ಗ್ರಾಮ ಪಂಚಾಯತಿ ವ್ಯಾಪ್ತಿಯ ಮನೆ, ನಿವೇಶನ ಅಥವಾ ಖಾಲಿ ಜಾಗಗಳ ಇ-ಸ್ವತ್ತು ದಾಖಲೆಗಳನ್ನು ಮೊಬೈಲ್‌ನಲ್ಲಿಯೇ ಪಡೆಯುವುದು ಹೇಗೆ? ಈ ಕುರಿತ ಮಾಹಿತಿ ಇಲ್ಲಿದೆ…
ಗ್ರಾಮೀಣ ಪ್ರದೇಶಗಳಲ್ಲಿ ಮನೆ, ನಿವೇಶನ ಅಥವಾ ಖಾಲಿ ಜಾಗವನ್ನು ಹೊಂದಿರುವ ಪ್ರತಿ ನಾಗರಿಕರು ತಮ್ಮ ಆಸ್ತಿಯ ಡಿಜಿಟಲ್ ದಾಖಲೆ ಹೊಂದಿರುವುದು ಬಹಳ ಅಗತ್ಯವಾಗಿದೆ. ಪಂಚಾಯತ್ ರಾಜ್ ಇಲಾಖೆಯ e-Swathu ವೆಬ್ ಪೋರ್ಟಲ್ ಮೂಲಕ ಈಗ ಈ ಮಾಹಿತಿಯನ್ನು ತಮ್ಮ ಮೊಬೈಲ್‌ನಲ್ಲೇ ಉಚಿತವಾಗಿ ಪಡೆಯಬಹುದಾಗಿದೆ.
ಈ ಲೇಖನದ ಮೂಲಕ ನೀವು ಮನೆಯಲ್ಲೇ ಕುಳಿತು ನಿಮ್ಮ ಆಸ್ತಿಯ ಇ-ಸ್ವತ್ತು ವಿವರಗಳನ್ನು ಆನ್‌ಲೈನ್‌ನಲ್ಲಿ ಪಡೆಯಬಹುದು ಹೇಗೆ? ಇ-ಸ್ವತ್ತು ಇಲ್ಲದಿದ್ದರೆ ಅದನ್ನು ಪಡೆಯುವ ಪ್ರಕ್ರಿಯೆ, ಅಗತ್ಯ ದಾಖಲೆಗಳು ಹಾಗೂ ಇದರ ಮಹತ್ವವನ್ನು ಕೂಡ ವಿವರವಾಗಿ ತಿಳಿಸಲಾಗಿದೆ.
e-Swathu ಎಂಬುದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಖಾಸಗಿ ಆಸ್ತಿಗಳ ನೋಂದಣಿ, ಮಾಲೀಕತ್ವದ ವಿವರಗಳು, ಬದಲಾವಣೆಗಳ ದಾಖಲಾತಿ ಇತ್ಯಾದಿಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸುವ ಸರ್ಕಾರದ ಅಧಿಕೃತ ತಂತ್ರಾಂಶವಾಗಿದೆ.
ಇ-ಸ್ವತ್ತಿನ ಡಿಜಿಟಲ್ ದಾಖಲೆ ಪಡೆಯುವ ಆನ್‌ಲೈನ್ ವಿಧಾನ
ಗ್ರಾಮೀಣ ಪ್ರದೇಶದ ಜನರು ಯಾವುದೇ ಮೀಡಿಯೇಟರ್‌ಗಳ ಸಹಾಯವಿಲ್ಲದೇ, ಈ ಕೆಳಗಿನ ಹಂತಗಳನ್ನು ಅನುಸರಿಸಿ ತಮ್ಮ ಆಸ್ತಿಯ ವಿವರಗಳನ್ನು ಪಡೆಯಬಹುದು:
- ನಿಮ್ಮ ಮೊಬೈಲ್/ಕಂಪ್ಯೂಟರ್ ಬ್ರೌಸರ್‌ನಲ್ಲಿ ಈ ಲಿಂಕ್ ತೆರೆಯಿರಿ: ‘e-Swathu Property’
- ಮುಖ್ಯ ಪುಟದಲ್ಲಿ ‘ಆಸ್ತಿಗಳ ಶೋಧನೆ (Search Property)’ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
- ‘Search By” ವಿಭಾಗದಲ್ಲಿ ನೀವು ಹುಡುಕಬಯಸುವ ವಿವರದ ಪ್ರಕಾರ ಆಯ್ಕೆಮಾಡಿ: Form-9 → (ಮಾಲೀಕತ್ವ ದಾಖಲೆ) → Form-11 (ಬಳಕೆ ವಿವರ) → Survey Number
- ನಿಮ್ಮ ಜಿಲ್ಲೆ → ತಾಲ್ಲೂಕು → ಗ್ರಾಮ ಪಂಚಾಯತಿ → ಹಳ್ಳಿ ಆಯ್ಕೆ ಮಾಡಿ.
- ‘ಶೋಧನೆ/Search’ ಬಟನ್ ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ಗ್ರಾಮದಲ್ಲಿನ ಆಸ್ತಿಗಳ ಪಟ್ಟಿ (e-Swathu ID, ಮಾಲೀಕರ ಹೆಸರು ಇತ್ಯಾದಿ) ತೋರಿಸಲಿದೆ.
- ಇಲ್ಲಿ ನಿಮ್ಮ ಆಸ್ತಿ ಸಂಬಂಧಿತ ದಾಖಲೆಗಳನ್ನು ಕ್ಲಿಕ್ ಮಾಡಿ ಡೌನ್‌ಲೋಡ್ ಮಾಡಬಹುದು ಅಥವಾ ಪ್ರಿಂಟ್ ತೆಗೆದುಕೊಳ್ಳಬಹುದು.

ಇ-ಸ್ವತ್ತು ದಾಖಲೆ ಸಿಗದಿದ್ದರೆ ಅರ್ಜಿ ಸಲ್ಲಿಸುವ ವಿಧಾನ
ಮೇಲಿನ ವಿಧಾನವನ್ನು ಅನುಸರಿಸಿ ನಿಮ್ಮ ಆಸ್ತಿಯ ವಿವರವನ್ನು ಚೆಕ್ ಮಾಡಿದಾಗ ಆಸ್ತಿಯ ಡಿಜಿಟಲ್ ವಿವರ ಲಭ್ಯವಾಗದೇ ಇದ್ದರೆ ನಿಮ್ಮ ಆಸ್ತಿಯ ಇ-ಸ್ವತ್ತು ಆಗಿರುವುದಿಲ್ಲ ಎಂದರ್ಥ. ಇದನ್ನು ಪಡೆಯಲು ಅಗತ್ಯ ದಾಖಲಾತಿಗಳ ಸಮೇತ ನಿಮ್ಮ ಗ್ರಾಮ ಪಂಚಾಯತಿಯನ್ನು ನೇರವಾಗಿ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಿ ಈ ದಾಖಲೆಯನ್ನು ಪಡೆಯಬೇಕು.
e-Swathu ದಾಖಲೆ ಪಡೆಯಲು ಗ್ರಾಮ ಪಂಚಾಯತಿ ಕಚೇರಿಗೆ ಅರ್ಜಿಯ ಜೊತೆಗೆ ಸಲ್ಲಿಸಬೇಕಾದ ದಾಖಲೆಗಳು ಹೀಗಿವೆ:
- ಅರ್ಜಿದಾರರ ಆಧಾರ್ ಕಾರ್ಡ್ ಪ್ರತಿ
- ಪಾಸ್‌ಪೋರ್ಟ್ ಅಳತೆಯ ಪೋಟೋ
- ಆಸ್ತಿಯ ಜೊತೆಗೆ ನಿಂತಿರುವ ಅರ್ಜಿದಾರರ ಚಿತ್ರ
- ಜಂಟಿ ಮಾಲೀಕರ ಆಧಾರ್ ಕಾರ್ಡ್ (ಇದ್ದರೆ)
- ಆಸ್ತಿ ತೆರಿಗೆ ಪಾವತಿ ರಶೀದಿ
- ಇತ್ತೀಚಿನ ವಿದ್ಯುತ್ ಬಿಲ್
ಗ್ರಾಮ ಪಂಚಾಯತಿ ಅಧಿಕಾರಿಗಳು ಪರಿಶೀಲನೆ ನಡೆಸಿದ ನಂತರ ನಿಮ್ಮ ಆಸ್ತಿ ಇ-ಸ್ವತ್ತು ದಾಖಲಾತಿಗೆ ಅರ್ಹವಾಗಿದ್ದರೆ ನಿಮಗೆ e-Swathu ID ನೀಡಲಾಗುತ್ತದೆ. ಬಳಿಕ ನೀವು e-Swathu ವೆಬ್‌ಸೈಟ್‌ನಲ್ಲಿ ನಿಮ್ಮ ಆಸ್ತಿ ವಿವರಗಳನ್ನು ಪರಿಶೀಲಿಸಬಹುದು.
ಇ-ಸ್ವತ್ತಿನ ಅಗತ್ಯತೆ ಏಕೆ?
ಗ್ರಾಮ ಪಂಚಾಯತಿ ವ್ಯಾಪ್ತಿಯ ಆಸ್ತಿಗಳಿಗೆ ಈ ಸ್ವತ್ತು ಅತ್ಯಗತ್ಯವಾಗಿದೆ. ಇದು ಅಧಿಕೃತ ಆಸ್ತಿಯ ಪ್ರಮುಖ ದಾಖಲೆಯಾಗಿದೆ. ನಿಮ್ಮ ಆಸ್ತಿಗೆ ಇ-ಸ್ವತ್ತು ಪ್ರಮಾಣ ಪತ್ರವಿದ್ದರೆ ಈ ಕೆಳಗಿನ ಸೌಲಭ್ಯಗಳು ಸಿಗಲಿವೆ:
- ಬ್ಯಾಂಕ್‌ನಿಂದ ಲೋನ್
- ಆಸ್ತಿಯನ್ನು ಮಾರಾಟ ಅಥವಾ ಖರೀದಿ ಮಾಡಲು
- ಪಟಾ ದಾಖಲೆ ಮಾಡಿಸಲು
- ಜಮೀನಿನಲ್ಲಿ ಮನೆ ನಿರ್ಮಾಣಕ್ಕೆ ಅನುಮತಿ ಪಡೆಯಲು
- ಸರ್ಕಾರಿ ಸೌಲಭ್ಯ ಪಡೆಯಲು
ನಿಮ್ಮ ಆಸ್ತಿ ಕಾನೂನುಬದ್ಧವಾಗಿದೆ ಎಂಬ ದೃಢತೆಗಾಗಿ ಇ-ಸ್ವತ್ತು ದಾಖಲಾತಿ ಅತ್ಯಗತ್ಯ. ಇ-ಸ್ವತ್ತು ಇಲ್ಲದಿದ್ದರೆ ನಾನಾ ಸೌಲಭ್ಯಗಳಿಂದ ನೀವು ವಂಚಿತರಾಗಬಹುದು. ಆದ್ದರಿಂದ, ತಕ್ಷಣವೇ e-Swathu ವೆಬ್‌ಸೈಟ್ ಮೂಲಕ ನಿಮ್ಮ ಆಸ್ತಿ ಪರಿಶೀಲಿಸಿ, ದಾಖಲೆಗಳನ್ನು ಡೌನ್‌ಲೋಡ್ ಮಾಡಿಕೊಳ್ಳಿ ಅಥವಾ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.