Anganwadi LKG UKG Teacher Recruitment 2024 : ರಾಜ್ಯದಲ್ಲಿ ಖಾಲಿ ಇರುವ 13,593 ಅಂಗನವಾಡಿ ಶಿಕ್ಷಕಿಯರು, ಸಹಾಯಕಿಯರ ನೇಮಕಾತಿ ಪ್ರಕ್ರಿಯೆ ಆರಂಭಿಸಿದ ಬೆನ್ನಲ್ಲೇ ಇದೀಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ (Lakshmi Hebbalkar) ಅವರು ಅಂಗನವಾಡಿ ಎಲ್‌ಕೆಜಿ, ಯುಕೆಜಿ (Government Montessori) ಟೀಚರ್ ನೇಮಕಾತು ಕುರಿತು ಮಹತ್ವದ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಒಟ್ಟು 61,876 ಅಂಗನವಾಡಿ ಕೇಂದ್ರಗಳಿದ್ದು; ಈ ಪೈಕಿ 250 ಅಂಗನವಾಡಿ ಕೇಂದ್ರಗಳಲ್ಲಿ ಇಂದಿನಿ೦ದ (ಜುಲೈ 22) ಪೂರ್ವ ಪ್ರಾಥಮಿಕ ಅಂದರೆ ಎಲ್‌ಕೆಜಿ, ಯುಕೆಜಿ ತರಗತಿಗಳು ಸಾಂಕೇತಿಕವಾಗಿ ಆರಂಭವಾಗಿವೆ. ಆಮೂಲಕ ದೇಶದಲ್ಲೇ ಮೊದಲ ಬಾರಿಗೆ ಅಂಗನವಾಡಿ ಕೇಂದ್ರದಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಪರಿಚಯಿಸುತ್ತಿರುವ ಹೆಗ್ಗಳಿಕೆ ಕರ್ನಾಟಕಕ್ಕೆ ಸಂದಿದೆ.

ಅಂಗನವಾಡಿಯಲ್ಲೇ ಸರ್ಕಾರಿ ಮಾಂಟೆಸ್ಸರಿ Government Montessori
ಈ ಮೊದಲು ರಾಜ್ಯದಲ್ಲಿ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿ ಆರಂಭಿಸಲು ಸರ್ಕಾರ ಸಿದ್ಧತೆ ನಡೆಸಿತ್ತು. ಆದರೆ ಸರ್ಕಾರದ ಈ ನಿರ್ಧಾರಕ್ಕೆ ಅಂಗನವಾಡಿ ಕಾರ್ಯಕರ್ತೆಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭವಾದರೆ ಅಂಗನವಾಡಿ ಕೇಂದ್ರಗಳು ಖಾಲಿಯಾಗುತ್ತವೆ. ಕಾರ್ಯಕರ್ತೆಯರು, ಸಹಾಯಕಿಯರು, ಅಡುಗೆ ಸಹಾಯಕಿಯರು ಕೆಲಸ ಕಳೆದುಕೊಳ್ಳುತ್ತಾರೆ ಎಂದು ಪ್ರತಿಭಟನೆ ಕೂಡ ನಡೆಸಿದ್ದರು.
ಒಂದು ವೇಳೆ ಪ್ರಾಥಮಿಕ ಪೂರ್ವ ತರಗತಿ ಆರಂಭಿಸುವುದಿದ್ದರೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಬದಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಡಿಯಲ್ಲೇ ಅಂಗನವಾಡಿ ಕೇಂದ್ರದಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಆರಂಭಿಸಬೇಕೆ೦ದು ಒತ್ತಾಯಿಸಿ ಪ್ರತಿಭಟಿಸಲಾಗಿತ್ತು. ಅದರಂತೆ ಸರ್ಕಾರ ಇದೀಗ ಅಂಗನವಾಡಿಯಲ್ಲೇ ಜುಲೈ 22ರಿಂದ ಎಲ್‌ಕೆಜಿ ಮತ್ತು ಯುಕೆಜಿ ಆರಂಭಿಸಿದೆ.
ಎಷ್ಟು ಸರ್ಕಾರಿ ಮಾಂಟೆಸ್ಸರಿ ಆರಂಭವಾಗಲಿವೆ?
ರಾಜ್ಯದಲ್ಲಿ ಎಲ್ಲ ಅಂಗನವಾಡಿ ಕೇಂದ್ರಗಳಲ್ಲೂ ಸರ್ಕಾರಿ ಮಾಂಟೆಸ್ಸರಿ ಆರಂಭವಾಗುವುದಿಲ್ಲ. ಆಯ್ದ 5,000 ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿ ಆರಂಭವಾಗಲಿವೆ. ಅತೀ ಹೆಚ್ಚು ಮಕ್ಕಳಿರುವ ಹಾಗೂ ದೀರ್ಘ ಕಾಲದಿಂದ ನಡೆದುಕೊಂಡು ಬರುತ್ತಿರುವ ಅಂಗನವಾಡಿ ಕೇಂದ್ರಗಳನ್ನು ಮಾತ್ರ ಉನ್ನತೀಕರಣ ಮಾಡಲಾಗುತ್ತಿದೆ.
ಮೊದಲ ಭಾಗವಾಗಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಸರ್ಕಾರಿ ಮಾಂಟೆಸ್ಸರಿಗೆ ಚಾಲನೆ ನೀಡಿದ್ದು, ಇನ್ಮುಂದೆ ಪುಟಾಣಿಗಳು ಅಂಗನವಾಡಿಯಲ್ಲೇ ಕನ್ನಡ ಹಾಗೂ ಇಂಗ್ಲೀಷ್ ಮಾಧ್ಯಮದಲ್ಲಿ ಪಾಠ ಕಲಿಯಲಿದ್ದಾರೆ. ಜುಲೈ 22ರಿಂದ ಮೊದಲ ಹಂತದಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ 250 ಹಾಗೂ ರಾಜ್ಯಾದ್ಯಂತ 5,000 ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳು ಆರಂಭಗೊಳ್ಳಲಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಮಾಂಟೆಸ್ಸರಿ ಟೀಚರ್ ನೇಮಕ ಹೇಗೆ?
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ನೀಡಿದ ಮಾಹಿತಿ ಪ್ರಕಾರ ಸರ್ಕಾರಿ ಮಾಂಟೆಸ್ಸರಿಗಳಲ್ಲಿ ಸದ್ಯಕ್ಕೆ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿರುವ ಹಾಗೂ ಈಗಾಗಲೇ ಅಗತ್ಯ ತರಬೇತಿ ಪಡೆದಿರುವ ಅಂಗನವಾಡಿ ಕಾರ್ಯಕರ್ತೆಯರನ್ನು ಮಾತ್ರ ಬೋಧನೆ ಮಾಡಲು ಗುರುತಿಸಲಾಗಿದೆ.
ರಾಜ್ಯದಲ್ಲಿರುವ ಅಂಗನವಾಡಿ ಕೇಂದ್ರಗಳು, ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಯಕರ್ತೆಯರ ವಿದ್ಯಾರ್ಹತೆ ಕುರಿತು ಸಚಿವರು ನೀಡಿದ ಮಾಹಿತಿ ಈ ಕೆಳಗಿನಂತಿದೆ:
- ಒಟ್ಟು ಅಂಗನವಾಡಿ ಕೇಂದ್ರಗಳು : 61,876
- ಉನ್ನತ ಶಿಕ್ಷಣ ಪಡೆದ ಕಾರ್ಯಕರ್ತೆಯರು : 1,682
- ಪದವಿ ಶಿಕ್ಷಣ ಪಡೆದ ಕಾರ್ಯಕರ್ತೆಯರು : 6,363
- PUC ವಿದ್ಯಾರ್ಹತೆ ಕಾರ್ಯಕರ್ತೆಯರು : 15,217
- SSLC ವಿದ್ಯಾರ್ಹತೆ ಕಾರ್ಯಕರ್ತೆಯರು : 38,614
ಮೇಲ್ಕಾಣಿಸಿದ ಕಾರ್ಯಕರ್ತೆಯರ ಪೈಕಿ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿರುವವರನ್ನು ಭೋದನೆಗೆ ನೇಮಿಸಲಾಗುತ್ತದೆ. ಉಳಿದ ಮಾಂಟೆಸ್ಸರಿಗಳಿಗೆ ಹೊಸ ನೇಮಕಾತಿ ನಡೆಯಲಿದೆ. ಸರ್ಕಾರಿ ಮಾಂಟೆಸ್ಸರಿಗಳಲ್ಲಿ ಕನ್ನಡ, ಇಂಗ್ಲೀಷ್ ಎರಡೂ ಮಾಧ್ಯಮಗಳಲ್ಲೂ ಶಿಕ್ಷಣ ನೀಡಲಾಗುತ್ತದೆ. ಮಾಂಟೆಸ್ಸರಿ ಟೀಚರ್ ನೇಮಕಾತಿ ಕುರಿತ ಅಧಿಕೃತ ಮಾಹಿತಿ ಇನ್ನು ಮೇಲಷ್ಟೇ ಹೊರಬೀಳಬೇಕಿದೆ.
ಸರ್ಕಾರಿ ಮಾಂಟೆಸ್ಸರಿ ಟೀಚರ್ ಹುದ್ದೆಗಳ ನೇಮಕಾತಿ ಕುರಿತ ನಿರಂತರ ಮಾಹಿತಿಗಾಗಿ ಮಾಹಿತಿಮನೆ ಫಾಲೋ ಮಾಡಿ…