ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಹೊಸದಾಗಿ ಮನೆ ಕಟ್ಟಲು (House Construction New Rules) ಸುಪ್ರೀ ಕೋರ್ಟ್ ಹೊರಡಿಸಿರುವ ಹೊಸ ಆದೇಶ ಸಂಕಷ್ಟ ತಂದಿದೆ. ಏನಿದು ಹೊಸ ನಿಯಮ? ಸಂಪೂರ್ಣ ಮಾಹಿತಿ ಇಲ್ಲಿದೆ…
ಕರ್ನಾಟಕದಲ್ಲಿ ಹೊಸ ಮನೆ ಅಥವಾ ಕಟ್ಟಡ ನಿರ್ಮಾಣ ಮಾಡಲು ಈಗ ಹೊಸ ಸಂಕಷ್ಟ ಎದುರಾಗಿದೆ. 2024ರ ಡಿಸೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ನೀಡಿದ ಮಹತ್ವದ ತೀರ್ಪಿನಿಂದ ಮನೆ ನಿರ್ಮಾಣಕ್ಕೆ ಸಂಬಂಧಿಸಿದ ನೂರಾರು ಯೋಜನೆಗಳು ಸ್ಥಗಿತಗೊಳ್ಳುವ ಹಂತಕ್ಕೆ ಬಂದಿವೆ.
ಸಿಸಿ ಮತ್ತು ಓಸಿ ಕಡ್ಡಾಯ
ಸುಪ್ರೀಂ ಕೋರ್ಟ್ ತೀರ್ಪಿನ ತಾತ್ಪರ್ಯ ಏನೆಂದರೆ – ಯಾವುದೇ ಹೊಸ ಕಟ್ಟಡಕ್ಕೆ ವಿದ್ಯುತ್, ನೀರು ಮತ್ತು ಒಳಚರಂಡಿ ಸಂಪರ್ಕ ನೀಡುವುದಕ್ಕೆ ಮೊದಲು ಮುಕ್ತಾಯ ಪ್ರಮಾಣಪತ್ರ (Completion Certificate – CC) ಮತ್ತು ವಾಸಯೋಗ್ಯ ಪ್ರಮಾಣಪತ್ರ (Occupancy Certificate – OC) ಕಡ್ಡಾಯವಾಗಿದೆ.
ಈ ಹೊಸ ನಿಯಮದ ಪರಿಣಾಮ ರಾಜ್ಯಾದ್ಯಂತ ಲಕ್ಷಾಂತರ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಮನೆ ನಿರ್ಮಾಣ ಅರ್ಧಕ್ಕೆ ನಿಂತು ಹೋಗುತ್ತಿದೆ, ಹೊಸ ಯೋಜನೆಗಳು ಪ್ರಾರಂಭವಾಗಲೂ ಅಡಚಣೆ ಉಂಟಾಗಿದೆ.
ಸುಪ್ರೀಂ ಕೋರ್ಟ್ ಆದೇಶದಿಂದ ಬದಲಾವಣೆ ಏನು?
- ಸುಪ್ರೀಂ ಕೋರ್ಟ್ ಆದೇಶದನ್ವಯ ಇನ್ನು ಮುಂದೆ, ಪ್ರತೀ ಕಟ್ಟಡಕ್ಕೂ ಮೊದಲು Completion Certificate (CC) ಬೇಕು.
- ಅದಾದ ಮೇಲೆ ಮಾತ್ರ Occupancy Certificate (OC) ಕೊಡಲು ಅವಕಾಶ.
- ಈ ಎರಡು ಪ್ರಮಾಣಪತ್ರಗಳಿಲ್ಲದೆ ವಿದ್ಯುತ್, ನೀರು, ಒಳಚರಂಡಿ ಸಂಪರ್ಕ ನಿಷಿದ್ಧ.
ಮೊದಲೆಲ್ಲ ‘ವಿದ್ಯುತ್ ಸಂಪರ್ಕಕ್ಕೆ ಮೊದಲು ಸಿಸಿ ಅಥವಾ ಓಸಿ ಬೇಕು’ ಎಂಬ ನಿಯಮ ಇರಲಿಲ್ಲ. ಇದರಿಂದಾಗಿ ಹಲವು ಕಟ್ಟಡಗಳು ಮೊದಲೇ ವಿದ್ಯುತ್, ನೀರು ಸಂಪರ್ಕ ಪಡೆದು, ನಂತರ ಪ್ರಮಾಣಪತ್ರ ಪಡೆಯುತ್ತಿದ್ದವು. ಈ ಹೊಸ ತೀರ್ಪು ಅದಕ್ಕೆ ಕಡಿವಾಣ ಹಾಕಿದೆ.

ಮನೆ ಕಟ್ಟುವ ಎಲ್ಲರಿಗೂ ತೊಂದರೆ
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಮನೆಗಳು ಅರ್ಧಕ್ಕೆ ನಿಂತಿವೆ. ಬಡವರು, ಮಧ್ಯಮ ವರ್ಗದವರು ತಮ್ಮ ಜೀವನದ ಉಳಿತಾಯವನ್ನು ಕೂಡಿಟ್ಟು ಕಟ್ಟುತ್ತಿರುವ ಮನೆಗೆ ಸಂಕಷ್ಟ ಎದುರಾಗಿದೆ.
ಸಣ್ಣ ಸೂರು, ಹೊಲಗದ್ದೆಗಳಲ್ಲಿ ಕಟ್ಟುವ ಗುಡಿಸಲುಗಳಿಗೆ ಕೂಡ ವಿದ್ಯುತ್ ಸಂಪರ್ಕ ಸಿಗುತ್ತಿಲ್ಲ. ಶೆಡ್ಡುಗಳು, ಚಿಕ್ಕ ಕಾರ್ಖಾನೆಗಳು ಕೂಡ ಇದರಿಂದ ಹೊರತಾಗಿಲ್ಲ. ಈ ನಿಯಮದಿಂದ ಬಡವ, ಶ್ರೀಮಂತ ಎಲ್ಲರೂ ತೊಂದರೆ ಅನುಭವಿಸುತ್ತಿದ್ದಾರೆ.
ಸ್ಥಳೀಯ ಸಂಸ್ಥೆಗಳ ಕಾಯಿದೆ ಏನು ಹೇಳುತ್ತದೆ?
ಸ್ಥಳೀಯ ಸಂಸ್ಥೆಗಳ ನಿಯಮದಲ್ಲಿ ಸಿಸಿ ಮತ್ತು ಓಸಿ ಪಡೆದಿರಬೇಕು ಎಂಬ ಷರತ್ತು ಇದೆಯಾದರೂ, ಇದುವರೆಗೆ ವಿದ್ಯುತ್ ಕಾಯಿದೆ 2003ರಲ್ಲಿ (Electricity Act 2003) ‘ವಿದ್ಯುತ್ ಸಂಪರ್ಕ ಪಡೆಯಲು ಸಿಸಿ ಅಥವಾ ಓಸಿ ಕಡ್ಡಾಯ’ ಎಂದಿಲ್ಲ.
ಇದರಿಂದಾಗಿ ವಿಳಂಬವಾಗಿ ಪ್ರಮಾಣಪತ್ರ ಪಡೆದು, ಮೊದಲೇ ವಿದ್ಯುತ್, ನೀರು ಸಂಪರ್ಕ ಸಿಗುತ್ತಿದ್ದದ್ದು ಸಾಮಾನ್ಯ. ಆದರೆ ಇದೀಗ ಈ ನಿಯಮವನ್ನು ಸುಪ್ರೀಂ ಕೋರ್ಟ್ ತೀರ್ಪು ತಡೆಹಿಡಿದಂತಾಗಿದೆ. ಒಂದು ಕಟ್ಟಡಕ್ಕೆ ವಿದ್ಯುತ್, ನೀರು, ಒಳಚರಂಡಿ ಸಂಪರ್ಕವಿಲ್ಲದೆ ಅಲ್ಲಿ ವಾಸಿಸಲು ಹೇಗೆ ಸಾಧ್ಯ? ಎಂಬ ಪ್ರಶ್ನೆ ಉಂಟಾಗಿದೆ.
ಇದಕ್ಕೆ ಪರಿಹಾರೋಪಾಯ ಏನು?
ಸುಪ್ರೀಂ ಕೋರ್ಟ್ ತೀರ್ಪು ಕಳೆದ ಡಿಸೆಂಬರ್ 2024ರ 12ರಂದು ಹೊರ ಬಿದ್ದಿದೆ. ತೀರ್ಪು ಹೊರಬಿದ್ದು ಭರ್ತಿ ಆರು ತಿಂಗಳು ಕಳೆದಿದೆ. ಈತನಕ ಸುಮ್ಮನಿದ್ದ ಸರ್ಕಾರ ಇದೀಗ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಲು ಮುಂದಾಗಿದೆ. ಸಮಸ್ಯೆ ಪರಿಹಾರಕ್ಕೆ ತಿದ್ದುಪಡಿ ಕಾಯಿದೆಗಳ ಮೇಲೆ ಚರ್ಚೆ ನಡೆಯುತ್ತಿದೆ.
ಕಾನೂನು ತಜ್ಞರು ಹೇಳುವಂತೆ, ಈ ಸಮಸ್ಯೆ ಪರಿಹಾರಕ್ಕೆ ಸರಕಾರ ತಿದ್ದುಪಡಿ ಕಾಯಿದೆ ರೂಪಿಸಬೇಕು. ಬಿಬಿಎಂಪಿ ಕಾಯಿದೆ, ಕೆಎಂಸಿ ಕಾಯಿದೆ, ವಿದ್ಯುತ್ ಕಾಯಿದೆ ಸೇರಿದಂತೆ ಎಲ್ಲಾ ಸಂಬಂಧಿತ ಸ್ಥಳೀಯ ಕಾನೂನುಗಳಲ್ಲಿ ತಿದ್ದುಪಡಿ ಮಾಡಬೇಕು.
ಇಲ್ಲವಾದರೆ, ಲಕ್ಷಾಂತರ ಮನೆಗಳು ವಿದ್ಯುತ್, ನೀರು ಇಲ್ಲದೆ ಉಳಿಯುತ್ತವೆ. ಇದರಿಂದ ನಿರ್ಮಾಣ ಉದ್ಯಮಕ್ಕೆ ಭಾರಿ ಹಿನ್ನಡೆಯಾಗುತ್ತದೆ. ಸರ್ಕಾರದ ‘ಎಲ್ಲರಿಗೂ ಸೂರು’ ಎಂಬ ಅಭಿಯಾನ ಹಳ್ಳ ಹಿಡಿಯುತ್ತದೆ. ಹೀಗಾಗಿ ಸರ್ಕಾರ ಆದಷ್ಟು ಬೇಗ ಜನಸಾಮಾನ್ಯರ ಹಿತಕ್ಕಾಗಿ ತಿದ್ದುಪಡಿ ಕಾಯ್ದೆ ರೂಪಿಸಿ ಸಮಸ್ಯೆ ಪರಿಹರಿಸಬೇಕಿದೆ.
BDA Sites Auction 2025- ರಿಯಾಯ್ತಿ ದರಲ್ಲಿ ಬೆಂಗಳೂರಿನಲ್ಲಿ ಸರ್ಕಾರದ ಸೈಟು | ಆಸಕ್ತರಿಗೆ ಬಿಡಿಎ ಮುಕ್ತ ಆಹ್ವಾನ

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.