
ರಾಜ್ಯದಲ್ಲಿ ನೂರಾರು ಪಿಡಿಓ ಹುದ್ದೆಗಳು (Karnataka 994 PDO Vacancies) ಖಾಲಿ ಇದ್ದು; ಇದರಿಂದ ಗ್ರಾಮ ಪಂಚಾಯತಿ ಕಾರ್ಯ ಚಟುವಟಿಕೆಯಲ್ಲಿ ಭಾರೀ ತೊಂದರೆ ಉಂಟಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ರಾಜ್ಯದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಮುಖ ಜವಾಬ್ದಾರಿಯಾದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಹುದ್ದೆಗಳ ಕೊರತೆಯಿಂದ ಗ್ರಾಮ ಪಂಚಾಯಿತಿಗಳ ದಿನನಿತ್ಯದ ಆಡಳಿತಕ್ಕೆ ತೀವ್ರ ಅಡಚಣೆ ಉಂಟಾಗಿದೆ.
ರಾಜ್ಯದಲ್ಲಿರುವ ಒಟ್ಟು 5,668 ಗ್ರಾಮ ಪಂಚಾಯಿತಿಗಳಲ್ಲಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ 29 ಜಿಲ್ಲೆಗಳಲ್ಲಿ ಬರೋಬ್ಬರಿ 994 ಪಿಡಿಓ ಹುದ್ದೆಗಳು ಖಾಲಿ ಇವೆ.
ಹೆಚ್ಚಿನ ಹುದ್ದೆಗಳ ಕೊರತೆ ಇರುವ ಜಿಲ್ಲೆಗಳು
ಈ ಪೈಕಿ ತುಮಕೂರು ಜಿಲ್ಲೆ ಅತೀ ಹೆಚ್ಚು ಅಂದರೆ 75 ಹುದ್ದೆಗಳು ಖಾಲಿ ಇರುವ ಮೂಲಕ ಈ ಜಿಲ್ಲೆ ಅಗ್ರಸ್ಥಾನದಲ್ಲಿದೆ. ನಂತರ ದಕ್ಷಿಣ ಕನ್ನಡ (72), ಕಲಬುರಗಿ (68), ಬೆಳಗಾವಿ (67), ಉತ್ತರ ಕನ್ನಡ (60), ಚಿಕ್ಕಮಗಳೂರು (55), ಹಾವೇರಿ (53), ಶಿವಮೊಗ್ಗ (49) ಜಿಲ್ಲೆಗಳು ಪ್ರಮುಖ ಸ್ಥಾನದಲ್ಲಿವೆ.
ಬಾಗಲಕೋಟೆ, ಮೈಸೂರು ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ತಲಾ ಒಂದೇ ಹುದ್ದೆ ಖಾಲಿ ಇರುವುದರಿಂದ ಅಲ್ಲಿ ಗ್ರಾಮೀಣ ಆಡಳಿತ ತಕ್ಕಮಟ್ಟಿಗೆ ಸುಗಮವಾಗಿದೆ ಎಂದು ಹೇಳಬಹುದು.

ಪಿಡಿಒ ಹುದ್ದೆಯ ಮಹತ್ವವೇನು?
PDO ಹುದ್ದೆ ಖಾಲಿ ಇರುವುದರಿಂದ ಗ್ರಾಮ ಪಂಚಾಯಿತಿಗಳ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದೆ. ಪಿಡಿಓಗಳು ಗ್ರಾಮಾಭಿವೃದ್ಧಿಗೆ ಸಂಬಂಧಿಸಿದ ಯೋಜನೆ ರೂಪಿಸುವುದು, ಹಣಕಾಸಿನ ನಿರ್ವಹಣೆ ಹಾಗೂ ಗ್ರಾಮಸಭೆಗಳ ಆಯೋಜನೆ ಮತ್ತು ಮೇಲಧಿಕಾರಿಗಳಿಗೆ ವರದಿ ಸಲ್ಲಿಕೆ ಪ್ರಮುಖ ಜಬಾಬ್ದಾರಿಯಾಗಿದೆ.
ಇದರ ಜೊತೆಗೆ ಕುಡಿಯುವ ನೀರು, ಸ್ವಚ್ಛತೆ, ರಸ್ತೆಗಳು ಮತ್ತು ಬೀದಿದೀಪ ವ್ಯವಸ್ಥೆಯಂತಹ ಮೂಲಭೂತ ಸೌಕರ್ಯಗಳ ನಿರ್ವಹಣೆ, ನರೇಗಾ ಯೋಜನೆ ಕಾಮಗಾರಿಗಳ ಮೇಲ್ವಿಚಾರಣೆ ಇ-ಸ್ವತ್ತು, ಮ್ಯುಟೇಷನ್ ದಾಖಲೆ ವಿತರಣೆಯಂತಹ ಕಾರ್ಯಗಳು ಪಿಡಿಓ ಜವಾಬ್ದಾರಿಯಾಗಿವೆ.
ಈ ಎಲ್ಲಾ ಕಾರ್ಯಗಳು ಪಿಡಿಓಗಳಿಲ್ಲದೆ ಸುಗಮವಾಗುತ್ತಿಲ್ಲ. ಹಲವೆಡೆ ಒಬ್ಬ ಪಿಡಿಓ ಎರಡು ಮೂರು ಗ್ರಾಮ ಪಂಚಾಯಿತಿಗಳ ಜವಾಬ್ದಾರಿ ಹೊತ್ತುಕೊಳ್ಳುತ್ತಿರುವುದು ಸೇವಾ ಗುಣಮಟ್ಟವನ್ನು ಕುಂದಿಸುತ್ತಿದೆ.
PDO ವರ್ಗಾವಣೆಗಳಿಂದ ಉಂಟಾದ ಹೊಸ ಸಮಸ್ಯೆ
ಇದೇ ಮೊದಲ ಬಾರಿಗೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ರಾಜ್ಯದಲ್ಲಿ ಕಳೆದ ಸೆಪ್ಟೆಂಬರ್ 3ರಿಂದ 18ರ ವರೆಗೆ ಪಿಡಿಓಗಳ ವರ್ಗಾವಣೆಗೆ ಕೌನ್ಸೆಲಿಂಗ್ ಪ್ರಕ್ರಿಯೆ ನಡೆಸಿದೆ.
ಇದರ ಪರಿಣಾಮವಾಗಿ ವಿಜಯನಗರದ ಕೂಡ್ಲಿಗಿ, ದಾವಣಗೆರೆಯ ಜಗಳೂರು ಮುಂತಾದ ಹಿಂದುಳಿದ ತಾಲೂಕುಗಳಿಂದ ಪಿಡಿಓಗಳು ಬೇರೆಡೆ ವರ್ಗವಾಗಿದ್ದು, ಅಲ್ಲಿ ಹುದ್ದೆಗಳ ಕೊರತೆ ಮತ್ತಷ್ಟು ಹೆಚ್ಚಿದೆ. ಹೊಸ ಪಿಡಿಓಗಳು ಹಿಂದುಳಿದ ತಾಲೂಕುಗಳಿಗೆ ಬರಲು ಹೆಚ್ಚಿನ ಆಸಕ್ತಿ ತೋರದಿರುವುದರಿಂದ, ಆಡಳಿತಾತ್ಮಕ ಹಿನ್ನಡೆ ಉಂಟಾಗುತ್ತಿದೆ.
ಜಿಲ್ಲಾವಾರು ಪಿಡಿಓ ಖಾಲಿ ಹುದ್ದೆಗಳ ವಿವರ
- ತುಮಕೂರು – 75
- ದಕ್ಷಿಣ ಕನ್ನಡ – 72
- ಕಲಬುರಗಿ – 68
- ಬೆಳಗಾವಿ – 67
- ಉತ್ತರ ಕನ್ನಡ – 60
- ಚಿಕ್ಕಮಗಳೂರು – 55
- ಹಾವೇರಿ – 53
- ಶಿವಮೊಗ್ಗ – 49
- ವಿಜಯನಗರ – 47
- ರಾಯಚೂರು – 45
- ಕೊಡಗು – 43
- ಬೀದರ್ – 40
- ಮಂಡ್ಯ – 33
- ಕೋಲಾರ – 30
- ಬಳ್ಳಾರಿ – 29
- ಚಿಕ್ಕಬಳ್ಳಾಪುರ – 28
- ಚಾಮರಾಜನಗರ – 26
- ಗದಗ – 26
- ಉಡುಪಿ – 26
- ದಾವಣಗೆರೆ – 18
- ಯಾದಗಿರಿ – 18
- ಚಿತ್ರದುರ್ಗ – 13
- ಕೊಪ್ಪಳ – 10
- ಧಾರವಾಡ – 09
- ಬೆಂಗಳೂರು ದಕ್ಷಿಣ – 03
ನೇಮಕಾತಿ ಪ್ರಕ್ರಿಯೆ ಯಾವಾಗ?
ಪಿಡಿಓ ಹುದ್ದೆಗಳ ಭರ್ತಿಗೆ ಈಗಾಗಲೇ ಕೆಪಿಎಸ್‌ಸಿ (Karnataka Public Service Commission – KPSC) ಮುಖಾಂತರ 250ಕ್ಕೂ ಹೆಚ್ಚು ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಇದಲ್ಲದೆ, ಶೀಘ್ರದಲ್ಲೇ ಗ್ರೇಡ್-1 ಕಾರ್ಯದರ್ಶಿಗಳ ಬಡ್ತಿ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದ್ದು, ಇದರಿಂದ ಪಿಡಿಓ ಹುದ್ದೆಗಳ ಕೊರತೆ ಸರಿದೂಗುವ ನಿರೀಕ್ಷೆಯಿದೆ.
ಪಿಡಿಓ ಹುದ್ದೆಗಳು ಖಾಲಿ ಇರುವುದರಿಂದ ಗ್ರಾಮೀಣಾಭಿವೃದ್ಧಿ ಕಾರ್ಯಚಟುವಟಿಕೆಗಳಲ್ಲಿ ಸಮರ್ಪಕ ವೇಗ ಕಾಣುತ್ತಿಲ್ಲ. ನೇಮಕಾತಿ ಹಾಗೂ ಬಡ್ತಿ ಪ್ರಕ್ರಿಯೆಗಳು ಬೇಗನೆ ಜಾರಿಯಾದರೆ ಮಾತ್ರ ಗ್ರಾಮ ಪಂಚಾಯಿತಿಗಳ ಆಡಳಿತ ಸುಗಮವಾಗಿ ಸಾಗಲಿದೆ. ಇಲ್ಲದಿದ್ದರೆ, ಗ್ರಾಮೀಣ ಜನತೆಗೆ ತಕ್ಷಣ ಬೇಕಾಗುವ ಸೇವೆಗಳು ವಿಳಂಬವಾಗುವುದು ಅನಿವಾರ್ಯ.