಾಗುತ್ತದೆ.
ಅದೇ ರೀತಿ ಹಸು ಅಥವಾ ಎಮ್ಮೆ ಖರೀದಿಗೆ ಪಡೆದ ಸಾಲವನ್ನು ಸಮಯಕ್ಕೆ ಸರಿಯಾಗಿ ತೀರಿಸಿದ ಮಹಿಳಾ ಫಲಾನುಭವಿಗಳಿಗೆ ಶೇ.6ರ ಬಡ್ಡಿ ಸಹಾಯಧನ ನೀಡಲಾಗುತ್ತದೆ. ಕೆಎಂಎಫ್ ಸದಸ್ಯರಾಗಿರುವ ಹೈನುಗಾರರು, ಸ್ವಸಹಾಯ ಗುಂಪಿನ ಸದಸ್ಯ ಮಹಿಳೆಯರು ಇದರ ಪ್ರಯೋಜನ ಪಡೆಯಬಹುದಾಗಿದೆ.
2. ನಾಟಿ ಕೋಳಿ ಮರಿಗಳ ಉಚಿತ ವಿತರಣೆ
ಗ್ರಾಮೀಣ ಮಹಿಳೆಯರನ್ನು ಸ್ವಾವಲಂಬಿಯಾಗಿ ಮಾಡುವ ಉದ್ದೇಶದಿಂದ ಪ್ರತಿ ಸದಸ್ಯೆಗೆ 20 ನಾಟಿ ಕೋಳಿ ಮರಿಗಳು ಉಚಿತವಾಗಿ. ಸುಮಾರು 4ರಿಂದ 6 ವಾರ ವಯಸ್ಸಿನ ಲಸಿಕೆ ಹಾಕಿದ ಕೋಳಿ ಮರಿಗಳನ್ನು ಅರ್ಹ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರಿಗೆ ವಿತರಿಸಲಾಗುತ್ತದೆ.
3. ಜಾನುವಾರುಗಳ ಆಕಸ್ಮಿಕ ಸಾವಿಗೆ ಪರಿಹಾರ
ರೈತರಿಗೆ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಹಸು, ಎಮ್ಮೆ, ಎತ್ತು, ಹೋರಿ ಇತ್ಯಾದಿಗಳ ಆಕಸ್ಮಿಕ ಸಾವಿಗೆ ಗರಿಷ್ಟ ₹1,00,000 ವರೆಗೆ ಪರಿಹಾರ ನೀಡಲಾಗುತ್ತದೆ. 6 ತಿಂಗಳ ಮೇಲಿನ ಜಾನುವಾರುಗಳಿಗೆ ಮಾತ್ರ ಈ ಪರಿಹಾರ ಅನ್ವಯವಾಗಲಿದ್ದು; ರೈತರು, ಪಶುಪಾಲಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು.
4. ಕುರಿ-ಮೇಕೆ ಸಾಕಾಣಿದಾರರಿಗೆ ಅನುಗ್ರಹ ಯೋಜನೆ
ಕರ್ನಾಟಕ ಹುರಿ ಮತ್ತು ಉಣ್ಣೆ ಅಭಿವೃದ್ಧಿ ಮಂಡಳಿ ವತಿಯಿಂದ ನೋಂದಾಯಿತ ಕುರಿ ಸಾಕಾಣಿಕೆದಾರರಿಗೆ 6 ತಿಂಗಳ ಮೇಲ್ಪಟ್ಟ ಕುರಿ ಅಥವಾ ಮೇಕೆಗಳ ಆಕಸ್ಮಿಕ ಸಾವಿಗೆ ₹5,000 ಹಾಗೂ 3 ರಿಂದ 6 ತಿಂಗಳ ಕುರಿ/ಮೇಕೆಗಳ ಸಾವಿಗೆ ₹3,500 ಪರಿಹಾರ ನೀಡಲಾಗುತ್ತದೆ.

5. ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ
ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಕಾರ ಸಂಘಗಳಲ್ಲಿ ಸದಸ್ಯರಾಗಿರುವ ಕುರಿ-ಮೇಕೆ ಸಾಕಾಣಿಕೆದಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಸದರಿ ಯೋಜನೆಯಡಿ 20+1 ಕುರಿ/ಮೇಕೆಗಳ ಘಟಕ ಸ್ಥಾಪನೆಗೆ ₹1.75 ಲಕ್ಷ ವರೆಗೆ ನೆರವು ನೀಡಲಾಗುತ್ತದೆ.
6. ಮೇವು ಕತ್ತರಿಸುವ ಯಂತ್ರ (ಚಾಪ್ ಕಟ್ಟರ್)
ಮೇವು ಸಂಸ್ಕರಣೆ ಸುಲಭಗೊಳಿಸುವ ಉದ್ದೇಶದಿಂದ ಹೈನುಗಾರರು ಹಾಗೂ ಹಾಲು ಉತ್ಪಾದಕರ ಸಂಘದ ಸದಸ್ಯರುಗಳಿಗೆ ಶೇ.50ರ ಸಹಾಯಧನದಲ್ಲಿ ಮೇವು ಕತ್ತರಿಸುವ ಯಂತ್ರ (ಚಾಪ್ ಕಟ್ಟರ್) ವಿತರಣೆ ಮಾಡಲಾಗುತ್ತದೆ. ಯಂತ್ರದ ಮೌಲ್ಯದ ಅರ್ಧ ಹಣವನ್ನು ಸರ್ಕಾರ ಭರಿಸುತ್ತದೆ.
7. ಉಚಿತ ಮೇವಿನ ಬೀಜಗಳ ಪೊಟ್ಟಣ ವಿತರಣೆ
ಹೈನುಗಾರ ರೈತರನ್ನು ಪ್ರೋತ್ಸಾಹಿಸುವ ಮೂಲಕ ಮೇವು ಉತ್ಪಾದನೆ ಹೆಚ್ಚಿಸುವ ಉದ್ದೇಶದಿಂದ ಉಚಿತವಾಗಿ ಮೇವಿನ ಬೀಜಗಳ ಕಿಟ್ ವಿತರಣೆ ಮಾಡಲಾಗುತ್ತದೆ. ಹಾಲು ಉತ್ಪಾದಕರ ಸಂಘದ ಸದಸ್ಯ ರೈತರು ಇದರ ಪ್ರಯೋಜನ ಪಡದುಕೊಳ್ಳಬಹುದು.
8. ಸಂಚಾರಿ ಪಶು ಚಿಕಿತ್ಸಾ ಘಟಕ
ಗ್ರಾಮೀಣ ಪ್ರದೇಶಗಳಲ್ಲಿ ತುರ್ತು ವೈದ್ಯಕೀಯ ಸೇವೆ ಒದಗಿಸುವ ಸದುದ್ದೇಶದಿಂದ 1962 ಸಹಾಯವಾಣಿ ಸೌಲಭ್ಯ ಒದಗಿಸಲಾಗಿದೆ. 1962 ಸಹಾಯವಾಣಿ ಕರೆ ಮಾಡಿದರೆ ಮನೆ ಬಾಗಿಲಲ್ಲೇ ಹಸು-ಎಮ್ಮೆಗಳಿಗೆ ಲಸಿಕೆ, ಗರ್ಭಪರೀಕ್ಷೆ, ಪ್ರಥಮ ಚಿಕಿತ್ಸೆಯಂತಹ ಸೇವೆಗಳನ್ನು ಪಡೆಯಬಹುದಾಗಿದೆ.
9. ಉಚಿತ ಲಸಿಕೆ ಕಾರ್ಯಕ್ರಮ
ಪಶು ಆರೋಗ್ಯವನ್ನು ಕಾಪಾಡುವ ಉದ್ದೇಶದಿಂದ ಕಾಲುಬಾಯಿ ರೋಗ, ಕಂದುರೋಗ, ಪಿಪಿಆರ್, ಹಂದಿಜ್ವರ, ಚರ್ಮಗಂಟು ರೋಗ ಇತ್ಯಾದಿ ರೋಗಗಳಿಗೆ ಪಶುಪಾಲನಾ ಇಲಾಖೆಯು ಉಚಿತ ಲಸಿಕೆ ನೀಡುತ್ತದೆ. ಎಲ್ಲ ಹೈನುಗಾರರು ಹಾಗೂ ಪಶುಪಾಲಕರು ಕಾಲಕಾಲಕ್ಕೆ ಉಚಿತ ಲಸಿಕೆ ಪ್ರಯೋಜನ ಪಡೆದುಕೊಳ್ಳಬಹುದು.
ಈ ಯೋಜನೆಗಳ ಲಾಭ ಪಡೆಯುವುದು ಹೇಗೆ?
ಮೇಲ್ಕಾಣಿಸಿದ ಕೆಲವು ಯೋಜನೆಗಳನ್ನು ಸ್ವತಃ ಪಶುಪಾಲನಾ ಇಲಾಖೆಯೆ ಋತುಮಾನಕ್ಕೆ ಅನುಗುಣವಾಗಿ ಅಭಿಯಾನದ ಮೂಲಕ ರೈತರಿಗೆ, ಹೈನುಗಾರರಿಗೆ ತಲುಪಿಸುತ್ತದೆ. ಇನ್ನು ಕೆಲವು ಯೋಜನೆಗಳ ಪ್ರಯೋಜನ ವಿತರಣೆಗೆ ರೈತರು ಹಾಗೂ ಹೈನುಗಾರರಿಂದ ಕಾಲಕಾಲಕ್ಕೆ ಅರ್ಜಿ ಆಹ್ವಾನಿಸಲಾಗುತ್ತದೆ.
ಆಗ ಹತ್ತಿರದ ತಾಲ್ಲೂಕು ಪಶುಪಾಲನಾ ಇಲಾಖೆಯ ಕಚೇರಿ ಹಾಗೂ ಕುರಿ ಸೊಸೈಟಿಗೆ ಭೇಟಿ ನೀಡಿ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರಗಳು, ಕೆಎಂಎಫ್ ಹಾಗೂ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಕುರಿ ಸೊಸೈಟಿ ಸದಸ್ಯತ್ವ ಪ್ರಮಾಣಪತ್ರ ಒದಗಿಸುವ ಮೂಲಕ ಅರ್ಜಿ ಸಲ್ಲಿಸಬೇಕು.ಅರ್ಹತಾ ಪರಿಶೀಲನೆಯ ನಂತರ ಯೋಜನೆಯ ಲಾಭ ವಿತರಣೆಯಾಗುತ್ತದೆ.
ಹೆಚ್ಚಿನ ಮಾಹಿತಿಗೆ ಉಚಿತ ಸಹಾಯವಾಣಿ: 8277200300