ಹೊಸ ಬಿಪಿಎಲ್ ಕಾರ್ಡಿಗಾಗಿ (Karnataka Hosa BPL Card) ಕಾದು ಕೂತವರಿಗೆ ಆಹಾರ ಸಚಿವರಿಂದ ಮಹತ್ವದ ಮಾಹಿತಿ ಹೊರಬಿದ್ದಿದೆ. ಶೀಘ್ರದಲ್ಲಿಯೇ ಹೊಸ ಅರ್ಜಿ ಪ್ರಕ್ರಿಯೆ ಆರಂಭವಾಗಲಿದ್ದು; ಸಂಪೂರ್ಣ ಮಾಹಿತಿ ಇಲ್ಲಿದೆ…
ಹೊಸ ಬಿಪಿಎಲ್ ಕಾರ್ಡ್ ಕೋರಿ ಅರ್ಜಿ ಸಲ್ಲಿಸಿ ಕಳೆದ ನಾಲ್ಕೈದು ವರ್ಷಗಳಿಂದ ಕಾತುರದಿಂದ ಕಾಯುತ್ತಿರುವ ಲಕ್ಷಾಂತರ ಅರ್ಜಿದಾರರಿಗೆ ಹೊಸ ಭರವಸೆ ಮೂಡಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ವತಿಯಿಂದ ಈ ಕುರಿತು ಮಹತ್ವದ ಬೆಳವಣಿಗೆಗಳು ನಡೆದಿದ್ದು, ಹೊಸ ಕಾರ್ಡ್ಗಳ ಮಂಜೂರಾತಿಗೆ ದಾರಿ ಸುಗಮವಾಗುತ್ತಿದೆ.
BPL Ration Card- 2.86 ಲಕ್ಷ ಹೊಸ ಬಿಪಿಎಲ್ ರೇಷನ್ ಕಾರ್ಡ್ ವಿತರಣೆ | ಆಹಾರ ಇಲಾಖೆಯ ಮಹತ್ವದ ಮಾಹಿತಿ ಇಲ್ಲಿದೆ…
ಹೊಸ ಕಾರ್ಡ್ ವಿತರಣೆಗೆ ಕೇಂದ್ರ ಸರ್ಕಾರದ ಸ್ಪಂದನೆ?
ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ವ್ಯಾಪ್ತಿಯಲ್ಲಿ ಅಹಾರ ಭದ್ರತಾ ಕಾಯ್ದೆ (NFSA) ಅಡಿ ರಾಜ್ಯದಲ್ಲಿ ಈಗಿರುವ ಫಲಾನುಭವಿಗಳ ಗರಿಷ್ಠ ಮಿತಿ 4.01 ಕೋಟಿ. ಈ ಸಂಖ್ಯೆ 2011ರ ಜನಗಣತಿ ಆಧಾರದ ಮೇಲೆ ನಿಗದಿಯಾಗಿದ್ದು, ಇತ್ತೀಚಿನ ಜನಸಂಖ್ಯಾ ಪ್ರಮಾಣಕ್ಕೆ ಅನುಗುಣವಾಗಿ ಇದು ಸಾಕಾಗುತ್ತಿಲ್ಲ ಎಂಬ ಬೇಡಿಕೆ ಹೆಚ್ಚಿದೆ.
ಈ ಹಿನ್ನೆಲೆಯಲ್ಲಿ ರಾಜ್ಯದ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರು ಕೇಂದ್ರದ ಆಹಾರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಪತ್ರ ಬರೆದು ಫಲಾನುಭವಿಗಳ ಗರಿಷ್ಠ ಮಿತಿಯನ್ನು 4.60 ಕೋಟಿಗೆ ಹೆಚ್ಚಿಸುವಂತೆ ಮನವಿ ಸಲ್ಲಿಸಿದ್ದಾರೆ. ಕೇಂದ್ರ ಸರ್ಕಾರ ಈ ಬೇಡಿಕೆಗೆ ಅನುಕೂಲಕರ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ಇದರಿಂದ ಹೊಸ ಅರ್ಜಿದಾರರಿಗೆ ಬಿಪಿಎಲ್ ಕಾರ್ಡ್ ವಿತರಣೆಯ ಅಡೆತಡೆಗಳು ನಿವಾರಣೆಯಾಗಲಿದೆ.

ಈತನಕ ಸಲ್ಲಿಕೆಯಾದ ಅರ್ಜಿಗಳ ಸ್ಥಿತಿಗತಿ
ರಾಜ್ಯದಲ್ಲಿ ಬೆಂಗಳೂರು ಒನ್, ಕರ್ನಾಟಕ ಒನ್ ಹಾಗೂ ಗ್ರಾಮ ಒನ್ ಸಾರ್ವಜನಿಕ ಸೇವಾ ಕೇಂದ್ರಗಳ ಮೂಲಕ ಹೊಸ ಪಡಿತರ ಚೀಟಿ ಕೋರಿ ಒಟ್ಟು 39 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ.
ಇವುಗಳಲ್ಲಿ 26,48,171 ಅರ್ಜಿಗಳು ಅನುಮೋದಿತಗೊಂಡಿದ್ದು; 9,60,641 ಅರ್ಜಿಗಳು ತಿರಸ್ಕೃತಗೊಂಡಿವೆ. ಒಟ್ಟು 36,08,812 ಅರ್ಜಿಗಳು ವಿಲೇವಾರಿಯಾಗಿವೆ. 2,95,986 ಅರ್ಜಿಗಳು ವಿಲೇವಾರಿಗೆ ಬಾಕಿ ಉಳಿದಿವೆ.
ಇನ್ನು 2023ರಲ್ಲಿ ಒಟ್ಟು 2.95 ಲಕ್ಷ ಅರ್ಜಿಗಳಲ್ಲಿ 1.65 ಲಕ್ಷ ಕಾರ್ಡ್ಗಳು ಮಂಜೂರಾಗಿವೆ. ಉಳಿದ 1.90 ಲಕ್ಷ ಅರ್ಜಿಗಳು ಪರಿಶೀಲನೆಯ ಹಂತದಲ್ಲಿವೆ. ಸದ್ಯಕ್ಕೆ ಮತ್ತು 2.6 ಲಕ್ಷ ಅರ್ಜಿ ಇನ್ನೂ ಪರಿಶೀಲನೆ ಹಂತದಲ್ಲಿವೆ.
ಸದ್ಯಕ್ಕೆ ಇವರಿಗೆ ಮಾತ್ರ ಬಿಪಿಎಲ್ ಕಾರ್ಡ್
ಸಾಮಾನ್ಯ ಅರ್ಜಿದಾರರಿಗಿಂತ, ತುರ್ತು ಆಧಾರದ ಮೇರೆಗೆ ಕೆಲವರಿಗೆ ತ್ವರಿತವಾಗಿ ಬಿಪಿಎಲ್ ಕಾರ್ಡ್ ನೀಡಲಾಗುತ್ತಿದೆ. ಹೃದಯ ರೋಗ, ಕ್ಯಾನ್ಸರ್ ಮುಂತಾದ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರು, ಇ-ಶ್ರಮ್ ಕಾರ್ಮಿಕರು, ಬುಡಕಟ್ಟು ಜನಾಂಗದವರಿಗೆ ಮಾತ್ರ ಹೊಸ ಕಾರ್ಡ್’ಗೆ ಅರ್ಜಿ ಸಲ್ಲಿಸು ಅವಕಾಶವಿದೆ.
ಸಾಮಾನ್ಯ ಫಲಾನುಭವಿಗಳಿಗೆ ರೇಷನ್ ಕಾರ್ಡ್ ತಿದ್ದುಪಡಿಗೆ ಮಾತ್ರ ಅವಕಾಶವಿದೆ. ಮೊದಲೆಲ್ಲ ಪ್ರತಿ ತಿಂಗಳು 1ರಿಂದ 10ರೊಳಗೆ ಮಾತ್ರ ತಿದ್ದುಪಡಿ ಅವಕಾಶವಿತ್ತು. ಈಗ ಪಡಿತರ ಚೀಟಿಗೆ ತಿದ್ದುಪಡಿಗೆ ತಿಂಗಳ ಪೂರ್ತಿ ಅವಕಾಶ ನೀಡಲಾಗಿದೆ. ಇದು ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲತೆಯನ್ನು ಒದಗಿಸುತ್ತದೆ.
ಹೊಸ ಬಿಪಿಎಲ್ ಕಾರ್ಡ್ ನಿರೀಕ್ಷೆಯಲ್ಲಿ ಇರುವವರಿಗೆ ಸರ್ಕಾರದಿಂದ ಶೀಘ್ರದಲ್ಲಿ ಸ್ಪಷ್ಟನೆ ಹೊರಬೀಳಲಿದ್ದು; ಕೇಂದ್ರ ಸರ್ಕಾರದ ಒಪ್ಪಿಗೆ ದೊರೆತರೆ ಮತ್ತೆ ಹೊಸ ಬಿಪಿಎಲ್ ಕಾರ್ಡ್ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಮಾತ್ರವಲ್ಲ ಈಗಾಗಲೇ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳಿಗೆ ಹೊಸ ಕಾರ್ಡ್ ವಿತರಣೆ ಕೂಡ ನಡೆಲಿದೆ.