Crop Insurance Claim Process- ರೈತರೇ, ಬೆಳೆ ವಿಮೆ ಗ್ಯಾರಂಟಿ ಪರಿಹಾರ ಪಡೆಯಲು ಈ ಕ್ರಮ ಅನುಸರಿಸಿ | ಹಂತ ಹಂತದ ಮಾಹಿತಿ ಇಲ್ಲಿದೆ…

ರೈತರು ಖಚಿತವಾಗಿ ಬೆಳೆ ವಿಮೆ ಪರಿಹಾರ ಪಡೆಯಲು ಏನು ಮಾಡಬೇಕು? (Crop Insurance Claim Process) ಯಾವೆಲ್ಲ ಅರ್ಹತೆಗಳು ಇರಬೇಕು? ಬೆಳೆವಿಮೆ ಅರ್ಜಿ ಸ್ಥಿತಿಗತಿ ಚೆಕ್ ಮಾಡುವುದು ಹೇಗೆ? ಈ ಎಲ್ಲ ಮಾಹಿತಿ ಇಲ್ಲಿದೆ…
ಹವಾಮಾನ ವೈಪರಿತ್ಯ, ಅನಾವೃಷ್ಟಿ, ಅತಿವೃಷ್ಟಿ, ಪ್ರವಾಹ, ಬಿರುಗಾಳಿ, ಆಲಿಕಲ್ಲು ಮಳೆ, ಕೀಟರೋಗ ಬಾಧೆ ಮುಂತಾದ ನೈಸರ್ಗಿಕ ಕಾರಣಗಳಿಂದಾಗಿ ಬೆಳೆ ಹಾನಿ ಆಗುವ ಸಂಭವ ಹೆಚ್ಚಾಗಿದೆ. ಈ ಹಾನಿಯಿಂದಾಗಿ ರೈತರು ದೊಡ್ಡ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾರೆ.
ರೈತರ ಈ ಸಂಕಷ್ಟವನ್ನು ತಗ್ಗಿಸಲು ಮತ್ತು ಸುರಕ್ಷಿತ ಭವಿಷ್ಯದ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಅನ್ನು ಜಾರಿಗೆ ತಂದಿದೆ. 2016ರ ಜನವರಿ 13ರಂದು ಘೋಷಣೆಗೊಂಡ ಈ ಯೋಜನೆ ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳಲ್ಲಿ ಜಾರಿಯಲ್ಲಿದ್ದು, ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯವು ನಿರ್ವಹಿಸುತ್ತಿದೆ.
ಈ ಯೋಜನೆಯ ಉದ್ದೇಶವೇನು?
- ರೈತರಿಗೆ ಕಡಿಮೆ ಪ್ರೀಮಿಯಂ ದರದಲ್ಲಿ ಬೆಳೆ ವಿಮೆ ಸೌಲಭ್ಯ ನೀಡುವುದು.
- ನೈಸರ್ಗಿಕ ವಿಪತ್ತುಗಳಿಂದಾಗಿ ಬೆಳೆ ಹಾನಿಯಾದರೆ ವಿಮೆ ಪರಿಹಾರ ರೂಪದಲ್ಲಿ ಆರ್ಥಿಕ ಸಹಾಯ ಒದಗಿಸುವುದು.
- ಕೃಷಿಯಲ್ಲಿ ಉಂಟಾಗುವ ನಷ್ಟದಿಂದ ರೈತರನ್ನು ರಕ್ಷಿಸುವುದು ಮತ್ತು ಅವರನ್ನು ಆರ್ಥಿಕವಾಗಿ ಬಲಪಡಿಸುವುದು.
ಯಾವೆಲ್ಲ ರೈತರು, ಹೇಗೆ ವಿಮೆ ಮಾಡಿಸಬೇಕು?
ಬೆಳೆ ಸಾಲ ಪಡೆದ ರೈತರು: ಬ್ಯಾಂಕ್ ಅಥವಾ ಸಹಕಾರ ಸಂಘಗಳಿಂದ ಕೃಷಿ ಸಾಲ ಪಡೆದಿದ್ದವರು ಈ ಯೋಜನೆಯಲ್ಲಿ ಸ್ವಯಂಚಾಲಿತವಾಗಿ ನೋಂದಾಯವಾಗುತ್ತಾರೆ. ಸಾಲ ಮಂಜೂರಾತಿಯ ವೇಳೆಯಲ್ಲೇ ವಿಮೆ ಪ್ರೀಮಿಯಂ ಕಡಿತ ಮಾಡಿ ಸಾಲದ ಮೊತ್ತ ನೀಡಲಾಗುತ್ತದೆ. ಇದರಿಂದ ರೈತರು ಪ್ರತ್ಯೇಕವಾಗಿ ವಿಮೆ ಕಂತು ಪಾವತಿಸುವ ಅಗತ್ಯವಿಲ್ಲ.
ಬೆಳೆ ಸಾಲವಿಲ್ಲದ ರೈತರು: ಸಾಲ ಇಲ್ಲದ ರೈತರೂ ವಿಮೆ ಪಡೆಯಲು ಅರ್ಹರು. ಹತ್ತಿರದ ಬ್ಯಾಂಕ್, ಗ್ರಾಮ ಒನ್ ಕೇಂದ್ರ ಅಥವಾ ಸಿಎಸ್‌ಸಿ ಕೇಂದ್ರಗಳಿಗೆ ಭೇಟಿ ನೀಡಿ ತಮ್ಮದೇ ಆದ ಖಾಸಗಿ ಹಣದಿಂದ ವಿಮೆ ಪ್ರೀಮಿಯಂ ಪಾವತಿಸಬೇಕು.

ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು
- ಜಮೀನು ಪಹಣಿ/RTC
- ಬ್ಯಾಂಕ್ ಪಾಸ್‌ಬುಕ್ (ಅಕೌಂಟ್ ವಿವರಗಳು)
- ಆಧಾರ್ ಕಾರ್ಡ್
- ವಿಮೆ ಅರ್ಜಿ ನಮೂನೆ
- ಯಾವ ಬೆಳೆಗೆ ವಿಮೆ ಮಾಡಿಸಬೇಕೆಂದು ಸ್ಪಷ್ಟ ಮಾಹಿತಿ
ಬೆಳೆವಾರು ಪ್ರಿಮಿಯಂ ಮೊತ್ತ ಎಷ್ಟು?
ರೈತರಿಂದ ಪಡೆಯಲಾಗುವ ಪ್ರಿಮಿಯಂ ಮೊತ್ತ ಅತ್ಯಂತ ಕಡಿಮೆ ಶೇಕಡಾವಾರು ದರದಲ್ಲಿದ್ದು, ಉಳಿದ ಮೊತ್ತವನ್ನು ಸರ್ಕಾರವೇ ನೀಡುತ್ತದೆ.ಉದಾಹರಣೆಗೆ: ನೀವು 1 ಎಕರೆ ಭತ್ತ ಬೆಳೆದಿದ್ದರೆ, ವಿಮಾ ಮೊತ್ತ ₹50,000 ಅಂದಾಜು ಇದ್ದರೆ ರೈತನು ಕೇವಲ ₹1,000 ಪಾವತಿಸಿದರೂ ಸಾಕು (2%).
ರೈತರು ಈ ಮಾಹಿತಿಯನ್ನು samrakshane.karnataka.gov.in ತಾಣಕ್ಕೆ ಭೇಟಿ ತಿಳಿಯಬಹುದಾಗಿದೆ.
ವಿಮೆ ಪರಿಹಾರ ಯಾವ ಹಾನಿಗಳಿಗೆ ಸಿಗುತ್ತದೆ?
- ಅನಾವೃಷ್ಟಿ (ಬರ ಪರಿಸ್ಥಿತಿ)
- ಅತಿವೃಷ್ಟಿ ಅಥವಾ ಪ್ರವಾಹ
- ಭಾರಿ ಗಾಳಿ/ಚಂಡಮಾರುತ
- ಆಲಿಕಲ್ಲು ಮಳೆ, ಅಕಾಲಿಕ ಮಳೆ
- ನೈಸರ್ಗಿಕ ಬೆಂಕಿ
- ಭೂ ಕುಸಿತ
- ಕೀಟರೋಗ ಬಾಧೆ
ಕಟಾವಿನ ನಂತರ ಜಮೀನಿನಲ್ಲಿ ಒಣಗಲು ಬಿಟ್ಟಿರುವ ಬೆಳೆ ಅಕಾಲಿಕ ಮಳೆ ಅಥವಾ ಚಂಡಮಾರುತದಿಂದ ಹಾಳಾದರೂ ಪ್ರತ್ಯೇಕ ಪರಿಹಾರ ಕ್ರಮವಿದೆ. ಆದರೆ, ಕಳ್ಳತನ, ಪ್ರಾಣಿಗಳ ಮೇಯುವಿಕೆ ಅಥವಾ ರೈತನ ದೋಷದಿಂದ ಉಂಟಾದ ಹಾನಿಗೆ ವಿಮೆ ಪರಿಹಾರ ಸಿಗುವುದಿಲ್ಲ.
ಬೆಳೆ ವಿಮೆ ನಷ್ಟ ಸಂಭವಿಸಿದಾಗ ರೈತರು ಪಾಲಿಸಬೇಕಾದ ಹಂತಗಳು
ಹಂತ 1: ಬೆಳೆ ನಷ್ಟ ಸಂಭವಿಸಿದ 72 ಗಂಟೆಯೊಳಗೆ ವಿಮಾ ಕಂಪನಿಗೆ ಮಾಹಿತಿ ನೀಡಬೇಕು. ಪ್ರತಿಯೊಬ್ಬ ರೈತ ತಮ್ಮ ವಿಮೆ ಪಾವತಿಸಿದ ಕಂಪನಿಯ ಗ್ರಾಹಕ ಸೇವಾ ಸಂಖ್ಯೆ ಅಥವಾ ಸ್ಥಳೀಯ ಏಜೆಂಟ್/ಬ್ಯಾಂಕ್ ಮೂಲಕ ಕೂಡ ಮಾಹಿತಿ ನೀಡಬಹುದು.
ಹಂತ 2: ನಷ್ಟದ ದಾಖಲೆ ಸಂಗ್ರಹಿಸಿ ಮತ್ತು ದಾಖಲಿಸಬೇಕು. Crop Survey ಆಪ್ ಅಥವಾ ವೆಬ್ ಪೋರ್ಟಲ್ ಮೂಲಕ ಮಾಹಿತಿ ಅಪ್ಲೋಡ್ ಮಾಡಿ. ಈ ಆಪ್ ಬಳಸಿ ಗೊತ್ತಿಲ್ಲದಿದ್ದರೆ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಗ್ರಾಮ ಒನ್ ಕೇಂದ್ರದಲ್ಲಿ ಸಹಾಯ ಪಡೆಯಬಹುದು.
ಹಂತ 3: ವಿಮಾ ಕಂಪನಿಯ ಅಧಿಕಾರಿಗಳು ಅಥವಾ ಸರ್ಕಾರಿ ಸಮೀಕ್ಷಕರ ಭೇಟಿ. ಅವರು ಜಮೀನಿಗೆ ಭೇಟಿ ನೀಡಿ ಬೆಳೆ ನಷ್ಟದ ಪ್ರಮಾಣ ಪರಿಶೀಲಿಸುತ್ತಾರೆ. ಈ ವಿವರಗಳನ್ನು ಮೇಲಧಿಕಾರಿಗಳಿಗೆ ಸಲ್ಲಿಸುತ್ತಾರೆ.
ಹಂತ 4: ಅಂತಿಮ ಮೌಲ್ಯಮಾಪನ ಮತ್ತು ಪರಿಹಾರ ಮಂಜೂರಾತಿ. ಪರಿಶೀಲನೆ ನಂತರ ಇನ್ಶೂರೆನ್ಸ್ ಕಂಪನಿ ರೈತರಿಗೆ ಪರಿಹಾರ ಮೊತ್ತವನ್ನು ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಿಸುತ್ತದೆ.
ಬೆಳೆ ವಿಮೆ ಸ್ಥಿತಿಗತಿ ಚೆಕ್ ಮಾಡುವುದು ಹೇಗೆ?
ರಾಜ್ಯ ಕೃಷಿ ಇಲಾಖೆ ಅಧಿಕೃತ ವೆಬ್‌ಸೈಟ್/ಪೋರ್ಟಲ್‌ನಲ್ಲಿ ನೋಂದಣಿ ಸಂಖ್ಯೆಯ ಮೂಲಕ ಅರ್ಜಿ ಸ್ಥಿತಿ ಪರಿಶೀಲಿಸಬಹುದು. PMFBY ಅಧಿಕೃತ ಆಪ್ ಅಥವಾ ವೆಬ್‌ಸೈಟ್ ಬಳಸಬಹುದು. ಗ್ರಾಮ ಒನ್ ಕೇಂದ್ರ, ಬ್ಯಾಂಕ್ ಅಥವಾ ರೈತ ಸಂಪರ್ಕ ಕೇಂದ್ರಗಳಲ್ಲಿಯೂ ಸಹಾಯ ಲಭ್ಯ.
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ರೈತರಿಗಾಗಿ ಅತ್ಯಂತ ಉಪಯುಕ್ತ ಯೋಜನೆ. ರೈತರು ಈ ಯೋಜನೆಗೆ ದಾಖಲಾಗಿ ತಮ್ಮ ಕೃಷಿಯನ್ನು ಭದ್ರಗೊಳಿಸಿಕೊಳ್ಳಬೇಕು. ಸರಿಯಾಗಿ ವಿಮೆ ಮಾಡಿಸಿಕೊಂಡಿದ್ದರೆ, ನೈಸರ್ಗಿಕ ವಿಪತ್ತುಗಳಾದರೂ ವಿಮಾ ಕಂಪನಿಗಳಿಂದ ಗ್ಯಾರಂಟಿ ಪರಿಹಾರ ಲಭಿಸುತ್ತದೆ. ಸರ್ಕಾರದ ಬೆಳೆ ವಿಮೆ ಯೋಜನೆ ಸದುಪಯೋಗಪಡಿಸಿ!
ಬೆಳೆ ವಿಮೆ ಮಾಹಿತಿ ಪಡೆಯಲು ಹಾಗೂ ತಮ್ಮ ಜಿಲ್ಲೆಯ ಬೆಳೆ ವಿಮಾ ಕಂಪನಿಯ ಸಿಬ್ಬಂದಿ ಮೊಬೈಲ್ ನಂಬರ್ ಬೇಕಾದರೆ 1800180 1551 ಉಚಿತ ಸಹಾವಾಣಿ ನಂಬರಿಗೆ ಕರೆ ಮಾಡಬಹುದು.
ಬೆಳೆ ವಿಮೆ ಪ್ರೀಮಿಯಂ ಅನ್ನು ಯಾವ ಕಂಪನಿಗೆ ಪಾವತಿಸಲಾಗಿದೆ ಎಂಬುವುದನ್ನು ಹಾಗೂ ಬೆಳೆವಿಮೆ ಸ್ಟೇಟಸ್ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ…