Gruha Lakshmi Scheme Karnataka : ಗೃಹಲಕ್ಷ್ಮಿ ಹಣಕ್ಕಾಗಿ ಮಹಿಳೆಯರ ಪರದಾಟ ದಿನೇ ದಿನೆ ಹೆಚ್ಚಾಗುತ್ತಿದೆ. ಜೂನ್ ಹಾಗೂ ಜುಲೈ ತಿಂಗಳ ಹಣ ಜಮೆಯಾಗದಿರುವ ಲಕ್ಷಾಂತರ ಫಲಾನುಭವಿ ಮಹಿಳೆಯರು (Beneficiary womens) ನಿತ್ಯವೂ ಬ್ಯಾಂಕು, ಅಂಚೆ ಕಚೇರಿ, ಅಂಗನವಾಡಿ ಕೇಂದ್ರಗಳಿಗೆ ಅಲೆಯುತ್ತಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಸ್ಥಗಿತವಾಯಿತಾ? ಎಂಬ ವದಂತಿ ಕೂಡ ಹಳ್ಳಿಗಳಲ್ಲಿ ಹರಿದಾಡುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಿರೀಕ್ಷಿತ ಫಲಿತಾಂಶ ಬಾರದ ಕಾರಣಕ್ಕೆ ಯೋಜನೆಯನ್ನು ಸದ್ದಿಲ್ಲದೇ ನಿಲ್ಲಿಸಿದ್ದಾರೆ ಎಂಬ ವದಂತಿ ಅಲ್ಲಲ್ಲಿ ಕೇಳಿ ಬರುತ್ತಿದೆ.
ಎರಡು ತಿಂಗಳಿಂದ ವಹಿವಾಟು ಅಸ್ತವ್ಯಸ್ತ
ರಾಜ್ಯ ಸರ್ಕಾರ 2023 ಆಗಸ್ಟ್ ತಿಂಗಳಿನಿ೦ದ ಗೃಹಲಕ್ಷ್ಮಿಯರಿಗೆ ಡಿಬಿಟಿ ಮೂಲಕ ತಲಾ 2,000 ರೂಪಾಯಿ ನೇರವಾಗಿ ಖಾತೆಗೆ ಜಮಾ ಮಾಡುತ್ತಿದೆ. ಈವರೆಗೆ 10 ಕಂತುಗಳ ಹಣ ಹಾಕಲಾಗಿದೆ. ಆದರೆ, ಎಲ್ಲ ಕಂತುಗಳಲ್ಲಿ ಎಲ್ಲ ಅರ್ಹ ಫಲಾನುಭವಿಗಳಿಗೆ ಹಣ ಜಮೆಯಾಗಿಲ್ಲ. ಪ್ರತಿ ಕಂತಿನಲ್ಲೂ ಲಕ್ಷಾಂತರ ಅರ್ಹ ಮಹಿಳೆಯರಿಗೆ ಹಣ ತಲುಪಿಲ್ಲ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಏಪ್ರಿಲ್-ಮೇ ತಿಂಗಳ ಹಣವನ್ನು ಮೇ ತಿಂಗಳ ಮೊದಲ ವಾರದಲ್ಲೇ ಫಲನುಭವಿ ಮಹಿಳೆಯರ ಖಾತೆ ಜಮಾ ಮಾಡಲಾಗಿತ್ತು. ಬಳಿಕ ಲೋಕಸಭಾ ಚುನಾವಣೆ ಸಮಯದಲ್ಲೂ ಹಣ ಜಮಾ ಮಾಡಲಾಗಿತ್ತು. ಅದಾದ ನಂತರ ಗೃಹಲಕ್ಷ್ಮಿ ವಹಿವಾಟು ಅಸ್ತವ್ಯಸ್ತವಾಗಿದ್ದು; ಜೂನ್ ಹಾಗೂ ಜುಲೈ ತಿಂಗಳ ಹಣ ಬಾರದೇ ಲಕ್ಷಾಂತರ ಮಹಿಳೆಯರು ಕಂಗಾಲಾಗಿದ್ದಾರೆ.
ಯಾವ್ಯಾವ ತಿಂಗಳು ಎಷ್ಟೆಷ್ಟು ಹಣ ಜಮಾ?
ರಾಜ್ಯದಲ್ಲಿ 2023ರ ಆಗಸ್ಟ್’ನಿಂದ ಈತನಕ ಒಟ್ಟು 1,23,95,327 ಮಹಿಳೆಯರು ಗೃಹಲಕ್ಷ್ಮಿ ಯೋಜನೆಯಡಿ ನೋಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ 1,21,54,700 ಜನ ಅರ್ಹ ಫಲಾನುಭವಿಗಳಾಗಿದ್ದು; ಒಟ್ಟು 1,20,25,235 ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಹಣ ಜಮೆ ಮಾಡಲಾಗಿದೆ. ಆದರೆ ಅರ್ಹ ಫಲಾನುಭವಿಗಳಲ್ಲಿಯೇ 1,29,465 ಮಹಿಳೆಯರಿಗೆ ಯೋಜನೆಯ ಹಣ ತಲುಪಿಲ್ಲ!
ಯೋಜನೆ ಆರಂಭವಾದಾಗಿನಿ೦ದ ಈ ತನಕ ಪ್ರತೀ ತಿಂಗಳೂ ಲಕ್ಷಾಂತರ ಅರ್ಹ ಫಲಾನುಭವಿ ಮಹಿಳೆಯರಿಗೆ ಯೋಜನೆಯ ಹಣ ತಲುಪಿಲ್ಲ ಎಂಬುವುದು ಅಂಕಿ-ಅ೦ಶಗಳಿಂದ ಗೊತ್ತಾಗುತ್ತದೆ. ಒಟ್ಟು 1,29,465 ಅರ್ಹ ಮಹಿಳೆಯರು ಯೋಜನೆಯ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಅದರಲ್ಲೂ ಜೂನ್ ಹಾಗೂ ಜುಲೈ ತಿಂಗಳ ಹಣ ಬಾರದೇ ಗೃಹಲಕ್ಷ್ಮೀ ಯೋಜನೆಯೇ ಸ್ಥಗಿತವಾಯ್ತಾ? ಎಂಬ ಗುಮಾನಿ ಸೃಷ್ಟಿಯಾಗಿದೆ!
10 ದಿನಗಳಲ್ಲಿ ಖಾತೆಗೆ ಹಣ
ಗೃಹಲಕ್ಷ್ಮೀ ಯೋಜನೆಯ ಕುರಿತು ಹಳ್ಳಿಗಳಲ್ಲಿ ದಿನಕ್ಕೊಂದು ವದಂತಿ, ಊಹಾಪೋಹಗಳು ಹರಿದಾಡುತ್ತಿವೆ. ಈ ನಡುವೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಅವರು ನಿನ್ನೆ (ಜುಲೈ 24) ಗೃಹಲಕ್ಷ್ಮಿ ಯೋಜನೆಯ ಬಾಕಿ ಉಳಿದಿರುವ ಎರಡು ತಿಂಗಳ ಹಣವನ್ನು ಇನ್ನು 10 ದಿನಗಳ ಒಳಗಾಗಿ ಖಾತೆಗೆ ಜಮಾ ಮಾಡಲಾಗುತ್ತದೆ ಎಂಬ ಮಾಹಿತಿ ನೀಡಿದ್ದಾರೆ.
ಕಳೆದ ಮೇ ತಿಂಗಳಲ್ಲಿ ಖಾತೆಗೆ ಹಣ ಹಾಕಿದ್ದೇವೆ. ತಾಂತ್ರಿಕ ದೋಷದಿಂದ ಜೂನ್ ಮತ್ತು ಜುಲೈ ಎರಡು ತಿಂಗಳ ಹಣ ಬಾಕಿ ಉಳಿದಿದೆ. ಈಗಾಗಲೇ ಡಿಬಿಟಿ ತಾಂತ್ರಿಕ ಕಾರ್ಯಗಳು ನಡೆಯುತ್ತಿವೆ. ಇನ್ನು 8 ರಿಂದ 10 ದಿನಗಳಲ್ಲಿ ಹಣವನ್ನು ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.