ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (UIDAI) ‘ನೀಲಿ ಆಧಾರ್’ ಕಾರ್ಡ್ (Blue Aadhaar Card) ಅನ್ನು ಪರಿಚಯಸಿದ್ದು; ಇದನ್ನು ಪಡೆಯುವುದು ಹೇಗೆ? ಇದರ ಪ್ರಯೋಜನಗಳ ಸಂಪೂರ್ಣ ಮಾಹಿತಿ ಇಲ್ಲಿದೆ…
ಆಧಾರ್ ಕಾರ್ಡ್ ಎಂಬುದು ಭಾರತೀಯ ಜನತೆಗೆ ಒಂದು ವಿಶಿಷ್ಟ ಗುರುತಿನ ದಾಖಲೆಯಾಗಿದೆ. ಇದು ಕೇವಲ ಗುರುತಿನ ದಾಖಲೆ (Identity proof) ಅಷ್ಟೇ ಅಲ್ಲದೆ, ಸರ್ಕಾರದ ಮತ್ತು ಖಾಸಗಿಯ ಅನೇಕ ಪ್ರಯೋಜನಗಳನ್ನು ಪಡೆಯಲು ಅತಿ ಮುಖ್ಯವಾದ ದಾಖಲೆ ಕೂಡ ಹೌದು.
ಭಾರತ ವಿಶಿಷ್ಟ ಗುರುತಿನ ಪ್ರಾಧಿಕಾರವು ಇದೀಗ 5 ವರ್ಷದ ಒಳಗಿನ ಮಕ್ಕಳಿಗೂ ಕೂಡ ಹೊಸ ಮಾದರಿಯ ವಿಶಿಷ್ಟ ಗುರುತಿನ ಚೀಟಿಯನ್ನು ಪರಿಚಯಿಸಿದೆ. ಇದರ ಹೆಸರೇ ‘ನೀಲಿ ಆಧಾರ್’ ಅಥವಾ ‘ಬಾಲ್ ಆಧಾರ್’. ಈ ಹೊಸ ಗುರುತಿನ ಚೀಟಿಯಿಂದ ಐದು ವರ್ಷದ ಒಳಗಿನ ಮಕ್ಕಳಿಗೆ ಆಗುವ ಪ್ರಯೋಜನಗಳೇನು ಮತ್ತು ಇದನ್ನು ಪಡೆಯುವುದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ನೀಡಲಾಗಿದೆ.
ಏನಿದು ನೀಲಿ ಆಧಾರ್ ಕಾರ್ಡ್?
ನವಜಾತ ಹಾಗೂ ಐದು ವರ್ಷದ ಒಳಗಿನ ಚಿಕ್ಕ ಮಕ್ಕಳನ್ನು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರದ ಆಧಾರ್ ವ್ಯವಸ್ಥೆಯಲ್ಲಿ ನೋಂದಾಯಿಸಿಕೊಳ್ಳಲು ವಿನ್ಯಾಸಗೊಳಿಸಿರುವ ಹೊಸ ಕಾರ್ಡ್ ಇದಾಗಿದೆ. ಈ ಕಾರ್ಡ್’ನಲ್ಲಿ ಬಳಸಲಾಗಿರುವ ಅಕ್ಷರಗಳ (ಫಾಂಟ್) ನೀಲಿ ಬಣ್ಣದ್ದಾಗಿರುವುದರಿಂದ ಈ ಆಧಾರ್ ಕಾರ್ಡನ್ನು ನೀಲಿ ಆಧಾರ್ ಕಾರ್ಡ್ ಅಥವಾ ಬ್ಲೂ ಆಧಾರ್ ಕಾರ್ಡ್ ಎಂದು ಕರೆಯಲಾಗುತ್ತದೆ. ಇದನ್ನು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರವು (UIDAI) 2018ರಲ್ಲಿ ಪರಿಚಿಯಿಸಿದ್ದು; ಈ ಕಾರ್ಡ್ 12 ಅಂಕಿಯ ವಿಶಿಷ್ಟ ಸಂಖ್ಯೆಯನ್ನು ಒಳಗೊಂಡಿದೆ.
ನೀಲಿ ಆಧಾರ್ ಪ್ರಯೋಜನಗಳೇನು?
ನೀಲಿ ಆಧಾರ್ ಕಾರ್ಡ್ ಇದನ್ನು ವಿಶೇಷವಾಗಿ 5 ವರ್ಷದ ಮಕ್ಕಳಿಗಾಗಿ ಪರಿಚಯಿಸಲಾಗಿದ್ದು, ಮಗುವಿನ ವಿಶಿಷ್ಟವಾದ ಗುರುತನ್ನು ಹೊಂದಿರುತ್ತದೆ. ಇದರ ಮುಖ್ಯ ಪ್ರಯೋಜನವೆಂದರೆ, ತುರ್ತು ಸಮಯದಲ್ಲಿ ಮತ್ತು ವಿವಾದಗಳ ಸಂದರ್ಭದಲ್ಲಿ ಉಪಯೋಗವಾಗುತ್ತದೆ:
- ದೇಶದಲ್ಲಿ ಹೆಚ್ಚಾಗುತ್ತಿರುವ ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಶೋಷಣೆಯನ್ನು ತಡೆಗಟ್ಟಲು ನೀಲಿ ಆಧಾರ್ ಕಾರ್ಡ್ ಅತಿ ಮುಖ್ಯವಾಗಿದೆ.
- ಅದೇ ರೀತಿ ಮಕ್ಕಳ ಕಳ್ಳ ಸಾಗಾಣಿಕೆ, ಬಾಲ ಕಾರ್ಮಿಕ ಮತ್ತು ಬಾಲ್ಯ ವಿವಾಹ ಸೇರಿದಂತೆ ಹಲವಾರು ಅಕ್ರಮಗಳನ್ನು ತಡೆಗಟ್ಟಲು ಇದು ಸಹಾಯಕವಾಗಿದೆ.
- ಮಗುವಿನ ಶಾಲಾ ಪ್ರವೇಶಕ್ಕಾಗಿ, ಹೊಸದಾಗಿ ಬ್ಯಾಂಕ್ ಖಾತೆ ತೆರೆಯಲು ಮತ್ತು ಪಾಸ್ ಪೋರ್ಟ್’ಗೆ ಅರ್ಜಿ ಸಲ್ಲಿಸಲು ಮುಖ್ಯ ದಾಖಲೆಯಾಗಿ ನೀಲಿ ಆಧಾರ್ ಕಾರ್ಡನ್ನು ಬಳಸಬಹುದಾಗಿದೆ.
- ಇದನ್ನು ಸರ್ಕಾರಿ ಯೋಜನೆಗಳ ಲಾಭವನ್ನು ಪಡೆಯಲು ಮತ್ತು ವಿವಿಧ ಉದ್ದೇಶಗಳಿಗಾಗಿ ಗುರುತಿನ ಮತ್ತು ವಿಳಾಸದ ಪುರಾವೆಯಾಗಿ ಕೂಡ ಬಳಸಬಹುದು.
- ಸರ್ಕಾರದ ಯೋಜನೆಗಳಾದ ವಿದ್ಯಾರ್ಥಿ ವೇತನ, ಆರೋಗ್ಯ ವಿಮೆ ಮಾಡಿಸಲು ಸೇರಿದಂತೆ ಹಲವಾರು ಲಾಭಗಳನ್ನು ನೀಲಿ ಆಧಾರ್ ಕಾರ್ಡ್’ನಿಂದ ಪಡೆಯಬಹುದು.

ನೀಲಿ ಆಧಾರ್ ಕಾರ್ಡನ್ನು ಹೇಗೆ ನೀಡಲಾಗುತ್ತದೆ?
ಐದು ವರ್ಷದ ಒಳಗಿನ ಮಗುವಿಗೆ ಹೊಸ ನೀಲಿ ಆಧಾರ್ ಕಾರ್ಡ್ ನೋಂದಾಯಿಸಲು ಮಗುವಿನ ಬಯೋಮೆಟ್ರಿಕ್ ನೀಡುವ ಅಗತ್ಯವಿರುವುದಿಲ್ಲ. ಏಕೆಂದರೆ ಮಗುವಿನ ಯುಐಡಿಯನ್ನು, ಮಗುವಿನ ಪೋಷಕರ / ಪಾಲಕರ ಯುಐಡಿ ಯೊಂದಿಗೆ ಲಿಂಕ್ ಮಾಡಲಾಗಿರುವ ಮೊಬೈಲ್ ಸಂಖ್ಯೆ ಹಾಗೂ ಫೋಟೋ ಆಧಾರದ ಮೇಲೆ ನೀಲಿ ಆಧಾರ್ ಕಾರ್ಡನ್ನು ನೀಡಲಾಗುತ್ತದೆ.
ಎಷ್ಟು ವರ್ಷಗಳ ನಂತರ ಬಯೋಮೆಟ್ರಿಕ್ ನೀಡಬೇಕು?
ಮೊದಲೇ ತಿಳಿಸಿರುವಂತೆ, ಮಗು ಐದು ವರ್ಷದ ಒಳಗಿದ್ದಾಗ ನೀಲಿ ಆಧಾರ್ ಕಾರ್ಡ್ ಅನ್ನು ಮಾಡಿಸಲು ಮಗುವಿನ ಬಯೋಮೆಟ್ರಿಕ್ ನೀಡಿರುವುದಿಲ್ಲ. ಆದ್ದರಿಂದ ಮಗುವಿಗೆ ಐದು ವರ್ಷ ತುಂಬಿದ ನಂತರ ಹಾಗೂ 15 ವರ್ಷ ತುಂಬಿದ ನಂತರ ಮಗುವಿನ 10 ಬೆರಳುಗಳು, ಐರಿಸ್ ಮತ್ತು ಮುಖದ ಛಾಯಾಚಿತ್ರಗಳ ಬಯೋಮೆಟ್ರಿಕ್ ಡಾಟಾವನ್ನು ನವೀಕರಿಸುವುದು ಕಡ್ಡಾಯವಾಗಿರುತ್ತದೆ. ಇಲ್ಲವಾದಲ್ಲಿ ಅದು ಅಮಾನ್ಯವಾಗುತ್ತದೆ.
ಆಫ್‌ಲೈನ್’ನಲ್ಲಿ ನೋಂದಣಿ ಹೇಗೆ?
ನೀಲಿ ಆಧಾರ್ ಕಾರ್ಡ್ ಪಡೆಯಲು ನೀವು ಆಫ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸುವುದಾದರೆ, ನಿಮ್ಮ ಹತ್ತಿರವಿರುವ ಯಾವುದಾದರೂ ಆಧಾರ್ ಸೇವಾ ಕೇಂದ್ರ ಅಥವಾ ಶಾಶ್ವತ ದಾಖಲಾತಿ ಕೇಂದ್ರಕ್ಕೆ ಅಗತ್ಯವಿರುವ ದಾಖಲಾತಿಗಳೊಂದಿಗೆ ಭೇಟಿ ನೀಡಿ. ಆಧಾರ್ ನೋಂದಣಿಯ ಅರ್ಜಿ ಫಾರಂ ಅನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದಾಗಿದೆ.
SSLC Result 2025- ಎಸ್ಸೆಸ್ಸೆಲ್ಸಿ ಫಲಿತಾಂಶ | ಶಿಕ್ಷಣ ಸಚಿವರ ಮಹತ್ವದ ಮಾಹಿತಿ ಇಲ್ಲಿದೆ…
ಅರ್ಜಿ ಸಲ್ಲಿಸಲು ಬೇಕಾಗುವ ಮುಖ್ಯ ದಾಖಲೆಗಳು
- ಪಾಲಕ / ಪೋಷಕರ ಆಧಾರ್ ಕಾರ್ಡ್
- ಮಗುವಿನ ಜನ್ಮ ಪ್ರಮಾಣ ಪತ್ರ ಅಥವಾ ಆಸ್ಪತ್ರೆಯ ಡಿಸ್ಚಾರ್ಜ್ ಸ್ಲಿಪ್
- ಮಗುವಿನ ಪಾಸ್ ಪೋರ್ಟ್ ಅಳತೆಗೆ ಎರಡು ಫೋಟೋ
- ಪಾಲಕ / ಪೋಷಕರ ವಿಳಾಸ ಪ್ರಮಾಣ ಪತ್ರ (ಪಡಿತರ ಚೀಟಿ, ವಿದ್ಯುತ್ ಬಿಲ್ ಇತ್ಯಾದಿ)
ಆನ್‌ಲೈನ್ ಮುಖಾಂತರ ನೋಂದಾಯಿಸುವುದು ಹೇಗೆ?
- ಆಧಾರ್ ಅಧಿಕೃತ ಜಾಲತಾಣಕ್ಕೆ (uidai.gov.in) ಭೇಟಿ ನೀಡಿ, ಆಧಾರ್ ನೋಂದಣಿ ಆಪನ್ ಆಯ್ಕೆ ಮಾಡಿಕೊಳ್ಳಿ.
- ಅಲ್ಲಿ ಕೇಳಲಾಗುವ ಮಗುವಿನ ಹೆಸರು, ಪಾಲಕ / ಪೋಷಕರ ಮಾನ್ಯವಾಗಿರುವ ಮೊಬೈಲ್ ನಂಬರ್ ಹಾಗೂ ಇತರೆ ಅಗತ್ಯವಿರುವ ಮಾಹಿತಿಯನ್ನು ನಮೂದಿಸಿ, ನೋಂದಣಿಗಾಗಿ ನಿಮ್ಮ ಹತ್ತಿರದ ದಾಖಲಾತಿ ಕೇಂದ್ರದ ಅಪಾಯಿಂಟ್ಮೆಂಟ್ ಸ್ಲಾಟ್ ಅನ್ನು ಆಯ್ಕೆ ಮಾಡಿಕೊಳ್ಳಿ.
- ನಿಗದಿತ ದಿನಾಂಕದಂದು ಅಗತ್ಯ ದಾಖಲಾತಿಗಳೊಂದಿಗೆ, ದಾಖಲಾತಿ ಕೇಂದ್ರಕ್ಕೆ ಭೇಟಿ ನೀಡಿ.
- ಭೇಟಿ ನೀಡಿ ಅರ್ಜಿ ಸಲ್ಲಿಸಿದ ನಂತರ ನೀವು ಅರ್ಜಿ ಸಲ್ಲಿಸಿದ ಡಾಕ್ಯುಮೆಂಟ್’ಗಳ ಪರಿಶೀಲನೆ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. ಪರಿಶೀಲನೆ ಮುಗಿದ ನಂತರ ನೀವು ನೋಂದಾಯಿಸಿದ ಮೊಬೈಲ್ ನಂಬರಿಗೆ ಸಂದೇಶ ಬರುತ್ತದೆ ಹಾಗೂ ಅಲ್ಲಿ ನಿಮಗೆ ಸ್ವೀಕೃತ ಚೀಟಿಯನ್ನು ನೀಡಲಾಗುತ್ತದೆ.
- ಪರಿಶೀಲನೆ ಪ್ರಕ್ರಿಯೆ 60 ದಿನಗಳ ಒಳಗಾಗಿ ನಿಮ್ಮ ಮಗುವಿನ ನೀಲಿ ಆಧಾರ್ ಕಾರ್ಡ್ ನಿಮಗೆ ಒದಗಿಸಲಾಗುತ್ತದೆ.
ಆಧಾರ್ ಅಧಿಕೃತ ಜಾಲತಾಣ : uidai.gov.in