Govt Montessori Teacher Recruitment 2024 : ಕಳೆದ ಜುಲೈ 22ರಿಂದ ರಾಜ್ಯದ ಆಯ್ದ ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳು (Pre-primary class) ಆರಂಭವಾಗಿವೆ. ಈ ತರಗತಿಗೆ ‘ಸರ್ಕಾರಿ ಮಾಂಟೆಸ್ಸರಿ’ (Karnataka State Government Montessori) ಎಂದು ನಾಮಕರಣ ಮಾಡಲಾಗಿದ್ದು; ಇನ್ಮುಂದೆ ಮಕ್ಕಳು ಅಂಗನವಾಡಿಯಲ್ಲೇ ಸಂಪೂರ್ಣ ಉಚಿತವಾಗಿ ಎಲ್‌ಕೆಜಿ, ಯುಕೆಜಿ ಶಿಕ್ಷಣ (LKG, UKG education) ಪಡೆಯಬಹುದಾಗಿದೆ.
ಸದ್ಯಕ್ಕೆ ಬೆಂಗಳೂರು ನಗರ ಜಿಲ್ಲೆಯಲ್ಲಿ 250 ಅಂಗನವಾಡಿ ಕೇಂದ್ರಗಳಲ್ಲಿ ‘ಮಾಂಟೆಸ್ಸರಿ’ ತರಗತಿ ಆರಂಭವಾಗಿದೆ. ಶೀಘ್ರದಲ್ಲಿಯೇ ರಾಜ್ಯಾದ್ಯಂತ ಒಟ್ಟು 5,000 ಅಂಗನವಾಡಿ ಕೇಂದ್ರಗಳಲ್ಲಿ ಸರ್ಕಾರಿ ಮಾಂಟೆಸ್ಸರಿ ಆರಂಭವಾಗಲಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಮಾಹಿತಿ ನೀಡಿದ್ದಾರೆ.
ಹಾಗಿದ್ದರೆ ಸರ್ಕಾರಿ ಮಾಂಟೆಸ್ಸರಿ ಟೀಚರ್ ನೇಮಕಾತಿ ಹೇಗೆ? ಇದಕ್ಕಾಗಿ ನಿಗದಿಪಡಿಸಿದ ಅರ್ಹತಾ ಮಾನದಂಡಗಳೇನು? ಶೈಕ್ಷಣಿಕ ಅರ್ಹತೆಗಳೇನು? ನೇಮಕ ಪ್ರಕ್ರಿಯೆ ಹೇಗೆ? ಇತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ…
ಅಂಗನವಾಡಿ ಮಾಂಟೆಸ್ಸರಿ ಹುದ್ದೆಗಳೆಷ್ಟು?
ರಾಜ್ಯದಲ್ಲಿ ಒಟ್ಟು 61,876 ಅಂಗನವಾಡಿ ಕೇಂದ್ರಗಳಿದ್ದು; ಈ ಪೈಕಿ 250 ಅಂಗನವಾಡಿ ಕೇಂದ್ರಗಳಲ್ಲಿ ಕಳೆದ ಜುಲೈ 22ರಿಂದ ಅಧಿಕೃತವಾಗಿ ಸರ್ಕಾರಿ ಮಾಂಟೆಸ್ಸರಿ ತರಗತಿಗಳು ಆರಂಭವಾಗಿವೆ. ಇನ್ನುಳಿದ 4,750 ಅಂಗನವಾಡಿಗಳಲ್ಲಿ ಸರ್ಕಾರಿ ಮಾಂಟೆಸ್ಸರಿ ಆರಂಭವಾಗಲಿದೆ.
ರಾಜ್ಯದಲ್ಲಿ ಒಟ್ಟು 5,000 ಮಾಂಟೆಸ್ಸರಿ ಟೀಚರ್ ನೇಮಕ ನಡೆಯಲಿದೆ. ಇದರಲ್ಲಿ ಈಗಾಗಲೇ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಜೊತೆಗೆ ಅಗತ್ಯ ತರಬೇತಿ ಹೊಂದಿರುವ ಅಂಗನವಾಡಿ ಕಾರ್ಯಕರ್ತೆಯರನ್ನೇ ಮಾಂಟೆಸ್ಸರಿ ಭೋದನೆ ನೇಮಕ ಮಾಡಿಕೊಳ್ಳಲಾಗುತ್ತದೆ. ಬಾಕಿ ಉಳಿದ ಖಾಲಿ ಹುದ್ದೆಗಳಿಗೆ ಹೊಸ ನೇಮಕಾತಿ ನಡೆಯಲಿದೆ.

ಇವರಿಗೆ ಮೊದಲ ಆದ್ಯತೆ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ನೀಡಿದ ಮಾಹಿತಿ ಪ್ರಕಾರ ರಾಜ್ಯದಲ್ಲಿ ಒಟ್ಟು 61,876 ಅಂಗನವಾಡಿ ಕೇಂದ್ರಗಳಿವೆ. ಇದರಲ್ಲಿ ಉನ್ನತ ಶಿಕ್ಷಣ ಪಡೆದು ಅಂಗನವಾಡಿ ಕಾರ್ಯಕರ್ತೆಯರಾಗಿ 1,682 ಜನ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದೇ ರೀತಿ 6,363 ಜನ ಪದವಿ ಮುಗಿಸಿದವರು, 15,217 ಜನ ಪಿಯುಸಿ ಹಾಗೂ 38,614 ಜನ ಎಸ್‌ಎಸ್‌ಎಲ್‌ಸಿ ಪಾಸಾಗಿ ಅಂಗನವಾಡಿ ಕಾರ್ಯಕರ್ತೆಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಹೀಗೆ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿರುವವರನ್ನು ಕಾರ್ಯಕರ್ತೆಯರ ಹುದ್ದೆಯಿಂದ ಮಾಂಟೆಸ್ಸರಿ ಟೀಚರ್ ಹುದ್ದೆಗೆ ನೇಮೀಸಲಾಗುತ್ತದೆ. ಅಗತ್ಯ ವಿದ್ಯಾರ್ಹತೆ ಹೊಂದಿರುವವರ ಕೊರತೆಯಾದ ಅಂಗನವಾಡಿ ಕೇಂದ್ರಗಳಿಗೆ ಹೊಸದಾಗಿ ಮಾಂಟೆಸ್ಸರಿ ಟೀಚರ್ ನೇಮಕವಾಗುವ ಸಂಭವವಿದೆ.
ಟೀಚರ್ ಹುದ್ದೆಗೆ ಈ ಹಿಂದೆ ನಿಗದಿಪಡಿಸಿದ್ದ ಅರ್ಹತೆಗಳು
ಈ ಹಿಂದೆ ಸರ್ಕಾರಿ ಶಾಲೆಗಳಲ್ಲೇ ಎಲ್‌ಕೆಜಿ, ಯುಕೆಜಿ ತರಗತಿ ಆರಂಭಿಸಲು ಉದ್ದೇಶಿಸಲಾಗಿತ್ತು. ಅಂಗನವಾಡಿ ಸಿಬ್ಬಂದಿಯ ತೀವ್ರ ಒತ್ತಡದ ಮೇರೆಗೆ ಇದನ್ನು ಅಂಗನವಾಡಿಯಲ್ಲೇ ‘ಸರ್ಕಾರಿ ಮಾಂಟೆಸ್ಸರಿ’ ಹೆಸರಿನಲ್ಲಿ ಮುಂದುವರೆಸಲಾಗಿದೆ. ಸರ್ಕಾರಿ ಎಲ್‌ಕೆಜಿ, ಯುಕೆಜಿ ತರಗತಿ ಟೀಚರ್ ನೇಮಕಾತಿಗೆ ಈ ಕೆಳಗಿನ ಅರ್ಹತಾ ಮಾನದಂಡಗಳನ್ನು ನಿಗದಿಪಡಿಸಲಾಗಿತ್ತು:
- ಸರಕಾರಿ ಎಲ್‌ಕೆಜಿ ಹಾಗೂ ಯುಕೆಜಿ ಶಾಲಾ ಶಿಕ್ಷಕಿಯರಾಗಲು ಪಿಯುಸಿಯಲ್ಲಿ ಕನಿಷ್ಠ ಶೇ.50 ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು. ವಯೋಮಿತಿಯು 45 ವರ್ಷಕ್ಕಿಂತ ಕಡಿಮೆ ಇರಬೇಕು.
- NCTE ಮಾನ್ಯತೆ ಪಡೆದ ಸಂಸ್ಥೆಯಿ೦ದ ಎರಡು ಅಥವಾ ಎರಡು ವರ್ಷಕ್ಕಿಂತ ಹೆಚ್ಚಿನ ಅವಧಿಯ ಡಿಪ್ಲೊಮಾ ಇನ್ ನರ್ಸರಿ ಟೀಚರ್ಸ್ ಎಜ್ಯುಕೇಶನ್/ ಪ್ರೀ- ಸ್ಕೂಲ್ ಎಜ್ಯುಕೇಶನ್/ ಅರ್ಲಿ ಚೈಲ್ಡ್ಹುಡ್ ಎಜುಕೇಶನ್ ಪ್ರೊಗ್ರಾಂ (ಡಿ.ಇ.ಸಿ.ಇಡಿ) ಅಥವಾ ಬಿ.ಇಡಿ (ನರ್ಸರಿ) ಅರ್ಹತೆ ಹೊಂದಿರಬೇಕು.
- ಒಂದು ವೇಳೆ ಈ ಮೇಲಿನ ಅರ್ಹತೆಯುಳ್ಳ ಅಭ್ಯರ್ಥಿಗಳು ಲಭ್ಯವಾಗದಿದ್ದಲ್ಲಿ ಪಿಯುಸಿಯಲ್ಲಿ ಕನಿಷ್ಠ ಶೇ.50 ಅಂಕಗಳನ್ನು ಪಡೆಯುವುದರ ಜತೆಗೆ NCTE ಮಾನ್ಯತೆ ಪಡೆದ ಸಂಸ್ಥೆಯಿ೦ದ ಡಿ.ಎಡ್ ತರಬೇತಿ ಹೊಂದಿದವರು ನೇಮಕಾತಿ ಮಾಡಲು ಸೂಚಿಸಲಾಗಿತ್ತು.
ಬಹುಶಃ ಇದೇ ಅರ್ಹತಾ ಮಾನದಂಡಗಳೇ ‘ಸರ್ಕಾರಿ ಮಾಂಟೆಸ್ಸರಿ’ ಟೀಚರ್ ಹೊಸ ಹುದ್ದೆಗಳ ನೇಮಕಾತಿಗೂ ಅನ್ವಯವಾಗುವ ಸಾಧ್ಯತೆ ಇದೆ. ಈ ಬಗ್ಗೆ ಶೀಘ್ರದಲ್ಲಿಯೇ ಅಧಿಕೃತ ಮಾಹಿತಿ ಹೊರಬೀಳಲಿದೆ. ಸರ್ಕಾರಿ ಮಾಂಟೆಸ್ಸರಿ ಟೀಚರ್ ಹುದ್ದೆಗಳ ನೇಮಕಾತಿ ಕುರಿತ ನಿರಂತರ ಅಪ್ಡೇಟ್’ಗಾಗಿ ಮಾಹಿತಿಮನೆ ಫಾಲೋ ಮಾಡಿ…
ಇದನ್ನೂ ಓದಿ: ಸರ್ಕಾರಿ ಪಿಯು ಕಾಲೇಜ್ ಲೆಕ್ಚರರ್ ಹುದ್ದೆಗಳಿಗೆ ಅರ್ಜಿ | 814 ಹುದ್ದೆಗಳ ನೇಮಕ PU Lecturer Recruitment 2024