2025-26ನೇ ಸಾಲಿನ ಮುಂಗಾರು ಹಂಗಾಮಿಗೆ ಫಸಲ್ ಬೀಮಾ ಯೋಜನೆಯಡಿ (Kharif Crop Insurance 2025) ಬೆಳೆ ವಿಮೆಗೆ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ಪ್ರತಿ ವರ್ಷ ರೈತರು ನೈಸರ್ಗಿಕ ವಿಪತ್ತುಗಳು, ಅತಿಯಾದ ಮಳೆ ಅಥವಾ ಬರದಂತಹ ಪರಿಸ್ಥಿತಿಗಳಲ್ಲಿ ಬೆಳೆ ನಷ್ಟ ಅನುಭವಿಸುತ್ತಾರೆ. ಇಂತಹ ಸಮಯದಲ್ಲಿ ಕೃಷಿಕರ ಆರ್ಥಿಕ ಸುರಕ್ಷತೆಗೆ ಆಸರೆಯಾಗುವ ‘ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ (PMFBY)’ ಅನ್ನು ಅನುಷ್ಠಾನಗೊಳಿಸಲಾಗಿದೆ.
ಈ ಯೋಜನೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಸಹಯೋಗದಲ್ಲಿ ಜಾರಿಗೆ ಬರುತ್ತಿದ್ದು, ಪ್ರತಿ ಜಿಲ್ಲೆಯಲ್ಲಿ ಹೋಬಳಿ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯನ್ವಯವಾಗಿದೆ. ಎಲ್ಲಾ ರೈತರು ಈ ಯೋಜನೆಯ ಲಾಭ ಪಡೆಯಬಹುದು.
ಯೋಜನೆಯ ಮುಖ್ಯ ಉದ್ದೇಶಗಳು
- ರೈತರಿಗೆ ಬೆಳೆ ಹಾನಿಯಿಂದ ಉಂಟಾಗುವ ಆರ್ಥಿಕ ನಷ್ಟದ ಪರಿಹಾರ
- ವಿಮೆ ಆಧಾರಿತ ಬೆಳೆ ರಕ್ಷಣೆಯ ಮೂಲಕ ಕೃಷಿಯಲ್ಲಿ ಭದ್ರತೆ
- ಬಂಡವಾಳ ಹೂಡಿಕೆ ಮತ್ತು ಮರುಬಿತ್ತನೆಗೆ ಸಹಾಯ
- ರೈತ ಆತ್ಮಹತ್ಯೆ, ಸಾಲದ ಒತ್ತಡ ತಡೆಯುವ ಗುರಿ
ವಿಮೆಗೆ ಅರ್ಹವಾದ ಪ್ರಮುಖ ಬೆಳೆಗಳು ಮತ್ತು ಅರ್ಜಿ ಸಲ್ಲಿಕೆ ಕೊನೆಯ ದಿನಾಂಕಗಳು
2025-26ನೇ ಸಾಲಿನ ಫಸಲ್ ಬೀಮಾ ಯೋಜನೆಯಡಿಯಲ್ಲಿ ಒಟ್ಟು 36 ಅಧಿಸೂಚಿತ ಬೆಳೆಗಳು ವಿಮೆಗೆ ಅರ್ಹವಾಗಿದ್ದು; ಕೆಲವು ಪ್ರಮುಖ ಬೆಳೆಗಳು ಹಾಗೂ ಬೆಳೆವಾರು ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕಗಳ ವಿವರ ಹೀಗಿದೆ:
- ಸೂರ್ಯಕಾಂತಿ: 16 ಆಗಸ್ಟ್ 2025
- ಮುಸುಕಿನ ಜೋಳ: 31 ಜುಲೈ 2025
- ಭತ್ತ: 31 ಜುಲೈ 2025
- ಜೋಳ: 31 ಜುಲೈ 2025
- ನೆಲಗಡಲೆ: 31 ಜುಲೈ 2025
- ನವಣೆ : 31 ಜುಲೈ 2025
- ಸಜ್ಜೆ: 31 ಜುಲೈ 2025
- ತೊಗರಿ: 31 ಜುಲೈ 2025
- ರಾಗಿ: 31 ಜುಲೈ 2025
- ಈರುಳ್ಳಿ: 15 ಜುಲೈ 2025
- ಹತ್ತಿ 15 ಜುಲೈ 2025
- ಟೊಮ್ಯಾಟೊ: 30 ಜೂನ್ 2025
- ಎಳ್ಳು: 30 ಜೂನ್ 2025

ನಿಮ್ಮ ಹಳ್ಳಿಯಲ್ಲಿ ಯಾವ ಬೆಳೆಗಳಿಗೆ ವಿಮೆ ಲಭ್ಯ ಎಂಬುದನ್ನು ತಿಳಿಯುವುದು ಹೇಗೆ?
ಸರ್ಕಾರದ ಅಧಿಕೃತ ವೆಬ್‌ಸೈಟ್ samrakshane.karnataka.gov.in ಭೇಟಿ ನೀಡಿ. ವರ್ಷ ‘2025-26’ ಮತ್ತು ಋತು ‘Kharif’ ಆಯ್ಕೆ ಮಾಡಿ ‘Go’ ಕ್ಲಿಕ್ ಮಾಡಿದರೆ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ.
ಬಳಿಕ ಅಲ್ಲಿ ‘Farmers’ ಕಾಲಮ್ಮಿನಲ್ಲಿ ‘Crop You Can Insure’ ಬಟನ್ ಒತ್ತಿ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮವನ್ನು ಆಯ್ಕೆ ಮಾಡಿ. ಮುಂದೆ ‘Display’ ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹಳ್ಳಿ ವ್ಯಾಪ್ತಿಯಲ್ಲಿ ಯಾವೆಲ್ಲ ಬೆಳೆಗಳಿಗೆ ಬೆಳೆ ವಿಮೆಯನ್ನು ಮಾಡಿಸಬಹುದು ಎನ್ನುವ ವಿವರ ಸಿಗುತ್ತದೆ.
ಬೆಳೆವಾರು ಪ್ರಿಮಿಯಂ ಮೊತ್ತ ತಿಳಿಯುವ ವಿಧಾನ
ಪ್ರತಿ ಬೆಳೆಗೆ ಪ್ರತ್ಯೇಕವಾಗಿ ವಿಮಾ ಪ್ರಿಮಿಯಂ ಶೇಕಡಾವಾರು ನಿಗದಿಯಾಗಿದೆ. ರೈತರು ಈ ಮಾಹಿತಿ ತಮ್ಮ ಮನೆಯಲ್ಲಿಯೇ ಕುಳಿತು ಖಚಿತಪಡಿಸಿಕೊಳ್ಳಬಹುದು:
ಮೊದಲಿಗೆ samrakshane.karnataka.gov.in ತಾಣಕ್ಕೆ ಭೇಟಿ ನೀಡಿ. ಇಲ್ಲಿ ಬಲಬದಿಯಲ್ಲಿ ಮೇಲೆ ಕಾಣುವ ‘ಕನ್ನಡ’ ಆಯ್ಕೆ ಮಾಡಿಕೊಂಡು ಮುಂದುವರೆಯಿರಿ.
ಅಲ್ಲಿ ಕಾಣುವ ಕಾಲಮ್ಮಿನಲ್ಲಿ ನಿಮ್ಮ ಸ್ಥಳೀಯ ಬೆಳೆ, ವಿಸ್ತೀರ್ಣ, ಗುಂಟೆ ವಿವರಗಳನ್ನು ನಮೂದಿಸಿ ‘ಪ್ರಿಮಿಯಂ ವಿವರ / View Premium’ ಕ್ಲಿಕ್ ಮಾಡಿದರೆ, ನಿಮಗೆ ಪಾವತಿಸಬೇಕಾದ ವಿಮೆ ಮೊತ್ತ ಮತ್ತು ವಿಮಾ ರಕ್ಷಣೆ ವಿವರಗಳು ಸಿಗುತ್ತವೆ.
ಅರ್ಜಿಯನ್ನು ಎಲ್ಲಿ ಸಲ್ಲಿಸಬಹುದು?
ಗ್ರಾಮ ಒನ್, ಕರ್ನಾಟಕ ಒನ್, ಬ್ಯಾಂಕ್ ಅಥವಾ ಅರ್ಹ ಸೇವಾ ಕೇಂದ್ರಗಳು ಹಾಗೂ ಸ್ಥಳೀಯ ಕೃಷಿ ಇಲಾಖೆ ಕಚೇರಿಗಳ ಮೂಲಕ ರೈತರು ಅರ್ಜಿ ಸಲ್ಲಿಸಬಹುದಾಗಿದೆ. ಆನ್‌ಲೈನ್’ನಲ್ಲಿ ರೈತರು ತಮ್ಮದೇ ಮೊಬೈಲ್ ಮೂಲಕವೂ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು
- ಆಧಾರ್ ಕಾರ್ಡ್
- ಆಧಾರ್ ಲಿಂಕ್ ಆಗಿರು ಬ್ಯಾಂಕ್ ಪಾಸ್ ಬುಕ್
- ಜಮೀನಿನ ಪಹಣಿ
- ರೈತರ ಪಾಸ್ಪೋರ್ಟ್ 2 ಫೋಟೋ
- OTP ಪಡೆಯಲು ಮೊಬೈಲ್ ನಂಬರ್
ರೈತರೆ, ಈ ವರ್ಷ ವಿಪರೀತ ಮಳೆ ಮುನ್ಸೂಚನೆ ಇದೆ. ಬೆಳೆಗೆ ಹದವಾದ ಮಳೆಯಾಗಬಹುದು ಅಥವಾ ಅತೀ ಮಳೆಯಿಂದ ಬೆಳೆ ನಾಶವಾಗಬಹುದು. ಹೀಗಾಗಿ ಇಂದೇ ವಿಮೆ ಮಾಡಿಸಿ. ನಿಮ್ಮ ಬೆಳೆಗಳ ಹಾನಿಗೆ ಪೂರಕವಾಗಿ ಪರಿಹಾರವನ್ನು ಪಡೆದು ನಷ್ಟದ ಭೀತಿಯಿಂದ ದೂರವಿರಿ. ಈ ಯೋಜನೆಯ ಮಾಹಿತಿಯನ್ನು ಹೆಚ್ಚು ರೈತರಿಗೆ ತಲುಪಿಸಲು ಈ ಲೇಖನವನ್ನು ಶೇರ್ ಮಾಡಿ…
ಬೆಳೆ ವಿಮೆ ಅರ್ಜಿಯ ಕುರಿತು ಅಧಿಕೃತ ಪ್ರಕಟಣೆ: Download