ಈ ಯೋಜನೆ ಸೇರಿದರೆ ಪ್ರತೀ ತಿಂಗಳೂ 5,000 ರೂ. ಪಿಂಚಣಿ (Pension) ಪಡೆಯಬಹುದು. ಏನಿದು ಪಿಂಚಣಿ ಯೋಜನೆ? ಯೋಜನೆಗೆ ಸೇರುವುದು ಹೇಗೆ? ಮಾಹಿತಿ ಇಲ್ಲಿದೆ…
ಇಳಿವಯಸ್ಸಿನಲ್ಲಿ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಿರುವ ಅಟಲ್ ಪಿಂಚಣಿ ಯೋಜನೆ (Atal Pension Yojana – APY) ಭಾರೀ ಬೇಡಿಕೆ ಕುದುರುತ್ತಿದೆ.
ಕಳೆದ ಏಪ್ರಿಲ್ ಹೊತ್ತಿಗೆ ಈ ಯೋಜನೆಯ ಚಂದಾದಾರರ ಸಂಖ್ಯೆ 7.65 ಕೋಟಿಗೂ ಮೀರಿದೆ. ಇದುವರೆಗೆ ಸಂಗ್ರಹವಾದ ಒಟ್ಟು ನಿಧಿಯು ₹45,974 ಕೋಟಿಯಷ್ಟಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಇದು ಈ ಯೋಜನೆಯ ಜನಪ್ರಿಯತೆಗೆ ಸಾಕ್ಷಿಯಾಗಿದೆ.
ಏನಿದು ಅಟಲ್ ಪಿಂಚಣಿ ಯೋಜನೆ?
ಅಟಲ್ ಪಿಂಚಣಿ ಯೋಜನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವು 2015ರ ಜೂನ್’ನಲ್ಲಿ ಆರಂಭಿಸಿತು. ಯೋಜನೆಯ ಕಾರ್ಯನಿರ್ವಹಣೆಯ ಜವಾಬ್ದಾರಿ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ಹೊಂದಿದೆ.
ಯಾರೂ ವೃದ್ಧಾಪ್ಯದಲ್ಲಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಬಾರದು. ಕಡಿಮೆ ಆದಾಯವಿರುವವರೂ ಕೂಡ ಇಳಿವಯಸ್ಸಿನಲ್ಲಿ ನಿರಂತರ ಪಿಂಚಣಿ ಆದಾಯದ ಮೂಲಕ ನೆಮ್ಮದಿಯ ಜೀವನ ನಡೆಸಬೇಕು ಈ ಯೋಜನೆಯ ಮೂಲ ಉದ್ದೇಶವಾಗಿದೆ.
Weather Alert- ಕರ್ನಾಟಕದ 23 ಜಿಲ್ಲೆಗಳಲ್ಲಿ ಭಾರಿ ಮಳೆ | ಹವಾಮಾನ ಇಲಾಖೆ ಎಚ್ಚರಿಕೆ

ಈ ಯೋಜನೆಗೆ ಯಾರೆಲ್ಲ ಅರ್ಹರು?
ಮಹಿಳೆಯರು, ಶ್ರಮಿಕರು, ದಿನಗೂಲಿ ಕಾರ್ಮಿಕರು, ಖಾಸಗಿ ಉದ್ಯೋಗಿಗಳಿಗೆ ಇದು ಅತ್ಯಂತ ಮಹತ್ವದ ಯೋಜನೆಯಾಗಿದೆ. 18ರಿಂದ 40 ವರ್ಷ ವಯಸ್ಸಿನ ಆದಾಯ ತೆರಿಗೆ ಪಾವತಿಸದೆ ಇರುವ ಎಲ್ಲ ಭಾರತೀಯ ನಾಗರಿಕರು ಈ ಯೋಜನೆಗೆ ಸೇರ್ಪಡೆಯಾಗಬಹುದು.
ಬ್ಯಾಂಕ್ ಅಥವಾ ಅಂಚೆ ಕಚೇರಿಯ ಉಳಿತಾಯ ಖಾತೆ ಹೊಂದಿರಬೇಕು. ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಆದಾಯ ಪ್ರಮಾಣ ಪತ್ರ ಇತ್ಯಾದಿ ದಾಖಲೆಗಳಿದ್ದರೆ ಧಾರಾಳವಾಗಿ ಅಟಲ್ ಪಿಂಚಣಿ ಯೋಜನೆಗೆ ಸೇರಬಹುದಾಗಿದೆ.
ಎಷ್ಟು ಪಾವತಿಸಿದರೆ ಎಷ್ಟೆಷ್ಟು ಪಿಂಚಣಿ ಸಿಗುತ್ತದೆ?
ಅಟಲ್ ಪಿಂಚಣಿ ಯೋಜನೆಯು ₹1,000, ₹2,000, ₹3,000, ₹4,000 ಹಾಗೂ ₹5,000 ಹೀಗೆ ಐದು ವಿಭಿನ್ನ ಮಾಸಿಕ ಪಿಂಚಣಿಯ ಆಯ್ಕೆಗಳನ್ನು ನೀಡುತ್ತದೆ. ಪಿಂಚಣಿಯ ಪ್ರಮಾಣವನ್ನು ನಿಮ್ಮ ವಯಸ್ಸು ಹಾಗೂ ಹೂಡಿಕೆಯ ಮೊತ್ತದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.
18ನೇ ವಯಸ್ಸಿನಲ್ಲಿ ನೀವು ಈ ಯೋಜನೆಗೆ ಸೇರ್ಪಡೆಯಾಗುತ್ತಿದ್ದರೆ ನೀವು ಆಯ್ಕೆ ಮಾಡಿಕೊಂಡ ಪಿಂಚಣಿ ಮೊತ್ತಕ್ಕೆ ಅನುಗುಣವಾಗಿ ನಿಮ್ಮ ಮಾಸಿಕ ಪಾವತಿ ಈ ಕೆಳಗಿನಂತಿರುತ್ತದೆ:
- ₹1,000 ಪಿಂಚಣಿಗೆ- ₹42
- ₹2,000 ಪಿಂಚಣಿಗೆ- ₹84
- ₹3,000 ಪಿಂಚಣಿಗೆ- ₹125
- ₹4,000 ಪಿಂಚಣಿಗೆ – ₹168
- ₹5,000 ಪಿಂಚಣಿಗೆ- ₹210
ಅದೇ ರೀತಿ 40ನೇ ವಯಸ್ಸಿನಲ್ಲಿ ನೀವು ಈ ಯೋಜನೆಗೆ ಸೇರುತ್ತಿದ್ದರೆ ನೀವು ಆಯ್ಕೆ ಮಾಡಿಕೊಂಡ ಪಿಂಚಣಿ ಮೊತ್ತಕ್ಕೆ ಅನುಗುಣವಾಗಿ ನಿಮ್ಮ ಮಾಸಿಕ ಪಾವತಿ ಈ ಕೆಳಗಿನಂತಿರುತ್ತದೆ:
- ₹1,000 ಪಿಂಚಣಿಗೆ- ₹291
- ₹2,000 ಪಿಂಚಣಿಗೆ- ₹582
- ₹3,000 ಪಿಂಚಣಿಗೆ- ₹873
- ₹4,000 ಪಿಂಚಣಿಗೆ- ₹1,164
- ₹5,000 ಪಿಂಚಣಿಗೆ- ₹1,454
ಮಾಸಿಕ ಕಂತು ಪಾವತಿ ವಿಧಾನಗಳು
ಹೂಡಿಕೆದಾರರಿಗೆ ಅನುಕೂಲವಾಗುವಂತೆ ಈ ಯೋಜನೆಗೆ ಮಾಸಿಕ (Monthly), ತ್ರೈಮಾಸಿಕ (Quarterly) ಹಾಗೂ ಅರ್ಧವಾರ್ಷಿಕ (Half-Yearly) ಮೂರು ರೀತಿಯ ಪಾವತಿ ಆಯ್ಕೆಗಳನ್ನು ನೀಡುತ್ತದೆ
ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ದಿನಾಂಕವನ್ನು ಆಯ್ಕೆಮಾಡಬಹುದು. ಆಯ್ಕೆಯ ನಂತರ, ಉಳಿತಾಯ ಖಾತೆಯಿಂದ ಪಾವತಿಯನ್ನು ಸ್ವಯಂಚಾಲಿತವಾಗಿ ಕಡಿತಗೊಳಿಸಲಾಗುತ್ತದೆ.
ಕನಿಷ್ಠ 20 ವರ್ಷಗಳ ಕಾಲ ನಿಷ್ಠೆಯಿಂದ ಹೂಡಿಕೆ ಮಾಡಿದರು ಪೂರ್ಣ ಪಿಂಚಣಿಗೆ ಅರ್ಹರಾಗುತ್ತಾರೆ. ಮಧ್ಯದಲ್ಲಿ ಯೋಜನೆ ತ್ಯಜಿಸಿದರೆ, ಪಾವತಿಸಿದ ಹಣ ಮತ್ತು ಬಡ್ಡಿಯನ್ನು ಮಾತ್ರ ಪಡೆಯಲು ಅವಕಾಶವಿರುತ್ತದೆ.
ಪಿಂಚಣಿ ಪಡೆಯುವುದು ಹೇಗೆ?
- ನೀವು 60ನೇ ವಯಸ್ಸಿಗೆ ತಲುಪಿದಾಗ ನೀವು ಆಯ್ಕೆ ಮಾಡಿದ ಮೊತ್ತದ ಮಾಸಿಕ ಪಿಂಚಣಿಯನ್ನು ಪಡೆಯುತ್ತೀರಿ.
- ಒಂದು ವೇಳೆ ಚಂದಾದಾರರು ನಿಧನರಾದರೆ, ಅವರ ಸಂಗಾತಿಗೆ ಪಿಂಚಣಿ ಮುಂದುವರಿಯುತ್ತದೆ.
- ಸಂಗಾತಿಯೂ ನಿಧನರಾದರೆ, ಪೂರ್ಣ ಪಿಂಚಣಿ ನಿಧಿಯನ್ನು ನಾಮಿನಿಗೆ ವರ್ಗಾಯಿಸಲಾಗುತ್ತದೆ.
ಯೋಜನೆಗೆ ಸೇರುವುದು ಹೇಗೆ?
- ನಿಮ್ಮ ಹತ್ತಿರದ ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ಭೇಟಿ ನೀಡಿ.
- ಅಟಲ್ ಪಿಂಚಣಿ ಯೋಜನೆ ಫಾರ್ಮ್ ಪಡೆದು ಭರ್ತಿ ಮಾಡಿ.
- ಆಧಾರ್, ಪ್ಯಾನ್, ಉಳಿತಾಯ ಖಾತೆ ವಿವರ, ಆದಾಯ ಪ್ರಮಾಣ ಪತ್ರ ಸೇರಿದಂತೆ ಎಲ್ಲಾ ಅಗತ್ಯ ದಾಖಲೆಗಳನ್ನು ಜಮಾ ಮಾಡಿ.
- ಪಿಂಚಣಿಯ ಆಯ್ಕೆಯ ಮೊತ್ತವನ್ನು ಮತ್ತು ಪಾವತಿ ವಿಧಾನವನ್ನು ಸೂಚಿಸಿ.
ಇತರೆ ಖಾಸಗಿ ಪಿಂಚಣಿ ಯೋಜನೆಗಳಿಗೆ ಹೋಲಿಸಿದರೆ ಇದು ಅತ್ಯಂತ ಸರಳ ಹಾಗೂ ವಿಶ್ವಾಸಾರ್ಹ. ಈ ಯೋಜನೆಯು ನಿಮ್ಮ ಹಾಗೂ ನಿಮ್ಮ ಕುಟುಂಬದ ಭವಿಷ್ಯವನ್ನು ಆರ್ಥಿಕವಾಗಿ ಸುರಕ್ಷಿತಗೊಳಿಸುವಲ್ಲಿ ಉತ್ತಮ ಅವಕಾಶ. ಕೇವಲ ₹210ರ ಹೂಡಿಕೆಯೊಂದಿಗೆ ನೀವು ಪ್ರತೀ ತಿಂಗಳು ₹5,000 ಪಿಂಚಣಿಗೆ ಅರ್ಹರಾಗಬಹುದು. ಇಂದೇ ಈ ಯೋಜನೆಗೆ ಸೇರಿ… ಭರವಸೆಯ ಭವಿಷ್ಯ ಕಟ್ಟಿಕೊಳ್ಳಿ!