ರಾಜ್ಯ ಮತ್ತು ಕೇಂದ್ರ ಕೃಷಿ ಇಲಾಖೆಗಳು (Krushi Ilakhe Subsidy Yojanegalu) ರೈತರ ಹಿತದೃಷ್ಟಿಯಿಂದ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿವೆ. ರೈತರಿಗೆ ಕೃಷಿ ಇಲಾಖೆಯಿಂದ ಸಿಗುವ ಸಬ್ಸಿಡಿ ಯೋಜನೆಗಳ ಸಮಗ್ರ ಮಾಹಿತಿ ಇಲ್ಲಿದೆ…
ಇತ್ತೀಚಿನ ದಿನಗಳಲ್ಲಿ ರೈತರು ಎದುರಿಸುತ್ತಿರುವ ಹವಾಮಾನ ಬದಲಾವಣೆ, ಬೆಳೆ ನಷ್ಟ, ಮಾರುಕಟ್ಟೆ ಬೆಲೆ ಕುಸಿತ ಮತ್ತು ಹೆಚ್ಚುತ್ತಿರುವ ಉತ್ಪಾದನಾ ವೆಚ್ಚಗಳ ನಡುವೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಕೃಷಿ ಇಲಾಖೆಯ ಸಬ್ಸಿಡಿ ಮತ್ತು ಸಹಾಯಧನ ಯೋಜನೆಗಳು ರೈತರಿಗೆ ದೊಡ್ಡ ವರದಾನವಾಗಿವೆ.
ರೈತರ ಆದಾಯ ಹೆಚ್ಚಳ, ಕೃಷಿ ಉತ್ಪಾದಕತೆ ವೃದ್ಧಿ ಮತ್ತು ಸುಸ್ಥಿರ ಕೃಷಿಯನ್ನು ಉತ್ತೇಜಿಸುವ ಉದ್ದೇಶದಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಲೇಖನದಲ್ಲಿ, ಕೃಷಿ ಇಲಾಖೆಯಿಂದ ರೈತರಿಗೆ ಲಭ್ಯವಿರುವ ಪ್ರಮುಖ ಸಬ್ಸಿಡಿ ಯೋಜನೆಗಳ ಸಮಗ್ರ ವಿವರವನ್ನು ನೀಡಲಾಗಿದೆ…
1. ಬೀಜಗಳ ಪೂರೈಕೆ ಯೋಜನೆ
ಉತ್ತಮ ಬೆಳೆ ಉತ್ಪಾದನೆಗೆ ಗುಣಮಟ್ಟದ ಬೀಜ ಬಹಳ ಮುಖ್ಯ. ಈ ಕಾರಣಕ್ಕಾಗಿ ರಾಜ್ಯ ಸರ್ಕಾರವು ಎಲ್ಲಾ ವರ್ಗದ ರೈತರಿಗೆ ವಿವಿಧ ಕೃಷಿ ಬೆಳೆಗಳ ಪ್ರಮಾಣಿತ ಮತ್ತು ನಿಜ ಚೀಟಿ ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ ವಿತರಣೆ ಮಾಡುತ್ತಿದೆ.
- ಸಾಮಾನ್ಯ ವರ್ಗದ ರೈತರಿಗೆ ಶೇ.50 ರಿಯಾಯಿತಿ
- ಪರಿಶಿಷ್ಟ ಜಾತಿ/ಪಂಗಡದ ರೈತರಿಗೆ ಶೇ.75 ರಿಯಾಯಿತಿ
2. ಕೃಷಿ ಯಾಂತ್ರೀಕರಣ ಯೋಜನೆ
ಕೃಷಿ ಕಾರ್ಯಗಳನ್ನು ಸಕಾಲದಲ್ಲಿ ಪೂರ್ಣಗೊಳಿಸಲು ಹಾಗೂ ಕೂಲಿ ಕಾರ್ಮಿಕರ ಅವಲಂಬನೆಯನ್ನು ಕಡಿಮೆ ಮಾಡಲು ಈ ಯೋಜನೆ ಮಹತ್ವದ್ದಾಗಿದೆ.
- ಕೃಷಿ ಯಂತ್ರೋಪಕರಣಗಳಿಗೆ: ಸಾಮಾನ್ಯ ರೈತರಿಗೆ ಶೇ.50, ಪ.ಜಾ./ಪ.ಪಂ ರೈತರಿಗೆ ಶೇ.90 ಸಹಾಯಧನ (ಗರಿಷ್ಠ ರೂ.1 ಲಕ್ಷ ವರೆಗೆ)
- 45 PTO HP ವರೆಗೆ ಟ್ರಾಕ್ಟರ್ಗಳಿಗೆ: ಸಾಮಾನ್ಯ ವರ್ಗದ ರೈತರಿಗೆ ರೂ.0.75 ಲಕ್ಷ ಹಾಗೂ ಪ.ಜಾ./ಪ.ಪಂ ವರ್ಗದ ರೈತರಿಗೆ ಗರಿಷ್ಠ ರೂ.3.00 ಲಕ್ಷ (ಶೇ.90) ಸಹಾಯಧನ ಸಿಗಲಿದೆ.
3. ಕೃಷಿ ಸಂಸ್ಕರಣೆ ಯೋಜನೆ
ಬೆಳೆ ಮೌಲ್ಯವರ್ಧನೆ ಮೂಲಕ ರೈತರ ಆದಾಯ ಹೆಚ್ಚಿಸುವ ಉದ್ದೇಶದಿಂದ ಕೃಷಿ ಸಂಸ್ಕರಣಾ ಘಟಕಗಳನ್ನು ಉತ್ತೇಜಿಸಲಾಗುತ್ತಿದೆ.
- ಕೃಷಿ ಸಂಸ್ಕರಣಾ ಘಟಕಗಳು ಮತ್ತು ಟಾರ್ಪಾಲಿನ್’ಗೆ ಸಾಮಾನ್ಯ ವರ್ಗದ ರೈತರಿಗೆ ಶೇ.50 ಹಾಗೂ ಪ.ಜಾ./ಪ.ಪಂ. ರೈತರಿಗೆ ಶೇ.90ರಷ್ಟು ಸಹಾಯಧನ ನೀಡಲಾಗುತ್ತದೆ.
- ಸಣ್ಣ ಯಂತ್ರಚಾಲಿತ ಎಣ್ಣೆಗಾಣ ಘಟಕಗಳಿಗೆ ಸಾಮಾನ್ಯ ವರ್ಗದ ರೈತರಿಗೆ ಶೇ.75 ಹಾಗೂ ಪ.ಜಾ./ಪ.ಪಂ. ರೈತರಿಗೆ ಶೇ.90 (ಗರಿಷ್ಠ ರೂ.1 ಲಕ್ಷ) ಸಬ್ಸಿಡಿ ಸಿಗುತ್ತದೆ.

4. ಸೂಕ್ಷ್ಮ ನೀರಾವರಿ ಯೋಜನೆ
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ಮತ್ತು ತುಂತುರು ನೀರಾವರಿ ವ್ಯವಸ್ಥೆಗಳಿಗೆ ಹೆಚ್ಚಿನ ಸಹಾಯಧನ ನೀಡಲಾಗುತ್ತಿದೆ.
ಸಣ್ಣ/ಅತಿ ಸಣ್ಣ ರೈತರಿಗೆ ಶೇ.55, ಇತರರಿಗೆ ಶೇ.45 ಹಾಗೂ ರಾಜ್ಯ ಸರ್ಕಾರದ ಹೆಚ್ಚುವರಿ ಸಹಾಯಧನ ಸೇರಿಸಿ, ಎಲ್ಲಾ ವರ್ಗದ ರೈತರಿಗೆ ಶೇ.90 ಸಹಾಯಧನ ಸಿಗುತ್ತದೆ. ಗರಿಷ್ಠ 5 ಹೆಕ್ಟೇರ್ ವರೆಗೆ ಅವಕಾಶವಿದೆ.
5. ಸಸ್ಯ ಸಂರಕ್ಷಣೆ
ಬೆಳೆಗಳನ್ನು ಕೀಟ ಮತ್ತು ರೋಗಗಳಿಂದ ರಕ್ಷಿಸಲು ಪೀಡೆನಾಶಕ, ಜೈವಿಕ ಪೀಡೆನಾಶಕ ಹಾಗೂ ಜೈವಿಕ ನಿಯಂತ್ರಣಕಾರಕಗಳನ್ನು ಶೇ.50 ರಿಯಾಯಿತಿಯಲ್ಲಿ ವಿತರಣೆ ಮಾಡಲಾಗುತ್ತಿದೆ.
6. ರೈತ ಸಿರಿ ಯೋಜನೆ
ಸಿರಿಧಾನ್ಯಗಳಾದ ನವಣೆ, ಹಾರಕ, ಕೊರಲೆ, ಸಾಮೆ, ಊದಲು, ಬರಗು ಮೊದಲಾದ ಸಿರಿಧಾನ್ಯಗಳ ಬೆಳೆ ಉತ್ತೇಜನಕ್ಕಾಗಿ ಪ್ರತಿ ಹೆಕ್ಟೇರಿಗೆ ರೂ.10,000ನಂತೆ ಗರಿಷ್ಠ 2 ಹೆಕ್ಟೇರ್ ನೇರ ನಗದು ವರ್ಗಾವಣೆ (DBT) ಮೂಲಕ ರೈತರಿಗೆ ಪಾವತಿ ಮಾಡಲಾಗುತ್ತದೆ.
7. ಸಾವಯವ ಇಂಗಾಲ ಅಭಿಯಾನ
ಮಣ್ಣಿನ ಆರೋಗ್ಯ ಸುಧಾರಣೆಗಾಗಿ ಹಸಿರೆಲೆ ಗೊಬ್ಬರ ಬೀಜಗಳನ್ನು ಶೇ.75 ರಿಯಾಯಿತಿಯಲ್ಲಿ ವಿತರಣೆ ಮಾಡಲಾಗುತ್ತದೆ. ಈ ಅಭಿಯಾನದ ಮೂಲಕ ದ್ವಿದಳ ಧಾನ್ಯಗಳ ವಿಸ್ತೀರ್ಣ ಮತ್ತು ಉತ್ಪಾದನೆಗೆ ಉತ್ತೇಜನ ನೀಡಲಾಗುತ್ತದೆ.
8. ಬೆಂಬಲ ಬೆಲೆ (MSP)
ಕೇಂದ್ರ ಸರ್ಕಾರವು ಮುಂಗಾರು ಮತ್ತು ಹಿಂಗಾರು ಹಂಗಾಮಿಗೆ ಮುಂಚಿತವಾಗಿ ಬೆಂಬಲ ಬೆಲೆ ಘೋಷಿಸುತ್ತದೆ. ಮಾರುಕಟ್ಟೆ ಬೆಲೆ ಕಡಿಮೆ ಇದ್ದರೆ ಒSP ದರದಲ್ಲಿ ಕೃಷಿ ಉತ್ಪನ್ನಗಳನ್ನು ಖರೀದಿಸಲಾಗುತ್ತದೆ. ಕೆಲ ಸಂದರ್ಭಗಳಲ್ಲಿ ರಾಜ್ಯ ಸರ್ಕಾರದ ಹೆಚ್ಚುವರಿ ಪ್ರೋತ್ಸಾಹಧನ ನೀಡುತ್ತದೆ.
9. ಹೊಸ ಬೆಳೆ ವಿಮಾ ಯೋಜನೆ
ಪ್ರಕೃತಿ ವಿಕೋಪ, ಕೀಟ ಮತ್ತು ರೋಗಗಳಿಂದ ಬೆಳೆ ನಷ್ಟವಾದಲ್ಲಿ ರೈತರಿಗೆ ವಿಮಾ ರಕ್ಷಣೆ ನೀಡಲಾಗುತ್ತದೆ. ವಿಮಾ ಕಂತಿನ ರಿಯಾಯಿತಿಯಲ್ಲಿ ರಾಜ್ಯ ಸರ್ಕಾರದ ಪಾಲು ಕೂಡ ಇರುತ್ತದೆ.
10. ಪಿಎಂ ಕಿಸಾನ್ ಯೋಜನೆ
ಎಲ್ಲಾ ಅರ್ಹ ರೈತ ಕುಟುಂಬಗಳಿಗೆ ವರ್ಷಕ್ಕೆ ರೂ.6000 ಹಣವನ್ನು ಮೂರು ಕಂತುಗಳಲ್ಲಿ ತಲಾ 2,000 ರೂ. ನಂತೆ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
11. ಬೆಳೆ ಪರಿಹಾರ
ಪ್ರಾಕೃತಿಕ ವಿಕೋಪಗಳಿಂದ ಬೆಳೆ ಹಾನಿಯಾದಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ರೈತರಿಗೆ ನಷ್ಟದ ಪ್ರಮಾಣ ಹಾಗೂ ಬೆಳೆಗಳಿಗೆ ಅನುಗುಣವಾಗಿ ಪರಿಹಾರ ನೀಡಲಾಗುತ್ತದೆ.
12. ಕೃಷಿ ಆವರ್ತ ನಿಧಿ
ರೈತರ ಕೃಷಿ ಉತ್ಪನ್ನಗಳಿಗೆ ಬೆಲೆ ಕುಸಿತವಾದ ಸಂದರ್ಭಗಳಲ್ಲಿ ಮಾರುಕಟ್ಟೆ ಮಧ್ಯ ಪ್ರವೇಶಕ್ಕಾಗಿ ರಾಜ್ಯ ಸರ್ಕಾರ ಆವರ್ತ ನಿಧಿ ನಿರ್ವಹಣೆ ಮಾಡುತ್ತದೆ.
13. ಶೂನ್ಯಬಡ್ಡಿ ಸಾಲ ಸೌಲಭ್ಯ
ರೈತರಿಗೆ ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿಯಲ್ಲಿ ರೂ.5 ಲಕ್ಷ ವರೆಗೆ ಅಲ್ಪಾವಧಿ ಸಾಲ ಹಾಗೂ ಶೇ.3 ಬಡ್ಡಿಯಲ್ಲಿ ರೂ.15 ಲಕ್ಷ ವರೆಗೆ ಮಧ್ಯಮಾವಧಿ ಸಾಲ ನೀಡಲಾಗುತ್ತದೆ. ಬ್ಯಾಂಕ್ ಬೆಳೆ ಸಾಲಗಳಿಗೆ ಶೇ.1 ಬಡ್ಡಿ ರಿಯಾಯಿತಿ ನೀಡಲಾಗುತ್ತದೆ.
ಇದನ್ನೂ ಓದಿ: Women Free Sewing Machine- ಉಚಿತ ಹೊಲಿಗೆ ಯಂತ್ರ ವಿತರಣೆ ಯೋಜನೆ | ಮಹಿಳೆಯರಿಗೆ ಸುವರ್ಣಾವಕಾಶ
14. ಕೃಷಿ ಭಾಗ್ಯ ಯೋಜನೆ
ಮಳೆಯಾಶ್ರಿತ ರೈತರನ್ನು ಉತ್ತೇಜಿಸುವ ನಿಟ್ಟಿನಲ್ಲಿ ‘ಕೃಷಿಭಾಗ್ಯ’ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಕೃಷಿ ಹೊಂಡ, ಪಾಲಿಥೀನ್ ಹೊದಿಕೆ, ಪಂಪ್ ಸೆಟ್ಗಳಿಗೆ ಸಾಮಾನ್ಯ ವರ್ಗದ ರೈತರಿಗೆ ಶೇ.80 ಹಾಗೂ ಪ.ಜಾ./ಪ.ಪಂ. ರೈತರಿಗೆ ಶೇ.90ರ ಸಹಾಯಧನ ನೀಡಲಾಗುತ್ತದೆ.
ಕೃಷಿ ಹೊಂಡಕ್ಕೆ ತಂತಿ ಬೇಲಿ ನಿರ್ಮಾಣಕ್ಕೂ ಸಹಾಯಧನ ನೀಡಲಾಗುತ್ತಿದೆ. ಜೊತೆಗೆ ನೀರಾವರಿಯನ್ನು ಉತ್ತೇಜಿಸುವ ಉದ್ದೇಶದಿಂದ ಸೂಕ್ಷ್ಮ ನೀರಾವರಿಗೆ ಶೇ.90ರಷ್ಟು ನೆರವು ನೀಡಲಾಗುತ್ತದೆ.
15. ಹೈಟೆಕ್ ಹಾರ್ವೆಸ್ಟರ್ ಹಬ್
ಕೃಷಿ ಯಂತ್ರಧಾರೆ ಕೇಂದ್ರ ಸ್ಥಾಪನೆಗೆ ಶೇ.40 ರಿಂದ ಶೇ.70 ಸಹಾಯಧನ ನೀಡಲಾಗುತ್ತದೆ. ಸಂಘ-ಸಂಸ್ಥೆಗಳು ಹಾಗೂ ವೈಯಕ್ತಿಕ ಭಲಾನುಭವಿಗಳಿಗೆ ಪ್ರತಿ ಘಟಕಕ್ಕೆ ಗರಿಷ್ಠ ರೂ.100 ಲಕ್ಷ ವರೆಗೆ ಅನುದಾನ ನೀಡಲಾಗುತ್ತದೆ.
16. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ
ಕೃಷಿ, ತೋಟಗಾರಿಕೆ ಮತ್ತು ಪಶುಸಂಗೋಪನೆಯನ್ನು ಒಗ್ಗೂಡಿಸಿ ‘ಸಮಗ್ರ ಕೃಷಿ ಪದ್ಧತಿ’ ಅಡಿಯಲ್ಲಿ ಕೃಷಿ ಉತ್ಪಾದಕತೆ ಮತ್ತು ರೈತ ಆದಾಯ ಹೆಚ್ಚಳ ಮಾಡಲು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ನೆರವು ನೀಡಲಾಗುತ್ತದೆ.
17. ರಾಷ್ಟ್ರೀಯ ಆಹಾರ ಸುರಕ್ಷತೆ ಮತ್ತು ಖಾದ್ಯ ತೈಲ ಅಭಿಯಾನ
ಎಣ್ಣೆ ಕಾಳು, ದ್ವಿದಳ ಧಾನ್ಯ, ಹತ್ತಿ, ಕಬ್ಬು ಬೆಳೆಗಳಿಗೆ ಬಿತ್ತನೆ ಬೀಜ, ಗೊಬ್ಬರ, ರಾಸಾಯನಿಕಗಳಿಗೆ ಅರ್ಹ ರೈತರಿಗೆ ಶೇ.50 ಸಹಾಯಧನ ನೀಡಲಾಗುತ್ತದೆ.
18.️ ರೈತ ಆತ್ಮಹತ್ಯೆ ಪ್ರಕರಣಗಳಿಗೆ ಸಹಾಯ
ಸಾಲ, ಬೆಳೆನಷ್ಟ ಇತ್ಯಾದಿ ಕಾರಗಳಿಂದ ಮನನೊಂದು ಆತ್ಮಹತ್ಯೆಗೆ ಶರಣಾಗುವ ಹತಭಾಗ್ಯ ರೈತರ ಅರ್ಹ ಕುಟುಂಬಗಳಿಗೆ ರೂ.5 ಲಕ್ಷ ಪರಿಹಾರ ಪರಿಹಾರ ನೀಡಲಾಗುತ್ತದೆ. ಸ್ಥಳೀಯ ಜಿಲ್ಲಾಡಳಿತವು ರೈತರ ಮನೆಗೆ ಭೇಟಿ ಸೌಲಭ್ಯಗಳ ತಲುಪಿಸಲಾಗುತ್ತದೆ.
ಹೀಗೆ ಕೃಷಿ ಇಲಾಖೆಯ ಈ ಎಲ್ಲಾ ಯೋಜನೆಗಳು ರೈತರ ಬದುಕನ್ನು ಬಲಪಡಿಸಲು, ಕೃಷಿಯನ್ನು ಲಾಭದಾಯಕವನ್ನಾಗಿ ಮಾಡಲು ಮತ್ತು ಗ್ರಾಮೀಣ ಆರ್ಥಿಕತೆಯನ್ನು ಉತ್ತೇಜಿಸಲು ಅನುಷ್ಠಾನಗೊಳಿಸಲಾಗಿದೆ.
ಈ ಯೋಜನೆಗಳಿಗೆ ಸಂಬಂಧಿಸಿದಂತೆ ಕಾಲಕಾಲಕ್ಕೆ ಅರ್ಜಿ ಆಹ್ವಾನಿಸಲಾಗುತ್ತದೆ. ರೈತರು ಆಗ ಅರ್ಜಿ ಸಲ್ಲಿಸುವ ಮೂಲಕ ಇವುಗಳ ಪ್ರಯೋಜನ ಪಡೆಯಬಹುದಾಗಿದೆ. ಪ್ರತಿ ರೈತರು ತಮ್ಮ ಹತ್ತಿರದ ಕೃಷಿ ಕಚೇರಿ ಅಥವಾ ಸೇವಾ ಕೇಂದ್ರದ ಮೂಲಕ ಮಾಹಿತಿ ಪಡೆದು, ಈ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಬೇಕಿದೆ.
ಹೆಚ್ಚಿನ ಮಾಹಿತಿಗೆ ಕೃಷಿ ಇಲಾಖೆ ಅಧಿಕೃತ ವೆಬ್ಸೈಟ್: raitamitra.karnataka.gov.in
Karnataka Bank Personal Loan- ಕರ್ನಾಟಕ ಬ್ಯಾಂಕ್ ಪರ್ಸನಲ್ ಲೋನ್ | ಕಡಿಮೆ ಬಡ್ಡಿಯಲ್ಲಿ ₹25 ಲಕ್ಷವರೆಗೆ ಸುಲಭ ಸಾಲ