ಕುಟುಂಬದ ಆಸ್ತಿ ಇಬ್ಭಾಗ ಮಾಡುವಾಗ ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ (Hennu Makkala Aasthi Hakku) ಪಾಲಿದೆಯೆ? ಕಾನೂನು ಏನು ಹೇಳುತ್ತದೆ? ಹೆಣ್ಣು ಮಕ್ಕಳು ಏನು ಮಾಡಬೇಕು? ಕಾನೂನು ಮಾಹಿತಿ ಇಲ್ಲಿದೆ…
ಭಾರತದಲ್ಲಿ ‘ಮಹಿಳೆಯರ ಆಸ್ತಿ ಹಕ್ಕು’ (Daughters Property Rights) ಕುರಿತ ಕಾನೂನು ಬಹಳ ವಿವಾದಾತ್ಮಕ ಇತಿಹಾಸವನ್ನು ಹೊಂದಿದೆ. ಅನೇಕ ವರ್ಷಗಳ ಕಾಲ ಆಸ್ತಿ ‘ಗಂಡು ಮಕ್ಕಳ ಹಕ್ಕು’ ಎಂಬ ತಪ್ಪು ಕಲ್ಪನೆ ಬಲವಾಗಿ ರೂಢಿಯಾಗಿದೆ. ಹೆಣ್ಣು ಮಕ್ಕಳು ‘ಕೊಟ್ಟ ಮನೆಗೆ ಹೋಗುವವರು’ ಎಂಬ ಭಾವನೆಯಿಂದ ಅವರ ಹಕ್ಕುಗಳನ್ನು ನಿರಾಕರಿಸುತ್ತ ಬರಲಾಗಿದೆ.
ಆದರೆ, ಭಾರತದ ಸಂವಿಧಾನ ಮತ್ತು ಸಂಸತ್ತು ಈ ಅನ್ಯಾಯವನ್ನು ಸರಿಪಡಿಸಲು ಮಹತ್ವದ ತೀರ್ಮಾನವನ್ನು ತೆಗೆದುಕೊಂಡವು. ಇದರ ಪರಿಣಾಮವಾಗಿ 2005ರ ಹಿಂದೂ ಉತ್ತರಾಧಿಕಾರ (ತಿದ್ದುಪಡಿ) ಕಾಯ್ದೆ ಹೆಣ್ಣು ಮಕ್ಕಳ ಆಸ್ತಿ ಹಕ್ಕಿನಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದೆ.
ಹಿಂದೂ ಉತ್ತರಾಧಿಕಾರ ಕಾಯ್ದೆ ಏನು ಹೇಳುತ್ತದೆ?
ಭಾರತೀಯ ಪಿತೃಪ್ರಧಾನ ಸಮಾಜದಲ್ಲಿ ಮಹಿಳೆಯರು ಆಸ್ತಿಯಲ್ಲಿ ಪಾಲುದಾರರಾಗುತ್ತಿರಲಿಲ್ಲ. ವಿವಾಹದ ಸಮಯದಲ್ಲಿ ‘ವರದಕ್ಷಿಣಿ’ ಅಥವಾ ‘ಉಡುಗೊರೆ’ ಕೊಟ್ಟು ಆಸ್ತಿ ಹಕ್ಕನ್ನು ಮುಗಿಸುವ ಪರಿಪಾಠ ರೂಢಿಯಲ್ಲಿತ್ತು. ‘ಪುತ್ರೋನಾಹಂ ಪಿಂಡದಾಯಕಃ’ (ಪುತ್ರನು ಪಿಂಡದಾಯಕ) ಎಂಬ ಧಾರ್ಮಿಕ ನಿಯಮವೇ ಆಸ್ತಿಯಲ್ಲಿ ‘ಗಂಡು ಮಕ್ಕಳ’ ಮಹತ್ವವನ್ನು ಬಲಪಡಿಸುತ್ತಿತ್ತು.
1956ರಲ್ಲಿ ಹಿಂದೂ ಉತ್ತರಾಧಿಕಾರ ಕಾಯ್ದೆ (Hindu Succession Act) ತಂದೆಯ ಆಸ್ತಿಯ ಹಂಚಿಕೆಗೆ ಒಂದಷ್ಟು ಸಂಶೋಧಿತ ವ್ಯವಸ್ಥೆ ನೀಡಿತು. ಆದರೆ, ಅದರಲ್ಲಿ ಮಹಿಳೆಗೆ ತಂದೆಯ ಆಸ್ತಿಯಲ್ಲಿ ಹಕ್ಕು ಇದ್ದರೂ ಸಹ, ಸಂಯುಕ್ತ ಕುಟುಂಬದ (coparcenary) ಆಸ್ತಿಯಲ್ಲಿ ಹಕ್ಕು ಇರಲಿಲ್ಲ. ಹೆಣ್ಣು ಮಗಳು ವಿವಾಹದ ನಂತರ ತನ್ನ ತಂದೆಯ ಕುಟುಂಬದಿAದ ಹಕ್ಕು ಕಳೆದುಕೊಳ್ಳುತ್ತಾಳೆ ಎನ್ನುವ ವ್ಯವಸ್ಥೆ ಇತ್ತು.

ಹೆಣ್ಣು ಮಕ್ಕಳ ಆಸ್ತಿ ಹಕ್ಕಿಗೆ ಹೊಸ ತಿರುವು
2005ರ ಆಗಸ್ಟ್ 9 ರಂದು ಭಾರತ ಸಂಸತ್ತು ಅಂಗೀಕರಿಸಿದ ತಿದ್ದುಪಡಿ ಕಾನೂನು ಹೆಣ್ಣು ಮಕ್ಕಳ ಆಸ್ತಿ ಹಕ್ಕಿಗೆ ಹೊಸ ತಿರುವು ನೀಡಿತು ಅನ್ನಬೇಕು. ಈ ತಿದ್ದುಪಡಿ ಕಾನೂನು ಹೆಣ್ಣು ಮಗಳನ್ನೂ coparcener (ಸಂಯುಕ್ತ) ಕುಟುಂಬದ ಹಕ್ಕುದಾರಿ ಆಗಿ ಘೋಷಿಸಿತು.
ಇದರಿಂದ ತಂದೆಯ ಕುಟುಂಬದ ಆಸ್ತಿಯಲ್ಲಿ ಮಗಳಿಗೆ ಸಮಾನ ಹಕ್ಕು ಲಭ್ಯವಾಗಿದೆ. ಹೆಣ್ಣು ಮಕ್ಕಳು ತಮ್ಮ ಜೀವನಪೂರ್ತಿ ಹಕ್ಕುದಾರ್ತಿಯರಾಗಿ ಬಾಳಲು ಅವಕಾಶ ನೀಡಿದೆ. ಮಹತ್ವದ ಕ್ರಮ ಹಳೆಯ ಕಾಯ್ದೆಯಲ್ಲಿದ್ದ ಲಿಂಗಾಧಾರಿತ ವ್ಯತ್ಯಾಸವನ್ನು ಸಂಪೂರ್ಣ ತೆಗೆದು ಹಾಕಿದೆ!
ಯಾವೆಲ್ಲ ಆಸ್ತಿಯ ಮೇಲೆ ಹೆಣ್ಣು ಮಗಳಿಗೆ ಹಕ್ಕು?
- ಗಂಡು ಮಗ ಅಥವಾ ಹೆಣ್ಣು ಮಗಳು ಇಬ್ಬರೂ ತಂದೆಯ ಕುಟುಂಬ ಆಸ್ತಿಯಲ್ಲಿ ಸಮಾನ ಹಕ್ಕುದಾರರು.
- ಪಿತ್ರಾರ್ಜಿತವಾಗಿ ತಂದೆಗೆ ಬಂದ ಆಸ್ತಿಯಲ್ಲಿ ಈಗ ಮಗಳು ಕೂಡ ಮಗನಂತೆ ಹಕ್ಕು ಪಡೆಯಬಹುದು.
- ತಂದೆಯು ಸ್ವಯಂ ದುಡಿಮೆಯಿಂದ ಗಳಿಸಿದ ಸ್ವಂತ ಆಸ್ತಿಯಲ್ಲಿಯೂ ಮಗಳಿಗೆ ಹಕ್ಕು ಇದೆ.
- ತಂದೆ ಆಸ್ತಿಯನ್ನು ಯಾರ ಹೆಸರಿಗೂ ಬದಲಾಯಿಸದೇ ಹೋದರೆ ಮಗಳು ಹಕ್ಕುದಾರಿಯಾಗುತ್ತಾಳೆ.
- ತಂದೆ ತನ್ನ ಪತ್ನಿಯ ಹೆಸರಿಗೆ ಆಸ್ತಿ ಬರೆದರೂ ಮಗಳಿಗೆ ಹಕ್ಕು ನಿರಾಕರಿಸಲಾಗುವುದಿಲ್ಲ.
- ಆಸ್ತಿ ಹಂಚಿಕೆ (Partition) ನಡೆದಿದ್ದು 2005ರ ಹಿಂದೆ ಎಂದಾದರೆ ಮಾತ್ರ ಮಗಳಿಗೆ ಹಕ್ಕು ಸೀಮಿತ ಅಥವಾ ಇರುವುದಿಲ್ಲ.
ಹೆಣ್ಣು ಮಕ್ಕಳ ಹಕ್ಕು ನಿರಾಕರಿಸಿದರೆ?
ಹೀಗೆ ಕಾನೂನು ಬದಲಾಗಿ ಹೆಣ್ಣು ಮಕ್ಕಳಿಗೆ ಬಲವಾದ ಆಸ್ತಿ ಹಕ್ಕು ನೀಡಿದ್ದರೂ ಕೂಡ ಇಂದಿಗೂ ಅನೇಕ ಮಹಿಳೆಯರು ತಮ್ಮ ಆಸ್ತಿ ಹಕ್ಕಿಗಾಗಿ ಪರದಾಡುವುದುಂಟು. ಸಹೋದರರ ಜೊತೆಗೆ ವ್ಯಾಜ್ಯಕ್ಕೆ ಬಿದ್ದು ಆಸ್ತಿ ಹಕ್ಕಿಗಾಗಿ ಪರದಾಡುವ ಮಹಿಳೆಯರು ಈ ಕೆಳಗಿನ ಕ್ರಮಗಳನ್ನು ಅನುಸರಿಸಬಹುದು:
- ನ್ಯಾಯಾಲಯದಲ್ಲಿ ಪಾಲು ಬೇಡಿಕೆ ಅರ್ಜಿ ಸಲ್ಲಿಸುವುದು
- ಆಸ್ತಿ ಮೇಲೆ ತಾತ್ಕಾಲಿಕ ನಿಷೇಧಾಜ್ಞೆ (Stay Order) ಪಡೆಯುವುದು
- ಕುಟುಂಬ ಹಂಚಿಕೆ ಕುರಿತು ರವಾನೆ ದಾಖಲೆ ಪರಿಶೀಲಿಸುವುದು
- ಕಾನೂನು ಸಲಹೆ ಪಡೆಯುವುದು
- ಹಕ್ಕು ಬಿಡುಗಡೆ ಪತ್ರದ ಮಾನ್ಯತೆ ಪ್ರಶ್ನಿಸುವುದು
BDA Sites Auction 2025- ರಿಯಾಯ್ತಿ ದರಲ್ಲಿ ಬೆಂಗಳೂರಿನಲ್ಲಿ ಸರ್ಕಾರದ ಸೈಟು | ಆಸಕ್ತರಿಗೆ ಬಿಡಿಎ ಮುಕ್ತ ಆಹ್ವಾನ
ಹೆಣ್ಣು ಮಕ್ಕಳಿಗೆ ಸಲಹೆಗಳು
- ತಂದೆಯ ಆಸ್ತಿಯ ದಾಖಲಾತಿ ಪರಿಶೀಲಿಸಿ
- ಆಸ್ತಿ ಹಂಚಿಕೆ 2005ರ ಹಿಂದೆ ಆಗಿದೆಯೋ ಅಥವಾ ಬಳಿಕ ಆಗಿದೆಯೋ ನೋಡಿ
- ಸಹೋದರರ ಒತ್ತಡಕ್ಕೆ ಒಳಗಾಗಿ ಏನಾದರೂ ಸಹಿ ಮಾಡುವ ಮುಂಚೆ ಹಲವು ಬಾರಿ ಯೋಚಿಸಿ
- ತಮ್ಮ ಹಕ್ಕುಗಳನ್ನು ಬಿಟ್ಟುಕೊಡ ಮೊದಲು ವಕೀಲರ ಸಲಹೆ ಪಡೆಯಿರಿ
- ಮಹಿಳಾ ಕಾನೂನು ಸಹಾಯ ಕೇಂದ್ರಗಳಿಂದ ನೆರವು ಪಡೆಯಿರಿ
ಒಟ್ಟಾರೆ ಹೆಣ್ಣು ಮಗಳು ತಂದೆಯ ಕುಟುಂಬದ ಸದಸ್ಯೆಯಾಗಿದ್ದು; ಆಕೆಯೂ ತಂದೆಯ ಆಸ್ತಿಯಲ್ಲಿ ಸಮಾನ ಹಕ್ಕುದಾರಿಣಿ. 2005ರ ನಂತರ ತಿದ್ದುಪಡಿ ಕಾನೂನು ಇವರ ಹಕ್ಕಿಗೆ ಕಾನೂನುಬದ್ಧ ಬಲ ನೀಡಿದೆ. ಅವರ ಹಕ್ಕು ನಿರಾಕರಿಸುವುದು ಕಾನೂನು ಉಲ್ಲಂಘನೆಯಾಗುತ್ತದೆ. ನ್ಯಾಯಾಲಯದ ಸಹಾಯ ಪಡೆದು ಹಕ್ಕು ಪಡೆಯಲು ಮುಕ್ತ ಅವಕಾಶವಿದೆ.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.