Karnataka Govt School Teacher Recruitment 2024 : ರಾಜ್ಯ ಸರ್ಕಾರವು ಬಜೆಟ್‌ನಲ್ಲಿ ಘೋಷಿಸಿರುವಂತೆ ಸರಕಾರಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ನೇಮಕ ಮಾಡಲು ಸಿದ್ಧತೆ ನಡೆದಿದೆ. ಒಟ್ಟು 10,000 ಸರಕಾರಿ ಶಾಲಾ ಶಿಕ್ಷಕರ ನೇಮಕಕ್ಕೆ ತೀರ್ಮಾನಿಸಿರುವ ಶಿಕ್ಷಣ ಇಲಾಖೆಯು, ಆರ್ಥಿಕ ಇಲಾಖೆಗೆ ಅನುಮತಿ ನೀಡುವಂತೆ ಕೋರಿ ಪ್ರಸ್ತಾವನೆ ಸಲ್ಲಿಸಿದೆ. ಆರ್ಥಿಕ ಇಲಾಖೆ ಅನುಮತಿ ನೀಡಿದ ತಕ್ಷಣ ಅಧಿಕೃತ ಅಧಿಸೂಚನೆ ಪ್ರಕಟವಾಗಲಿದೆ.
ಖಾಲಿ ಹುದ್ದೆಗಳ ವಿವರ
ರಾಜ್ಯದ ಎಲ್ಲಾ ಜಿಲ್ಲೆಗಳ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಬರೋಬ್ಬರಿ 50 ಸಾವಿರಕ್ಕೂ ಹೆಚ್ಚಿನ ಶಿಕ್ಷಕರ ಕೊರತೆ ಇದೆ. ರಾಜ್ಯದಲ್ಲಿ ಒಟ್ಟು 43,348 ಸರ್ಕಾರಿ ಪ್ರಾಥಮಿಕ ಶಾಲೆಗಳಿದ್ದು, ಇವುಗಳಲ್ಲಿ 1.40 ಲಕ್ಷ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.
ಅದೇ ರೀತಿ ರಾಜ್ಯದ 4,838 ಪ್ರೌಢಶಾಲೆಗಳಲ್ಲಿ 28,000 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಾಥಮಿಕ ಶಾಲೆಗಳಲ್ಲಿ ಕನಿಷ್ಠ 50,000 ಮತ್ತು ಪ್ರೌಢಶಾಲೆಗಳಲ್ಲಿ 5,000 ಸೇರಿ 55,000ಕ್ಕೂ ಹೆಚ್ಚಿನ ಶಿಕ್ಷಕರ ಕೊರತೆ ಇದೆ. 10,000 ಶಿಕ್ಷಕರನ್ನು ನೇಮಿಸಿದರೆ ಕೊರತೆ ಕೊಂಚ ನೀಗಲಿದೆ.
ನೇಮಕಾತಿ ಯಾವಾಗ ನಡೆಯಲಿದೆ?
ಖಾಲಿ ಹುದ್ದೆಗಳ ಭರ್ತಿಗೆ ಪ್ರಮುಖವಾಗಿ ಆರ್ಥಿಕ ಇಲಾಖೆಯ ಅನುಮತಿ ಬೇಕು. ಜೊತೆಗೆ ಹೊಸ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ತೀರ್ಪು ಕೂಡ ಅಗತ್ಯವಾಗಿದೆ. ಏಕೆಂದರೆ ಈ ಮೊದಲು 2022-23ನೇ ಸಾಲಿನಲ್ಲಿ ನಡೆದ 15,000 ಶಿಕ್ಷಕರ ನೇಮಕಾತಿ ಪೂರ್ಣಗೊಂಡಿಲ್ಲ. ಮೀಸಲಾತಿ ವಿಚಾರವಾಗಿ ಸುಪ್ರೀಂ ಕೋರ್ಟ್’ಲ್ಲಿ ಪ್ರಕರಣ ವಿಚಾರಣಾ ಹಂತದಲ್ಲಿದೆ.
ಹಿ೦ದಿನ ನೇಮಕಾತಿ ನಂತರ ಮದುವೆ ಆಗಿರುವ ಮಹಿಳಾ ಅಭ್ಯರ್ಥಿಗಳ ಆದಾಯ ಪ್ರಮಾಣ ಪತ್ರ ತಂದೆಯದ್ದಾಗಿಬೇಕಾ? ಅಥವಾ ಪತಿಯದ್ದಾಗಿರಬೇಕಾ? ಎಂಬ ಗೊಂದಲ ಕೂಡ ಇದೆ. ಇದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟವಾಗಬೇಕಿದೆ. ಸುಪ್ರೀಂ ಕೋರ್ಟ್ ಮತ್ತು ಆರ್ಥಿಕ ಇಲಾಖೆ ಅನುಮತಿ ನೀಡಿದ ತಕ್ಷಣ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಶಿಕ್ಷಣ ಇಲಾಖೆ ಮೂಲಗಳು ಹೇಳುತ್ತವೆ.
ಶಿಕ್ಷಣ ಇಲಾಖೆಯಲ್ಲಿ ನೇಮಕಾತಿ ಹಂಗಾಮ
ಸರಕಾರಿ ಶಾಲೆಗಳಲ್ಲಿ ಬಹಳಷ್ಟು ಶಿಕ್ಷಕರ ಕೊರತೆ ಇರುವುದರಿಂದ ಈಗಾಗಲೇ ಒಟ್ಟು 45,000 ಅತಿಥಿ ಶಿಕ್ಷಕರ ನೇಮಕಾತಿಗೆ ಶಿಕ್ಷಣ ಇಲಾಖೆಯು ಅನುಮತಿ ನೀಡಿದೆ. ಈ ಪೈಕಿ ರಾಜ್ಯದ ಪ್ರಾಥಮಿಕ ಶಾಲೆಗಳಿಗೆ 35,000 ಹಾಗೂ ಪ್ರೌಢಶಾಲೆಗಳಲ್ಲಿ 10,000 ಅತಿಥಿ ಶಿಕ್ಷಕರ ನೇಮಕಾತಿ ನಡೆಯಲಿದೆ. ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಅನುಗುಣವಾಗಿ ಈ ನೇಮಕ ಪ್ರಕ್ರಿಯೆಗಳು ನಡೆಯುತ್ತಿವೆ.
ಇದೀಗ 10,000 ಹೊಸ ಶಿಕ್ಷಕರ ನೇಮಕಾತಿಗೆ ಆರ್ಥಿಕ ಇಲಾಖೆಯ ಅನುಮತಿಗಾಗಿ ಶಿಕ್ಷಣ ಇಲಾಖೆ ಎದುರು ನೋಡುತ್ತಿದೆ. ಜೊತೆಗೆ ಸುಪ್ರಿಂ ಕೋರ್ಟ್ ತೀರ್ಪು ಕೂಡ ಶೀಘ್ರದಲ್ಲಿಯೇ ಹೊರಬೀಳುವ ನಿರೀಕ್ಷೆ ಇದೆ. ಸರಕಾರಿ ಶಾಲೆಗಳಲ್ಲಿ ಶಿಕ್ಷಕರಾಗಿ ವೃತ್ತಿ ನಿರ್ವಹಿಸಲು ಆಸಕ್ತಿಯುಳ್ಳ ಅಭ್ಯರ್ಥಿಗಳು ನೇಮಕಾತಿಗೆ ಸಂಬಂಧಿಸಿದಂತೆ ಸಿದ್ಧತೆ ನಡೆಸಲು ಇದು ಪ್ರಸಕ್ತ ಸಮಯವಾಗಿದೆ.
1 thought on “10,000 ಸರಕಾರಿ ಶಾಲೆ ಶಿಕ್ಷಕರ ನೇಮಕಾತಿ | ಶೀಘ್ರದಲ್ಲಿಯೇ ಅರ್ಜಿ ಆಹ್ವಾನ Karnataka Govt School Teacher Recruitment 2024”