
ಮತ್ತೆ ಸಿಇಟಿ ಸೀಟು ಬ್ಲಾಕಿಂಗ್ (Karnataka CET Seat Blocking) ಅನುಮಾನ ವ್ಯಕ್ತವಾಗಿದ್ದು; ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸರ್ಕಾರಕ್ಕೆ ಪತ್ರ ಬರೆದಿದೆ. ಈ ಕುರಿತ ಪೂರ್ಣ ಮಾಹಿತಿ ಇಲ್ಲಿದೆ…
ಮತ್ತೆ ಸಿಇಟಿ ಸೀಟ್ ಬ್ಲಾಕಿಂಗ್ ಶಂಕೆ ವ್ಯಕ್ತವಾಗಿದೆ. ಹಲವು ವರ್ಷಗಳಿಂದ ಇತರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿಶಾಪವಾಗಿ ಕಾಡುತ್ತ ಬಂದಿದ್ದ ಸೀಟು ಬ್ಲಾಕಿಂಗ್ ಪಿಡುಗಿಗೆ ಕಡಿವಾಣ ಹಾಕಲು ಕರ್ನಾಟಕ ಪರೀಕ್ಷಾ ಪ್ರಧಿಕಾರವು ಈ ವರ್ಷ ಕಲವು ಕಟ್ಟಿನಿಟ್ಟಿನ ಕ್ರಮಗಳನ್ನು ಕೈಗೊಂಡಿತ್ತು.
ಸಾಕಷ್ಟು ತಯಾರಿ ನಡೆಸಿ, ಪ್ರತಿ ವಿದ್ಯಾರ್ಥಿಗೂ ಪ್ರತಿ ಹಂತದ ಮಾಹಿತಿ ನೀಡಿದ್ದರೂ ಕೂಡ ಈ ಬಾರಿ ಸಹ ಸೀಟು ಬ್ಲಾಕಿಂಗ್ ಶಂಕೆ ವ್ಯಕ್ತವಾಗಿದೆ. ಈ ದಂಧೆಯಲ್ಲಿ ನೂರಾರು ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆಂಬ ಗುಮಾನಿಯ ಮೇಲೆ ಕೆಇಎ ಕ್ರಮಕ್ಕೆ ಮುಂದಾಗಿದೆ.
ವಿದ್ಯಾರ್ಥಿಗಳ ವಿರುದ್ಧ ಕ್ರಮಕ್ಕೆ ಮುಂದಾದ ಕೆಇಎ
ಹೌದು, ಸೀಟು ಬ್ಲಾಕಿಂಗ್ ದಂಧೆಯನ್ನು ಸಂಪೂರ್ಣ ತೊಡೆದು ಹಾಕಲು ಕೆಇಎ ಅನುಸರಿಸಿದ ಕಠಿಣ ಕ್ರಮಗಳೆಲ್ಲ ಈ ವರ್ಷವೂ ಹೊಳೆಯಲ್ಲಿ ಹೋಮ ಮಾಡಿದಂತಾಗಿದೆ. ಹಿಂದಿನ ವರ್ಷ 2,348 ವಿದ್ಯಾರ್ಥಿಗಳು 3ನೇ ಸುತ್ತಿನ ಕೌನ್ಸಿಲಿಂಗ್’ನಲ್ಲಿ ಸೀಟು ಪಡೆದಿದ್ದರೂ ಸಹ ಪ್ರವೇಶ ಪಡೆಇರಲಿಲ್ಲ. ಬಳಿಕ ಈ ಕುರಿತು ಕೆಇಎ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು.
ಈ ಬಾರಿ ಕೂಡ ಸಿಇಟಿ ಕೌನ್ಸೆಲಿಂಗ್ 3ನೇ ಸುತ್ತಿನಲ್ಲಿ ಸೀಟು ಪಡೆದಿದ್ದ 351 ವಿದ್ಯಾರ್ಥಿಗಳು ತಾವು ಆಯ್ಕೆ ಮಾಡಿದ್ದ ಕಾಲೇಜಿಗೆ ಪ್ರವೇಶ ಪಡೆದಿಲ್ಲ. ಈ ವಿದ್ಯಾರ್ಥಿಗಳಿಗೆ ಶೋಕಾಸ್ ನೋಟಿಸ್ ನೀಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತೀರ್ಮಾನಿಸಿದೆ.
ಜೊತೆಗೆ ಈ ಎಲ್ಲಾ ವಿದ್ಯಾರ್ಥಿಗಳ ನಡೆಯಿಂದ ಅನ್ಯ ವಿದ್ಯಾರ್ಥಿಗಳು ಅವಕಾಶ ವಂಚಿತರಾಗಿರುವ ಕಾರಣ ಇವರಿಗೆ ಬೇರೆ ಯಾವುದೇ ಕೋಟಾದಡಿ ಪ್ರವೇಶ ನೀಡದಂತೆ ಕೆಇಎ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU) ಹಾಗೂ ರಾಜ್ಯದ ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯ ನಿರ್ವಾಹಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ಇದನ್ನೂ ಓದಿ: JMUCB Recruitment 2025- ಎಸ್ಸೆಸ್ಸೆಲ್ಸಿ, ಪಿಯುಸಿ ಪಾಸಾದವರಿಗೆ ಕೋ-ಅಪರೇಟಿವ್ ಬ್ಯಾಂಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಇತರ ವಿದ್ಯಾರ್ಥಿಗಳಿಗೆ ಅನ್ಯಾಯ
ಸರ್ಕಾರದ ಆದೇಶದಂತೆ ಕೆಇಎ ರಾಜ್ಯದ ಇಂಜನಿಯರಿಂಗ್ ಕಾಲೇಜು ವಿವಿಧ ಕೋರ್ಸುಗಳ ಪ್ರವೇಶಕ್ಕೆ ಸಿಇಟಿ ಆಯೋಜಿಸಿ, ಮೂರು ಸುತ್ತುಗಳ ಕೌನ್ಸಿಲಿಂಗ್ ನಡೆಸಿ ಅರ್ಹ ವಿದ್ಯಾರ್ಥಿಗಳಿಗೆ ಸೀಟು ಹಂಚಿಕೆ ಮಾಡಿದೆ. ಮೊದಲ ಮತ್ತು ಎರಡನೇ ಸುತ್ತುಗಳಲ್ಲಿ ಸೀಟು ಪಡೆದವರಿಗೆ ಕಾಲೇಜು ಇಷ್ಟವಾಗದಿದ್ದಲ್ಲಿ ಕೌನ್ಸೆಲಿಂಗ್ ಪ್ರಕ್ರಿಯೆಯಿಂದ ಹೊರಹೋಗಲು ಅವಕಾಶ ಕಲ್ಪಿಸಲಾಗಿತ್ತು.
3ನೇ ಸುತ್ತಿನಲ್ಲಿ ಭಾಗವಹಿಸಿದ್ದಲ್ಲಿ ಎಂಟ್ರಿ ಮಾಡುವ ಕಾಲೇಜಿನಲ್ಲಿ ಸೀಟು ಸಿಕ್ಕರೆ ಕಡ್ಡಾಯವಾಗಿ ಕಾಲೇಜಿನಲ್ಲಿ ಪ್ರವೇಶ ಪಡೆಯಬೇಕೆಂಬ ಸ್ಪಷ್ಟವಾದ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಲಾಗಿತ್ತು. ಈ ಸುತ್ತಿನಲ್ಲಿ ಸೀಟು ಸಿಕ್ಕಿದ್ದರೆ ಪ್ರವೇಶಾತಿ ಬಯಸಲು ಸಿದ್ಧವಿರುವ ಕಾಲೇಜುಗಳನ್ನು ಮಾತ್ರ ಆಪ್ಷನ್ ಎಂಟ್ರಿ ಮಾಡಲು ತಿಳಿಸಲಾಗಿತ್ತು.
ಮೂರನೇ ಸುತ್ತು ಕೊನೆಯ ಸುತ್ತಾಗಿದ್ದರಿಂದ ಈ ಸುತ್ತಿನಲ್ಲಿ ಸೀಟು ಪಡೆದು ಕಾಲೇಜು ಸೇರದಿದ್ದಲ್ಲಿ ಆದೇಶದಂತೆ ಸೀಟು ಕಾಲೇಜಿನ ಆಡಳಿತ ಮಂಡಳಿ ಪಾಲಾಗುತ್ತದೆ. ಇದರಿಂದ ಈ ವಿದ್ಯಾರ್ಥಿಗಳಿಗಿಂತ ಸ್ವಲ್ಪ ಕೆಳಗಿದ್ದು ಅವಕಾಶಕ್ಕೆ ಕಾಯುತ್ತಿದ್ದವರಿಗೆ ಅನ್ಯಾಯವಾಗಿದೆ.
ಸರ್ಕಾರಿ ಖೋಟಾ ಸೀಟು ಖೋತಾ!
ಎಲ್ಲ ಮಾಹಿತಿ ನೀಡಿದ್ದರೂ ಮೂರನೇ ಸುತ್ತಿನಲ್ಲಿ ಸರ್ಕಾರಿ ಕೋಟಾ ಸೀಟುಗಳನ್ನು ಪಡೆದ 351 ವಿದ್ಯಾರ್ಥಿಗಳು ಕಾಲೇಜಿಗೆ ದಾಖಲಾಗದೆ, ಸರ್ಕಾರಿ ಖೋಟಾ ಸೀಟುಗಳು ಕಾಲೇಜಿನ ಪಾಲಾಗುವುದಕ್ಕೆ ಕಾರಣವಾಗಿದ್ದಾರೆ. ಇದರಲ್ಲಿ ಕೆಲವರು ಕಾಮೆಡ್-ಕೆ ಮತ್ತು ಆಡಳಿತ ಮಂಡಳಿ ಕೋಟಾದಡಿ ಸೀಟು ಪಡೆದಿರುವ ಬಗ್ಗೆ ಮಾಹಿತಿ ಇದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಅವರು ತಿಳಿಸಿದ್ದಾರೆ.