ಕೆಸಿಇಟಿ ಕೌನ್ಸೆಲಿಂಗ್ ಪ್ರಕ್ರಿಯೆಗೆ ದಿನಗಣನೆ ಆರಂಭವಾಗಿದ್ದು; ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೆಇಎ ಹೊಸ ನಿಯಮಗಳನ್ನು (KCET Seat Blocking 2025) ಜಾರಿಗೊಳಿಸುತ್ತಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
2025ರ ಕೆಸಿಇಟಿ ಕೌನ್ಸೆಲಿಂಗ್ ಪ್ರಕ್ರಿಯೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಭರದ ಸಿದ್ಧತೆ ನಡೆಸುತ್ತಿದ್ದು, ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳುಮಾಡುತ್ತಿದ್ದ ಸೀಟ್ ಬ್ಲಾಕ್ ದಂಧೆಗೆ ಕಡಿವಾಣ ಹಾಕಲು ಈ ಬಾರಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ಈ ಬಗ್ಗೆ ಕೆಇಎ ಮಹತ್ವದ ಮಾಹಿತಿ ನೀಡಿದ್ದು, ಹಲವು ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಎಂಜಿನಿಯರಿಂಗ್ ಮತ್ತು ಇತರ ವೃತ್ತಿಪರ ಕೋರ್ಸ್’ಗಳ ಸೀಟುಗಳ ‘ಬ್ಲಾಕ್ ದಂಧೆ’ಗೆ ಕಡಿವಾಣ ಹಾಕಲು ಹೊಸ ತಂತ್ರಜ್ಞಾನಗಳನ್ನು ಜಾರಿಗೆ ತರುತ್ತಿದೆ.
ಏನಿದು ಸೀಟ್ ಬ್ಲಾಕ್ ದಂಧೆ?
ಸೀಟ್ ಬ್ಲಾಕ್ ಎಂದರೆ, ಕೆಲ ಏಜೆಂಟರು ಅಥವಾ ಮಾಫಿಯಾ ಗುಂಪುಗಳು ವಿದ್ಯಾರ್ಥಿಗಳ ‘Secret Key’ ಅಥವಾ ಪ್ರವೇಶ ಮಾಹಿತಿಯನ್ನು ದುರ್ಬಳಕೆ ಮಾಡಿ, ಉತ್ತಮ ಕಾಲೇಜುಗಳ ಸೀಟುಗಳನ್ನು ತಾತ್ಕಾಲಿಕವಾಗಿ ಹಿಡಿದು ಬಿಡುತ್ತಾರೆ. ಇದರ ಪರಿಣಾಮವಾಗಿ ಇತರ ಅರ್ಹ ವಿದ್ಯಾರ್ಥಿಗಳಿಗೆ ಸೀಟು ಸಿಗದ ಪರಿಸ್ಥಿತಿ ಉಂಟಾಗುತ್ತದೆ. ಈ ದಂಧೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ದೊಡ್ಡ ಅಡ್ಡಿ ಸೃಷ್ಟಿಸುತ್ತಿತ್ತು.
ಕಳೆದ ವರ್ಷ (2024) ಈ ದಂಧೆ ತೀವ್ರ ರೂಪ ಪಡೆದುಕೊಂಡು, ಹಲವು ಶ್ರೇಷ್ಠ ಕಾಲೇಜುಗಳ ಸೀಟುಗಳು ಬ್ಲಾಕ್ ಆಗಿದ್ದ ಕಾರಣ ಸಾಕಷ್ಟು ಪ್ರತಿಭಟನೆಗಳು ನಡೆದಿದ್ದವು. ಕೆಇಎ ಒಳಗಿನ ಸಿಬ್ಬಂದಿಯೇ ಸೀಕ್ರೆಟ್ ಕೀಗಳನ್ನು ಏಜೆಂಟರಿಗೆ ಒದಗಿಸುತ್ತಿರುವ ಬಗ್ಗೆ ಆರೋಪ ಕೇಳಿ ಬಂದಿದ್ದವು. ಈ ಸಂಬಂಧ ಕೆಇಎ ಸಿಬ್ಬಂದಿಯೊಬ್ಬರನ್ನು ಬಂಧಿಸಲಾಗಿತ್ತು.

ಈ ಸಲ ಎಚ್ಚರಗೊಂಡ ಕೆಇಎ
2025ರ ಕೆಸಿಇಟಿಯಲ್ಲಿ ಸುಮಾರು 2.75 ಲಕ್ಷ ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದು, ಈ ಬಾರಿ ಯಾವುದೇ ರೀತಿಯ ಸೀಟ್ ಬ್ಲಾಕ್ ಆಗದಂತೆ ನೋಡಿಕೊಳ್ಳುವ ದಿಟ್ಟ ಕ್ರಮಗಳನ್ನು ಕೆಇಎ ತೆಗೆದುಕೊಂಡಿದೆ.
ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಅವರು ನೀಡಿದ ಮಾಹಿತಿಯಂತೆ – ಈ ಬಾರಿ ಕೆಇಎ OTP ಹಾಗೂ ಫೇಸ್ ಐಡಿ ತಂತ್ರಜ್ಞಾನ ಜಾರಿಗೆ ತರುತ್ತಿದ್ದು; ವಿದ್ಯಾರ್ಥಿಯ ಹೊರತು ಬೇರೆ ಯಾರಿಗೂ ಸಿಇಟಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗದು.
Secret Key ರದ್ದು; OTP ಮತ್ತು ಮುಖಚಹರೆ ಕಡ್ಡಾಯ
ಹಳೆಯ ವ್ಯವಸ್ಥೆಯಂತೆ ವಿದ್ಯಾರ್ಥಿಗಳಿಗೆ ಸೀಕ್ರೆಟ್ ಕೀ ನೀಡುವುದನ್ನು ಕೆಇಎ ಸಂಪೂರ್ಣವಾಗಿ ನಿಲ್ಲಿಸಲಿದೆ. ಇದಕ್ಕೆ ಬದಲಿಗೆ ಈ ಕೆಳಕಂಡ ಹೊಸ ಕ್ರಮಗಳು ಜಾರಿಯಾಗುತ್ತವೆ:
OTP ದೃಢೀಕರಣ: ವಿದ್ಯಾರ್ಥಿಯ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ. OTP ನೀಡಿದ ನಂತರವೇ ಮುಂದಿನ ಹಂತಕ್ಕೆ ಪ್ರವೇಶ.
ಫೇಸ್ ಐಡಿ (Face Authentication): ಕೌನ್ಸೆಲಿಂಗ್ ವೇಳೆ ವಿದ್ಯಾರ್ಥಿಯ ಮುಖ ಸ್ಕ್ಯಾನ್ ಆಗುತ್ತದೆ. ಈ ಸಮಯದಲ್ಲಿ ವೆಬ್ ಕ್ಯಾಮೆರಾ ಇರುವ ಲ್ಯಾಪ್‌ಟಾಪ್ ಅಥವಾ ಡೆಸ್ಕ್ಟಾಪ್ ಬಳಕೆ ಕಡ್ಡಾಯ.
ವಿದ್ಯಾರ್ಥಿಗಳಿಗೆ ಮುಖ್ಯ ಸೂಚನೆಗಳು
ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವಾಗ ನೀಡಿದ ಮೊಬೈಲ್ ಸಂಖ್ಯೆಯನ್ನೇ ಸಂಪೂರ್ಣ ಸಿಇಟಿ ಪ್ರಕ್ರಿಯೆ ಮುಗಿಯುವ ವರೆಗೆ ಬಳಸಬೇಕಾಗುತ್ತದೆ. ಮಧ್ಯದಲ್ಲಿ ಆ ನಂಬರ್ ಬದಲಾಯಿಸಲು ಬಯಸಿದರೆ, ಕೆಇಎಗೆ ಪೂರ್ವಾನುಮತಿ ಕಡ್ಡಾಯ.
- ಮೊಬೈಲ್ ಔಖಿPರ ಮೂಲಕ ದೃಢೀಕರಣ ಕಡ್ಡಾಯ
- ಫೇಸ್ ಸ್ಕ್ಯಾನ್ ಮೂಲಕ ವಿದ್ಯಾರ್ಥಿಯ ತಪಾಸಣೆ
- ವೆಬ್ ಕ್ಯಾಮೆರಾ ಇರುವ ಕಂಪ್ಯೂಟರ್/ಲ್ಯಾಪ್‌ಟಾಪ್ ಬಳಕೆಮಾಡಿ
- ಸೀಕ್ರೆಟ್ ಕೀ ಬಳಕೆ ಇಲ್ಲ
- ಬೇರೆ ವ್ಯಕ್ತಿ ಅಥವಾ ಏಜೆಂಟ್ ಮೂಲಕ ಪ್ರಕ್ರಿಯೆ ನಿರ್ವಹಣೆ ಅಸಾಧ್ಯ
- ಮೊಬೈಲ್ ನಂಬರ್ ಬದಲಾವಣೆಗೆ ಕೆಇಎ ಅನುಮತಿ ಕಡ್ಡಾಯ
ಈ ಹೊಸ ವ್ಯವಸ್ಥೆಯು ಸಿಇಟಿ ಕೌನ್ಸೆಲಿಂಗ್ ಪ್ರಕ್ರಿಯೆ ನೈತಿಕತೆಯಿಂದ ಸಾಗಲು ನೆರವಾಗಲಿದೆ. ವಿದ್ಯಾರ್ಥಿಯೇ ತನ್ನ ಪ್ರಕ್ರಿಯೆ ನಿರ್ವಹಿಸಬೇಕಾಗಿದ್ದು, ಇದು ಹಕ್ಕಿನಿಂದ ಸೀಟು ಪಡೆಯುವ ವಿದ್ಯಾರ್ಥಿಗೆ ನ್ಯಾಯ ದೊರಕಿಸುವಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಇಂತಹ ಉಪಯುಕ್ತ ಮಾಹಿತಿಯನ್ನು ಪಡೆಯಲು mahitimane.com ನಿರಂತರವಾಗಿ ಅನುಸರಿಸಿ…

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.