ಕರ್ನಾಟಕ ಸರ್ಕಾರ ಕಾರ್ಮಿಕರ ಕೆಲಸದ ಅವಧಿ ಮತ್ತು ಕೆಲಸದ ದಿನಗಳಲ್ಲಿ (Five Days Work Week) ಮಹತ್ವದ ತಿದ್ದುಪಡಿ ಮಾಡಲು ಚಿಂತನೆ ನಡೆಸಿದ್ದು; ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ರಾಜ್ಯ ಸರ್ಕಾರವು ಕಾರ್ಮಿಕರ ಕೆಲಸದ ಅವಧಿಯಲ್ಲಿ ಹಾಗೂ ವಾರದ ಕೆಲಸದ ದಿನಗಳಲ್ಲಿ ಮಹತ್ವದ ಬದಲಾವಣೆಗೆ ಸಿದ್ಧತೆ ನಡೆಸುತ್ತಿದೆ. ಇನ್ಮುಂದೆ ರಾಜ್ಯದ ಕಾರ್ಖಾನೆಗಳು, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ವಾರದಲ್ಲಿ ಕೇವಲ 5 ದಿನ ಮಾತ್ರ ಕೆಲಸ ಇರಲಿದೆ. ಆದರೆ, ಪ್ರತಿದಿನದ ಕೆಲಸದ ಅವಧಿಯನ್ನು 9 ಗಂಟೆಯಿಂದ 10 ಗಂಟೆಗೆ ಏರಿಸಲಾಗುತ್ತಿದೆ.
ಈ ತಿದ್ದುಪಡಿ ಎಲ್ಲಿ ಮತ್ತು ಏಕೆ?
ಈ ಬದಲಾವಣೆ ‘ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ-1961’ ಹಾಗೂ ‘ಕರ್ನಾಟಕ ಕಾರ್ಖಾನೆಗಳ ಕಾಯ್ದೆ’ಗಳಿಗೆ ತಿದ್ದುಪಡಿ ತರುವ ಮೂಲಕ ಜಾರಿಗೆ ತರಲು ಸರ್ಕಾರ ಉತ್ಸುಕವಾಗಿದೆ. ಈ ಬದಲಾವಣೆಗಳ ನಂತರ, ನೌಕರರು ಪ್ರತಿ ದಿನ ಒಂದು ಗಂಟೆ ಹೆಚ್ಚು ಕೆಲಸ ಮಾಡಬೇಕಾಗುತ್ತದೆ.
ಬದಲಾವಣೆಯ ಹಿನ್ನಲೆಯಲ್ಲಿ ಈಗಾಗಲೇ ಒಂಬತ್ತು ತಾಸು ಇರುವ ದಿನಚರಿಯು ಇನ್ಮುಂದೆ 10 ತಾಸು ಆಗಲಿದೆ. ಓವರ್‌ಟೈಮ್ ಸೇರಿಸಿ ದಿನದ ಗರಿಷ್ಠ 12 ಗಂಟೆಗಳ ವರೆಗೆ ಕೆಲಸ ಮಾಡುವ ಅನುಮತಿ ಇರಲಿದೆ. ವಾರದ 5 ದಿನ ಕೆಲಸ, 2 ದಿನ ರಜೆ (ಶನಿವಾರ ಹಾಗೂ ಭಾನುವಾರ) ವ್ಯವಸ್ಥೆ ಜಾರಿಯಾಗಬಹುದು.
ಕೇಂದ್ರ ಸರ್ಕಾರದ ಸೂಚನೆ, ಇತರ ರಾಜ್ಯಗಳ ಅನುಸರಣೆ
ಕೇಂದ್ರ ಸರ್ಕಾರ ಕಾರ್ಮಿಕರ ಕೆಲಸದ ಅವಧಿ ಮತ್ತು ದಿನಗಳಲ್ಲಿ ಇಂಥದೊAದು ಬದಲಾವಣೆ ಮಾಡುವಂತೆ ರಾಜ್ಯಗಳಿಗೆ ಕೋರಿತ್ತು. ಈ ಹಿನ್ನಲೆಯಲ್ಲಿ ಇತ್ತೀಚೆಗೆ ಛತ್ತೀಸ್‌ಗಢ, ಗುಜರಾತ್, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳು ಈಗಾಗಲೇ ಕೆಲಸದ ಅವಧಿ ಹೆಚ್ಚಿಸಿ ತಿದ್ದುಪಡಿ ತಂದಿವೆ.
ಕರ್ನಾಟಕದಲ್ಲೂ ಉದ್ಯಮ ಸಂಸ್ಥೆಗಳ ಒತ್ತಡದ ಹಿನ್ನೆಲೆಯಲ್ಲಿ ಈ ತಿದ್ದುಪಡಿ ಪ್ರಯತ್ನ ನಡೆಯುತ್ತಿದೆ. ಈ ತಿದ್ದುಪಡಿ ಕುರಿತು ಕಾರ್ಮಿಕ ಇಲಾಖೆಯು ಆಯುಕ್ತರ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಿದ್ದು, ಬೃಹತ್ ಉದ್ಯಮ ಸಂಸ್ಥೆಗಳು ಮತ್ತು ಐಟಿ ಕಂಪನಿಗಳು ಈ ಬದಲಾವಣೆಗೆ ಬೆಂಬಲ ವ್ಯಕ್ತಪಡಿಸಿದರೆ, ಕಾರ್ಮಿಕ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.

21 ಲಕ್ಷ ಕಾರ್ಮಿಕರಿಗೆ ಅನ್ವಯ
ಈ ನಿಯಮ ಜಾರಿಯಾದರೆ, ಇಡೀ ರಾಜ್ಯದಲ್ಲಿ ಸುಮಾರು 21 ಲಕ್ಷ ಕಾರ್ಮಿಕರು ಈ ತಿದ್ದುಪಡಿಯ ವ್ಯಾಪ್ತಿಗೆ ಬರುವ ಸಾಧ್ಯತೆ ಇದೆ. ಇನ್ನಷ್ಟು ಚರ್ಚೆಗಾಗಿ ಮತ್ತೊಂದು ಸುತ್ತಿನ ಸಭೆ ನಡೆಯಲಿದ್ದು; ಅಂತಿಮ ನಿರ್ಧಾರವನ್ನು ಮುಖ್ಯಮಂತ್ರಿ ಇಚ್ಛೆಗೆ ವಹಿಸುವ ಸಾಧ್ಯತೆ ಇದೆ.
20ಕ್ಕಿಂತ ಕಡಿಮೆ ನೌಕರರಿರುವ ಅಂಗಡಿ ಮತ್ತು ಸಂಸ್ಥೆಗಳಿಗೆ ದಾಖಲಾತಿ ನಿರ್ವಹಣೆಯಲ್ಲಿನ ವಿನಾಯಿತಿ ನೀಡಲು ಸರ್ಕಾರ ಯೋಜನೆ ರೂಪಿಸುತ್ತಿದೆ. ಈ ಬಗ್ಗೆ ಕೇಂದ್ರದ ಸೂಚನೆಯಂತೆ ಕೆಲವು ರಾಜ್ಯಗಳು ಈ ವಿನಾಯಿತಿಯನ್ನು ಜಾರಿಗೆ ತಂದಿವೆ. ಈ ವಿನಾಯಿತಿಯಿಂದ ಸಣ್ಣ ಉದ್ಯಮಗಳಿಗೆ ವೆಚ್ಚದಲ್ಲಿ ಇಳಿಕೆ ಮತ್ತು ನಿರ್ವಹಣಾ ಸುಲಭತೆ ಮೂಡಲಿದೆ.
ತಿದ್ದುಪಡಿ ಜಾರಿಯಾದರೆ ಪರಿಣಾಮ ಏನು?
- ವಾರದಲ್ಲಿ 5 ದಿನ ಕೆಲಸದ ನಿಯಮದಿಂದ ಉದ್ಯೋಗಿಗಳಿಗೆ ವಿಶ್ರಾಂತಿ ದಿನಗಳು ಹೆಚ್ಚಾಗಿ, ಕಾರ್ಯಕ್ಷಮತೆ ಸುಧಾರಿಸಬಹುದು.
- ಪ್ರತಿದಿನ 10-12 ಗಂಟೆಗಳ ಕೆಲಸವು ದೈಹಿಕ ಮತ್ತು ಮಾನಸಿಕ ಒತ್ತಡ ಹೆಚ್ಚಿಸಬಹುದು.
- ಉದ್ಯೋಗದ ಪ್ರಮಾಣ ಮತ್ತು ಉದ್ಯೋಗಿಗಳ ನಿರ್ವಹಣಾ ವ್ಯವಸ್ಥೆ ಮೇಲೆ ಪರಿಣಾಮ ಬೀರಲಿದೆ.
ಈ ತಿದ್ದುಪಡಿಯ ಪ್ರಸ್ತಾವನೆ ಚರ್ಚೆಯ ಹಂತದಲ್ಲಿದ್ದು, ಅಂತಿಮ ನಿರ್ಧಾರಕ್ಕೆ ಇನ್ನೂ ಸಮಯ ಬೇಕಾಗಿದೆ. ಸರ್ಕಾರ ಎಲ್ಲಾ ವಲಯಗಳ ಅಭಿಪ್ರಾಯಗಳನ್ನು ಪರಿಗಣಿಸಿ ಸಮತೋಲನದ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ. ಕಾರ್ಮಿಕರು ಮತ್ತು ವಾಣಿಜ್ಯ ಸಂಸ್ಥೆಗಳು ಈ ಬದಲಾವಣೆಗೆ ಸಿದ್ಧರಾಗಬೇಕಾಗಿದೆ. ಸಮಾಲೋಚನೆಯ ಎಲ್ಲಾ ಹಂತಗಳು ಪೂರ್ತಿಯಾದ ನಂತರ ತೀರ್ಮಾನ ಅಂತಿಮಗೊಳ್ಳಲಿದೆ.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.