ಜೂನ್ 2ರಂದು ಕೆಸಿಇಟಿ 2025ರ ಸ್ಪಾಟ್ ರ‍್ಯಾಂಕಿಂಗ್ ಪ್ರಕಟವಾಗಿದ್ದು; ಶೀಘ್ರದಲ್ಲಿಯೇ ಏಕೀಕೃತ ಕೌನ್ಸೆಲಿಂಗ್ (KCET 2025 Counselling) ಪ್ರಕ್ರಿಯೆ ಆರಂಭವಾಗಲಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ಕರ್ನಾಟಕದ ಉನ್ನತ ಶಿಕ್ಷಣಕ್ಕಾಗಿ ಕೆಸಿಇಟಿ (KCET) ಪರೀಕ್ಷೆಯ ಫಲಿತಾಂಶ ಈಗ ಸಂಪೂರ್ಣವಾಗಿದ್ದು, ವಿದ್ಯಾರ್ಥಿಗಳು ಕೌನ್ಸೆಲಿಂಗ್ ಪ್ರಕ್ರಿಯೆಗೆ ತಯಾರಾಗುವ ಸಮಯ ಬಂದಿದೆ. ಮೇ 24ರಂದು ಪ್ರಕಟವಾದ ಸಿಇಟಿ ಫಲಿತಾಂಶದಲ್ಲಿ ಕೆಲವು ವಿದ್ಯಾರ್ಥಿಗಳ ರ‍್ಯಾಂಕ್ ಪ್ರಕಟವಾಗದೇ ಬಾಕಿಯಿತ್ತು. ಇದೀಗ, ಈ ಫಲಿತಾಂಶಗಳು ಕೂಡ ಇಂದು ಪ್ರಕಟಗೊಂಡಿವೆ.
ಸಿಇಟಿ ಸ್ಪಾಟ್ ರ‍್ಯಾಂಕ್
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಮೇ 24ರಂದು ಪ್ರಕಟಿಸಿದ ಸಿಇಟಿ ಫಲಿತಾಂಶದಲ್ಲಿ ರ‍್ಯಾಂಕ್ ಪ್ರಕಟವಾಗದ ವಿದ್ಯಾರ್ಥಿಗಳಿಗೆ ಇಂದು (ಜೂನ್ 2) ಸ್ಪಾಟ್ ರ‍್ಯಾಂಕಿಂಗ್ ಪ್ರಕಟಿಸಿದೆ. ರ‍್ಯಾಂಕ್ ಪ್ರಕಟವಾಗದ ವಿದ್ಯಾರ್ಥಿಗಳಿಗೆ ಮೇ 26ರಿಂದ 29ರ ವರಗೆ ದ್ವಿತೀಯ ಪಿಯು ಅಂಕಗಳನ್ನು ನಮೂದಿಸಲು ಕೆಇಎ ವೆಬ್‌ಸೈಟ್ ಲಿಂಕ್ ಬಿಡುಗಡೆ ಮಾಡಿತ್ತು.
ದ್ವಿತೀಯ ಪಿಯು ಅಂಕಗಳನ್ನು ದಾಖಲಿಸಿದವರ ಹಾಗೂ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದವರ ಅಂಕಗಳ ಸಂಯೋಜನೆ ನಡೆದಿದ್ದು; ಇದೀಗ ಫಲಿತಾಂಶ ಪ್ರಕಟವಾಗಿದೆ. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸುವ ಮೂಲಕ ತಮ್ಮ ರ‍್ಯಾಂಕ್‌ಗಳನ್ನು ಪರಿಶೀಲಿಸಬಹುದು.
10,000 ವಿದ್ಯಾರ್ಥಿಗಳ ಫಲಿತಾಂಶ
ಕೆಸಿಇಟಿ 2025 ಏಪ್ರಿಲ್ 15 ರಿಂದ ಏಪ್ರಿಲ್ 17 ರವರೆಗೆ ನಡೆಯಿತು. ಮೊದಲ ದಿನ, ಕೆಸಿಇಟಿ ಕನ್ನಡ ಭಾಷಾ ಪರೀಕ್ಷೆಯನ್ನು ನಡೆಸಲಾಗಿತ್ತು. ಕೆಸಿಇಟಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ ಪತ್ರಿಕೆಗಳನ್ನು ಏಪ್ರಿಲ್ 16 ಮತ್ತು 17 ರಂದು ಎರಡು ಹಂತಗಳಲ್ಲಿ ನಡೆಸಲಾಗಿತ್ತು.
ಮೇ 24ರಂದು ಕೆಸಿಇಟಿ ಫಲಿತಾಂಶ ಪ್ರಕಟವಾಗಿದ್ದು; ತಪ್ಪಾದ ನೋಂದಣಿ ಸಂಖ್ಯೆಗಳಿಂದಾಗಿ ಸುಮಾರು 10,000 ವಿದ್ಯಾರ್ಥಿಗಳ ಫಲಿತಾಂಶಗಳು ವಿಳಂಬವಾಗಿದ್ದವು. ಹೀಗೆ ರ‍್ಯಾಂಕ್ ಪ್ರಕಟವಾಗದ ವಿದ್ಯಾರ್ಥಿಗಳ ಫಲಿತಾಂಶವನ್ನು ಕೂಡ ಇದೀಗ ಅಧಿಕೃತವಾಗಿ ಪ್ರಕಟಿಸಲಾಗಿದೆ.

ಕೆಸಿಇಟಿ ಕೌನ್ಸೆಲಿಂಗ್ ಯಾವಾಗ ಆರಂಭವಾಗಲಿದೆ?
ಕೆಇಎ ಶೀಘ್ರದಲ್ಲಿಯೇ 2025ನೇ ಸಾಲಿನ ಎಂಜಿನಿಯರಿಂಗ್, ಆಯುಷ್, ನರ್ಸಿಂಗ್, ಕೃಷಿ ಹಾಗೂ ವೈದ್ಯಕೀಯ ಕೋರ್ಸ್’ಗ್ ಪ್ರವೇಶಕ್ಕಾಗಿ ಏಕೀಕೃತ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭಿಸಲಿದೆ.
ಆದರೆ, ಈ ಪ್ರಕ್ರಿಯೆಗೂ ಮುನ್ನ ವೈದ್ಯಕೀಯ, ದಂತ ಮತ್ತು ಆಯುಷ್ ಕೋರ್ಸುಗಳಿಗೆ NEET 2025 ಫಲಿತಾಂಶ ಹಾಗೂ ಆರ್ಕಿಟೆಕ್ಚರ್ ಪ್ರವೇಶಗಳಿಗೆ NATA 2025 ಫಲಿತಾಂಶ ಪ್ರಕಟವಾಗಬೇಕಿದೆ.
ಜೊತೆಗೆ ಪ್ರತಿಯೊಂದು ಇಲಾಖೆಯಿಂದ ಸೀಟುಗಳ ಪ್ರಮಾಣದ ವರದಿ ಕೆಇಎಗೆ ಲಭ್ಯವಾಗಬೇಕಾಗಿದೆ. ಈ ಎಲ್ಲ ಅಂಶಗಳು ಪೂರ್ಣಗೊಂಡ ನಂತರ ಮಾತ್ರ ಕೌನ್ಸೆಲಿಂಗ್ ವೇಳಾಪಟ್ಟಿ ಪ್ರಕಟಿಸಲಾಗುತ್ತದೆ.
ಕೌನ್ಸೆಲಿಂಗ್ ಪ್ರಕ್ರಿಯೆಯ ಹಂತಗಳು
- ನೋಂದಣಿ (Registration): ಅಭ್ಯರ್ಥಿಗಳು ತಮ್ಮ ವೈಯಕ್ತಿಕ, ಶೈಕ್ಷಣಿಕ ವಿವರಗಳನ್ನು ಆನ್‌ಲೈನ್‌ನಲ್ಲಿ ನಮೂದಿಸಿ ಕೌನ್ಸೆಲಿಂಗ್ ನೋಂದಣಿ ಪೂರ್ಣಗೊಳಿಸಬೇಕು.
- ಆಯ್ಕೆ ಭರ್ತಿ (Option Entry): ವಿದ್ಯಾರ್ಥಿಗಳು ತಮ್ಮ ಆದ್ಯತೆಯ ಕಾಲೇಜುಗಳು ಮತ್ತು ಕೋರ್ಸ್ಗಳನ್ನು ಆಯ್ಕೆ ಮಾಡಬೇಕು.
- ಸೀಟು ಹಂಚಿಕೆ (Seat Allotment): ಆಯ್ಕೆಗಳನ್ನು ಹಾಗೂ ರ‍್ಯಾಂಕ್‌ಗಳನ್ನು ಆಧರಿಸಿ ಸೀಟು ಹಂಚಿಕೆ ಆಗುತ್ತದೆ. ಅಭ್ಯರ್ಥಿಗಳು ತಮ್ಮ ಸಿಇಟಿ ಸಂಖ್ಯೆ ಮೂಲಕ ಹಂಚಿಕೆ ಫಲಿತಾಂಶ ಪರಿಶೀಲಿಸಬಹುದು.
- ಶುಲ್ಕ ಪಾವತಿ ಮತ್ತು ದಾಖಲೆಗಳ ಪರಿಶೀಲನೆ: ಹಂಚಿಕೆಯಾಗಿರುವ ಕಾಲೇಜಿಗೆ ಶುಲ್ಕ ಪಾವತಿಸಿ, ದಾಖಲೆಗಳನ್ನು ದೃಢೀಕರಿಸಿ ಭೌತಿಕ ಹಾಜರಾತಿ ನೀಡಬೇಕು.
ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಅಗತ್ಯ ದಾಖಲೆಗಳು
- ಕೆಸಿಇಟಿ ಅಡ್ಮಿಟ್ ಕಾರ್ಡ್
- ರ‍್ಯಾಂಕ್ ಕಾರ್ಡ್
- ಪಿಯುಸಿ ಅಂಕಪಟ್ಟಿ
- ಶಾಲಾ/ಕಾಲೇಜು ಅಂಕಪಟ್ಟಿಗಳು
- ನಿವಾಸ ಪ್ರಮಾಣಪತ್ರ
- ಕಮ್ಯುನಿಟಿ/ಕೋಟ್ ಪ್ರಮಾಣಪತ್ರ (ಅರ್ಹತೆಯಿದ್ದರೆ)
- ಪಾಸ್‌ಪೋರ್ಟ್ ಸೈಜ್ ಫೋಟೋಗಳು
- ಗುರುತಿನ ಚೀಟಿ (ಆಧಾರ್, ಪಾನ್ ಇತ್ಯಾದಿ)
ಕೌನ್ಸೆಲಿಂಗ್ ಪ್ರಕ್ರಿಯೆಯ ಎಲ್ಲ ಹಂತಗಳನ್ನು ನಿಖರವಾಗಿ ಅನುಸರಿಸುವುದು ಅತ್ಯಗತ್ಯ. ಯಾವ ದಿನಾಂಕದಲ್ಲಿ ಯಾವ ಹಂತ ನಡೆಯುತ್ತದೆ ಎಂಬುದನ್ನು ಕೆಇಎ ವೆಬ್‌ಸೈಟ್ ಅಥವಾ ಸುದ್ದಿಜಾಲಗಳ ಮೂಲಕ ಗಮನಿಸುತ್ತಿರಿ. ದಾಖಲೆಗಳು, ಅಂಕಪಟ್ಟಿಗಳು, ಗುರುತಿನ ದಾಖಲೆಗಳು ಮೊದಲಿನಿಂದಲೇ ಸಿದ್ಧವಾಗಿರಲಿ. ಮೊದಲ ಹಂತದಲ್ಲಿ ಸೀಟು ಸಿಗದಿದ್ದರೂ ನಿರಾಸೆಗೊಳ್ಳಬೇಡಿ, ದ್ವಿತೀಯ ಹಂತದ ಸೀಟು ಹಂಚಿಕೆಗೆ ತಯಾರಿ ಇಡಿ…