ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ (Pre Monsoon 2025) ಭರ್ಜರಿಯಾಗಿ ಸುರಿಯುತ್ತಿದ್ದು; ಹವಾಮಾನ ಇಲಾಖೆ ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ. ಈ ಕುರಿತ ಮಾಹಿತಿ ಇಲ್ಲಿದೆ…
ರಾಜ್ಯದಲ್ಲಿ ಬೇಸಿಗೆ ಮಳೆ ಭರ್ಜರಿಯಾಗಿ ಸುರಿಯುತ್ತಿದೆ. ನಿನ್ನೆ ಮೇ 2ರ ಶುಕ್ರವಾರ ರಾಜ್ಯದ ಹಲವೆಡೆ ಬಿರುಗಾಳಿ ಸಹಿತ ಮಳೆಯಾಗಿದ್ದು, ಮುಂದಿನ ಐದು ಆರು ದಿನಗಳ ವರೆಗೆ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ರಾಜ್ಯದ ಪ್ರಮುಖ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಆರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ
ಭಾರತೀಯ ಹವಾಮಾನ ಇಲಾಖೆ ಬಿಡುಗಡೆ ಮಾಡಿದ ವರದಿ ಪ್ರಕಾರ, ಹಾಸನ, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳ ಅವಧಿಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ.
ಹಾಗೆಯೇ, ರಾಮನಗರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಮೇ 4ರಂದು, ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೇ 3ರಿಂದ 9ರ ವರೆಗೆ ಬಿರುಗಾಳಿಯೊಂದಿಗೆ ಮಳೆ ಮುಂದುವರೆಯುವ ಮುನ್ಸೂಚನೆ ನೀಡಲಾಗಿದೆ. ಈ ಎಲ್ಲ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಬಿರುಗಾಳಿಯ ಬಗ್ಗೆಯೂ ಮುನ್ಸೂಚನೆ
ಇದಲ್ಲದೆ, ಕೆಲ ಕಡೆಗಳಲ್ಲಿ ಪ್ರತಿಗಂಟೆಗೆ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯೂ ಇರುವುದರಿಂದ, ಹವಾಮಾನ ಇಲಾಖೆ ಈ ಬಗ್ಗೆ ಹೆಚ್ಚಿನ ಎಚ್ಚರಿಕೆಯಿಂದಿರಬೇಕೆಂದು ಸಲಹೆ ನೀಡಿದೆ. ಮರಗಳ ಕೆಳಗೆ ನಿಲ್ಲುವುದು, ವಿದ್ಯುತ್ ಕಂಬಗಳಿಗೆ ಹತ್ತಿರ ಇರುವುದು ಮುಂತಾದವುಗಳಿಂದ ತಪ್ಪಿದರೆ ಉತ್ತಮ.
ಬೇರೆ ಜಿಲ್ಲೆಗಳಲ್ಲಿ ಸಾಧಾರಣ ಮಳೆ ನಿರೀಕ್ಷೆ
ಬೆಂಗಳೂರು ನಗರ ಮತ್ತು ಗ್ರಾಮಾಂತರ, ಚಾಮರಾಜನಗರ, ಕೊಡಗು, ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಮೇ 3ರಿಂದ ಮೇ 9ರ ವರೆಗೆ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಇವುಗಳಲ್ಲಿ ಅಲ್ಪ ಪ್ರಮಾಣದ ಮಳೆ ಅಥವಾ ರಾತ್ರಿಯ ಹೊತ್ತಿನಲ್ಲಿ ಮಳೆ ಆಗುವ ಸಾಧ್ಯತೆ ಹೆಚ್ಚು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Karnataka Rain Forecast- ಮೇ 6ರ ವರೆಗೆ ಕರ್ನಾಟಕದಲ್ಲಿ ಮಳೆ ಮುನ್ಸೂಚನೆ | ಯಾವೆಲ್ಲ ಜಿಲ್ಲೆಗಳಲ್ಲಿ ಮಳೆಯಾಗಲಿದೆ?
ಪೂರ್ವ ಮುಂಗಾರು ಮಳೆ ಪ್ರಮಾಣ ಹೆಚ್ಚಳ
ಹವಾಮಾನ ತಜ್ಞರ ವರದಿ ಪ್ರಕಾರ, ಈ ಬಾರಿ ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ ಸಾಧಾರಣ ಪ್ರಮಾಣಕ್ಕಿಂತ ಅತೀ ಹೆಚ್ಚು ದಾಖಲಾಗಿದೆ.
ಮಾರ್ಚ್ 1ರಿಂದ ಏಪ್ರಿಲ್ 30ರ ಅವಧಿಯಲ್ಲಿ ವಾಡಿಕೆಯ ಮಳೆ ಪ್ರಮಾಣ 41.5 ಮಿ.ಮೀ. ಆಗಿದ್ದು; ಈ ವರ್ಷದ ಮಳೆ ಪ್ರಮಾಣ 67.6 ಮಿ.ಮೀ. ಆಗಿದೆ. ಅಂದರೆ ಶೇ.63ರಷ್ಟು ಹೆಚ್ಚಳವಾಗಿದೆ.
ಇನ್ನು ಏಪ್ರಿಲ್ ತಿಂಗಳಲ್ಲಿ ವಾಡಿಕೆಯ ಮಳೆ ಪ್ರಮಾಣ 32.4 ಮಿ.ಮೀ. ಆಗಿದ್ದು; ಈ ಬಾರಿ ಬಿದ್ದ ಮಳೆ 55.6 ಮಿ.ಮೀ. ಅಂದರೆ ಶೇ.72ರಷ್ಟು ಹೆಚ್ಚುವರಿ ಪೂರ್ವ ಮುಂಗಾರು ಮಳೆ ಸುರಿದಿದೆ. ಪ್ರದೇಶಾವಾರು ಮಳೆಯ ವಿವರ ಈ ಕೆಳಗಿನಂತಿದೆ:
- ಕರಾವಳಿ ಭಾಗ: 106%
- ಮಲೆನಾಡು: 57%
- ಉತ್ತರ ಒಳನಾಡು: 83%
- ದಕ್ಷಿಣ ಒಳನಾಡು: 61%
ಮುನ್ನೆಚ್ಚರಿಕೆ ಕ್ರಮಗಳು
ಇಂದಿನಿಂದ ಮುಂದಿನ ಒಂದು ವಾರದ ವರೆಗೆ ವೇಗದ ಬಿರುಗಾಳಿ ಮತ್ತು ಮಳೆಯಾಗಲಿದ್ದು; ಮುನ್ನೆಚ್ಚರಿಕೆಯಿಂದ ಇರಲು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಕ್ಕಳು, ಹಿರಿಯರು ಹಾಗೂ ವಾಹನ ಚಲಾವಣೆ ಮಾಡುವವರು ಅತಿಯಾದ ಗಾಳಿಯ ಸಮಯದಲ್ಲಿ ಹೊರಬರದಂತೆ ನೋಡಿಕೊಳ್ಳಬೇಕು.
ವಿದ್ಯುತ್ ತಂತಿ, ಮರಗಳ ಕೆಳಭಾಗ ಅಥವಾ ನೀರು ನಿಂತಿರುವ ಸ್ಥಳಗಳಿಂದ ದೂರವಿರಬೇಕು. ಮನೆಯ ಮೇಲ್ಚಾವಣಿ, ಹಳೆಯ ಕಟ್ಟಡಗಳು ಹಾಗೂ ಕಟ್ಟಡ ನಿರ್ಮಾಣ ಪ್ರದೇಶಗಳಲ್ಲಿ ಸುರಕ್ಷಿತ ಕ್ರಮ ಕೈಗೊಳ್ಳಬೇಕು.
ಈ ವರ್ಷ ಮುಂಗಾರು ಮಳೆ ಕೂಡ ಅಧಿಕ
ಈ ಬಾರಿಯ ಬೇಸಿಗೆ ಮಳೆಯ ಅಬ್ಬರ ಸಾಕಷ್ಟು ವಿಸ್ತಾರ ಹೊಂದಿದ್ದು, ಹವಾಮಾನ ವರದಿಗಳ ಪ್ರಕಾರ ಮುಂದಿನ ದಿನಗಳಲ್ಲಿ ಮುಂಗಾರು ಮಳೆ ಸಹ ಉಲ್ಬಣಗೊಳ್ಳಬಹುದು. ಈ ಬಾರಿಯ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚು ಸುರಿಯುವ ಸಾಧ್ಯತೆ ಇದೆ. ಇದು ರೈತರಿಗೆ ವರದಾನವಾಗಬಹುದು. ಆದರೆ, ಇನ್ನೊಂದೆಡೆ ಸತತ ಮಳೆ ಹಾನಿಯೂ ಉಂಟಾಗುವ ಅಪಾಯವಿದೆ.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.